ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಿಣಿಯರ ಸೆಳೆತ

Last Updated 26 ಏಪ್ರಿಲ್ 2019, 3:45 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಒಂದು ಮೋಡಾಶ್ವ ಯೋನಿಯಲ್ಲಿ ಜನಿಸಿದ್ದ. ಅದೊಂದು ವಿಚಿತ್ರವಾದ ಪ್ರಾಣಿ. ಅದು ಕುದುರೆಯೇ. ಅದರ ಬಣ್ಣವೆಲ್ಲ ಬಿಳಿ ಆದರೆ ತಲೆ ಕಾಗೆಯಂತೆ. ಕೂದಲುಗಳೆಲ್ಲ ದರ್ಭೆಯಂತೆ. ಅದು ತನ್ನ ಗಾತ್ರವನ್ನು ಅವಕಾಶಕ್ಕೆ ತಕ್ಕಂತೆ ಬದಲಿಸಿಕೊಳ್ಳುವಂಥದ್ದು. ಅದರ ಸಂಚಾರ ವಾಯುಮಾರ್ಗದಲ್ಲಿ. ಅದು ನಿತ್ಯ ಹಿಮಾಲಯದಿಂದ ಹಾರಿ ಬಂದು ತಾಮ್ರಪರ್ಣಿಯ ಕೊಳದಲ್ಲಿ ತಾನೇ ಬೆಳೆಸಿದ್ದ ಬಳ್ಳಿಯನ್ನು ತಿಂದು ಹೋಗುತ್ತಿತ್ತು.

ಈ ಸಮಯದಲ್ಲಿ ತಾಮ್ರಪರ್ಣಿ ದ್ವೀಪದಲ್ಲಿ ಸಿರೀಸವತ್ತು ಎಂಬದೊಂದು ಯಕ್ಷರ ವಸತಿ ಇತ್ತು. ಅಲ್ಲಿ ಯಕ್ಷಿಣಿಯರಿದ್ದರು. ಹಡಗು ಒಡೆದು ದ್ವೀಪ ಸೇರಿದ ವ್ಯಾಪಾರಿಗಳನ್ನು ತಮ್ಮ ರೂಪ ವೈಯಾರಗಳಿಂದ ಮನವೊಲಿಸಿಕೊಳ್ಳುತ್ತಿದ್ದರು. ತಾವು ಯಕ್ಷಿಣಿಯರಲ್ಲ, ಮನುಷ್ಯರೇ ಎಂದು ತೋರಿಸಿಕೊಳ್ಳಲು ಮಕ್ಕಳನ್ನು, ಹಸು, ನಾಯಿ ಮುಂತಾದ ಪ್ರಾಣಿಗಳನ್ನು ಸೃಷ್ಟಿಸುತ್ತಿದ್ದರು. ವ್ಯಾಪಾರಿಗಳಿಗೆ ರುಚಿರುಚಿಯಾದ ಆಹಾರವನ್ನು ನೀಡಿ ಅವರಿಗೊಂದು ತರಹದ ಮತ್ತು ಬಂದ ಮೇಲೆ ಅವರು ಎಲ್ಲಿಯವರು, ಯಾವ ವ್ಯಾಪಾರ, ಯಾವ ಕೆಲಸದ ಮೇಲೆ ಬಂದಿದ್ದರು ಎಂಬ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು. ಅವರು ಹಡಗು ಒಡೆದುಹೋಗಿ ಬಂದಿದ್ದೇವೆ ಎಂದರೆ ತಾವೂ ಕಣ್ಣೀರು ಸುರಿಸಿ ನಮ್ಮ ಗಂಡಂದಿರೂ ವ್ಯಾಪಾರಕ್ಕಾಗಿ ಹಡಗಿನಲ್ಲಿ ಹೋಗಿ ಮೂರು ವರ್ಷಗಳಾದವು. ಅವರು ಬದುಕಿದ್ದಾರೋ ಇಲ್ಲವೋ. ನಾವೇ ನಿಮಗೆ ಚರಣದಾಸಿಯರಾಗಿ ಉಳಿದುಬಿಡುತ್ತೇವೆ ಎಂದು ಅವರನ್ನು ಬುಟ್ಟಿಗೆ ಹಾಕಿಕೊಂಡು ಬಿಡುತ್ತಿದ್ದರು. ನಂತರ ಅವರನ್ನು ತಮ್ಮ ಮಂತ್ರಜಾಲದಿಂದ ಸರಪಳಿ ಬಿಗಿದು ಸೆರೆಮನೆಯಲ್ಲಿ ಹಾಕಿ ತಮಗೆ ಹಸಿವು ಆದಾಗಲೆಲ್ಲ ಒಬ್ಬೊಬ್ಬರಾಗಿ ಹೋಗಿ ಕೈದಿಗಳನ್ನು ತಿಂದು ಬರುತ್ತಿದ್ದರು.

ಈ ಸಂದರ್ಭದಲ್ಲಿ ಹಡಗೊಂದು ಒಡೆದು ಐದುನೂರು ವ್ಯಾಪಾರಿಗಳು ದ್ವೀಪವನ್ನು ಸೇರಿದರು. ಐದುನೂರು ಯಕ್ಷಿಣಿಯರು ಅವರನ್ನು ವಶಪಡಿಸಿಕೊಂಡರು. ಹಿರಿಯ ವ್ಯಾಪಾರಿ, ಹಿರಿಯ ಯಕ್ಷಿಣಿಯ ಪಾಲಾದ. ರಾತ್ರಿ ವ್ಯಾಪಾರಿಗಳು ಮಲಗಿರುವಾಗ ಯಕ್ಷಿಣಿಯರು ಅವರನ್ನು ತಿಂದು ಬರುವರು. ಅವರು ಮನುಷ್ಯರನ್ನು ತಿಂದು ಬರುವಾಗ ಅವರ ದೇಹ ತೀರ ತಣ್ಣಗಾಗುತ್ತದೆ. ಜೇಷ್ಠ ಯಕ್ಷಿಣಿ ಹೀಗೆ ಮನುಷ್ಯನೊಬ್ಬನನ್ನು ತಿಂದು ಬಂದಾಗ ಹಿರಿಯ ವ್ಯಾಪಾರಿ ಆಕೆಯ ದೇಹ ತುಂಬ ತಣ್ಣಗಾಗಿದ್ದನ್ನು ಕಂಡ. ಅವನಿಗೆ ತಕ್ಷಣ ಅರಿವಾಯಿತು ತಾವು ಯಕ್ಷಿಣಿಯರ ಬಲೆಯಲ್ಲಿ ಸಿಕ್ಕಿಬಿದ್ದಿದ್ದೇವೆಂದು. ಮರುದಿನ ಬೆಳಿಗ್ಗೆ ಎಲ್ಲ ವ್ಯಾಪಾರಿಗಳನ್ನು ಕರೆದು ವಿಷಯ ತಿಳಿಸಿ ಪಾರಾಗಿ ಹೋಗಬೇಕೆಂದು ಹೇಳಿದ. ಇನ್ನೂರೈವತ್ತು ವ್ಯಾಪಾರಿಗಳು ತಮಗೆ ಈ ಯಕ್ಷಿಣಿಯರಿಂದ ತೃಪ್ತಿ ದೊರಕಿದೆಯೆಂದೂ, ತಾವು ಇಲ್ಲಿಯೇ ಉಳಿಯುವುದಾಗಿಯೂ ತೀರ್ಮಾನಿಸಿದರು. ಹಗಲಿನಲ್ಲಿ ಯಕ್ಷಿಣಿಯರ ಶಕ್ತಿ ಬಲವಾಗಿರುವುದಿಲ್ಲ. ಆಗ ಹಿರಿಯ ವ್ಯಾಪಾರಿ ಉಳಿದ ವ್ಯಾಪಾರಿಗಳನ್ನು ಕರೆದುಕೊಂಡು ತಾಮ್ರಪರ್ಣಿ ಕೊಳದ ಬಳಿ ಬಂದ.

ಅದೇ ಸಮಯಕ್ಕೆ ಬೋಧಿಸತ್ವ ಅಲ್ಲಿ ಊಟಕ್ಕೆ ಬಂದಿದ್ದ. ಹೇಗಾದರೂ ಮರಳಿ ಹೋಗುತ್ತಿದ್ದೇನೆ, ತನ್ನ ಜೊತೆ ಯಾರಾದರೂ ಬಂದರೆ ಬರಲಿ ಎಂದುಕೊಂಡ. ಆಗ ಈ ಇನ್ನೂರೈವತ್ತು ಜನ ವ್ಯಾಪಾರಿಗಳು ಓಡಿ ಬಂದರು. ಬೋಧಿಸತ್ವ ತನ್ನ ದೇಹವನ್ನು ಹಿಗ್ಗಿಸಿಕೊಂಡು ಎಲ್ಲರನ್ನೂ ಬೆನ್ನ ಮೇಲೆ ಹೊತ್ತುಕೊಂಡು ಅವರವರ ಮನೆಗೆ ತಲುಪಿಸಿದ. ಉಳಿದ ಇನ್ನೂರೈವತ್ತು ಜನ ವ್ಯಾಪಾರಿಗಳು ಯಕ್ಷಿಣಿಯರ ಹೊಟ್ಟೆ ಸೇರಿದರು.

ಬದುಕಿನಲ್ಲಿ ಸೆಳೆತಗಳು ಬರುತ್ತವೆ. ಅಧಿಕಾರದ ಸೆಳೆತ, ಹಣದ ಸೆಳೆತ, ಹೆಣ್ಣಿನ ಸೆಳೆತ ಕೊನೆಗೆ ಪ್ರಚಾರದ, ಖ್ಯಾತಿಯ ಸೆಳೆತ. ಅವೆಲ್ಲ ಯಕ್ಷಿಣಿಯರೇ. ಅವುಗಳಿಂದ ಪಾರಾದರೆ ಬದುಕು ಶುಭವಾಗುತ್ತದೆ.

ಹಿಂದೆ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಒಂದು ಮೋಡಾಶ್ವ ಯೋನಿಯಲ್ಲಿ ಜನಿಸಿದ್ದ. ಅದೊಂದು ವಿಚಿತ್ರವಾದ ಪ್ರಾಣಿ. ಅದು ಕುದುರೆಯೇ. ಅದರ ಬಣ್ಣವೆಲ್ಲ ಬಿಳಿ ಆದರೆ ತಲೆ ಕಾಗೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT