ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಣ– ಸಚ್ಚಿದಾನಂದ ಸತ್ಯಸಂದೇಶ | ಒಳ್ಳೆತನದಲ್ಲಿ ದೇವರಿದ್ದಾನೆ

Last Updated 17 ಸೆಪ್ಟೆಂಬರ್ 2021, 18:28 IST
ಅಕ್ಷರ ಗಾತ್ರ

ದೇವರು ಎಲ್ಲಿದ್ದಾನೆ?! ಈ ಪ್ರಶ್ನೆಗೆ ದೇವರು ಹುಟ್ಟಿದಾಗಿನಿಂದ ಭಕ್ತರು ಉತ್ತರ ಹುಡುಕುತ್ತಿದ್ದಾರೆ. ಆದರೆ ಯಾರಿಗೂ ಸ್ಪಷ್ಟ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಉತ್ತರ ಕಂಡು ಹಿಡಿಯಲಾಗದ ಮನುಷ್ಯರು, ದೇವರು ಹೇಗಿದ್ದಾನೆ ಎಂಬ ಪ್ರಶ್ನೆ ಹಾಕಿಕೊಂಡು ತಲೆಗೊಂದು ಉತ್ತರ ಕೊಡುತ್ತಿದ್ದಾರೆ. ಹಲವರು ದೇವರಿಗೂ ಒಂದು ಆಕಾರ ಇದೆ ಎಂದರೆ, ಇನ್ನು ಕೆಲವರು ದೇವರಿಗೆ ಆಕಾರವೇ ಇಲ್ಲ ಅನ್ನುತ್ತಾರೆ. ಇನ್ನು ಹಲವರು ನಿಸರ್ಗವೇ ದೇವರು ಅಂದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜನ ದೇವರೇ ಇಲ್ಲ, ಅವನ ಅಸ್ತಿತ್ವವೇ ಸುಳ್ಳು ಅಂತ ಉಢಾಳರಾಗಿರುವುದನ್ನು ರೂಢಿಸಿಕೊಂಡಿದ್ದಾರೆ. ಸಾವಿರಾರು ವರ್ಷಗಳ ಹಿಂದೆ ಭಾರತೀಯ ಸಂಸ್ಕೃತಿಯಲ್ಲಿ ಗೋಚರಿಸಿದ ಆಸ್ತಿಕ-ನಾಸ್ತಿಕ ವಾದಗಳು ಒಂದು ಆರೋಗ್ಯಕರ ಚರ್ಚೆಯನ್ನೆ ಹುಟ್ಟು ಹಾಕಿತು. ಇದರಿಂದ ಧಾರ್ಮಿಕದಾಚೆಗಿನ ಆಧ್ಯಾತ್ಮಿಕ ಚಿಂತನೆಗಳ ದೊಡ್ಡ ಝರಿಯೇ ಹರಿಯಿತು.

ಆತ್ಮ ಮತ್ತು ಪರಮಾತ್ಮಗಳ ನಡುವಿನ ವ್ಯತ್ಯಾಸಗಳನ್ನು ವಿಶ್ಲೇಷಿಸುತ್ತಾ ಹೋದಂತೆ ದೇವರೆಲ್ಲಿದ್ದಾನೆ? ಹೇಗಿದ್ದಾನೆ? ಎಂಬ ಆಸ್ತಿಕರ ಪ್ರಶ್ನೆಗೆ, ದೇವರೇ ಇಲ್ಲ ಅಂತ ಮೆದುಳಿಗೆ ಕೆಲಸವೇ ಕೊಡದ ನಾಸ್ತಿಕರ ಉಢಾಳತೆಗೆ ಉತ್ತರ ದೊರಕುತ್ತಾ ಹೋಯಿತು. ಅದು ಧರ್ಮಗುರುವಿನಿಂದ ಪಾಮರರಿಗೆ ಹಂಚುತ್ತಾ ಹೋದಂತೆ ಸೋರಿಕೆಯೂ ಆಯಿತು. ಜ್ಞಾನದ ಗಟ್ಟಿ ತಳದಲ್ಲೇ ಉಳಿದು, ಮೇಲಿನ ತಿಳಿಯಷ್ಟೆ ಜನರಿಗೆ ತಲುಪಿತು. ಇದರಿಂದ ಜನರಲ್ಲಿ ದೇವರು ಮತ್ತು ಧರ್ಮ ಅನ್ನೋ ವಿಚಾರದಲ್ಲಿ ವಿಕಾರವಾದ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು, ತಮ್ಮ ಗುರು ಹೇಳಿದ್ದೇ ಸರಿ ಅನ್ನೋ ವಿತಂಡವಾದಗಳು ಹೆಚ್ಚಾದವು. ಅವು ಮನುಷ್ಯ-ಮನುಷ್ಯರ ನಡುವೆ ಕಿತ್ತಾಟಕ್ಕೂ ಕಾರಣವಾಯಿತು.

ಇಷ್ಟಕ್ಕೂ ದೇವರೆಲ್ಲಿದ್ದಾನೆ?! ಈ ಮೊದಲ ಪ್ರಶ್ನೆಗೆ ಉತ್ತರ ಕೊಡುವುದಾದರೆ ಆತ ಎಲ್ಲೆಲ್ಲೂ ಇದ್ದಾನೆ. ನನ್ನೊಳಗೂ-ನಿಮ್ಮೊಳಗೂ ಎಲ್ಲರೊಳಗೂ ಇದ್ದಾನೆ. ನನ್ನೊಳಗಿನ ದೇವರಿಗೆ ನೀವು ಕೈಮುಗಿದರೆ, ನಿಮ್ಮೊಳಗಿನ ದೇವರು ಪ್ರಸನ್ನನಾಗುತ್ತಾನೆ. ಬೈದರೆ ಮುನಿಯುತ್ತಾನೆ. ಅರ್ಥಾತ್ ನಿಮ್ಮ ಮನಸ್ಸು ಅಶಾಂತವಾಗುತ್ತೆ. ಇದಕ್ಕೆ ಒಂದು ಸರಳ ಉದಾಹರಣೆ ಕೊಡುವುದಾದರೆ, ನೀವು ಒಬ್ಬ ವ್ಯಕ್ತಿಯನ್ನು ಗೌರವದಿಂದ ನಡೆಸಿಕೊಂಡರೆ ಪ್ರತಿಯಾಗಿ ಗೌರವವೇ ಸಿಗುತ್ತೆ. ನೀವು ಕೆಟ್ಟದ್ದಾಗಿ ವರ್ತಿಸಿದರೆ, ಅದರ ಪ್ರತಿಫಲವಾಗಿ ಕೆಟ್ಟದ್ದನ್ನೇ ಪಡೆಯುತ್ತೀರಿ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನಿಸರ್ಗದ ನಿಯಮ. ಅದರಂತೆ ಒಳ್ಳೆಯ ಮನಸ್ಸಿನಿಂದ ದೇವರನ್ನು ಪೂಜಿಸಿದರೆ, ಒಳ್ಳೆಯದಾಗುತ್ತದೆ. ಕೆಟ್ಟ ಮನಸ್ಸಿನಿಂದ ಪ್ರಾರ್ಥಿಸಿದರೆ, ಕೆಟ್ಟದ್ದು ಆಗುತ್ತದೆ. ಅಂದರೆ ದೇವರು ಒಳ್ಳೆಯತನದಲ್ಲಿದ್ದಾನೆ ಎಂದಾಯಿತು. ಆ ಒಳ್ಳೆತನದ ರೂಪವನ್ನು ನಾವು ಕಟ್ಟಿಕೊಡಲು ಸಾಧ್ಯವಿಲ್ಲ, ಕಲ್ಪಿಸಿಕೊಡಬಹುದಷ್ಟೆ. ಹೀಗಾಗಿ ದೇವರ ಆಕಾರ-ನಿರಾಕಾರಗಳು ಅವರವರ ಕಲ್ಪನೆಯ ರೂಪದಲ್ಲಿವೆ.

ಮನುಷ್ಯನ ಮೃಗೀಯ ಸ್ವಭಾವವನ್ನು ಒಳ್ಳೆಯದಾಗಿ ಪರಿವರ್ತಿಸಲು ಧರ್ಮ ಹುಟ್ಟಿದೆ. ಮಾನವಧರ್ಮಕ್ಕೆ ದಾರಿದೀಪವಾಗಿ ಧರ್ಮಗ್ರಂಥಗಳು ಹುಟ್ಟಿವೆ. ಧರ್ಮ ಮತ್ತು ಧರ್ಮಗ್ರಂಥಗಳ ಸಹಾಯದಿಂದ ಒಳ್ಳೆತನದ ಸಂಕೇತವಾದ ದೇವರನ್ನು ಕಾಣಬಹುದಾಗಿದೆ. ಇಂಥ ಒಳ್ಳೆ ಬುದ್ಧಿಯನ್ನು ಬಿಟ್ಟು, ಧರ್ಮ ಮತ್ತು ದೇವರಲ್ಲಿ ಭಿನ್ನವೆಣಿಸಿದರೆ ನಮ್ಮ ಮನಸ್ಸು ಕೆಟ್ಟು ಮತ್ತೆ ಕ್ರೂರವಾಗುತ್ತೆ. ಒಳ್ಳೆಯದರಲ್ಲಿ ಕೆಟ್ಟದ್ದನ್ನು ಹೇಗೆ ಹುಡುಕಬಾರದೋ, ಹಾಗೇ ದೇವರಲ್ಲಿ ತಮ್ಮದು-ಪರರದು ಎಂಬ ಭೇದಭಾವ ಮಾಡಬಾರದು. ಒಳ್ಳೆಯದನ್ನು ಒಳ್ಳೆ ರೀತಿಯಲ್ಲಿ ನೋಡುವ, ಅನುಸರಿಸುವ ಗುಣವನ್ನು ಕಲಿಸುವುದೇ ಧರ್ಮ. ಆ ಧರ್ಮದಲ್ಲಿ ತಾರತಮ್ಯ ಮಾಡಿದರೆ ನಮ್ಮ ಮನಸ್ಸು ಕೆಡುತ್ತದೆ. ಅಂತ ಮಲೀನ ಮನಸ್ಸಿನಲ್ಲಿ ದೇವರು ಖಂಡಿತ ಉಳಿಯುವುದಿಲ್ಲ. ಎಲ್ಲವೂ ದೇವರದು, ಎಲ್ಲರೂ ನಮ್ಮಂತೆಯೇ ಅನ್ನೋ ಸದ್ಭಾವದಲ್ಲಿ ಮಾತ್ರ ‘ಸಚ್ಚಿದಾನಂದ’ಪ್ರಭು ನೆಲೆಸಿರುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT