ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಯ್ಯರ್‌:‘ಅಂತ್ಯ’ದಲ್ಲಿ ಆರಂಭಿಸಿದ ‘ಆತ್ಮಸಾಕ್ಷಿ’

Last Updated 23 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ನೆಹರೂ ಕಾಲದಿಂದ ಭಾರತವನ್ನು ಬಲ್ಲವರಾಗಿದ್ದ ಕುಲದೀಪ್ ನಯ್ಯರ್ ಹೊಸ ಭಾರತದ ಇತಿಹಾಸ ಅನುದಿನದ ಆಗುಹೋಗುಗಳಲ್ಲಿ ರಚನೆಯಾದ ಕ್ರಮವನ್ನು ಸಮೀಪದಿಂದ ಕಂಡು ಗ್ರಹಿಸಿದವರು. ವರದಿಗಾರನಾಗಿ, ಸಂಪಾದಕನಾಗಿ, ಅಂಕಣಕಾರನಾಗಿ, ಲೇಖಕನಾಗಿ ಅದನ್ನು ಸಮಕಾಲೀನ ಭಾರತಕ್ಕೆ ಮಾತ್ರವಲ್ಲದೆ ಮುಂದಿನ ಪೀಳಿಗೆಗಳಿಗೆ ದಾಖಲಿಸಿದವರು. ನವ ಭಾರತದ ಆತ್ಮಸಾಕ್ಷಿ ಎಂದೂ ಅವರನ್ನು ಕರೆಯಲಾಗುತ್ತಿತ್ತು.

ನಯ್ಯರ್ ಅವರು ತುರ್ತುಪರಿಸ್ಥಿತಿ ಹೇರಿಕೆಯ ಪ್ರಬಲ ವಿರೋಧಿಯಾಗಿದ್ದರು.ಇಂದಿರಾಗಾಂಧಿ ಅವರಿಗೆ ವೈಯಕ್ತಿಕವಾಗಿ ಪರಿಚಿತರಾಗಿದ್ದರೂ,ಕರಾಳ ತುರ್ತುಪರಿಸ್ಥಿತಿ ಘೋಷಣೆಯ ನಂತರ ಜೈಲು ಪಾಲಾದಾಗ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕರಾಗಿದ್ದರು. 1980ರಲ್ಲಿ ಇಂದಿರಾ ಪುನಃ ಸರ್ಕಾರ ರಚಿಸಿದಾಗ ಅವರ ಆಕ್ರೋಶಕ್ಕೆ ಗುರಿಯಾಗಿದ್ದರು.ಸಂಪಾದಕ ಸ್ಥಾನ ತೊರೆಯಬೇಕಾಯಿತು.ಅಮೃತಸರದ ಸ್ವರ್ಣಮಂದಿರದಿಂದ ಸಿಖ್ ಉಗ್ರರನ್ನು ಹೊರಹಾಕಲು ಇಂದಿರಾ ನಡೆಸಿದ ‘ಆಪರೇಷನ್ ಬ್ಲೂ ಸ್ಟಾರ್’ ಅವಸರದ ನಿರ್ಣಯ ಎಂದು ವಿಮರ್ಶಿಸಿದ್ದರು. ‘ಜನತಂತ್ರದ ದೀಪಗಳನ್ನು ನಂದಿಸಿದ ಇಂದಿರಾ,ದೇಶದ ಜನರನ್ನು ಪೊಲೀಸ್ ರಾಜ್ಯದ ಕತ್ತಲಲ್ಲಿ ತಡಕಾಡುವಂತೆ ಮಾಡಿದರು’ ಎಂದು ತುರ್ತುಪರಿಸ್ಥಿತಿಯನ್ನು ಟೀಕಿಸಿದ್ದರು. ಇಂದಿರಾ-ಸಂಜಯ್ ಜೋಡಿ ಭೀತಿಯ ವಾತಾವರಣ ಮೂಡಿಸಿದ್ದನ್ನು ಖಂಡಿಸಿದ್ದರು.

ಪಂಜಾಬಿನ ರಕ್ತಸಿಕ್ತ ಬಯಲುಗಳನ್ನು ಹಾದು ದೆಹಲಿ ತಲುಪಿದ ಅವರ ಭಯ ಯಾತನೆಭರಿತ ಪಯಣದ ನಂತರ,ಯುವಪತ್ರಕರ್ತನಾಗಿ ‘ಅಂಜಾಮ್’ ಎಂಬ ಉರ್ದು ದಿನಪತ್ರಿಕೆಯೊಂದನ್ನು ಸೇರಿದ್ದು ಅವರ ಮೊಟ್ಟ ಮೊದಲ ಉದ್ಯೋಗ.ಅಂಜಾಮ್‌ನ ಅರ್ಥ ಅಂತ್ಯ ಅಥವಾ ಕೊನೆ. ‘ಅಂತ್ಯದಲ್ಲಿ ಆರಂಭಿಸಿದವನು ನಾನು’ ಎಂದು ಅವರು ನಗೆಯಾಡುತ್ತಿದ್ದರು.

‘ಅಂಜಾಮ್’ ತೊರೆದು ಯು.ಎನ್.ಐ.ಸುದ್ದಿ ಸಂಸ್ಥೆ ಸೇರಿದರು.ಸ್ಟೇಟ್ಸ್‌ಮನ್ ಪತ್ರಿಕೆಯ ಸಂಪಾದಕರಾಗಿದ್ದರು.ಪತ್ರಿಕಾ ಸ್ವಾತಂತ್ರ್ಯದ ಪ್ರಖರ ಪ್ರತಿಪಾದಕರಾಗಿದ್ದ ಅವರ ಪ್ರಸಿದ್ಧ ಅಂಕಣ ‘ಬಿಟ್ವೀನ್ ದಿ ಲೈನ್ಸ್’ ಅಪಾರ ಓದುಗ ವರ್ಗವನ್ನು ಗಳಿಸಿತ್ತು.ಭಾರತ-ಪಾಕಿಸ್ತಾನ,ಬಾಂಗ್ಲಾದೇಶ,ದುಬೈ,ಅಮೆರಿಕದ 14ಭಾಷೆಗಳ, 75ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಅವರ ಅಂಕಣ ಪ್ರಕಟವಾಗುತ್ತಿತ್ತು.ಅವರು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹದ ದಿ ಪ್ರಿಂಟರ್ಸ್(ಮೈಸೂರು)ಲಿಮಿಟೆಡ್‌ನ ನಿರ್ದೇಶಕ ಮಂಡಳಿಯ ಸದಸ್ಯರಾಗಿದ್ದರು.ಪ್ರಜಾವಾಣಿಯಲ್ಲಿ ಅವರು ಬರೆಯುತ್ತಿದ್ದ ‘ಅಂತರಂಗ’ ಎಂಬ ಅಂಕಣ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು.

ನಯ್ಯರ್ ಅವರ ಜೀವನಯಾನ ಭಾರತದ ಕತೆಯೂ ಹೌದು ಎಂದು2012ರಲ್ಲಿ ಪ್ರಕಟವಾದ ಅವರ ಆತ್ಮಚರಿತ್ರೆಯ(ಬಿಯಾಂಡ್ ದಿ ಲೈನ್ಸ್)ಮುನ್ನುಡಿಯಲ್ಲಿ ಬಣ್ಣಿಸ
ಲಾಗಿದೆ. ರಾತ್ರೋರಾತ್ರಿ ಗೆರೆ ಎಳೆದು ಒಂದು ದೇಶವನ್ನು ಎರಡಾಗಿ ಹರಿದು ಹಂಚಿದ ವೇದನೆ-ಸಂಕಟ ಈ ಪುಸ್ತಕದ ಪುಟಗಳಲ್ಲಿ ತುಂಬಿ ಹರಿದಿದೆ.ಇಪ್ಪತ್ತು ವರ್ಷಗಳ ಕಾಲ ಬರೆದ ಈ ಆತ್ಮಕತೆಯನ್ನು ಇಂಗ್ಲಿಷ್‌ನಿಂದ ಹಿಂದಿ(ಏಕ್ ಝಿಂದಗೀ ಕಾಫೀ ನಹೀ)ಮತ್ತು ಕನ್ನಡ(ಒಂದು ಜೀವನ ಸಾಲದು)ಸೇರಿದಂತೆ ಇತರೆ ಭಾರತೀಯ ಭಾಷೆಗಳಿಗೆ ಅನುವಾದಿಸಲಾಯಿತು.ತುರ್ತುಪರಿಸ್ಥಿತಿ ಹೇರಿಕೆಯ ಪರದೆಯ ಹಿಂದಿನ ಕತೆಯನ್ನು ಬಿಡಿಸಿಟ್ಟಿದ್ದ ‘ದಿ ಜಡ್ಜ್ ಮೆಂಟ್-ಇನ್ಸೈಡ್ ಸ್ಟೋರಿ ಅಫ್ ದಿ ಎಮರ್ಜೆನ್ಸಿ’ ಅವರು ಬರೆದ ಬಹು ಪ್ರಸಿದ್ಧ ಪುಸ್ತಕಗಳಲ್ಲೊಂದು.ಇಂಡಿಯಾ ಆಫ್ಟರ್ ನೆಹರೂ,ವಾರ್ ಅಟ್ ವಾಘಾ,ದಿ ಸ್ಕೂಪ್,ದಿ ಲೈಫ್‌ ಅಂಡ್ ಟ್ರಯಲ್ ಆಫ್ ಭಗತ್ ಸಿಂಗ್ ಮುಂತಾದ15ಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಬರೆದಿದ್ದಾರೆ.

ಮೂರು ವರ್ಷಗಳ ಹಿಂದೆ ಬರೆದಿದ್ದ ಲೇಖನವೊಂದರಲ್ಲಿ ‘ಮುದ್ರಣ ಮತ್ತು ಎಲೆಕ್ಟ್ರಾನಿಕ್ ಸಮೂಹ ಮಾಧ್ಯಮಗಳನ್ನು ಮೆದು ಹಿಂದುತ್ವ ಆವರಿಸುತ್ತಿರುವ ಇತ್ತೀಚಿನ ವರ್ಷಗಳ ಬೆಳವಣಿಗೆ’ ಕುರಿತು ವ್ಯಥೆಯನ್ನು ಪ್ರಕಟಿಸಿದ್ದರು. ದೆಹಲಿಯಲ್ಲಿ ನಡೆಯುತ್ತಿದ್ದ ಕವಿತಾ ವಾಚನಗಳಲ್ಲಿ ತಪ್ಪದೆ ಕಾಣುತ್ತಿದ್ದ ಮುಖ ಅವರದು.

ಯುದ್ಧಗಳು,ತುರ್ತು ಪರಿಸ್ಥಿತಿಯಂತಹ ಸಂಕೀರ್ಣ ಕಾಲಘಟ್ಟಗಳ ವಿದ್ಯಮಾನಗಳನ್ನು ಸಮೀಪದಿಂದ ವರದಿ ಮಾಡಿದ್ದ ಹೆಗ್ಗಳಿಕೆ ಅವರದು.ನೆಹರೂ,ಶಾಸ್ತ್ರಿ,ಇಂದಿರಾ ಸರ್ಕಾರಗಳ ವೈಖರಿಯನ್ನು ಹತ್ತಿರದಿಂದ ಗ್ರಹಿಸಿ ಒಳಿತು ಕೆಡುಕುಗಳನ್ನು ಗುರುತಿಸಿದ್ದರು.

ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪತ್ರಿಕಾ ಸಲಹೆಗಾರರಾಗಿ ಪ್ರವಾಸ ಮಾಡಿದ್ದ ಅವರು ತಾಷ್ಕೆಂಟ್ ಸಂಧಿಗೆ ಸಾಕ್ಷಿಯಾಗಿದ್ದರು.ಶಾಸ್ತ್ರಿ ನಿಧನರಾದ ಅದೇ ಹೋಟೆಲ್‌ನಲ್ಲಿ ತಂಗಿದ್ದ ನಯ್ಯರ್,ಈ ವಿಷಯ ಕುರಿತು ವಿಸ್ತೃತವಾಗಿ ಬರೆದಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಯುತ ಸಂಬಂಧಗಳಿಗಾಗಿ ಸದಾ ಶ್ರಮಿಸಿದರು.ಭಾರತ ಮತ್ತು ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ದಿನಗಳಂದು ಉಭಯ ದೇಶಗಳ ಅಟ್ಟಾರಿ-ವಾಘಾ ಗಡಿ ಭಾಗದಲ್ಲಿ ಕಳೆದ ಹದಿನೇಳು ವರ್ಷಗಳಿಂದ ಶಾಂತಿ ಕೋರಿ ಮೇಣದಬತ್ತಿ ಬೆಳಗಿಸುವ ಗೆಳೆ
ಯರ ಸಮೂಹದ ನೇತೃತ್ವ ವಹಿಸುತ್ತ ಬಂದಿದ್ದರು. ಪಾಕಿಸ್ತಾನ ಅಣ್ವಸ್ತ್ರ ಹೊಂದಿದೆ ಎಂಬುದನ್ನುಅಲ್ಲಿನ ಅಣು ವಿಜ್ಞಾನಿ ಅಬ್ದುಲ್ ಖಾದರ್ ಖಾನ್ ಅವರನ್ನು ಸಂದರ್ಶಿಸಿ ಬಯಲು ಮಾಡಿದ್ದರು.

ತಮ್ಮ ಆತ್ಮಸಾಕ್ಷಿಯ ದನಿಯನ್ನು ಅನುಸರಿಸಿದ ಈ ಪತ್ರಕರ್ತ ಹಣ ಮತ್ತು ಖ್ಯಾತಿಯ ಸೆಳೆತಕ್ಕೆ ಒಳಗಾಗಲಿಲ್ಲ..ಕೋಮು ಸಾಮರಸ್ಯಕ್ಕೆ ಅವರ ಬದ್ಧತೆ,ವೃತ್ತಿಪರತೆ,ಪ್ರಾಮಾಣಿಕತೆ ಹಾಗೂ ತುರ್ತುಪರಿಸ್ಥಿತಿಯಲ್ಲಿ ತೋರಿದ ದಿಟ್ಟತನ ಎಂದೆಂದಿಗೂ ಹೊಳೆಯುವ ಗುಣಗಳು ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT