ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ಬಾಕಿ ಪಾವತಿ: ಇರಲಿ ಎಚ್ಚರ

Last Updated 1 ಡಿಸೆಂಬರ್ 2019, 18:30 IST
ಅಕ್ಷರ ಗಾತ್ರ

ಕ್ರೆಡಿಟ್ ಕಾರ್ಡ್‌ನಿಂದಾಗಿ ರಿಯಾಯ್ತಿ, ಕ್ಯಾಷ್ ಬ್ಯಾಕ್, 45 ದಿನಗಳವರೆಗೆ ಬಡ್ಡಿ ರಹಿತ ಸಾಲ ಸೇರಿ ಅನೇಕ ಅನುಕೂಲಗಳು ಸಿಗುತ್ತವೆ. ಆದರೆ, ಲೆಕ್ಕಾಚಾರವಿಲ್ಲದೆ ಕ್ರೆಡಿಟ್ ಕಾರ್ಡ್ ಬಳಸಿದರೆ ಖರ್ಚಿನಲ್ಲಿ ಮಿತಿ ಮೀರಿದ ಹೆಚ್ಚಳವಾಗುವ ಸಾಧ್ಯತೆಯೂ ಇದೆ.

ಕ್ರೆಡಿಟ್ ಕಾರ್ಡ್ ಸಾಲ ಮರುಪಾವತಿಯನ್ನು ಕಾಲಮಿತಿಯೊಳಗೆ ಮಾಡಲು ಸಾಧ್ಯವಾಗದಿದ್ದಲ್ಲಿ ‘ಮಿನಿಮಮ್ ಡ್ಯೂ ಅಮೌಂಟ್’ಗೆ (ಕನಿಷ್ಠ ಬಾಕಿ ಪಾವತಿ) ಬ್ಯಾಂಕ್‌ಗಳು ಗ್ರಾಹಕರಿಗೆ ಅನುಮತಿ ನೀಡುತ್ತವೆ. ಆದರೆ ಕನಿಷ್ಠ ಬಾಕಿ ಪಾವತಿಸಿದ್ದನ್ನೇ ‘ಒಟ್ಟಾರೆ ಬಾಕಿ ಪಾವತಿ’ ಎಂದು ತಿಳಿದು ಅನೇಕರು ಕ್ರೆಡಿಟ್ ಕಾರ್ಡ್‌ನ ಸಾಲದ ಶೂಲಕ್ಕೆ ಸಿಲುಕುತ್ತಿದ್ದಾರೆ.

ಏನಿದು ಟೋಟಲ್, ಮಿನಿಮಮ್ ಅಮೌಂಟ್ ಡ್ಯೂ: ಒಟ್ಟಾರೆ ಬಾಕಿ ಪಾವತಿ ಎಂದರೆ ಪ್ರತಿ ತಿಂಗಳ ಕ್ರೆಡಿಟ್ ಅವಧಿಯಲ್ಲಿ ಮಾಡಿಕೊಂಡ ಒಟ್ಟು ಸಾಲದ ಬಾಕಿ.

ಇದರಲ್ಲಿ ನಿಮ್ಮ ಆರಂಭಿಕ ಬಾಕಿ, ಹೊಸ ಖರೀದಿ, ಬಾಕಿ ಸಾಲಗಳು ಮತ್ತು ನಿಗದಿತ ಶುಲ್ಕಗಳು ಸೇರಿರುತ್ತವೆ. ‘ಟೋಟಲ್ ಅಮೌಂಟ್ ಡ್ಯೂ’ನ (ಒಟ್ಟು ಸಾಲದ ಬಾಕಿ) ಸುಮಾರು ಶೇ 5 ರಿಂದ ಶೇ 10 ರಷ್ಟು ಮೊತ್ತವನ್ನು ‘ಮಿನಿಮಮ್‌ ಅಮೌಂಟ್ ಡ್ಯೂ’ ಅಥವಾ ‘ಕನಿಷ್ಠ ಬಾಕಿ’ ಎಂದು ಸ್ಟೇಟ್‌ಮೆಂಟ್‌ನಲ್ಲಿ ಘೋಷಿಸುತ್ತಾರೆ.

ಕನಿಷ್ಠ ಬಾಕಿಯನ್ನು ಪಾವತಿಸುವುದರಿಂದ ಬ್ಯಾಂಕ್‌ಗಳು ವಿಳಂಬ ಪಾವತಿ ಶುಲ್ಕ (ಲೇಟ್ ಫೀಸ್) ಹಾಕುವುದಿಲ್ಲ. ಸಾಮಾನ್ಯವಾಗಿ ವಿಳಂಬ ಪಾವತಿ ಶುಲ್ಕ ನೀವು ಪಡೆದಿರುವ ಕಾರ್ಡ್‌ನ ಮಾದರಿ ಮತ್ತು ಮಾದರಿ ಆಧರಿಸಿ ₹ 100 ರಿಂದ ₹ 1000 ವರೆಗೆ ಇರುತ್ತದೆ.

ಎಲ್ಲಿ ಮೋಸ ಹೋಗುತ್ತಾರೆ ಗೊತ್ತಾ?: ಉದಾಹರಣೆಗೆ ವ್ಯಕ್ತಿಯೊಬ್ಬರ ಒಟ್ಟಾರೆ ಪಾವತಿ ಬಾಕಿ ₹ 50,000 ಇದೆ ಎಂದಿಟ್ಟುಕೊಳ್ಳೋಣ. ಈ ಸಂದರ್ಭದಲ್ಲಿ ಕನಿಷ್ಠ ಬಾಕಿ ಪಾವತಿ ₹ 2,500 ಆಗಿರುತ್ತದೆ. ಅಂದರೆ ನಿಗದಿತ ಕಾಲಮಿತಿಯೊಳಗೆ ( ಡ್ಯೂ ಡೇಟ್) ಸಾಲ ಪಡೆದಿರುವ ವ್ಯಕ್ತಿ ಕನಿಷ್ಠ ₹ 2,500 ಪಾವತಿಸಲೇಬೇಕು. ಸಂಪೂರ್ಣ ಮೊತ್ತ ₹ 50,000 ಪಾವತಿಸಿದರೆ ಒಳಿತೇ. ಆದರೆ ತೀರಾ ಹಣಕಾಸಿನ ತೊಂದರೆ ಇದ್ದಲ್ಲಿ, ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಬ್ಯಾಂಕ್ ಕನಿಷ್ಠ ಬಾಕಿ ಪಾವತಿಯನ್ನು ಕಡ್ಡಾಯಗೊಳಿಸಿದೆ.

ಬಹುತೇಕರು ಈ ಕನಿಷ್ಠ ಬಾಕಿ ಮೊತ್ತ ಕಟ್ಟಿದರೆ ಬಾಕಿ ಸಾಲದ ಮೇಲೆ ಬಡ್ಡಿ ಅನ್ವಯಿಸುವುದಿಲ್ಲ ಎಂದು ಭಾವಿಸಿರುತ್ತಾರೆ. ಅಸಲಿಗೆ ಸಾಲದ ವರ್ತುಲಕ್ಕೆ ಸಿಲುಕುವುದೇ ಇಲ್ಲಿ. ಕನಿಷ್ಠ ಬಾಕಿ ಕಟ್ಟಿದರೂ ಬಾಕಿ ಮೊತ್ತದ ಮೇಲೆ ಬಡ್ಡಿ ಅನ್ವಯಿಸುತ್ತದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಸಾಲದ ಶೂಲಕ್ಕೆ ಸಿಲುಕಬೇಕಾಗುತ್ತದೆ.

ಬಡ್ಡಿ ಹೊರೆಯ ಜತೆ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ: ಕನಿಷ್ಠ ಬಾಕಿ ಮಾತ್ರ ಪಾವತಿಸುವುದರಿಂದ ಕ್ರೆಡಿಟ್ ಅವಧಿ ಮುಗಿದ ಬಳಿಕ ಮಾಸಿಕ ಶೇ 1.5 ರಿಂದ ಶೇ 3.5 ರ ವರೆಗೆ ಬಡ್ಡಿ ವಿಧಿಸಲಾಗುತ್ತದೆ. ವಾರ್ಷಿಕ ಲೆಕ್ಕಾಚಾರದಲ್ಲಿ ಶೇ 42ರವರೆಗೆ ವಾರ್ಷಿಕ ಬಡ್ಡಿ ಇರುತ್ತದೆ. ಕನಿಷ್ಠ ಬಾಕಿ ಪಾವತಿಯಿಂದ ಬಡ್ಡಿ ಹೆಚ್ಚಳವಾಗುವ ಜತೆಗೆ ನಿಮ್ಮ ಸಾಲ ಬಳಕೆ ಮಿತಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ.

ಕ್ರೆಡಿಟ್ ಮಿತಿಯ ಶೇ 70 ರಿಂದ ಶೇ 80 ರಷ್ಟು ಹಣ ಬಳಕೆ ಮಾಡಿದರೆ ನೀವು ಅತಿಯಾಗಿ ಕ್ರೆಡಿಟ್ ಕಾರ್ಡ್ ಮೇಲೆ ಅವಲಂಬಿತರಾಗಿದ್ದೀರಿ ಎಂದರ್ಥ.

ಅನಿಶ್ಚಿತತೆ ನಡುವೆ ಹೊಸ ದಾಖಲೆ

ಷೇರುಪೇಟೆ ಸೂಚ್ಯಂಕಗಳು ವಾರದ ಅವಧಿಯಲ್ಲಿ ಶೇ 1 ರಷ್ಟು ಏರಿಕೆ ದಾಖಲಿಸಿವೆ. 41,163 ಅಂಶಗಳಷ್ಟು ಏರಿಕೆ ಕಂಡು ಹೊಸ ದಾಖಲೆ ಬರೆದ ಸೆನ್ಸೆಕ್ಸ್, ವಾರಾಂತ್ಯಕ್ಕೆ 40,794 ರಲ್ಲಿ ವಹಿವಾಟು ಮುಗಿಸಿದೆ. 12,158ರ ಗಡಿ ಮುಟ್ಟುವ ಮೂಲಕ ನೂತನ ದಾಖಲೆ ಮಾಡಿದ್ದ ನಿಫ್ಟಿ 12,056 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇದರಂತೆ ಐದು ವಹಿವಾಟಿನ ದಿನಗಳಲ್ಲಿ ಕ್ರಮವಾಗಿ ಸೆನ್ಸೆಕ್ಸ್ ಶೇ 1.1 ಮತ್ತು ನಿಫ್ಟಿ ಶೇ 1.2 ರಷ್ಟು ಜಿಗಿದಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 4 ರಷ್ಟು ಹೆಚ್ಚಳ ಕಂಡಿವೆ. ಬ್ಯಾಂಕ್ ವಲಯ ಶೇ 2.7 ರಷ್ಟು ಜಿಗಿದಿದೆ. ಇನ್ನು ನಿಫ್ಟಿ ರಿಯಲ್ ಎಸ್ಟೇಟ್ ಮತ್ತು ಫಾರ್ಮಾ ವಲಯ ಕ್ರಮವಾಗಿ ಶೇ 2.2 ಮತ್ತು ಶೇ 1.5 ರಷ್ಟು ಸುಧಾರಿಸಿವೆ. ಮಾಧ್ಯಮ ವಲಯ ಶೇ 7.3 ರಷ್ಟು ಕುಸಿದಿದೆ.

ಗಳಿಕೆ - ಇಳಿಕೆ: ಭಾರ್ತಿ ಇನ್ಫ್ರಾಟೆಲ್, ಏರ್‌ಟೆಲ್, ಇಂಡಸ್ ಇಂಡ್ ಬ್ಯಾಂಕ್, ಯುಪಿಎಲ್, ಯೆಸ್ ಬ್ಯಾಂಕ್, ಟಾಟಾ ಸ್ಟೀಲ್ ಕಂಪನಿಗಳು ಶೇ 5.5 ರಿಂದ ಶೇ 19 ರಷ್ಟು ಏರಿಕೆ ಕಂಡಿವೆ. ಮಧ್ಯಮ ಶ್ರೇಣಿಯಲ್ಲಿ ಫ್ಯೂಚರ್ ಕನ್ಸ್ಯೂಮರ್ ಶೇ 23 ರಷ್ಟು ಜಿಗಿದಿದೆ. ಜೀ, ಎಲ್ಆ್ಯಂಡ್‌ಟಿ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಸಿಪ್ಲಾ , ವಿಪ್ರೊ, ಕಂಪನಿಗಳ ಷೇರುಗಳು ನಿಫ್ಟಿ 50 ಯಲ್ಲಿ ಶೇ 2 ರಿಂದ ಶೇ 20ರವರೆಗೆ ಕುಸಿದಿವೆ. ಮಧ್ಯಮ ಶ್ರೇಣಿಯಲ್ಲಿ ಡಿಷ್‌ ಟಿವಿ, ರಿಲಯನ್ಸ್ ಇನ್ಫ್ರಾ, ರಿಲಯನ್ಸ್ ಕ್ಯಾಪಿಟಲ್, ಡಿಎಚ್‌ಎಫ್‌ಎಲ್, ಭಾರತ್ ಎಲೆಕ್ಟ್ರಾನಿಕ್ಸ್ ಶೇ 4.5 ರಿಂದ ಶೇ 19 ರಷ್ಟು ಇಳಿಕೆಯಾಗಿವೆ.

ಪ್ರಮುಖ ಬೆಳವಣಿಗೆ: ಸಿಎಸ್‌ಬಿ ಬ್ಯಾಂಕ್‌ನ ಆರಂಭಿಕ ಸಾರ್ವಜನಿಕ ನೀಡಿಕೆಗೆ (ಐಪಿಒ) ಭಾರಿ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.

ಪೇಟಿಎಂ, ಏಷ್ಯಾದ ಹೂಡಿಕೆದಾರರಿಂದ ₹ 7,000 ಕೋಟಿ ಬಂಡವಾಳ ಸಂಗ್ರಹಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ₹ 10 ಲಕ್ಷ ಮಾರುಕಟ್ಟೆ ಮೌಲ್ಯ ಹೊಂದುವ ಮೂಲಕ ದಾಖಲೆ ಬರೆದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಹೊಸ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಲು 6 ಜನರ ಸಮಿತಿ ರಚಿಸಲಾಗಿದೆ. ಜೀ ಎಂಟರ್‌ಟೇನ್‌ಮೆಂಟ್‌ನ ಅಧ್ಯಕ್ಷ ಸ್ಥಾನಕ್ಕೆ ಸುಭಾಷ್ ಚಂದ್ರ ರಾಜೀನಾಮೆ ನೀಡಿದ್ದಾರೆ.

ಐಪಿಒ: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಆರಂಭಿಕ ಸಾರ್ವಜನಿಕ ನೀಡಿಕೆಯು ಇದೇ 2 ರಂದು (ಸೋಮವಾರ) ಆರಂಭವಾಗಲಿದೆ. ಸಾರ್ವಜನಿಕ ಹೂಡಿಕೆ ಮೂಲಕ ಈ ಬ್ಯಾಂಕ್ ₹ 750 ಕೋಟಿ ಸಂಗ್ರಹ ಗುರಿ ಹೊಂದಿದೆ. ಉಜ್ಜೀವನ್ ‘ಐಪಿಒ’ ಬಗ್ಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಅಭಿಪ್ರಾಯವಿದೆ.

ಮುನ್ನೋಟ: ಈ ವಾರ ಪ್ರಕಟಗೊಳ್ಳಲಿರುವ ಆರ್‌ಬಿಐ ಹಣಕಾಸು ನೀತಿ, ಉತ್ಪಾದನೆ ದತ್ತಾಂಶ, ಭಾರತ ಮತ್ತು ಜಪಾನ್ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯಗಳ ಮಟ್ಟದ ಮಾತುಕತೆ, ಜಾರ್ಖಂಡ್ ಚುನಾವಣೆ, ಈಗಾಗಲೇ ಪ್ರಕಟಗೊಂಡಿರುವ ಜಿಡಿಪಿ ದರ ಸೇರಿ ಹಲವು ದೇಶಿಯ ಮತ್ತು ಜಾಗತಿಕ ಬೆಳವಣಿಗೆಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿವೆ.

(ಲೇಖಕ: ಇಂಡಿಯನ್ ಮನಿಡಾಟ್ ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT