ಮಂಗಳವಾರ, ಜೂನ್ 28, 2022
21 °C

ಬೆರಗಿನ ಬೆಳಕು: ಮಹಾಪ್ರತಿಜ್ಞೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಗುರುರಾಜ ಕರಜಗಿ

‘ಬೋಧಿಸತ್ವ ಹುಟ್ಟಿದ ದಿನವೇ ಶಕ್ರನ ಆದೇಶದಂತೆ ಆಕಾಶದಲ್ಲಿ ಸಂಚರಿಸುವ ಸರ್ವಶ್ವೇತ ಬಿಳಿಯಾನೆ ತನ್ನ ಮರಿಯನ್ನು ತಂದು ಮಾಂಗಲಿಕ ಆನೆಯೆಂದು ಇಟ್ಟು ಹೋಯಿತು. ಅದೂ ಸರ್ವಲಕ್ಷಣ ಸಂಪನ್ನವಾದ ಬಿಳೀ ಆನೆ ಮರಿ. ಅದಕ್ಕೆ ‘ಪ್ರತ್ಯಯ’ ಎಂದು ನಾಮಕರಣ ಮಾಡಲಾಯಿತು. ರಾಜ ಬೋಧಿಸತ್ವನಿಗಾಗಿ ಅತ್ಯಂತ ಮಧುರವಾದ ಎದೆಹಾಲಿರುವ ಅರವತ್ನಾಲ್ಕು ದಾದಿಯರನ್ನು ನೇಮಿಸಿದ. ಅವನೊಂದಿಗೇ ರಾಜ್ಯದಲ್ಲಿ ಜನಿಸಿದ ಅರವತ್ತು ಸಾವಿರ ಮಕ್ಕಳೂ ಚೆನ್ನಾಗಿ ಬೆಳೆಯುತ್ತಿದ್ದರು.

ರಾಜ ಸಂಭ್ರಮದಿಂದ ಬೋಧಿಸತ್ವನಿಗೆ ಲಕ್ಷ ಬೆಲೆ ಬಾಳುವ ವಿಶೇಷವಾದ ಆಭರಣಗಳನ್ನು ಮಾಡಿಸಿದ. ಆದರೆ ಮಗು ಬೋಧಿಸತ್ವ ಅವುಗಳನ್ನು ದಾದಿಯರಿಗೆ ಕೊಟ್ಟುಬಿಟ್ಟ. ಮಗನ ದಾನಬುದ್ಧಿ ದೊಡ್ಡದು ಎಂದು ಎಲ್ಲರೂ ಕೊಂಡಾಡಿದರು. ರಾಜ ಕೂಡ ಅಷ್ಟು ಬೆಲೆಬಾಳುವ ಆಭರಣಗಳನ್ನು ಕೊಟ್ಟಬಿಟ್ಟನಲ್ಲ ಎಂದು ಬೇಜಾರುಮಾಡಿಕೊಳ್ಳದೆ, ‘ನನ್ನ ಮಗ ಕೊಡುಗೈದಾನಿ. ದಾನ ಮಾಡಿ ಒಳ್ಳೆಯ ಕೆಲಸ ಮಾಡಿದ. ಪುಟ್ಟ ಮಗು ಮಾಡುವುದು ಶ್ರೇಷ್ಠ ದಾನವೇ’ ಎಂದು ಹೊಗಳಿದ.

ಬೋಧಿಸತ್ವನಾದ ವೆಸ್ಸಂತರ ಬೆಳೆದು ದೊಡ್ಡವನಾಗುತ್ತಿದ್ದ. ಅವನಿಗೆ ಎಂಟು ವರ್ಷ ವಯಸ್ಸಾದಾಗ, ಒಂದು ದಿನ ತಂದೆಯ ಸಭೆಯಲ್ಲಿ ಕುಳಿತಾಗ, ಎಲ್ಲರಿಗೆ ಕೇಳುವಂತೆ ಗಂಭೀರವಾಗಿ ಘೋಷಣೆ ಮಾಡಿದ. ‘ದಾನವೇ ನನ್ನ ಬದುಕು. ಇನ್ನು ಮೇಲೆ ಕೇವಲ ವಸ್ತುಗಳನ್ನು ಮಾತ್ರವಲ್ಲ, ನನ್ನನ್ನೇ ನಾನು ದಾನವಾಗಿ ಕೊಟ್ಟು ಬಿಡುತ್ತೇನೆ. ಯಾರಾದರೂ ನನ್ನ ಹೃದಯವನ್ನು ಕೇಳಿದರೆ, ನನ್ನ ಎದೆಯನ್ನು ಸೀಳಿ ಹೃದಯವನ್ನು ತೆಗೆದುಕೊಟ್ಟು ಬಿಡುತ್ತೇನೆ. ಕಣ್ಣುಗಳನ್ನು ಕೇಳಿದರೆ ಅವುಗಳನ್ನು ಕಿತ್ತು ನೀಡುತ್ತೇನೆ. ಯಾರಾದರೂ ಶರೀರವನ್ನು ಬೇಡಿದರೆ ಇಡೀ ಶರೀರದಲ್ಲಿದ್ದ ಮಾಂಸವನ್ನು ಸೆಳೆದು ಕೊಡುತ್ತೇನೆ. ಇದು ನನ್ನ ಪ್ರತಿಜ್ಞೆ’ ಎಂದ.

ಅವನ ಈ ಭಯಂಕರ ಪ್ರತಿಜ್ಞೆಯನ್ನು ಕೇಳಿ ಸಭಿಕರು ದಂಗಾದರು. ಅದೇ ಕ್ಷಣ ಎರಡು ಲಕ್ಷ ಯೋಜನ ಗಾತ್ರದ ಈ ಪೃಥ್ವಿ ಮದವೇರಿದ ಆನೆಯಂತೆ ಫೀಳಿಡುತ್ತ ಗಡಗಡನೆ ನಡುಗಿತು. ಬೃಹತ್ತಾದ ಸುಮೇರು ಪರ್ವತ, ಹದವಾದ ಮತ್ತು ನೇರವಾದ ಬೆತ್ತದಂತೆ ಬಾಗಿ ನಮಸ್ಕಾರ ಮಾಡಿ ನಂತರ ನರ್ತಿಸುತ್ತ ಜೆತುತ್ತರ ನಗರದ ಮುಂದೆ ಬಂದು ನಿಂತುಬಿಟ್ಟಿತು. ಭೂಮಿ ನಡುಗಿ ಕಾದದ್ದರಿಂದ ಅದನ್ನು ತಂಪಾಗಿಸಲು ಶಕ್ರ ಕೆಲಕಾಲ ಮಳೆ ಸುರಿಸಿದ. ಆಕಾಶದ ತುಂಬೆಲ್ಲ ಗುಡುಗು, ಮಿಂಚು ತುಂಬಿದವು. ಸಾಗರ ಭೋರ್ಗರೆಯುತ್ತ ಉಕ್ಕಿತು. ಬೋಧಿಸತ್ವನ ದಾನದ ಘೋಷಣೆಗೆ ಇಡೀ ಪ್ರಪಂಚ ಸ್ಪಂದಿಸಿದ್ದನ್ನು ಕಂಡು ದೇವೇಂದ್ರ ಶಕ್ರ ಚಪ್ಪಾಳೆ ತಟ್ಟಿದ. ಬ್ರಹ್ಮ ಸ್ವಸ್ತಿ ವಾಚನ ಮಾಡಿದ. ಅದರ ಶಬ್ದ ಬ್ರಹ್ಮಲೋಕದವರೆಗೆ ಹಬ್ಬಿತು.

ಇಂಥ ಮಹೋನ್ನತ ಪ್ರತಿಜ್ಞೆ ಮಾಡಿದ ಬೋಧಿಸತ್ವ ಸಕಲವಿದ್ಯೆಗಳಲ್ಲಿ ಪಾರಂಗತನಾದ. ಅವನಿಗೆ ಹದಿನಾರು ವರ್ಷ ವಯಸ್ಸಾದಾಗ ಮದ್ರಕುಲದ, ರಾಜಮನೆತನದ ಮಾದ್ರಿ ಎಂಬ ಕನ್ಯೆಯೊಡನೆ ಅವನ ಮದುವೆ ಮಾಡಿ, ಹದಿನಾರು ಸಾವಿರ ಸ್ತ್ರೀಯರಲ್ಲಿ ಆಕೆಯನ್ನು ಪಟ್ಟಮಹಿಷಿಯನ್ನಾಗಿ ಮಾಡಿದರು. ಬೋಧಿಸತ್ವನ ರಾಜ್ಯಾಭಿಷೇಕವಾದ ಮೇಲೆ ಆತ ನಿತ್ಯ ಆರು ಲಕ್ಷ ಹಣ ದಾನ ಮಾಡಿ ಮಹಾದಾನಿಯೆಂದು ಹೆಸರು ಮಾಡಿದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು