ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ಎಂಎಫ್‌: ಏಳು ತಪ್ಪು ಕಲ್ಪನೆಗಳು

Last Updated 4 ಜುಲೈ 2021, 19:31 IST
ಅಕ್ಷರ ಗಾತ್ರ

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. 2011ರಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಸುಮಾರು ₹ 6 ಲಕ್ಷ ಕೋಟಿ ಮೊತ್ತ ಹೂಡಿಕೆಯಾಗಿತ್ತು. ಈಗ, ಅಂದರೆ 2021ರಲ್ಲಿ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಆಗಿರುವ ಮೊತ್ತ (AUM- Asset Under Management) ₹ 31 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇಷ್ಟೆಲ್ಲಾ ಆಗಿದ್ದರೂ ಮ್ಯೂಚುವಲ್ ಫಂಡ್‌ಗಳ ಬಗ್ಗೆ ಹಲವರಲ್ಲಿ ತಪ್ಪು ಕಲ್ಪನೆಗಳಿವೆ. ಈ ಕುರಿತು ಬೆಳಕು ಚೆಲ್ಲುವ ಮಾಹಿತಿ ಇಲ್ಲಿದೆ.

1) ಮ್ಯೂಚುವಲ್ ಫಂಡ್ ಹೂಡಿಕೆ ತಜ್ಞರಿಗೆ ಮಾತ್ರ!: ಮ್ಯೂಚವಲ್ ಫಂಡ್ ಮೂಲಕ ಹೂಡಿಕೆ ಮಾಡುವುದು ಜನಸಾಮಾನ್ಯರಿಗೆ ಹೇಳಿ ಮಾಡಿಸಿದ್ದಲ್ಲ, ಮಾರುಕಟ್ಟೆ ಬಗ್ಗೆ ಸರಿಯಾಗಿ ಜ್ಞಾನವಿರುವವರಿಗೆ ಮಾತ್ರ ಅದು ಎನ್ನುವ ತಪ್ಪು ಕಲ್ಪನೆಯಿದೆ. ಮ್ಯೂಚುವಲ್ ಫಂಡ್‌ ರೂಪುಗೊಂಡಿರುವುದೇ ಹಣಕಾಸು ನಿರ್ವಹಣೆ ಅಷ್ಟಾಗಿ ಗೊತ್ತಿಲ್ಲದ, ಷೇರು ಮಾರುಕಟ್ಟೆ ಬಗ್ಗೆ ಕಲಿತು ಹೂಡಿಕೆ ಮಾಡಲು ಆಗದ ಜನರಿಗಾಗಿ. ಇಲ್ಲಿ ನಿಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ನಿಮ್ಮ ಪರವಾಗಿ ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ನೋಡಿಕೊಳ್ಳುತ್ತಾರೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾದರೆ ಕಂಪನಿಗಳ ಬಗ್ಗೆ ಅಧ್ಯಯನ ಮಾಡಬೇಕು, ನಿರ್ದಿಷ್ಟ ಕಂಪನಿ ಭವಿಷ್ಯದಲ್ಲಿ ಹೇಗೆ ಮುನ್ನಡೆಯಲಿದೆ ಎಂಬ ಅಂದಾಜು ಮಾಡಿಕೊಳ್ಳಬೇಕು. ಆದರೆ ಮ್ಯೂಚುವಲ್ ಫಂಡ್‌ಗಳಲ್ಲಿ ಉತ್ತಮವಾದ ಒಂದು ಫಂಡ್ ಆಯ್ಕೆ ಮಾಡಿ ನಿರ್ದಿಷ್ಟ ಸಮಯಕ್ಕೆ ಹಣ ಹಾಕಿದರೆ ಆಯಿತು. ಇನ್ನುಳಿದ ಕೆಲಸವನ್ನು ಫಂಡ್ ಮ್ಯಾನೇಜರ್ ಮಾಡುತ್ತಾರೆ.

2) ಮ್ಯೂಚುವಲ್ ಫಂಡ್ ಹೂಡಿಕೆ ಅಂದರೆ ಷೇರು ಮಾರುಕಟ್ಟೆ ಹೂಡಿಕೆ!: ಮ್ಯೂಚುವಲ್ ಫಂಡ್ ಅಂದ ತಕ್ಷಣ ಅದು ಷೇರು ಮಾರುಕಟ್ಟೆ ಹೂಡಿಕೆಯಷ್ಟೇ ಎಂಬ ತಪ್ಪು ಕಲ್ಪನೆಯಿದೆ. ಆದರೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರ ಜತೆಗೆ ನಿರ್ದಿಷ್ಟ ಆದಾಯ ತಂದುಕೊಡುವ ಇತರ ಹೂಡಿಕೆ ಆಯ್ಕೆಗಳು ಕೂಡ ಮ್ಯೂಚುವಲ್ ಫಂಡ್‌ಗಳಲ್ಲಿ ಇವೆ. ಸರ್ಕಾರಿ ಬಾಂಡ್‌ಗಳು, ಕಾರ್ಪೊರೇಟ್ ಬಾಂಡ್‌ಗಳು, ಟ್ರೆಷರಿ ಬಿಲ್‌ಗಳು, ಅವಧಿ ಠೇವಣಿಗಳಲ್ಲೂ ಮ್ಯೂಚುವಲ್ ಫಂಡ್‌ಗಳು ಹೂಡಿಕೆ ಮಾಡುತ್ತವೆ. ಇಷ್ಟೇ ಅಲ್ಲ ಚಿನ್ನ, ಕಮಾಡಿಟಿ ಮತ್ತು ರಿಯಲ್ ಎಸ್ಟೇಟ್ ಹೂಡಿಕೆ ಆಯ್ಕೆಗಳನ್ನು ಕೂಡ ಮ್ಯೂಚುವಲ್ ಫಂಡ್‌ಗಳು ಒದಗಿಸುತ್ತವೆ.

3) ಮ್ಯೂಚುವಲ್ ಫಂಡ್ ದೀರ್ಘಾವಧಿಗೆ ಮಾತ್ರ: ಮ್ಯೂಚುವಲ್ ಫಂಡ್ ಹೂಡಿಕೆಗಳು ದೀರ್ಘಾವಧಿಗೆ ಮಾತ್ರ ಎನ್ನುವ ಅಭಿಪ್ರಾಯ ಕೆಲವರಲ್ಲಿದೆ. ಆದರೆ ಮ್ಯೂಚುವಲ್ ಫಂಡ್ ಅಲ್ಪಾವಧಿ, ದೀರ್ಘಾವಧಿ, ಮಧ್ಯಮ ಅವಧಿಗೂ ಸರಿ ಹೊಂದುತ್ತದೆ. ನೀವು ಮೂರು ವರ್ಷಗಳಿಗಿಂತ ಕಡಿಮೆ ಅವಧಿಗೆ ಹೂಡಿಕೆ ಮಾಡುತ್ತೀರಿ ಎಂದಾದಲ್ಲಿ ಡೆಟ್ ಫಂಡ್ ಅಥವಾ ಹೈಬ್ರೀಡ್ ಫಂಡ್ ಆಯ್ಕೆ ಮಾಡಿಕೊಳ್ಳಬಹುದು. ಮೂರು ವರ್ಷಗಳಿಗಿಂತ ಹೆಚ್ಚು ಅವಧಿಗೆ ಹೂಡಿಕೆ ಮಾಡುವ ಮನಸ್ಸಿದ್ದರೆ ಈಕ್ವಿಟಿ ಫಂಡ್‌ಗಳನ್ನು ಪರಿಗಣಿಸಬಹುದು. ಡೆಟ್ ಫಂಡ್‌ಗಳಲ್ಲಿ 1 ದಿನ, 1 ತಿಂಗಳ ಅವಧಿಗೂ ಹೂಡಿಕೆ ಸಾಧ್ಯವಿದೆ.

4) ಮ್ಯೂಚುವಲ್ ಫಂಡ್‌ನಲ್ಲಿ ರಿಸ್ಕ್ ಜಾಸ್ತಿ: ಯಾವ ಮ್ಯೂಚುವಲ್ ಫಂಡ್ ಕೂಡ ಹೂಡಿಕೆ ಮೊತ್ತಕ್ಕೆ ಪೂರ್ವನಿರ್ಧರಿತ ಲಾಭದ ಖಾತರಿ ನೀಡುವುದಿಲ್ಲ ಎನ್ನುವುದು ನಿಜ. ಆದರೆ ಮ್ಯೂಚುವಲ್ ಫಂಡ್ ಅಂದರೆ ಬರೀ ರಿಸ್ಕ್‌ ಅನ್ನುವುದು ವಾಸ್ತವವಲ್ಲ. ಲಿಕ್ವಿಡ್ ಫಂಡ್‌ಗಳು ತೀರಾ ಕಡಿಮೆ ರಿಸ್ಕ್ ಹೊಂದಿದ್ದರೆ, ಈಕ್ವಿಟಿ ಸ್ಮಾಲ್ ಕ್ಯಾಪ್ ಫಂಡ್ ಮತ್ತು ಸೆಕ್ಟೋರಲ್ ಫಂಡ್‌ಗಳು ಅತಿ ಹೆಚ್ಚು ರಿಸ್ಕ್ ಹೊಂದಿವೆ.

5) ಮ್ಯೂಚುವಲ್ ಫಂಡ್ ಶೇ 12ರಿಂದ ಶೇ 16ರಷ್ಟು ಲಾಭಾಂಶ ಕೊಡುತ್ತದೆ: ಮ್ಯೂಚುವಲ್ ಫಂಡ್‌ಗಳು ಇಂತಿಷ್ಟೇ ಲಾಭಾಂಶ ಕೊಡುತ್ತವೆ ಎಂದು ಹೇಳುವುದು ತಪ್ಪು. ಉದಾಹರಣೆಗೆ ಹೇಳುವುದಾದರೆ 2018-19ರಲ್ಲಿ ಮ್ಯೂಚುವಲ್ ಫಂಡ್‌ಗಳು ನಕಾರಾತ್ಮಕ ಲಾಭ ಕೊಟ್ಟಿದ್ದವು. ಆದರೆ 2020ರಲ್ಲಿ ಶೇ 80ರಷ್ಟು ಲಾಭಾಂಶ ಕೊಟ್ಟಿವೆ. ಅಂದರೆ ಮ್ಯೂಚುವಲ್ ಫಂಡ್ ಲಾಭದ ಲೆಕ್ಕಾಚಾರ ಮಾರುಕಟ್ಟೆ ಮತ್ತು ಇನ್ನಿತರ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ.

6) ಮ್ಯೂಚುವಲ್ ಫಂಡ್ ಹೂಡಿಕೆಗೆ ಹೆಚ್ಚು ಹಣ ಬೇಕು: ₹ 100 ಇದ್ದರೂ ಸಾಕು ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆ ಮಾಡಬಹುದು. ಆದರೆ, ಮ್ಯೂಚುವಲ್ ಫಂಡ್ ಹೂಡಿಕೆಗೆ ದೊಡ್ಡ ಮೊತ್ತ ಬೇಕು ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ.

7) ಡೈರೆಕ್ಟ್ ಪ್ಲ್ಯಾನ್‌ಗಿಂತ ರೆಗ್ಯುಲರ್ ಪ್ಲ್ಯಾನ್‌ಗಳು ಅಗ್ಗ: ಡೈರೆಕ್ಟ್ ಮ್ಯೂಚುವಲ್ ಫಂಡ್ ಪ್ಲ್ಯಾನ್‌ಗಳಲ್ಲಿ ಕಮಿಷನ್ ಇರುವುದಿಲ್ಲ. ಹಾಗಾಗಿ, ಹೂಡಿಕೆದಾರನಿಗೆ ಲಾಭ ಹೆಚ್ಚು. ರೆಗ್ಯೂಲರ್ ಮ್ಯೂಚುವಲ್ ಫಂಡ್‌ಗಳಲ್ಲಿ ಕಮಿಷನ್ ಇರುವುದರಿಂದ ಹೂಡಿಕೆದಾರನ ಕೈಸೇರುವ ಲಾಭದ ಮೊತ್ತ ಕಡಿಮೆ. ಆದರೆ ಕೆಲವು ಏಜೆಂಟರು ಡೈರೆಕ್ಟ್ ಪ್ಲ್ಯಾನ್‌ಗಳೇ ದುಬಾರಿ ಎಂದು ಹೂಡಿಕೆದಾರರ ಹಾದಿ ತಪ್ಪಿಸುತ್ತಾರೆ.

ಷೇರುಪೇಟೆಯಲ್ಲಿ ಅನಿಶ್ಚಿತತೆಯ ಓಟ
ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡರೂ ಜುಲೈ 2ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. 52,484 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.83ರಷ್ಟು ಇಳಿಕೆ ಕಂಡಿದೆ. 17,722 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ವಾರಾಂತ್ಯಕ್ಕೆ ಶೇ 0.87ರಷ್ಟು ತಗ್ಗಿದೆ.

ಕೋವಿಡ್ ಮೂರನೇ ಅಲೆಯ ಆತಂಕ, ಡೆಲ್ಟಾ ಪ್ಲಸ್ ರೂಪಾಂತರಿ ತಳಿಯ ಪ್ರಕರಣಗಳಲ್ಲಿ ಹೆಚ್ಚಳ, 2022ರಲ್ಲಿ ವಸೂಲಾಗದ ಸಾಲದ ಪ್ರಮಾಣ ಹೆಚ್ಚಳವಾಗುವ ಬಗ್ಗೆ ಆರ್‌ಬಿಐ ಹೇಳಿರುವ ಮಾತುಗಳು ಸೇರಿ ಪ್ರಮುಖ ಬೆಳವಣಿಗೆಗಳು ನಕಾರಾತ್ಮಕ ಪರಿಣಾಮ ಬೀರಿವೆ. ಆದರೆ ವಾಹನ ಮಾರಾಟ ಅಂಕಿ-ಅಂಶದಲ್ಲಿ ಸಕಾರಾತ್ಮಕತೆ, ಕೋವಿಡ್ ಲಸಿಕೆಗೆ ವೇಗ, ಲಾಕ್‌ಡೌನ್ ಸಡಿಲ ಸೇರಿ ಕೆಲವು ಬೆಳವಣಿಗೆಗಳು ಮಾರುಕಟ್ಟೆಯಲ್ಲಿ ಆಗಬಹುದಾಗಿದ್ದ ಮತ್ತಷ್ಟು ನಷ್ಟವನ್ನು ತಡೆಯುವಲ್ಲಿ ನೆರವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಫಾರ್ಮಾ ಶೇ 3ರಷ್ಟು ಗಳಿಕೆ ಕಂಡಿದೆ, ಬ್ಯಾಂಕ್ ಸೂಚ್ಯಂಕ ಶೇ 1.6ರಷ್ಟು, ಲೋಹ ವಲಯ ಮತ್ತು ಮಾಧ್ಯಮ ವಲಯ ಸುಮಾರು ಶೇ 2ರಷ್ಟು ಕುಸಿದಿವೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಡಿವೀಸ್ ಲ್ಯಾಬ್ಸ್ ಶೇ 6ರಷ್ಟು, ಡಾ ರೆಡ್ಡೀಸ್ ಶೇ 5ರಷ್ಟು, ಸಿಪ್ಲಾ ಶೇ 2ರಷ್ಟು, ಹಿಂದೂಸ್ಥಾನ್ ಯುನಿಲಿವರ್ ಶೇ 1.5ರಷ್ಟು, ಟಾಟಾ ಮೋಟರ್ಸ್ ಶೇ 1.5ರಷ್ಟು, ಎನ್‌ಟಿಪಿಸಿ ಶೇ 1.2ರಷ್ಟು, ರಿಲಯನ್ಸ್ ಶೇ 1.1ರಷ್ಟು ಗಳಿಸಿವೆ. ಎಚ್‌ಡಿಎಫ್‌ಸಿ ಲೈಫ್ ಶೇ 6ರಷ್ಟು, ಶ್ರೀ ಸಿಮೆಂಟ್ ಶೇ 6ರಷ್ಟು, ಬಜಾಜ್ ಫಿನ್‌ಸರ್ವ್ ಶೇ 6ರಷ್ಟು, ಬ್ರಿಟಾನಿಯಾ ಶೇ 3ರಷ್ಟು, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 3ರಷ್ಟು, ಎಲ್ಆ್ಯಂಡ್‌ಟಿ ಶೇ 3ರಷ್ಟು, ಅಲ್ಟ್ರಾಟೆಕ್ ಸಿಮೆಂಟ್ ಶೇ 3ರಷ್ಟು ಮತ್ತು ಟಾಟಾ ಸ್ಟೀಲ್ ಶೇ 3ರಷ್ಟು ಕುಸಿದಿವೆ.

ಮುನ್ನೋಟ: ಕಳೆದ ನಾಲ್ಕು ವಾರಗಳಿಂದ ನಿಫ್ಟಿ 15,500ರಿಂದ 15,900 ಅಂಶಗಳ ಆಸುಪಾಸಿನಲ್ಲೇ ಏರಿಳಿತ ಕಾಣುತ್ತಿದೆ. ಅಂದರೆ ಅನಿಶ್ಚಿತ ಸ್ಥಿತಿಯಲ್ಲಿ ಮಾರುಕಟ್ಟೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ವಾರ ಅಮೆರಿಕದ ಉದ್ಯೋಗಾವಕಾಶಗಳ ಬಗ್ಗೆ ದತ್ತಾಂಶ ಹೊರಬೀಳಲಿದೆ. ಕಂಪನಿಗಳ ಒಂದನೇ ತ್ರೈಮಾಸಿಕ ಅವಧಿಯ ಫಲಿತಾಂಶಗಳ ಸರಣಿಯೂ ಇನ್ನೇನು ಶುರುವಾಗಲಿದೆ. ಜುಲೈನಲ್ಲಿ ವಿವಿಧ ಕಂಪನಿಗಳು ಐಪಿಒ ನಡೆಸುತ್ತಿದ್ದು ಒಟ್ಟು ಸುಮಾರು ₹ 24,000 ಕೋಟಿ ಬಂಡವಾಳ ಸಂಗ್ರಹಕ್ಕೆ ಮುಂದಾಗಿವೆ, ಈ ಎಲ್ಲ ಅಂಶಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

-ಅವಿನಾಶ್ ಕೆ.ಟಿ., ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ
-ಅವಿನಾಶ್ ಕೆ.ಟಿ., ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT