ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಅನವಶ್ಯಕವಾದ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಮಂತ್ರಿಯ ಮಗನಾಗಿ ಹುಟ್ಟಿ ದೊಡ್ಡವನಾದ ಮೇಲೆ ಮಂತ್ರಿಯಾಗಿ ಧರ್ಮಾನುಶಾಸಕನಾದ. ಅವನ ಮಾರ್ಗದರ್ಶನದಲ್ಲಿ ರಾಜ್ಯ ಚೆನ್ನಾಗಿ ನಡೆಯುತ್ತಿತ್ತು.

ಆದರೆ ರಾಜನಿಗೆ ವಿಪರೀತ ಮಾತನಾಡುವ ಚಟ. ಉಳಿದವರು ಹೇಳಿದ್ದನ್ನು ಕೇಳಿಸಿಕೊಳ್ಳುವ ವ್ಯವಧಾನವೇ ಅವನಿಗಿರಲಿಲ್ಲ. ತನ್ನದೇ ಮಾತು, ಮಾತು, ಮಾತು. ಬೋಧಿಸತ್ವ ರಾಜನ ಈ ದೌರ್ಬಲ್ಯವನ್ನು ಪರಿಹರಿಸಲು ದಾರಿ ನೋಡುತ್ತಿದ್ದ.

ಆಗ ಹಿಮಾಲಯದ ಒಂದು ಸರೋವರದಲ್ಲಿ ಆಮೆ ವಾಸವಾಗಿತ್ತು. ಚಳಿಗಾಲದಲ್ಲಿ ಅಲ್ಲಿ ಬದುಕುವುದು ಅದಕ್ಕೆ ಕಷ್ಟವಾಗುತ್ತಿತ್ತು. ಚಳಿಗಾಲ ಪ್ರಾರಂಭದ ಮೊದಲು ಒಂದು ಜೊತೆ ಹಂಸಪಕ್ಷಿಗಳು ಕೊಳದ ತೀರದಲ್ಲಿ ಬಂದಿಳಿದವು. ಕೆಲವೇ ದಿನಗಳಲ್ಲಿ ಆಮೆಗೂ, ಹಂಸ ಪಕ್ಷಿಗಳಿಗೂ ಸ್ನೇಹ ಉಂಟಾಯಿತು. ಆಮೆ ತನ್ನ ಕಷ್ಟವನ್ನು ಹೇಳಿಕೊಂಡಾಗ ಹಂಸಗಳು, “ಸ್ನೇಹಿತ, ನಾವು ಚಿತ್ರಕೂಟ ಪರ್ವತದಲ್ಲಿ ವಾಸಿಸುತ್ತೇವೆ. ಅಲ್ಲಿ ಚಳಿಗಾಲ ಇಷ್ಟು ತೀಕ್ಷ್ಣವಾಗಿರುವುದಿಲ್ಲ. ನೀನು ಬರುವುದಾದರೆ ನಿನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೇವೆ” ಎಂದವು. “ನನಗೆ ಹಾರಲಾಗುವುದಿಲ್ಲ. ನಾನಲ್ಲಿಗೆ ಬರುವುದು ಹೇಗೆ?” ಎಂದು ಕೇಳಿತು ಆಮೆ.

“ಒಂದು ದಾರಿಯಿದೆ. ಅದರೆ ನೀನು ಮಾತನಾಡದೆ ಬಾಯಿ ಮುಚ್ಚಿಕೊಂಡಿರಬೇಕು. ಹಾಗಿದ್ದರೆ ನಾವು ನಿನ್ನನ್ನು ಕರೆದೊಯ್ಯುತ್ತೇವೆ”.
“ಅದಾಗಬಹುದು. ನಾನು ಬಾಯಿ ತೆರೆಯುವುದೇ ಇಲ್ಲ” ಎಂದಿತು ಆಮೆ. ಎರಡೂ ಹಂಸಗಳು ಒಂದು ಉದ್ದವಾದ ಕಡ್ಡಿಯನ್ನು ತಂದು ಅದರ ಮಧ್ಯಭಾಗವನ್ನು ಗಟ್ಟಿಯಾಗಿ ಕಚ್ಚಿ ಹಿಡಿಯಲು ಆಮೆಗೆ ಹೇಳಿ, ತಾವು ತುದಿಗಳೆರಡನ್ನೂ ತಮ್ಮ ಕೊಕ್ಕೆಗಳಲ್ಲಿ ಕಚ್ಚಿ ಹಾರಿದವು. ಹಂಸಪಕ್ಷಿಗಳು ಹೀಗೆ ಆಕಾಶದಲ್ಲಿ ಹಾರಿಹೋಗುತ್ತಿರುವುದನ್ನು ಕೆಳಗಡೆ ಇದ್ದ ಜನ ಬೆರಗಿನಿಂದ ಕಂಡರು. ಇದೆಂಥ ವಿಚಿತ್ರ! ಹಂಸಗಳು ಆಮೆಯನ್ನು ಕೋಲಿನ ಮೇಲೆ ಹೊತ್ತುಕೊಂಡು ಹೋಗುತ್ತಿವೆ ಎಂದು ಆಶ್ಚರ್ಯಪಟ್ಟರು.

ಹಂಸಗಳು ಹಾರುತ್ತ ವಾರಾಣಸಿಯ ಅರಮನೆಯ ಮೇಲೆ ಬಂದವು. ಅಲ್ಲಿ ಕೆಳಗೆ ಆಟವಾಡುತ್ತಿದ್ದ ಬಾಲಕರು, “ಅಯ್ಯೋ ಪಾಪ! ಆಮೆಗೆ ಏನೋ ಆಗಿದೆ. ಅದಕ್ಕೇ ಹಂಸಗಳು ಅದನ್ನೆತ್ತಿಕೊಂಡು ಹೋಗುತ್ತಿವೆ ಎಂದು ಜೋರಾಗಿ ಕೂಗಿದರು. ಆಮೆಗೆ ವಿಪರೀತ ಕೋಪ ಉಕ್ಕಿತು. “ಮೂರ್ಖ ಬಾಲಕರೆ, ನನಗೇನೂ ಆಗಿಲ್ಲ. ಅವರು ನನ್ನ ಮಿತ್ರರು. ನಾವು ಏನು ಮಾಡುತ್ತೇವೆ ಎಂಬ ಚಿಂತೆ ನಿಮಗೇಕೆ?” ಇಷ್ಟನ್ನು ಹೇಳಲು ಬಾಯಿತೆರೆದು ತಾನು ಹಿಡಿದುಕೊಂಡಿದ್ದ ಕಡ್ಡಿಯನ್ನು ಬಿಟ್ಟುಬಿಟ್ಟಿತು.

ಮರುಕ್ಷಣ ಅದು ಅರಮನೆಯ ಅಂಗಳದಲ್ಲಿ ಬೆನ್ನು ಮೇಲಾಗಿ ಬಿದ್ದಿತು. ಅದರ ಚಿಪ್ಪು ಒಡೆದು ಹೋಳುಗಳಾಗಿ ಸತ್ತು ಹೋಯಿತು. ಬೋಧಿಸತ್ವ ರಾಜನನ್ನು ಅಲ್ಲಿಗೆ ಕರೆದುಕೊಂಡು ಬಂದ. “ಯಾಕೆ ಹೀಗಾಯಿತು?” ಎಂದು ರಾಜ ಕೇಳಿದಾಗ, ಅವಕಾಶಕ್ಕಾಗಿ ಕಾಯುತ್ತಿದ್ದ ಮಂತ್ರಿ ಹೇಳಿದ, “ಇದು ಅನಾವಶ್ಯಕವಾಗಿ ಮಾತನಾಡಿದ ಪರಿಣಾಮ. ಅದರಲ್ಲೂ ಜವಾಬ್ದಾರಿಯ ಸ್ಥಳದಲ್ಲಿರುವವರು ಎಷ್ಟು ಕಡಿಮೆ ಮಾತನಾಡಿದರೆ ಅಷ್ಟು ಕ್ಷೇಮ. ಅವರು ಹೆಚ್ಚು ಮಾತನಾಡಿದಷ್ಟು ಹೆಚ್ಚು ತೊಂದರೆಗೆ ಈಡಾಗುತ್ತಾರೆ”. ಗುರಿ ರಾಜನಿಗೆ ಮುಟ್ಟಿತು. ಅಂದಿನಿಂದ ರಾಜನ ಮಾತಿನಲ್ಲಿ ತೂಕ ಬಂತು.

ಅಧಿಕಾರದಲ್ಲಿರುವ ಎಲ್ಲರಿಗೂ ಇದೊಂದು ಬಹುದೊಡ್ಡ ಸಂದೇಶ. ನಮ್ಮ ಅನಾವಶ್ಯಕವಾದ ಮಾತಿಗಿಂತ ದೊಡ್ಡ ಶತ್ರು ಬೇರಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು