ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ಎಸ್‌ಐಪಿ ಹೂಡಿಕೆಯ ಐದು ವಿಧಗಳು

Last Updated 11 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಶಿಸ್ತುಬದ್ಧ ಹೂಡಿಕೆ ಮೂಲಕ ಸಂಪತ್ತು ವೃದ್ಧಿಸಿಕೊಳ್ಳಲು ಇರುವ ಉತ್ತಮ ಮಾರ್ಗಗಳಲ್ಲಿ ಮ್ಯೂಚುವಲ್ ಫಂಡ್ ವ್ಯವಸ್ಥಿತ ಹೂಡಿಕೆ ಯೋಜನೆಯೂ (ಎಸ್ಐಪಿ) ಒಂದು. ಎಸ್‌ಐಪಿಯಲ್ಲಿ ಐದು ಪ್ರಮುಖ ವಿಧಗಳಿವೆ. ಎಸ್ಐಪಿ ವಿಧಗಳನ್ನು ತಿಳಿಯುವುದರಿಂದ ನೀವು ಯಾವ ರೀತಿಯ ಹೂಡಿಕೆಯನ್ನು ಆಯ್ಕೆ ಮಾಡಬೇಕು ಎನ್ನುವ ಸ್ಪಷ್ಟತೆ ಸಿಗುತ್ತದೆ.

ಕ್ರಮಬದ್ಧವಾಗಿ ಹೂಡಿಕೆ ಮಾಡಬೇಕು ಎನ್ನುವವರಿಗೆ ‘ಎಸ್ಐಪಿ’ ಒಳ್ಳೆಯ ಆಯ್ಕೆ. ‘ಎಸ್ಐಪಿ’ ಎನ್ನುವುದು ಹೂಡಿಕೆ ಉತ್ಪನ್ನವಲ್ಲ; ಅದು ಹೂಡಿಕೆಯ ವಿಧಾನ. ಪೂರ್ವನಿಗದಿತ ದಿನದಂದು, ಪೂರ್ವನಿಗದಿತ ಮೊತ್ತವನ್ನು ಸ್ವಯಂಚಾಲಿತವಾಗಿ ಹೂಡಿಕೆ ಉತ್ಪನ್ನವೊಂದಕ್ಕೆ ವರ್ಗಾಯಿಸುವ ವಿಧಾನ ‘ಎಸ್ಐಪಿ’. ಮ್ಯೂಚುವಲ್ ಫಂಡ್ ಹೂಡಿಕೆಗಳಲ್ಲಿ ಎಸ್ಐಪಿ ವಿಧಾನ ಹೆಚ್ಚು ಚಾಲ್ತಿಯಲ್ಲಿದೆ. ಇದರಲ್ಲಿನ ಪ್ರಮುಖ ವಿಧಗಳು ಹೀಗಿವೆ:

1. ರೆಗ್ಯೂಲರ್ ಎಸ್ಐಪಿ: ರೆಗ್ಯೂಲರ್ ಎಸ್ಐಪಿ ಅತ್ಯಂತ ಸರಳವಾದ ಹೂಡಿಕೆ ವಿಧಾನ. ಇದರಲ್ಲಿ ಹೂಡಿಕೆದಾರ ಪ್ರತಿ ತಿಂಗಳಿಗೊಮ್ಮೆ ನಿಗದಿತ ಮೊತ್ತವನ್ನು ಹೂಡಿಕೆ ಮಾಡುತ್ತಾ ಹೋಗುತ್ತಾನೆ. ತಿಂಗಳಿಗೊಮ್ಮೆ, ಎರಡು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮ, ಆರು ತಿಂಗಳಿಗೊಮ್ಮೆ... ಹೀಗೆ ಅನುಕೂಲಕ್ಕೆ ತಕ್ಕಂತೆ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರತಿ ದಿನ ಅಥವಾ ವಾರಕ್ಕೊಮ್ಮೆ ಹೂಡಿಕೆ ಮಾಡುವ ಎಸ್ಐಪಿ ಆಯ್ಕೆಗಳೂ ಇವೆ. ಆದರೆ ಅವು ಅಷ್ಟು ಉತ್ತಮ ಆಯ್ಕೆಗಳಲ್ಲ.

ರೆಗ್ಯೂಲರ್ ಎಸ್ಐಪಿ ಆಯ್ಕೆ ಮಾಡಿಕೊಳ್ಳುವಾಗ ಎಷ್ಟು ವರ್ಷಕ್ಕೆ ಎಸ್ಐಪಿ ಮಾಡುತ್ತೀರಿ, ಪ್ರತಿ ತಿಂಗಳು ಹೂಡಿಕೆ ಮಾಡುವ ಮೊತ್ತವೆಷ್ಟು ಇತ್ಯಾದಿ ಮಾಹಿತಿಯನ್ನು ನಮೂದಿಸಬೇಕು. ರೆಗ್ಯೂಲರ್ ಎಸ್ಐಪಿಯಲ್ಲಿ ಹೂಡಿಕೆ ಅವಧಿಯಲ್ಲಿ ಹೂಡಿಕೆ ಮಾಡುವ ಮೊತ್ತವನ್ನು ಬದಲಾವಣೆ ಮಾಡಲು ಆಗದು. ಉದಾಹರಣೆಗೆ, ಮ್ಯೂಚುವಲ್ ಫಂಡ್ ಒಂದರಲ್ಲಿ ಪ್ರತಿ ತಿಂಗಳ 10ನೆಯ ತಾರೀಕಿನಂದು ನೀವು ₹ 2000 ಹೂಡಿಕೆ ಮಾಡಲು ನಿರ್ಧರಿಸಿದ್ದರೆ, ಪ್ರತಿ ತಿಂಗಳು ಅದನ್ನು ಮುಂದುವರಿಸಿಕೊಂಡು ಹೋಗುವ ಪ್ರಕ್ರಿಯೆಯನ್ನು ರೆಗ್ಯೂಲರ್ ಎಸ್ಐಪಿ ಎನ್ನಬಹುದು.

2. ಟಾಪ್ ಅಪ್ ಎಸ್ಐಪಿ: ಟಾಪ್ ಅಪ್ ಎಸ್ಐಪಿಯಲ್ಲಿ ಹೂಡಿಕೆ ಮಾಡುವ ಮೊತ್ತವನ್ನು ಕಾಲಕಾಲಕ್ಕೆ ಹೆಚ್ಚಿಸಲು ಅವಕಾಶವಿದೆ. ಇದನ್ನು ಸ್ಟೆಪ್ ಅಪ್ ಎಸ್ಐಪಿ ಎಂದೂ ಕರೆಯಲಾಗುತ್ತದೆ. ಹಲವು ಕಂಪನಿಗಳು ಟಾಪ್ ಅಪ್ ಎಸ್ಐಪಿಗೆ ಅವಕಾಶ ಮಾಡಿಕೊಡುತ್ತವೆ. ಟಾಪ್ ಅಪ್ ಎಸ್ಐಪಿ ಆಯ್ಕೆ ಮಾಡಿದಾಗ ನಮ್ಮ ಆದಾಯ ಹೆಚ್ಚಳಕ್ಕೆ ತಕ್ಕಂತೆ ಎಸ್ಐಪಿ ಮೊತ್ತ ಹೆಚ್ಚಿಸಿಕೊಳ್ಳಬಹುದು. ಹಾಗಾಗಿ ಈ ಮಾದರಿಯ ಎಸ್ಐಪಿಗಳು ಜನಪ್ರಿಯವಾಗುತ್ತಿವೆ.

ಉದಾಹರಣೆಗೆ ಹೂಡಿಕೆದಾರನೊಬ್ಬ ಪ್ರತಿ ತಿಂಗಳು ₹ 10 ಸಾವಿರ ಹೂಡಿಕೆ ಮಾಡುತ್ತಿದ್ದು ವರ್ಷದ ಬಳಿಕ ಹೂಡಿಕೆ ಮೊತ್ತವನ್ನು ₹ 1 ಸಾವಿರದಷ್ಟು ಹೆಚ್ಚಿಸಲು ನಿರ್ಧರಿಸಿದ್ದರೆ, 13ನೇ ತಿಂಗಳಿನಿಂದ ಎಸ್ಐಪಿ ಮೊತ್ತವು ₹ 11 ಸಾವಿರ ಆಗುತ್ತದೆ. ಬೆಲೆ ಏರಿಕೆ ಪ್ರಮಾಣ ಮೀರಿ ಲಾಭ ಗಳಿಸಲು ಈ ರೀತಿಯ ಟಾಪ್ ಅಪ್ ಎಸ್ಐಪಿ ನೆರವಿಗೆ ಬರುತ್ತದೆ.

3. ಫ್ಲೆಕ್ಸಿಬಲ್ ಎಸ್ಐಪಿ: ಹೆಸರೇ ಹೇಳುವಂತೆ ಫ್ಲೆಕ್ಸಿಬಲ್ ಎಸ್ಐಪಿಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೂಡಿಕೆ ಮೊತ್ತ ಹೊಂದಿಸಿಕೊಳ್ಳುವ ಅವಕಾಶವಿರುತ್ತದೆ. ನಿಮ್ಮ ಬಳಿ ಹೆಚ್ಚಿಗೆ ಹಣವಿದ್ದಾಗ ಮ್ಯೂಚುವಲ್ ಫಂಡ್ ಕಂಪನಿಗೆ ತಿಳಿಸಿ ಎಸ್ಐಪಿ ಮೊತ್ತವನ್ನು ನಿರ್ದಿಷ್ಟ ಅವಧಿಯಲ್ಲಿ ಹೆಚ್ಚಿಸಿಕೊಳ್ಳಬಹುದು. ಒಂದೊಮ್ಮೆ ನಿಮಗೆ ಹಣದ ಕೊರತೆ ಎದುರಾದರೆ, ಹೂಡಿಕೆ ಮೊತ್ತ ಕಡಿಮೆ ಮಾಡಿಕೊಳ್ಳಬಹುದು.

4. ಪರ್ಪೆಚುವಲ್ ಎಸ್ಐಪಿ: ಎಸ್ಐಪಿ ಹೂಡಿಕೆ ಆರಂಭಿಸುವಾಗ ಅರ್ಜಿಯಲ್ಲಿ ಎಷ್ಟು ಅವಧಿಗೆ ಹೂಡಿಕೆ ಮಾಡುತ್ತೀರಿ ಎನ್ನುವುದನ್ನು ತಿಳಿಸಬೇಕು. ಇಲ್ಲದಿದ್ದರೆ ಅದು ಪರ್ಪೆಚುವಲ್ ಎಸ್ಐಪಿ ಆಗುತ್ತದೆ. ಅಂದರೆ ಅದು ಅನಿರ್ದಿಷ್ಟ ಅವಧಿಯ ಹೂಡಿಕೆಯಾಗುತ್ತದೆ. ದೀರ್ಘಾವಧಿಗೆ ಹೂಡಿಕೆ ಮಾಡುವವರಿಗೆ ಪರ್ಪೆಚುವಲ್ ಎಸ್ಐಪಿ ಸರಿಹೊಂದುತ್ತದೆ.

5. ಟ್ರಿಗರ್ ಎಸ್ಐಪಿ: ಹೂಡಿಕೆಗಳ ಬಗ್ಗೆ ಸಾಕಷ್ಟು ಮಾಹಿತಿ ಇರುವವರು, ಷೇರು ಮಾರುಕಟ್ಟೆಯ ಬಗ್ಗೆ ಅರಿವಿರುವವರು ಟ್ರಿಗರ್ ಎಸ್ಐಪಿ ವಿಧಾನ ಬಳಸುತ್ತಾರೆ. ಷೇರು ಸೂಚ್ಯಂಕ ನಿರ್ದಿಷ್ಟ ಮಟ್ಟಕ್ಕಿಂತ ಕೆಳಗಿಳಿದಾಗ ಹೂಡಿಕೆ ಹಿಂಪಡೆಯಬೇಕು ಎನ್ನುವ ಸೂಚನೆ ಅಥವಾ ಸೂಚ್ಯಂಕ ಮೇಲೆ ಹೋಗುತ್ತಿರುವಾಗ ಎಸ್ಐಪಿ ಆರಂಭಿಸಬೇಕು ಎನ್ನುವ ಸೂಚನೆಯನ್ನು ಟ್ರಿಗರ್ ಎಸ್ಐಪಿ ಅಡಿಯಲ್ಲಿ ಕೊಡಬಹುದು. ಸರಳವಾಗಿ ಹೇಳುವುದಾದರೆ ಮಾರುಕಟ್ಟೆ ಏರಿಳಿತಗಳು ಮತ್ತು ಕೆಲವು ಲೆಕ್ಕಾಚಾರಗಳನ್ನು ಆಧರಿಸಿ ಎಸ್ಐಪಿ ಹೂಡಿಕೆ ನಿರ್ಧರಿಸುವ ವಿಧಾನ ಟ್ರಿಗರ್ ಎಸ್ಐಪಿ.

****

ಮತ್ತೆ ಜಿಗಿದ ಸೂಚ್ಯಂಕಗಳು

ಸೆಪ್ಟೆಂಬರ್ 9ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡಿವೆ. 59,793 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 1.68ರಷ್ಟು ಗಳಿಕೆ ಕಂಡಿದೆ. 17,833 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.68ರಷ್ಟು ಜಿಗಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಖರೀದಿ ಉತ್ಸಾಹ, ತೈಲ ಬೆಲೆ ಇಳಿಕೆ, ಭಾರತ 2029ರ ವೇಳೆಗೆ ಜಗತ್ತಿನ 3ನೇ ಬಲಿಷ್ಠ ಅರ್ಥ ವ್ಯವಸ್ಥೆಯಾಗಲಿದೆ ಎನ್ನುವ ಎಸ್‌ಬಿಐ ವರದಿ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಪುಟಿದೇಳಲು ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಸೂಚ್ಯಂಕದ ಎಲ್ಲ ವಲಯಗಳು ಸಕಾರಾತ್ಮಕ ಗಳಿಕೆ ದಾಖಲಿಸಿವೆ. ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 3.48ರಷ್ಟು, ಬ್ಯಾಂಕ್ ಮತ್ತು ಲೋಹ ವಲಯ ತಲಾ ಶೇ 2ರಷ್ಟು, ಆರೋಗ್ಯ ವಲಯ, ಬಂಡವಾಳ ಸರಕು, ತೈಲ ಮತ್ತು ಅನಿಲ ಸೂಚ್ಯಂಕಗಳು ಶೇ 1.5ರಿಂದ ಶೇ 2ರಷ್ಟು ಗಳಿಸಿಕೊಂಡಿವೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಸುಮಾರು 36 ಷೇರುಗಳು ಕಳೆದ ವಾರ ಸಕಾರಾತ್ಮಕ ಫಲಿತಾಂಶ ಕೊಟ್ಟಿವೆ. ಶ್ರೀ ಸಿಮೆಂಟ್ ಶೇ 16.6ರಷ್ಟು, ಟೆಕ್ ಮಹೀಂದ್ರ ಶೇ 6.64ರಷ್ಟು, ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಜೋನ್ ಶೇ 6.52ರಷ್ಟು, ಭಾರತ್ ಪೆಟ್ರೋಲಿಯಂ ಶೇ 5.14ರಷ್ಟು ಮತ್ತು ಎಕ್ಸಿಸ್ ಬ್ಯಾಂಕ್, ಸಿಪ್ಲಾ, ಏರ್‌ಟೆಲ್, ಇನ್ಫೊಸಿಸ್ ತಲಾ ಶೇ 4ರಷ್ಟು ಹೆಚ್ಚಳ ದಾಖಲಿಸಿವೆ.

ಬಜಾಜ್ ಆಟೊ, ಟಾಟಾ ಮೋಟರ್ಸ್, ನೆಸ್ಲೆ ಕ್ರಮವಾಗಿ ಶೇ 4.51, ಶೇ 3.49 ಮತ್ತು ಶೇ 2.69ರಷ್ಟು ಕುಸಿದಿವೆ.

ಮುನ್ನೋಟ: ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಮತ್ತು ಗ್ರಾಹಕ ಬೆಲೆ ಸೂಚ್ಯಂಕದ ಅಂಕಿ ಅಂಶಗಳು ಬಿಡುಗಡೆಯಾಗಲಿವೆ. ಸೆಪ್ಟೆಂಬರ್ 14ರಂದು ಸಗಟು ಬೆಲೆ ಸೂಚ್ಯಂಕದ ದತ್ತಾಂಶ ಹೊರಬೀಳಲಿದೆ. ಇವಲ್ಲದೆ, ಅಮೆರಿಕದ ಹಣದುಬ್ಬರ ಪ್ರಮಾಣ, ಚಿಲ್ಲರೆ ಮಾರಾಟ ದತ್ತಾಂಶ, ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಉತ್ಪಾದನೆಯ ಮಾಹಿತಿ ಲಭಿಸಲಿದೆ. ಮೇಲಿನ ಅಂಶಗಳು ಮಾರುಕಟ್ಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT