ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಮಾತು: ಷೇರುಪೇಟೆಯ ಚೌಕೀದಾರ ಯಾರು?

Last Updated 3 ಮೇ 2021, 20:15 IST
ಅಕ್ಷರ ಗಾತ್ರ

ಷೇರು ಮಾರುಕಟ್ಟೆಗೆ ಎಲ್ಲರೂ ಲಾಭಗಳಿಸುವ ಉದ್ದೇಶದಿಂದಲೇ ಬರುತ್ತಾರೆ ಎಂದಮೇಲೆ ಆ ಮಾರುಕಟ್ಟೆಗೆ ಒಬ್ಬ ಚೌಕೀದಾರ ಬೇಕೇಬೇಕು. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಆ ಚೌಕೀದಾರನ ಕೆಲಸವನ್ನು ನಿರ್ವಹಿಸುತ್ತದೆ. ಷೇರುಪೇಟೆಯ ಭಾಗೀದಾರರನ್ನು ನಿಯಂತ್ರಿಸುವ ಜತೆಗೆ ಹೂಡಿಕೆದಾರರ ಹಿತ ಕಾಯುವ ಹೊಣೆಗಾರಿಕೆ ‘ಸೆಬಿ’ಯ ಮೇಲಿದೆ.

ಹೂಡಿಕೆದಾರರನ್ನು ರಕ್ಷಿಸಿದ ‘ಸೆಬಿ’: ‘ಸೆಬಿ’ ಹೇಗೆ ಚೌಕೀದಾರನ ಕೆಲಸ ಮಾಡಿ ಹೂಡಿಕೆದಾರರ ಹಿತ ಕಾಯುತ್ತದೆ ಎಂಬುದಕ್ಕೆ ಇತ್ತೀಚಿನ ಒಂದು ಪ್ರಕರಣವೇ ಸಾಕ್ಷಿ. ಷೇರು ದಲ್ಲಾಳಿ ಸಂಸ್ಥೆಯೊಂದು ಪವರ್ ಆಫ್ ಅಟಾರ್ನಿಯನ್ನು ದುರ್ಬಳಕೆ ಮಾಡಿಕೊಂಡು ಗ್ರಾಹಕರ ಷೇರುಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು, ಆ ಷೇರುಗಳನ್ನು ಬ್ಯಾಂಕ್‌ನಲ್ಲಿ ಅಡವಾಗಿ ಇರಿಸಿ ಸಾಲ ಪಡೆದಿತ್ತು. ನಂತರದಲ್ಲಿ ಗ್ರಾಹಕರಿಗೆ ಷೇರುಗಳನ್ನು ಹಿಂದಿರುಗಿಸದೆ ವಂಚಿಸಿತ್ತು.

ಇದು ತಿಳಿಯುತ್ತಿದ್ದಂತೆ, ಷೇರು ದಲ್ಲಾಳಿ ವಹಿವಾಟಿಗೆ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳಬಾರದು ಎಂದು ‘ಸೆಬಿ’ ಆ ಸಂಸ್ಥೆಯ ಮೇಲೆ ನಿಷೇಧ ವಿಧಿಸಿತ್ತು,‘ಸೆಬಿ’ ಸಕಾಲದಲ್ಲಿ ಕೈಗೊಂಡ ಕ್ರಮದಿಂದಾಗಿ, ಕಾನೂನು ಮೀರಿ ಅಡಮಾನ ಇರಿಸಿದ್ದ ಷೇರುಗಳನ್ನು ಹೂಡಿಕೆದಾರರಿಗೆ ಹಿಂದಿರುಗಿಸಲು ಸಾಧ್ಯವಾಯಿತು.

‘ಸೆಬಿ’ ಹೊಣೆಗಾರಿಕೆ:

l ಷೇರುಪೇಟೆಯಲ್ಲಿ (ಬಿಎಸ್ಇ - ಎನ್‌ಎಸ್‌ಇ) ನ್ಯಾಯಯುತ ವಹಿವಾಟು ನಡೆಯುವಂತೆ ನೋಡಿಕೊಳ್ಳುವುದು.

l ಷೇರು ದಲ್ಲಾಳಿಗಳು (stock brokers) ಕಾನೂನು ಬಾಹಿರ ವಹಿವಾಟಿನಲ್ಲಿ ತೊಡಗದಂತೆ ಎಚ್ಚರಿಕೆ ವಹಿಸುವುದು.

l ಷೇರುಪೇಟೆ ಭಾಗೀದಾರರಾದ ದೇಶಿ ರಿಟೇಲ್ ಹೂಡಿಕೆದಾರರು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು, ಅನಿವಾಸಿ ಭಾರತೀಯ ಹೂಡಿಕೆದಾರರು, ದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ದೇಶಿ ಹಣಕಾಸು ನಿರ್ವಹಣಾ ಸಂಸ್ಥೆಗಳು ಸರಿಯಾದ ರೀತಿಯಲ್ಲಿ ವಹಿವಾಟು ನಡೆಸುವಂತೆ ನೋಡಿಕೊಳ್ಳುವುದು.

l ಕಾರ್ಪೊರೇಟ್ ಸಂಸ್ಥೆಗಳು ಸ್ವಹಿತಾಸಕ್ತಿಗಾಗಿ ಮಾರುಕಟ್ಟೆ ಸ್ಥಿತಿಗತಿಗಳನ್ನು ಬಳಸಿಕೊಳ್ಳದಂತೆ ನಿಯಂತ್ರಿಸುವುದು.

l ಸಣ್ಣ ಹೂಡಿಕೆದಾರರ ಹಿತ ಕಾಯುವುದು.

l ಭಾರೀ ಮೊತ್ತದ ಹಣ ಹೊಂದಿರುವ ಹೂಡೆಕೆದಾರರು ಷೇರುಪೇಟೆಯನ್ನು ತಮ್ಮ ಕೈವಶ ಮಾಡಿಕೊಳ್ಳದಂತೆ ತಡೆಯುವುದು.

l ಷೇರು ಮಾರುಕಟ್ಟೆಯ ಸರ್ವತೋಮುಖ ಬೆಳವಣಿಗೆಯ ಜವಾಬ್ದಾರಿ ಹೊತ್ತುಕೊಳ್ಳುವುದು.

ಎಲ್ಲಾ ಸಂಸ್ಥೆಗಳೂ ನೀತಿ ನಿಯಮಗಳಿಗೆ ಬದ್ಧವಾಗಿರಬೇಕು: ಷೇರು ಮಾರುಕಟ್ಟೆ ವ್ಯವಸ್ಥೆಯಲ್ಲಿ ಒಳಗೊಳ್ಳುವ ಷೇರು ದಲ್ಲಾಳಿಗಳು, ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು, ಡೆಪಾಸಿಟರಿಗಳು, ಡಿಬೆಂಚರ್ ಟ್ರಸ್ಟಿಗಳು, ಮರ್ಚೆಂಟ್ ಬ್ಯಾಂಕರ್‌ಗಳು, ಡೆಪಾಸಿಟರಿ ಪಾರ್ಟಿಸಿಪೆಂಟ್‌ಗಳು, ಆಸ್ತಿ ನಿರ್ವಹಣಾ ಕಂಪನಿಗಳು... ಹೀಗೆ ಎಲ್ಲ ಸಂಸ್ಥೆಗಳಿಗೂ, ಭಾಗೀದಾರರಿಗೂ ಪ್ರತ್ಯೇಕ ನೀತಿ ನಿಬಂಧನೆಗಳಿವೆ. ಅವುಗಳಿಗೆ ಪ್ರತಿಯೊಬ್ಬರೂ ಬದ್ಧವಾಗಿ ನಡೆದುಕೊಳ್ಳುವಂತೆ ‘ಸೆಬಿ’ ನೋಡಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT