ಭಾನುವಾರ, ಫೆಬ್ರವರಿ 28, 2021
23 °C

‘ಪೇಡೇ ಲೋನ್’ ಎಂಬ ಅಪಾಯ

ಪ್ರಮೋದ್ ಬಿ.ಪಿ. Updated:

ಅಕ್ಷರ ಗಾತ್ರ : | |

ವರ್ಷಕ್ಕೆ ಶೇಕಡ 20ರಿಂದ ಶೇಕಡ 40ರಷ್ಟು ಬಡ್ಡಿ ವಿಧಿಸುವ ಸಾಲಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ ದಿನಕ್ಕೆ ಒಂದು ಪರ್ಸೆಂಟ್ ಬಡ್ಡಿ, ವರ್ಷಕ್ಕೆ ಶೇ 365ರಿಂದ ಶೇ 400ರಷ್ಟು ಬಡ್ಡಿ ಪಡೆಯುವ ಸಾಲಗಳ ಬಗ್ಗೆ ಕೇಳಿದ್ದೀರಾ!? ಆಶ್ಚರ್ಯ ಅನಿಸಿದರೂ ಇಂಥದ್ದೊಂದು ಅಪಾಯಕಾರಿ ಸಾಲವು ಕೆಲವು ಆ್ಯಪ್‌ಗಳ ಮೂಲಕ ಜನಸಾಮಾನ್ಯರಿಗೆ ಸಿಗುತ್ತಿದೆ. ಹಣದ ತುರ್ತು ಅಗತ್ಯವಿರುವ ಅಮಾಯಕರು ಸರಿಯಾದ ಮಾಹಿತಿ ಇಲ್ಲದೆ ‘ಪೇಡೇ ಸಾಲ’ಗಳ (Pay Day - ಅಂದರೆ ವೇತನ ‍ಪಾವತಿ ದಿನ ಮರುಪಾವತಿ ಮಾಡುವ ಸಾಲ) ಮೊರೆ ಹೋಗಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ‘ಪೇಡೆ ಸಾಲ’ ಎಂಬ ‘ಪೀಡೆ’ಯ ಬಗ್ಗೆ ಎಚ್ಚರಿಕೆ ನೀಡುವ ಮಾಹಿತಿ ಇಲ್ಲಿದೆ.

ಏನಿದು ಪೇಡೇ ಲೋನ್?: ‘ನನ್ನ ಬಳಿ ಈಗ ಹಣವಿಲ್ಲ, ಈಗ ಸಾಲ ಕೊಟ್ಟರೆ ಮುಂದಿನ ತಿಂಗಳ ಸಂಬಳದಲ್ಲಿ ಬಡ್ಡಿ ಸಮೇತ ಸಾಲ ತೀರಿಸುತ್ತೇನೆ’ ಎನ್ನುವ ಲೆಕ್ಕಾಚಾರದಲ್ಲಿ ನೀಡಲಾಗುವ ಸಾಲವೇ ಪೇಡೇ ಲೋನ್. ಏಳು ದಿನಗಳಿಂದ 60 ದಿನಗಳ ಅವಧಿಗೆ ಸಿಗುವ ಈ ಅಲ್ಪಾವಧಿ ಸಾಲಕ್ಕೆ ಯಾವುದೇ ಅಡಮಾನ ಇರುವುದಿಲ್ಲ. ಆದರೆ ವಿಪರೀತ ಬಡ್ಡಿ ದರವನ್ನು ಈ ಸಾಲಕ್ಕೆ ತೆರಬೇಕಾಗುತ್ತದೆ. ವೇತನದ ಸ್ಲಿಪ್ ಸೇರಿದಂತೆ ಕೆಲವು ದಾಖಲೆಗಳನ್ನು ನೀಡಿ ಯಾವುದೇ ಉದ್ದೇಶಕ್ಕಾದರೂ ಕೆಲವೇ ಗಂಟೆಗಳಲ್ಲಿ ಈ ಸಾಲ ಪಡೆಯಬಹುದು. ನಿಮ್ಮ ಸಂಬಳವೇ ಸಾಲ ಕೊಟ್ಟವರಿಗೆ ಆಧಾರ.

ಸಣ್ಣ ಸಾಲಕ್ಕೆ ದುಬಾರಿ ಬಡ್ಡಿ: ‘ಪೇಡೇ ಲೋನ್’ ಆ್ಯಪ್‌ಗಳ ಮೂಲಕ ₹ 500ರಿಂದ ಆರಂಭಿಸಿ ಒಂದೆರಡು ಲಕ್ಷಗಳವರೆಗೆ ಸಾಲ ಸಿಗುತ್ತದೆ. ಸಾಲ ಪಡೆಯುವ ವ್ಯಕ್ತಿಯ ಸಂಬಳ ಎಷ್ಟಿದೆ ಎನ್ನುವುದನ್ನು ಆಧರಿಸಿ ಬಡ್ಡಿ ದರ ನಿಗದಿಯಾಗುತ್ತದೆ. ಪ್ರತಿ ದಿನದ ಬಡ್ಡಿ ದರ ಶೇ 0.5ರಿಂದ ಶೇ 1.5ರವರೆಗೆ ಇರುತ್ತದೆ. ಸಾಮಾನ್ಯವಾಗಿ ಬಹುತೇಕ ಸಾಲಗಳ ಬಡ್ಡಿ ದರ ಶೇ 1ರಷ್ಟಿರುತ್ತದೆ. ಅಂದರೆ ಸಾಲ ಪಡೆದ ವ್ಯಕ್ತಿ ವರ್ಷಕ್ಕೆ ಶೇ 365ರಷ್ಟು ಬಡ್ಡಿ ಕಟ್ಟುತ್ತಾನೆ! ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಸಾಲದ ಬಡ್ಡಿ ದರಕ್ಕೂ ಇದಕ್ಕೂ ಅಜಗಜಾಂತರ. ಆದರೆ ಬಹುತೇಕರಿಗೆ ಈ ಸಾಲದ ಬಡ್ಡಿ ದರ ಅಂದಾಜಿಗೇ ಸಿಗುವುದಿಲ್ಲ. ಈ ಸಣ್ಣ ಮೊತ್ತದ ಸಾಲಗಳು ಅಲ್ಪಾವಧಿಗೆ ಮಾತ್ರ ಸಿಗುವುದರಿಂದ ಸಾಲ ಪಡೆಯುವವರು ಇದರ ವಾರ್ಷಿಕ ಬಡ್ಡಿ ಲೆಕ್ಕ ಮಾಡುವ ಗೋಜಿಗೆ ಹೋಗುವುದಿಲ್ಲ.

ಉದಾಹರಣೆ: ಏಳು ದಿನಗಳಲ್ಲಿ ಸಂಬಳ ಸಿಗಲಿದ್ದು, ನೀವು ದಿನಕ್ಕೆ ಶೇ 1ರ ಬಡ್ಡಿ ದರದಲ್ಲಿ ₹ 30 ಸಾವಿರ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೀರಿ ಎಂದು ಭಾವಿಸಿ. ಇದರಂತೆ ನೀವು ಏಳು ದಿನಗಳ ಅವಧಿಗೆ ₹ 32,100 (₹ 2,100 ಬಡ್ಡಿ ಸೇರಿ) ಪಾವತಿಸಬೇಕಾಗುತ್ತದೆ. ಅಂದರೆ ನೀವು 30 ದಿನಗಳಿಗೆ ಸಾಲ ಪಡೆದರೆ ಶೇ 30ರಷ್ಟು, 60 ದಿನಗಳಿಗೆ ಸಾಲ ಪಡೆದರೆ ಶೇ 60ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಒಂದೊಮ್ಮೆ ನಿಗದಿತ ಸಮಯಕ್ಕೆ ಸಾಲ ಪಾವತಿಸದಿದ್ದರೆ ವಿಳಂಬ ಪಾವತಿ ಶುಲ್ಕದ ಹೊರೆಯೂ ಬೀಳುತ್ತದೆ.

ಈ ಸಾಲ ಪಡೆಯಬೇಕೇ?: ‘ಪೇಡೇ ಸಾಲ’ ಪಡೆಯದಿರುವುದೇ ಒಳಿತು. ಈ ಸಾಲದ ಬದಲಾಗಿ ಸ್ನೇಹಿತರು, ಕುಟುಂಬದವರ ಬಳಿ ಸಾಲ ಪಡೆಯಬಹುದು. ಇದು ಸಾಧ್ಯವಿಲ್ಲ ಎಂದಾದರೆ ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಮೊರೆ ಹೋಗಬಹುದು. ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಮನವಿ ಮಾಡಿ ಮುಂಗಡವಾಗಿ ಸಂಬಳ ಕೇಳಬಹುದು. ಜತೆಗೆ ತುರ್ತು ಸಂದರ್ಭಗಳ ಖರ್ಚಿಗೆ ಎಂದು ನೀವು ಒಂದಿಷ್ಟು ಹಣ ಮೀಸಲಿಡಬಹುದು. ಮೇಲಿನ ಎಲ್ಲ ಸಾಧ್ಯತೆಗಳು ನಿಮಗೆ ತುರ್ತು ಹಣ ಒದಗಿಸಲು ನೆರವಾಗದಿದ್ದರೆ ಮಾತ್ರ ‘ಪೇಡೇ ಸಾಲ’ವನ್ನು ತಾತ್ಕಾಲಿಕವಾಗಿ ಅವಲಂಬಿಸಬೇಕು. ದುಂದು ವೆಚ್ಚಕ್ಕೆ, ಮದುವೆ ಖರ್ಚಿಗೆ, ಮನೆಗೆ ವಸ್ತು ಖರೀದಿಸಲು ಪೇಡೇ ಸಾಲ ಪಡೆಯಲೇಬಾರದು.

ಕೋವಿಡ್ ರೂಪಾಂತರಕ್ಕೆ ಬಿದ್ದು ಎದ್ದ ಸೂಚ್ಯಂಕ: ಕೊರೊನಾ ವೈರಾಣುವಿನ ರೂಪಾಂತರದ ಸುದ್ದಿಯಿಂದ ಭಾರೀ ಕುಸಿತ ಕಂಡ ಷೇರುಪೇಟೆ ಸೂಚ್ಯಂಕಗಳು ವಾರಾಂತ್ಯಕ್ಕೆ ಸುಸ್ಥಿತಿಗೆ ಬಂದಿವೆ. 46,973 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಮತ್ತು 13,749 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ, ಹೂಡಿಕೆದಾರರಲ್ಲಿ ಭರವಸೆ ಹೆಚ್ಚಿಸಿವೆ. ಡಿಸೆಂಬರ್ 21ರಂದು ಸೆನ್ಸೆಕ್ಸ್ ಒಂದೇ ದಿನ ಸುಮಾರು 1500 ಅಂಶಗಳ ಕುಸಿತ ಕಂಡಿತ್ತು. ಆದರೆ ನಂತರದ ಮೂರು ದಿನಗಳಲ್ಲಿ ಸೂಚ್ಯಂಕಗಳು ಪುಟಿದೆದ್ದ ಪರಿಣಾಮ ಹೂಡಿಕೆದಾರರು ₹ 6.39 ಲಕ್ಷ ಕೋಟಿ ಗಳಿಸಿಕೊಂಡಿದ್ದಾರೆ.

ವಲಯವಾರು ನೋಡಿದಾಗ ನಿಫ್ಟಿ ಐ.ಟಿ. ವಲಯ ಶೇ 3ರಷ್ಟು ಗಳಿಸಿಕೊಂಡಿದ್ದರೆ, ನಿಫ್ಟಿ ಬ್ಯಾಂಕ್ ಮತ್ತು ಮಿಡ್ ಕ್ಯಾಪ್ ಸೂಚ್ಯಂಕಗಳು ಶೇ 1ರಷ್ಟು ಕುಸಿದಿವೆ. ಆದರೆ ವಿದೇಶಿ ಹೂಡಿಕೆದಾರರಿಗೆ ಭಾರತದ ಮಾರುಕಟ್ಟೆಗಳ ಮೇಲೆ ವಿಶ್ವಾಸ ಕಡಿಮೆಯಾಗಿಲ್ಲ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಡಿಸೆಂಬರ್ ತಿಂಗಳಲ್ಲಿ ₹ 62,648 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಗಳಿಕೆ– ಇಳಿಕೆ: ನಿಫ್ಟಿಯಲ್ಲಿ ವಿಪ್ರೋ ಶೇ 5.1ರಷ್ಟು, ಸಿಪ್ಲಾ ಶೇ 5ರಷ್ಟು, ಇನ್ಫೊಸಿಸ್ ಶೇ 3.9ರಷ್ಟು, ಅದಾನಿ ಪೋರ್ಟ್ಸ್ ಶೇ 3.3ರಷ್ಟು, ಎಚ್‌ಸಿಎಲ್ ಟೆಕ್ ಶೇ 3.2ರಷ್ಟು, ಜೂಬ್ಲಿಯಂಟ್ ಲೈಫ್ ಶೇ 11.9ರಷ್ಟು, ವರ್ಲ್‌ಪೂಲ್ ಶೇ 11.8ರಷ್ಟು, ಎಐಐಟಿ ಶೇ 10.9ರಷ್ಟು, ಮತ್ತು ಸ್ಟ್ರೈಡ್ಸ್ ಶೇ 9.6ರಷ್ಟು ಗಳಿಕೆ ಕಂಡುಕೊಂಡಿವೆ. ಒಎನ್‌ಜಿಸಿ ಶೇ 5.9ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 5.8ರಷ್ಟು, ಹಿಂಡಾಲ್ಕೋ ಶೇ 5.2ರಷ್ಟು ಮತ್ತು ಬಿಪಿಸಿಎಲ್ ಶೇ 4.1ರಷ್ಟು, ಪಿವಿಆರ್ ಶೇ 10.7ರಷ್ಟು, ಅಪೋಲೋ ಟಯರ್ಸ್ ಶೇ 8.4ರಷ್ಟು, ಡಿಎಚ್‌ಎಫ್‌ಎಲ್ ಶೇ 8.2ರಷ್ಟು ಮತ್ತು ರಾಮ್ಕೋ ಸಿಮೆಂಟ್ಸ್ ಶೇ 7.8ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2.3 ಟ್ರಿಲಿಯನ್ ಡಾಲರ್ ಮೊತ್ತದ ಪ್ಯಾಕೇಜ್‌ಗೆ ಒಪ್ಪಿಗೆ ಕೊಡಲು ನಿರಾಕರಿಸುತ್ತಿರುವುದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸದ್ಯ ಬ್ಯಾಂಕ್‌ಗಳಲ್ಲಿ ಬಡ್ಡಿ ದರ ಕಡಿಮೆ ಇರುವುದರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚಳವಾಗುವ ಸಾಧ್ಯತೆ ಇದೆ. ಲೋಹ, ಮಾಹಿತಿ ತಂತ್ರಜ್ಞಾನ, ಫಾರ್ಮಾ ಮತ್ತು ವಾಹನ ಉತ್ಪಾದನೆಯ ವಲಯಗಳಲ್ಲಿ ಹೂಡಿಕೆ ಹೆಚ್ಚು ಸೂಕ್ತವೆನಿಸುತ್ತದೆ. ಸದ್ಯದ ಸ್ಥಿತಿಯಲ್ಲಿ ಗೂಳಿ ಓಟ ಮುಂದುವರಿಯುವ ಸಾಧ್ಯತೆ ನಿಚ್ಚಳವಾಗಿ ಕಂಡುಬರುತ್ತಿದೆ. ಮಾರುಕಟ್ಟೆ ಏರಿಕೆಯ ಹಾದಿಯಲ್ಲಿರುವಾಗ ಒಂದೇ ಬಾರಿ ದೊಡ್ಡ ಮೊತ್ತದ ಹೂಡಿಕೆ ಮಾಡುವ ಬದಲು ವ್ಯವಸ್ಥಿತ ವರ್ಗಾವಣೆ ಯೋಜನೆ (ಎಸ್‌ಟಿಪಿ- ಸಿಸ್ಟಮ್ಯಾಟಿಕ್ ಟ್ರಾನ್ಸ್‌ಫರ್ ಪ್ಲ್ಯಾನ್) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ.


ಪ್ರಮೋದ್ ಬಿ.ಪಿ. ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು