ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ಎಸ್ಐಪಿ: ₹10 ಕೋಟಿ ಹೂಡಿಕೆ ಹೇಗೆ?

Last Updated 27 ಫೆಬ್ರುವರಿ 2023, 4:22 IST
ಅಕ್ಷರ ಗಾತ್ರ

ಎಸ್‌ಐಪಿ, ಅಂದ್ರೆ ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಪ್ರತಿ ತಿಂಗಳು ನಿರ್ಧಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತಾ ಹೋದರೆ ದೊಡ್ಡ ಮೊತ್ತದ ಸಂಪತ್ತು ಸೃಷ್ಟಿಸಲು ಸಾಧ್ಯವಾಗುತ್ತದೆ. ಹೂಡಿಕೆ ಮಾಡಿ ಸಂಪತ್ತು ಗಳಿಸಲು ದೊಡ್ಡ ಮೊತ್ತದ ಹಣ ಹೊಂದಿರಬೇಕೆಂಬ ತಪ್ಪು ಕಲ್ಪನೆಯಿದೆ. ಸರಿಯಾದ ಹೂಡಿಕೆ ಆಯ್ಕೆ ಮಾಡಿಕೊಂಡು ಸಣ್ಣ ಮೊತ್ತದ ಹೂಡಿಕೆ ಮಾಡುತ್ತಾ ಹೋದರೂ ದೊಡ್ಡ ಮೊತ್ತ ಪೇರಿಸಿಕೊಳ್ಳಬಹುದು.

ಬ್ಯಾಂಕ್ ಠೇವಣಿಗಳು, ಸಾಂಪ್ರದಾಯಿಕ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಹಣ ಹಾಕುವ ಬದಲು ಹೆಚ್ಚು ಲಾಭ ಕೊಡುವ, ದೀರ್ಘಾವಧಿಯಲ್ಲಿ ಸಂಪತ್ತು ಗಳಿಕೆಗೆ ನೆರವಾಗುವ ಮ್ಯೂಚುಯಲ್ ಫಂಡ್‌ನಂತಹ ಸಾಧನಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ನಿರ್ಧಾರವಾಗುತ್ತದೆ. ಹೂಡಿಕೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅರಂಭಿಸುವುದು, ಶಿಸ್ತು ಮತ್ತು ಕ್ರಮಬದ್ಧವಾಗಿ ಹಣ ತೊಡಗಿಸುವುದು, ಹೂಡಿಕೆ ಮೊತ್ತವನ್ನು ಆದಾಯ ಹೆಚ್ಚಳಕ್ಕೆ ತಕ್ಕಂತೆ ಕಾಲಕಾಲಕಾಲಕ್ಕೆ ಹೆಚ್ಚಿಸುತ್ತಾ ಹೋಗುವುದು ಸಂಪತ್ತು ಗಳಿಕೆಗೆ ರಹದಾರಿಯಾಗುತ್ತದೆ.

ಹೂಡಿಕೆ ಮೂಲಕ ₹10 ಕೋಟಿ ಗಳಿಸಲು ಎಷ್ಟು ಸಮಯ ಬೇಕು?: ಪಟ್ಟಿಯಲ್ಲಿರುವಂತೆ ಪ್ರತಿ ತಿಂಗಳು ನೀವು ₹ 25 ಸಾವಿರ ಹೂಡಿಕೆ ಮಾಡಿ ಶೇ 8 ಬಡ್ಡಿ ಲಾಭಾಂಶ ನಿರೀಕ್ಷೆ ಮಾಡಿದರೆ ₹ 10 ಕೋಟಿ ಮೊತ್ತ ಗಳಿಸಲು 42 ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗುತ್ತದೆ. 42 ವರ್ಷಗಳ ಅವಧಿಯಲ್ಲಿ ಒಟ್ಟು ₹ 1.3 ಕೋಟಿ ಹೂಡಿಕೆ ಮಾಡುತ್ತೀರಿ. ಅದಕ್ಕೆ ಪ್ರತಿಯಾಗಿ ₹ 10.4 ಕೋಟಿ ಲಭಿಸಬಹುದು. ಪ್ರತಿ ತಿಂಗಳ ₹ 25 ಸಾವಿರ ಹೂಡಿಕೆಗೆ ಶೇ 10 ರ ಬಡ್ಡಿ ಲಾಭಾಂಶ ಸಿಕ್ಕರೆ ₹ 10 ಕೋಟಿ ಮೊತ್ತ ಪೇರಿಸಲು 36 ವರ್ಷಗಳ ಬೇಕಾಗುತ್ತವೆ. ₹ 1.08 ಕೋಟಿ ಹೂಡಿಕೆಗೆ ಪ್ರತಿಯಾಗಿ ₹ 10.6 ಕೋಟಿ ಸಿಗುತ್ತದೆ. ಒಂದೊಮ್ಮೆ ನಿಮ್ಮ ಹೂಡಿಕೆಗೆ ಶೇ 12 ಬಡ್ಡಿ ಲಾಭಾಂಶ ಸಿಕ್ಕರೆ ₹ 10 ಕೋಟಿಯ ಗುರಿ ಮುಟ್ಟಲು 31 ವರ್ಷಗಳ ಸಾಕಾಗುತ್ತವೆ.

ಆದಾಯ ಹೆಚ್ಚಾದಂತೆ ಹೂಡಿಕೆ ಹೆಚ್ಚಿಸಿದರೆ ಲಾಭ: ಹೂಡಿಕೆ ಮಾಡುವಾಗ ಆದಾಯ ಹೆಚ್ಚಳಕ್ಕೆ ತಕ್ಕಂತೆ ಹೂಡಿಕೆ ಮೊತ್ತ ಹೆಚ್ಚಳ ಮಾಡುತ್ತಾ ಸಾಗಿದರೆ ಲಾಭ ಜಾಸ್ತಿ. ಹೂಡಿಕೆ ಮೊತ್ತ ಹೆಚ್ಚಾಳವಾಗುತ್ತಾ ಸಾಗಿದಂತೆಲ್ಲಾ ಹೂಡಿಕೆಯ ಅವಧಿ ತಗ್ಗುತ್ತಾ ಹೋಗುತ್ತದೆ. ಹೀಗೆ ಮಾಡಿದಾಗ ₹ 10 ಕೋಟಿ ಗಳಿಸುವ ಗುರಿಯನ್ನು ಬೇಗ ತಲುಪಬಹುದಾಗಿದೆ. ಸ್ಟೆಪ್ ಅಪ್ ಎಸ್‌ಐಪಿ ಪಟ್ಟಿಯಲ್ಲಿರುವಂತೆ ಪ್ರತಿ ವರ್ಷ ಶೇ 10 ರಷ್ಟು ಹೂಡಿಕೆ ಮೊತ್ತ ಹೆಚ್ಚಿಸುತ್ತಾ ಸಾಗಿ ಶೇ 8 ಬಡ್ಡಿ ಲಾಭ ಸಿಕ್ಕರೆ ₹ 10 ಕೋಟಿಯ ಗುರಿಯನ್ನು 29 ವರ್ಷಗಳಲ್ಲೇ ಪೂರೈಸ ಬಹುದಾಗಿದೆ. ಅದೇ ರೀತಿ ಶೇ 10ರ ಬಡ್ಡಿ ಲಾಭ ಸಿಕ್ಕರೆ ₹ 10 ಕೋಟಿಯ ಮೊತ್ತವನ್ನು 27 ವರ್ಷಗಳಲ್ಲೇ ಪೇರಿಸಲು ಸಾಧ್ಯವಾಗುತ್ತದೆ. ಶೇ 12 ರ ಬಡ್ಡಿ ಲಾಭ ದೊರಕಿದರೆ ಕೇವಲ 25 ವರ್ಷಗಳಲ್ಲಿ ₹ 10 ಕೋಟಿ ಮೊತ್ತ ಪೇರಿಸಬಹುದಾಗಿದೆ. ಪಟ್ಟಿಯನ್ನು ಗಮನಿಸಿದಾಗ ಸ್ಟೆಪ್ ಅಪ್ ಎಸ್ ಐಪಿ ಮಾಡುವ ಮೂಲಕ ₹ 10 ಕೋಟಿ ಗುರಿತಲುಪಲು ಅವಶ್ಯ ಎನಿಸುವ ವರ್ಷಗಳ ಅವಧಿಯನ್ನು 6 ರಿಂದ 13 ವರ್ಷಗಳಷ್ಟು ತಗ್ಗಿಸಲು ಸಾಧ್ಯವಾಗುವುದು ಮನದಟ್ಟಾಗುತ್ತದೆ.

ಈ ವಿಚಾರ ತಿಳಿದಿರಲಿ
* ಮ್ಯೂಚುಯಲ್ ಫಂಡ್ ಹೂಡಿಕೆಗೆ ದೊಡ್ಡ ಮೊತ್ತದ ಹಣದ ಅಗತ್ಯವಿಲ್ಲ
* ಹೂಡಿಕೆ ಮೊತ್ತವನ್ನು ಪ್ರತಿ ವರ್ಷ ಹೆಚ್ಚಿಸಿದರೆ ಬೇಗ ಹೂಡಿಕೆ ಗುರಿ ತಲುಪಬಹುದು
* ಬೇಗ ಹೂಡಿಕೆ ಮಾಡಿದಾಗ ದುಡ್ಡಿನ ಬೆಳವಣಿಗೆಗೆ ಕಾಲಾವಕಾಶ ಸಿಗುತ್ತದೆ
* ಹೆಚ್ಚು ರಿಸ್ಕ್ ಇಲ್ಲದ ಹೂಡಿಕೆ ಬೇಕು ಅಂದ್ರೆ ಹೂಡಿಕೆ ಗುರಿ ತಲುಪಲು ಹೆಚ್ಚು ಸಮಯ ಬೇಕು

ಮಾರಾಟದ ಒತ್ತಡಕ್ಕೆ ಕುಸಿದ ಸೂಚ್ಯಂಕಗಳು
ಫೆಬ್ರವರಿ 24 ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಭಾರಿ ಕುಸಿತ ದಾಖಲಿಸಿವೆ. 59,463 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 2.55 ರಷ್ಟು ಕುಸಿತ ದಾಖಲಿಸಿದೆ. 17,465 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ, ವಾರದ ಅವಧಿಯಲ್ಲಿ ಶೇ 2.66 ರಷ್ಟು ಇಳಿಕೆ ಕಂಡಿದೆ. ಹಣದುಬ್ಬರ ಹೆಚ್ಚಳ, ಅಮೆರಿಕ ಫೆಡರಲ್ ಬ್ಯಾಂಕ್ ನಿಂದ ಬಡ್ಡಿ ದರ ಮತ್ತಷ್ಟು ಹೆಚ್ಚಳದ ಮುನ್ಸೂಚನೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರು ಮಾರಾಟದ ಒತ್ತಡ ಸೇರಿ ಹಲವು ಅಂಶಗಳು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯನ್ನು ನೋಡುವುದಾದರೆ ಎಲ್ಲಾ ಕ್ಷೇತ್ರಗಳಲ್ಲೂ ಕುಸಿತ ಕಂಡುಬಂದಿದೆ. ನಿಫ್ಟಿ ಲೋಹ ಸೂಚ್ಯಂಕ ಶೇ 6.2, ರಿಯಲ್ ಎಸ್ಟೇಟ್, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ಮಾಧ್ಯಮ ಸೂಚ್ಯಂಕ ತಲಾ ಶೇ 5 ರಷ್ಟು ಮತ್ತು ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 3 ರಷ್ಟು ಕುಸಿದಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ರೂ. 3,100.55 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ರೂ. 3,209.60 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಿಎಸ್ ಇ ಲಾರ್ಜ್ ಕ್ಯಾಪ್ ಸೂಚ್ಯಂಕದಲ್ಲಿ ಅದಾನಿ ಎಂಟರ್ ಪ್ರೈಸಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್ ಮಿಷನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ವಿಲ್ಮರ್ ಶೇ 17 ರಿಂದ ಶೇ 23 ರಷ್ಟು ಕುಸಿತ ದಾಖಲಿಸಿವೆ. ಬಿಎಸ್ ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 2 ರಷ್ಟು ಕುಸಿತ ಕಂಡಿದ್ದು ಅದಿತ್ಯಾ ಬಿರ್ಲಾ ಫ್ಯಾಷನ್ ಅಂಡ್ ರಿಟೇಲ್, ಜೀ ಎಂಟರ್ ಟೇನ್ಮೆಂಟ್ ಎಂಟರ್ ಪ್ರೈಸಸ್, ರಾಜೇಶ್ ಎಕ್ಸ್ ಪೋರ್ಟ್ಸ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಹಿಂದೂಸ್ಥಾನ್ ಪೆಟ್ರೋಲಿಯಂ, ಗೋದ್ರೇಜ್ ಪ್ರಾಡಕ್ಟ್ಸ್ ಮತ್ತು ವೇದಾಂತ್ ಫ್ಯಾಶನ್ಸ್ ಕುಸಿದಿವೆ. ಪಿಬಿ ಫಿನ್ ಟೆಕ್, ಗ್ಲಾಕ್ಸೋ ಫ್ರಾರ್ಮಾ, ಟ್ಯೂಬ್ ಇನ್ವೆಸ್ಟ್ ಮೆಂಟ್ಸ್ ಆಫ್ ಇಂಡಿಯಾ ಮತ್ತು ವೋಲ್ಟಾಸ್ ಗಳಿಕೆ ಕಂಡಿವೆ.

ಮುನ್ನೋಟ: ಈ ವಾರ ಫೋಸ್ ಕೋ ಇಂಡಿಯಾ ಲಿ., ರೇನ್ ಇಂಡಸ್ಟೀಸ್ ಲಿ., ಸ್ಪೈಸ್ ಜೆಟ್ ಲಿ., ವೆಸುವಿಯಸ್ ಇಂಡಿಯಾ ಲಿ., ಕೆಬಿಸಿ ಗ್ಲೋಬಲ್ ಲಿ., ಸ್ಟೋವೆಕ್ ಇಂಡಸ್ಟ್ರೀಸ್ ಲಿ., ಯುನಿಟೆಕ್ ಲಿ., ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಜಾಗತಿಕ ವಿದ್ಯಮಾನಗಳು, ಬ್ಯಾಂಕ್ ಗಳ ಬಡ್ಡಿ ದರ ಹೆಚ್ಚಳ ಸೇರಿ ಪ್ರಮುಖ ಬೆಳವಣಿಗೆಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT