ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ | ಜನ ಮರುಳೋ ಯಾತ್ರೆ ಮರುಳೋ?

ಯಾತ್ರೆಯ ವೆಚ್ಚ, ದೇಣಿಗೆಯ ಮೂಲವನ್ನು ಪಕ್ಷಗಳು ಜನರ ಮುಂದಿಡಲಿ
Last Updated 15 ಜನವರಿ 2023, 21:48 IST
ಅಕ್ಷರ ಗಾತ್ರ

ಸಂಕ್ರಾಂತಿ ಮುಗಿದ ಬೆನ್ನಲ್ಲೇ, ರಾಜಕೀಯ ಸಂಕ್ರಮಣಕ್ಕೆ ದಾರಿ ಮಾಡಿಕೊಡುವ ಗೌಜು ಬಿರುಸುಗೊಂಡಿದೆ. ಐದು ವರ್ಷಕ್ಕೊಮ್ಮೆ ಮತದೇವರನ್ನು ಒಲಿಸಿಕೊಂಡು, ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ತಾವೇ ದೇವರಂತೆ ಆಡುತ್ತಾ ವರವನ್ನೂ ನೆರವನ್ನೂ ಕೊಡದ ರಾಜಕಾರಣಿಗಳು ಗದ್ದುಗೆಗೇರಲು ಯಾತ್ರೆ ಶುರು ಮಾಡಿದ್ದಾರೆ.

ಐದು ವರ್ಷದ ಹಿಂದೆ ಯಾತ್ರೆ ನಡೆಸಿದ ರಾಜಕಾರಣಿಗಳು ಜನಹಿತದ ರಾಜಕಾರಣ ಮಾಡಿದ್ದು ಅಪರೂಪ. ಬೆಲೆ ಏರಿಕೆ, ನಿರುದ್ಯೋಗ, ಕೈಗೆ ಬಂದ ಬೆಳೆಗೆ ಸಿಗದ ಬೆಲೆ, ಕೋವಿಡ್ ಕಾರಣದಿಂದ ಕಳೆದುಕೊಂಡ ಉದ್ಯೋಗ, ನಿಂತೇಹೋದ ವಹಿವಾಟು, ಸಾಲಶೂಲದ ಇರಿತದಿಂದ ಬಳಲಿ ಬೆಂಡಾದ ಮತದಾರನ ಕಷ್ಟಕ್ಕೆ ಸ್ಪಂದನೆಯೇ ಇಲ್ಲದ ಸ್ಥಿತಿ ಮುಂದುವರಿದಿದೆ. ಅಂತಹವರು ಈಗ ಯಾತ್ರೆ ಗೀಳು ಹಚ್ಚಿಕೊಂಡು ಚಳಿ–ಬಿಸಿಲೆನ್ನದೇ ಓಡಾಡತೊಡಗಿದ್ದಾರೆ. ಜನರ ಗೋಳು ಮಾತ್ರ ತಪ್ಪಿಲ್ಲ.

ಬಿಜೆಪಿ ನಾಯಕರು ಜನಸಂಕಲ್ಪ ಯಾತ್ರೆಯ ಮೊದಲ ಹಂತವನ್ನು ಮುಗಿಸಿದ್ದಾರೆ. ಅನೇಕ ಹೊಸ ಯೋಜನೆಗಳನ್ನು ಕೇಂದ್ರ–ರಾಜ್ಯ ಸರ್ಕಾರಗಳು ಜಾರಿಗೆ ತಂದಿದ್ದರೂ, ಅವು ಅಧಿಕಾರವನ್ನು ಕೊಡಿಸುವುದು ಕಷ್ಟ. ಭ್ರಷ್ಟಾಚಾರ, ಆಡಳಿತ ವೈಫಲ್ಯ, ನೇಮಕಾತಿಗಳಲ್ಲಿ ಅಕ್ರಮ, ಸಾಮರಸ್ಯ ಕದಡುವ ಘಟನೆಗಳಿಗೆ ಬೆಂಬಲ ನೀಡಿದ್ದಾರೆಂಬ ಗುರುತರ ಆರೋಪಗಳು ಆಡಳಿತಾರೂಢರ ಮೇಲೆ ಇವೆ. ಹೀಗಾಗಿ ಅಭಿವೃದ್ಧಿಯ ಮಂತ್ರವು ಗೆಲುವಿನ ಕಡೆಗೆ ತಮ್ಮನ್ನು ಕೊಂಡೊಯ್ಯಲಾರದು ಎಂಬುದು ಗೊತ್ತಾದಂತಿದೆ. ಕೋಮುದ್ವೇಷ ಬಿತ್ತಿ ಮತವನ್ನು ಕ್ರೋಡೀಕರಿಸಿಕೊಳ್ಳುವ ಹಾಗೂ ಜಾತಿಕೇಂದ್ರಿತ ರಾಜಕಾರಣದ ಮುಖೇನ ನಿರ್ದಿಷ್ಟ ಜಾತಿ ಮತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಕಡೆಗೆ ಬಿಜೆಪಿ ರಾಜಕಾರಣ ಗಿರಕಿ ಹೊಡೆಯುತ್ತಿದೆ.

ಡಬಲ್ ಎಂಜಿನ್ ಸರ್ಕಾರ ಬಂದರೆ ಅಭಿವೃದ್ಧಿಯ ಹೊಳೆ ಹರಿಯಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ, ಕೇಂದ್ರದಿಂದ ಕರ್ನಾಟಕಕ್ಕೆ ನ್ಯಾಯ ಸಮ್ಮತವಾದ ಪಾಲು ಬಂದಿಲ್ಲ. ಅನೇಕ ಯೋಜನೆಗಳಿಗೆ ಕತ್ತರಿ ಬಿದ್ದಿದೆ. ಮಹದಾಯಿ, ಮೇಕೆದಾಟು ಯೋಜನೆಗಳಿಗೆ ನಿರೀಕ್ಷಿತ ಬೆಂಬಲ ಕೇಂದ್ರದಿಂದ ಸಿಕ್ಕಿಲ್ಲ. ಹತ್ತಾರು ಯೋಜನೆಗಳ ಅನುಮೋದನೆ ನನೆಗುದಿಗೆ ಬಿದ್ದಿದೆ. ಕೇಂದ್ರ–ರಾಜ್ಯದಲ್ಲಿ ಬೇರೆ ಬೇರೆ ಪಕ್ಷದ ಸರ್ಕಾರಗಳು ಇದ್ದಾಗ, ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳುವ ಅವಕಾಶ ಇರುತ್ತದೆ. ಅದು ಈಗ ಇಲ್ಲ. ಹೀಗಾಗಿ, ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ಹೆಚ್ಚುತ್ತಲೇ ಇದೆ.

ಈ ಕಾರಣಕ್ಕಾಗಿಯೇ, ಕಾಂಗ್ರೆಸ್‌ ನೀಡುತ್ತಿರುವ ಒಂದೊಂದು ಚುನಾವಣಾ ಭರವಸೆಯೂ ಬಿಜೆಪಿ ನಾಯಕರಿಗೆ ಸವಾಲಿನಂತೆ ಭಾಸವಾಗುತ್ತಿದೆ. ಅಧಿಕಾರಕ್ಕೆ ಬಂದರೆ ಪ್ರತೀ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್‌ ನಾಯಕರು ಹೇಳಿದ್ದೇ ತಡ, ಅದು ಅಸಾಧ್ಯ ಎಂದು ಮುಖ್ಯಮಂತ್ರಿಯಾದಿಯಾಗಿ ಬಿಜೆಪಿ ನಾಯಕರು ಹುಯಿಲೆಬ್ಬಿಸಿದರು. ಉಚಿತ ವಿದ್ಯುತ್‌ ಕೊಡಲಾಗದೇ ಇದ್ದರೆ ಅದಕ್ಕೆ ತಕ್ಕ ಉತ್ತರವನ್ನು ರಾಜ್ಯದ ಜನರು ಆ ಪಕ್ಷಕ್ಕೆ ಕೊಡಲಿದ್ದಾರೆ. ಕಾಂಗ್ರೆಸ್‌ ಭರವಸೆಯನ್ನು ಎದುರಿಸುವುದೆಂದರೆ ಈಗಿನಿಂದಲೇ 200 ಯೂನಿಟ್‌ ವಿದ್ಯುತ್ ಅನ್ನು ಉಚಿತವಾಗಿ ಕೊಡುವ ಯೋಜನೆ ಜಾರಿ ಮಾಡುವುದೇ ಆಗಿದೆ. ವಿದ್ಯುತ್ ಬೆಲೆ ಇಳಿಸುವ ಧೈರ್ಯವನ್ನು, ಕಾಂಗ್ರೆಸ್ ಭರವಸೆಯನ್ನು ಟೀಕೆ ಮಾಡುತ್ತಿರುವ ಇಂಧನ ಸಚಿವ ಸುನಿಲ್‌ಕುಮಾರ್ ಹಾಗೂ ಸರ್ಕಾರ ತೋರಲಿ.

ಸರ್ಕಾರಕ್ಕೆ ಅದು ಸಾಧ್ಯವಾಗದು. ಹೀಗಾಗಿ, ‘ರಸ್ತೆ–ಚರಂಡಿ ಸಮಸ್ಯೆಯ ಬಗ್ಗೆ ಚರ್ಚಿಸುವುದು ಬಿಡಿ; ‘ಲವ್ ಜಿಹಾದ್‌’ ಬಗ್ಗೆ ಚರ್ಚೆ ನಡೆಸಿ’ ಎಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ಕೊಟ್ಟಿದ್ದಾರೆ. ಇತ್ತ, ರಾಮನಗರದಲ್ಲಿ ರಾಮದೇವರ ಬೆಟ್ಟದ ಅಭಿವೃದ್ಧಿ, ಕೆಂಪೇಗೌಡರ ಪ್ರತಿಮೆ ಅನಾವರಣ, ಟಿಪ್ಪು ವಿವಾದ, ಪರಿಶಿಷ್ಟ ಜಾತಿ–ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಳದಂತಹ ಮತಾಕರ್ಷಕ ದಾರಿಗಳನ್ನು ಬಿಜೆಪಿ ಹುಡುಕಿಕೊಂಡಂತಿದೆ. ಆದರೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್‌ನ ಭರವಸೆಗೆ ಸವಾಲೊಡ್ಡುವಂತೆ ಕುಟುಂಬ ನಿರ್ವಹಣೆಗಾಗಿ ಮಹಿಳೆಯರಿಗೆ ₹ 2 ಸಾವಿರದವರೆಗೆ ಕೊಡುಗೆ ಕೊಡುವ ಘೋಷಣೆ ಮಾಡಿದ್ದಾರೆ. ಅದನ್ನು ಜಾರಿಗೊಳಿಸುವ ದಾರಿಯನ್ನೇನೂ ಅವರು ಹೇಳಿಲ್ಲ.

ಮೇಕೆದಾಟು ಯಾತ್ರೆಯ ಯಶಸ್ಸು ಕಂಡ ಕಾಂಗ್ರೆಸ್ ನಾಯಕರು, ಈಗ ಪ್ರಜಾಧ್ವನಿ ಹೆಸರಿನಲ್ಲಿ ಬಸ್ ಯಾತ್ರೆ ಆರಂಭಿಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದ ವೈಫಲ್ಯ, ತಮ್ಮ ಹಿಂದಿನ ಸರ್ಕಾರದ ಸಾಧನೆಯನ್ನು ಮುಂದಿಟ್ಟು ಮತ ಯಾಚಿಸಲು ಮುಂದಾಗಿರುವ ಕಾಂಗ್ರೆಸ್ ನಾಯಕರು, ಹೊಸ ಭರವಸೆಗಳನ್ನೂ ಕೊಡುತ್ತಿದ್ದಾರೆ. 2018ರ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಿಸಿದ್ದ ಯೋಜನೆಗಳನ್ನು ಜಾರಿ ಮಾಡಿಲ್ಲ ಎಂದು ಟೀಕಿಸುತ್ತಿದ್ದಾರೆ. ಬಿಜೆಪಿಯನ್ನು ಎದುರಿಸಬೇಕಾದರೆ ಆಳುವ ಪಕ್ಷದ ನಡವಳಿಕೆಯನ್ನು ಟೀಕೆ ಮಾಡಿದರೆ ಮಾತ್ರ ಸಾಲದು, ಅನುಷ್ಠಾನ ಯೋಗ್ಯವಾದ ಯೋಜನೆಗಳನ್ನು ಜನರು ಒಪ್ಪುವ ರೀತಿಯಲ್ಲಿ ಮತದಾರರ ಮುಂದಿಡಬೇಕು.

2013ರ ಪೂರ್ವದಲ್ಲಿ ಕೃಷ್ಣಾ ಮೇಲ್ದಂಡೆ ಸೇರಿದಂತೆ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣ ಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕರು ಘೋಷಿಸಿದ್ದರು. ಆದರೆ, ಐದು ವರ್ಷ ಏಕಪಕ್ಷದಲ್ಲಿ, ಒಂದು ವರ್ಷ ಮೈತ್ರಿ ಸರ್ಕಾರದಲ್ಲಿ ಆಡಳಿತ ನಡೆಸಿದರೂ ಭರವಸೆ ಸಾಕಾರವಾಗಲಿಲ್ಲ. 200 ಯೂನಿಟ್ ವಿದ್ಯುತ್‌ ಉಚಿತ ಘೋಷಣೆಯೇನೋ ಆಕರ್ಷಕವಾಗಿದೆ. ಹೀಗೆ ಘೋಷಣೆ ಮಾಡುವಾಗ ಉತ್ಪಾದನಾ ವೆಚ್ಚವೆಷ್ಟು, ಆ ಮೊತ್ತವನ್ನು ಎಲ್ಲಿಂದ ಸರಿದೂಗಿಸಲಾಗುತ್ತದೆ ಎಂಬುದನ್ನೂ ಜನರ ಮುಂದಿಡಬೇಕು. ಅದನ್ನು ನೀಡದೇ, ಕುಟುಂಬಕ್ಕೆ ಇಷ್ಟು ಕೊಡುತ್ತೇವೆ ಎಂದು ಹೇಳಿದರೆ ಜನ ನಂಬಲಾರರು.

ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದಿರುವ ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ, ಜನತಾ ಜಲಧಾರೆ ಯಾತ್ರೆ ಮುಗಿಸಿದ್ದಾರೆ. ಎರಡನೇ ಸುತ್ತಿನಲ್ಲಿ ಪಂಚರತ್ನ ಯಾತ್ರೆ ನಡೆಸುತ್ತಿದ್ದಾರೆ. ರೈತರ ಸಾಲಮನ್ನಾ, ನೀರಾವರಿ ಯೋಜನೆಗಳ ಅನುಷ್ಠಾನದಂತಹ ಜನಪ್ರಿಯ ಘೋಷಣೆ ಮಾಡಿರುವ ಅವರು, ಅದರ ಜಾರಿಗೆ ಹಣ ಹೊಂದಿಸುವ ಬಗೆಯನ್ನೂ ವಿವರಿಸುತ್ತಿದ್ದಾರೆ.

ವಿಭಿನ್ನ ರೀತಿಯ ಹೋರಾಟ ನಡೆಸುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿಯ (ಕೆಆರ್‌ಎಸ್‌) ರವಿಕೃಷ್ಣಾ ರೆಡ್ಡಿ, ಜನರಿಗೆ ನೇರವಾಗಿ ತಟ್ಟುವ ವಿಷಯಗಳ ಕಡೆಗೆ ಗಮನಹರಿಸಿದ್ದಾರೆ. ಲಂಚಬಾಕರ ಕೇಂದ್ರಗಳಾಗಿರುವ ಸರ್ಕಾರಿ ಕಚೇರಿಗಳ ಮುಂದೆ ನಿಂತು ಹೋರಾಟ ನಡೆಸುತ್ತಿರುವ ಕೆಆರ್‌ಎಸ್‌, ಲಂಚಮುಕ್ತ ಕರ್ನಾಟಕದ ಘೋಷಣೆ ಮುಂದಿಟ್ಟಿದೆ. ನವೆಂಬರ್‌ನಲ್ಲಿ ಕನ್ನಡೋತ್ಸವ ಯಾತ್ರೆ ನಡೆಸಿ, ಚುನಾವಣೆಗೆ ಜನರಿಂದ ನೇರವಾಗಿ ವಂತಿಗೆ ಸಂಗ್ರಹಿಸುವ ಗುರಿಯೊಂದಿಗೆ ಮಹಾ ಭಿಕ್ಷಾಯಾತ್ರೆ ನಡೆಸುತ್ತಿದೆ. ಪ್ರತೀ ತಿಂಗಳು ಸಂಗ್ರಹವಾದ ದೇಣಿಗೆ, ವೆಚ್ಚದ ಲೆಕ್ಕವನ್ನು ಕೆಆರ್‌ಎಸ್ ಕೊಡುತ್ತಿದೆ.

ಉಳಿದ ಪಕ್ಷಗಳು ಕೂಡ ತಾವು ನಡೆಸುತ್ತಿರುವ ಯಾತ್ರೆಗೆ ಆಗುತ್ತಿರುವ ಖರ್ಚು, ಅದರ ಮೂಲ, ದೇಣಿಗೆಯ ವಿವರವನ್ನು ಜನರ ಮುಂದಿಡುವ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಈಗ ತಿಂಗಳಿಗೆ ಎರಡು ಮೂರು ಬಾರಿ ರಾಜ್ಯಕ್ಕೆ ಬರಲಾರಂಭಿಸಿದ್ದಾರೆ. ಅವರಿಂದ ಯೋಜನೆಗಳಿಗೆ ಚಾಲನೆ ಕೊಡಿಸುವುದು ತಪ್ಪಲ್ಲ. ಆದರೆ, ಅದು ಮತಪ್ರಚಾರದ ಕಾರ್ಯಕ್ರಮವಾಗುತ್ತಿದೆ. ಯುವ ಜನೋತ್ಸವಕ್ಕೆ ಬಂದ ಮೋದಿಯವರು, ಎಂಟು ಕಿ.ಮೀ. ರೋಡ್ ಷೋ ನಡೆಸಿದರು. ಅದೇನೂ ಅಕ್ಷಮ್ಯವಲ್ಲ. ಆದರೆ, ಜನರು ತೆರಿಗೆ ರೂಪದಲ್ಲಿ ನೀಡಿದ ದುಡ್ಡನ್ನು ಈ ಕಾರ್ಯಕ್ರಮಕ್ಕೆ ವೆಚ್ಚ ಮಾಡಲಾಗುತ್ತಿದೆ. ಅದರ ಲೆಕ್ಕವನ್ನು ಸರ್ಕಾರವು ಜನರ ಮುಂದಿಡಬೇಕು. ಆಗ ಮಾತ್ರವೇ ವೆಚ್ಚದಲ್ಲಿ ಪಾರದರ್ಶಕತೆ ಬಂದು, ಜನರಿಗೆ ವಿಶ್ವಾಸ ಮೂಡೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT