ಭಾನುವಾರ, ಅಕ್ಟೋಬರ್ 25, 2020
22 °C
ಯಡಿಯೂರಪ್ಪ ನಾಯಕತ್ವವನ್ನು ಪ್ರಶ್ನೆಯ ಮೊನೆಗೆ ಸಿಲುಕಿಸಿ ಪರೀಕ್ಷೆಗೆ ಒಡ್ಡಲಾಗಿದೆ

ಗತಿಬಿಂಬ: ಅಲ್ಲಿ ಹಾರ ದೊರೆತರೆ ಇಲ್ಲಿ ಪ್ರಹಾರ?

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಎಂಬತ್ತರ ಏರುವಯಸ್ಸಿನತ್ತ ಸಾಗುತ್ತಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಾವೇ ಕರ್ನಾಟಕದಲ್ಲಿ ಕಟ್ಟಿದ, ಒಮ್ಮೆ ಮಾತ್ರ ಕೆಡವಿದ್ದ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರಾಗಿ ಇನ್ನೂ ಉಳಿದಿದ್ದಾರೆಯೇ?

ಇಂತಹ ಪ್ರಶ್ನೆ ಮುಂದಿಟ್ಟರೆ, ಯಡಿಯೂರಪ್ಪನವರ ಕುಟುಂಬದವರನ್ನು ಬಿಟ್ಟರೆ, ಪಕ್ಷದ ಉಳಿದ ಶಾಸಕರು– ನಾಯಕರು ಇದಕ್ಕೆ ಅಹುದಹುದೆನ್ನಲಾರರು. ಅ‌ಷ್ಟರಮಟ್ಟಿಗೆ ಬಿಜೆಪಿ ಬದಲಾಗಿದೆ. ಕಾಲಕ್ಕೆ ಅನುಗುಣವಾಗಿ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳದಿರುವುದು ಯಡಿಯೂರಪ್ಪ ಮತ್ತು ಅವರ ಕುಟುಂಬವರ್ಗ ಮಾತ್ರ. ಕಮಲ ಪಾಳಯದಲ್ಲಿ ಎದ್ದಿರುವ ಅಪಸ್ವರವು ಬಿರುಗಾಳಿಯಾಗಲು ಬಹಳ ಹೊತ್ತೇನೂ ಬೇಕಿಲ್ಲ. ಪಕ್ಷವನ್ನು ತನ್ನ ವಜ್ರಮುಷ್ಟಿಯಲ್ಲಿ ಅಮುಕಿಟ್ಟುಕೊಂಡಿರುವ ಅಮಿತ್ ಶಾ ಅವರು ಮನಸ್ಸು ಮಾಡಿದರೆ, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯು ಕಷ್ಟದ ಕೆಲಸವೇನಲ್ಲ.

ಈ ಏರುವಯಸ್ಸಿನಲ್ಲೂ ಸಕಲ ಪಟ್ಟುಗಳನ್ನು ಹಾಕಿ ಬಿಜೆಪಿಯಲ್ಲಿ ಮುಖ್ಯಮಂತ್ರಿ ಪದವಿ ದಕ್ಕಿಸಿಕೊಳ್ಳುವುದೇ ಒಂದು ಸಾಹಸ. ಹೀಗೆ ಯುದ್ಧ ಮಾಡಿ ಗೆದ್ದ ಪದವಿಯನ್ನು ಉಳಿಸಿಕೊಳ್ಳಲು ಬೇಕಾದ ಚಾಣಾಕ್ಷತನವನ್ನು ಅವರು ತೋರುತ್ತಿಲ್ಲ. ಇದರಿಂದಾಗಿ, ಅಧಿಕಾರ ಹಿಡಿದು ವರ್ಷ ಕಳೆಯುವಷ್ಟರಲ್ಲಿ ಸ್ವಪಕ್ಷೀಯರೇ ಕುರ್ಚಿ ಕಾಲನ್ನು ಅಲ್ಲಾಡಿಸಲು ಶುರುವಿಟ್ಟುಕೊಂಡಿದ್ದಾರೆ.

‘ನೇರವಾಗಿ ಹೋದರೆ ಕೆಲಸವಾಗುವುದಿಲ್ಲ. ಕಾಮಗಾರಿಗಳಿಗೆ ಅನುಮೋದನೆ ಸಿಗುವುದಿಲ್ಲ. ‘ಏಜೆಂಟ’ರ ಮೂಲಕ ಹೋದರೆ ಮಾತ್ರ ತಕ್ಷಣವೇ ಮಂಜೂರಾತಿ, ಅನುದಾನ ಎಲ್ಲವೂ ದೊರಕುತ್ತವೆ. ಹೀಗಾದರೆ ಕೆಲಸ ಮಾಡುವುದು ಹೇಗೆ? ಪರ್ಸಂಟೇಜ್ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕೆಂದರೆ ಉಳಿದವರ ಪರಿಸ್ಥಿತಿ ಹೇಗಿರಬೇಡ’ ಎಂದು ನಾಲ್ಕೈದು ಬಾರಿ ಗೆದ್ದಿರುವ ಬಿಜೆಪಿಯ ಹಿರಿಯ ಶಾಸಕರೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಏರುಧ್ವನಿಯಲ್ಲಿ ಪ್ರಶ್ನಿಸಿದ್ದರು. ವರ್ಗಾವಣೆಗೆ ಸಂಬಂಧಿಸಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್‌, ಸಚಿವ ನಾರಾಯಣಗೌಡರ ಜತೆ ಗುದ್ದಾಟಕ್ಕೆ ಮುಂದಾಗಿದ್ದರು. ರಾಜೀನಾಮೆ ಕೊಡುವ ಬೆದರಿಕೆ ಹಾಕಿದ ಗೂಳಿಹಟ್ಟಿ ಶೇಖರ್‌ ‘ಕಾಣದ ಕೈಗಳ ಪ್ರಭಾವ’ದ ಬಗ್ಗೆ ಆಕ್ರೋಶ ಹೊರಹಾಕಿದ್ದರು.

ಮೊದಲ ಬಾರಿ ಗೆದ್ದು, ವಿಧಾನಸೌಧದ ಮೆಟ್ಟಿಲು ಏರಿದವರು ಮಾತನಾಡಲು ತೊಡಗಿದರೆಂದರೆ ಅದು ಆ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದರ ಸೂಚಕ. ತಮ್ಮನ್ನು ಆಡಳಿತ ಪಕ್ಷದ ನಾಯಕನನ್ನಾಗಿ ಆರಿಸಿದವರೇ ‘ನಮ್ಮ ಕೆಲಸವಾಗುತ್ತಿಲ್ಲ’ ಎಂದು ಬಂಡೆದ್ದು ಬೀದಿಯಲ್ಲಿ ಮಾತನಾಡತೊಡಗಿದರೆ ಅದು ನಾಯಕತ್ವದ ವಿರುದ್ಧ ಮಡುಗಟ್ಟುತ್ತಿರುವ ಅಸಹನೆಯ ದ್ಯೋತಕ.

ಹಾಗಂತ ಇದನ್ನೆಲ್ಲ ನೋಡುತ್ತಾ ಬಿಜೆಪಿ ವರಿಷ್ಠರೇನೂ ಸುಮ್ಮನೆ ಕುಳಿತಿಲ್ಲ. ‘ಯಡಿಯೂರಪ್ಪ ಪ್ರಶ್ನಾತೀತ ನಾಯಕರಲ್ಲ. ಅವರು ಹೇಳಿದ್ದೇ ಪಕ್ಷದಲ್ಲಿ ನಡೆಯುತ್ತದೆ ಎಂಬ ಕಾಲ ಯಾವಾಗಲೋ ಕಳೆದುಹೋಯಿತು’ ಎಂಬ ಸಂದೇಶವನ್ನು ಆಗಿಂದಾಗ್ಗೆ ನೀಡುತ್ತಲೇ ಇದ್ದಾರೆ. ಚುನಾವಣೆ ಅಭ್ಯರ್ಥಿ ಆಯ್ಕೆ, ಸಂಪುಟ ವಿಸ್ತರಣೆಗೆ ನಕಾರ, ಅನುದಾನಕ್ಕೆ ಕೊಕ್ಕೆ... ಹೀಗೆ ಬೇರೆ ಬೇರೆ ವಿಧದಲ್ಲಿ ಯಡಿಯೂರಪ್ಪ ನಾಯಕತ್ವವನ್ನು ಪ್ರಶ್ನೆಯ ಮೊನೆಗೆ ಸಿಲುಕಿಸಿ ಪರೀಕ್ಷೆಗೆ ಒಡ್ಡುತ್ತಿದ್ದಾರೆ. ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ವೀಕ್ಷಕರನ್ನಾಗಿ ಕಳುಹಿಸಿದ್ದು ಸಹ ಪರೀಕ್ಷೆಗಾಗಿಯೇ. ಯಡಿಯೂರಪ್ಪ ಪ್ರತಿರೋಧ ಒಡ್ಡುತ್ತಾರಾ? ಅಥವಾ ಅವರ ಬೆನ್ನಿಗೆ ನಿಂತಿದ್ದವರು ಧ್ವನಿ ಎತ್ತುತ್ತಾರಾ ಎಂದು ಪದೇ ಪದೇ ಪರೀಕ್ಷೆಗೆ ಗುರಿಪಡಿಸಿ ನಾಯಕತ್ವದ ಪರ ಬಲ ಹೆಚ್ಚಿಲ್ಲ ಎಂದು ದೃಢಪಡಿಸಿಕೊಳ್ಳುವುದು ವರಿಷ್ಠರ ಲೆಕ್ಕಾಚಾರ ಇದ್ದಂತಿದೆ. ಹಿಂದೆಲ್ಲ ಕೇಂದ್ರ ನಾಯಕರು ‘ಪ್ರಹಾರ’ ಮಾಡಲು ಮುಂದಾದಾಗ ಬಸನಗೌಡ ಪಾಟೀಲ ಯತ್ನಾಳ ಅಂತಹವರು ಸಿಡಿದೆದ್ದು ಅಬ್ಬರಿಸಿದ್ದು ಇದೆ. ಅಂತಹವರನ್ನು ಈಗ ಯಡಿಯೂರಪ್ಪ ದೂರ ಮಾಡಿಕೊಂಡಿದ್ದಾರೆ.

ಹೀಗೆ ಯಡಿಯೂರಪ್ಪ ನಾಯಕತ್ವದ ಮೇಲಿನ ವಿಶ್ವಾಸದ ಬಲ ಎಷ್ಟಿದೆ ಎಂದು ಪರೀಕ್ಷೆಗೆ ಒಡ್ಡುತ್ತಿರುವ ಕೇಂದ್ರ ನಾಯಕತ್ವವು ಪರ್ಯಾಯ ನಾಯಕನ ಶೋಧದಲ್ಲೂ ನಿರತವಾಗಿದೆ. ಹಿಂದೆ ಲಕ್ಷ್ಮಣ ಸವದಿ ಹೆಸರನ್ನು ತೇಲಿಬಿಟ್ಟಿದ್ದ ನಾಯಕತ್ವ ಈಗ ಯತ್ನಾಳ, ಪ್ರಲ್ಹಾದ ಜೋಶಿ ಹೆಸರನ್ನು ಮುಂಚೂಣಿಗೆ ತಂದಿದೆ. ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡುವುದೇ ಆದರೆ ಅವರ ಬದಲಾಗಿ ಲಿಂಗಾಯತ ಸಮುದಾಯಕ್ಕೇ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ರಾಜಕೀಯ ವಿವೇಚನೆ ಆ ಪಕ್ಷದ ವರಿಷ್ಠರಿಗೆ ಇದೆ. ಅದೇ ಕಾರಣಕ್ಕಾಗಿ, ಕಾಂಗ್ರೆಸ್‌ನಲ್ಲಿ ಪ್ರಭಾವಿಯಾಗಿರುವ ಲಿಂಗಾಯತ ಪ್ರಮುಖರನ್ನು ಸೆಳೆಯುವ ಯತ್ನವೂ ನಡೆಯುತ್ತಿದೆ. ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ ಅವರನ್ನು ಪಕ್ಷಕ್ಕೆ ಕರೆತರುವ ಯತ್ನ ನಡೆದಿದೆ ಎಂಬ ಮಾಹಿತಿಯನ್ನು ಹಿಂದೆ ‘ಆಪರೇಷನ್ ಕಮಲ’ದ
ಮುಂಚೂಣಿಯಲ್ಲಿದ್ದ ನಾಯಕರೊಬ್ಬರು ಹೊರಗೆಡಹಿ ದ್ದಾರೆ. ಎಂ.ಬಿ. ಪಾಟೀಲರು ಕಾಂಗ್ರೆಸ್ ಬಿಡುತ್ತಾರೋ ಅಥವಾ ಧರ್ಮ ವಿಭಜನೆಯ ನೇತೃತ್ವ ವಹಿಸಿದ್ದರೆಂಬ ಆಪಾದನೆಗೆ ಗುರಿಯಾಗಿರುವ ಅವರನ್ನು ಇಡೀ ಸಮುದಾಯ ಒಪ್ಪುತ್ತದೋ ಎಂಬುದು ಚರ್ಚೆಯ ವಿಷಯ. ಆದರೆ, ಇಂತಹ ವದಂತಿ–ಸುದ್ದಿಗಳ ಹಿಂದೆ ಯಡಿಯೂರಪ್ಪ ನಾಯಕತ್ವದ ವಿಶ್ವಾಸಾರ್ಹತೆ ಹಾಗೂ ಅವರ ಬೆನ್ನಿಗೆ ನಿಲ್ಲುವವರ ಸಂಖ್ಯೆಯನ್ನು ಲೆಕ್ಕ ಹಾಕುವುದು ಆ ಪಕ್ಷದ ವರಿಷ್ಠರ ಉದ್ದೇಶವಿದ್ದಂತಿದೆ.

ಈಗ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪಚುನಾವಣೆಗಳು ಹಾಗೂ ಬಿಹಾರ ಚುನಾವಣೆ ಫಲಿತಾಂಶವು ರಾಜ್ಯದಲ್ಲಿನ ನಾಯಕತ್ವದ ಬದಲಾವಣೆಗೆ ಮುನ್ನುಡಿ ಬರೆಯಲಿರುವುದಂತೂ ದಿಟ. ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋತರೆ ಅದನ್ನೇ ನಾಯಕತ್ವ ಬದಲಾವಣೆಗೆ ತಕ್ಷಣದ ಕಾರಣವಾಗಿ ಮುಂದಿಡುವ ಸಾಧ್ಯತೆ ಇಲ್ಲದಿಲ್ಲ. ಬಿಹಾರದಲ್ಲಿ ವಿರೋಧ ಪಕ್ಷವೆಂಬುದು ತೀರಾ ದುರ್ಬಲವಾಗಿದ್ದು, ಜತೆಗಿರುವ ನಿತೀಶ್‌ ಕುಮಾರ್‌ ಅವರೇ ಒಂದರ್ಥದಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿ. ಬಿಹಾರದಲ್ಲಿ ಬಂಡಾಯವೆದ್ದಿರುವ ರಾಮ್‌ವಿಲಾಸ್ ಪಾಸ್ವಾನ್ ಮಗ ಚಿರಾಗ್ ಪಾಸ್ವಾನ್, ಎನ್‌ಡಿಎ ಬಿಟ್ಟು ಸ್ವತಂತ್ರವಾಗಿ ಕಣಕ್ಕೆ ಇಳಿಯುವುದಾಗಿ ಪ್ರಕಟಿಸಿದ್ದಾರೆ. ನಿತೀಶ್‌ರ ಜೆಡಿಯು ಅಭ್ಯರ್ಥಿಗಳ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ, ಬಿಜೆಪಿ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಇರುವುದಿಲ್ಲ ಎಂದು ಚಿರಾಗ್‌ ಘೋಷಿಸಿದ್ದಾರೆ. ನಿತೀಶ್‌ರನ್ನು ಹಿಮ್ಮೆಟ್ಟಿಸುವುದು ಅಲ್ಲಿ ಬಿಜೆಪಿಯ ತಂತ್ರವಿದ್ದಂತೆ ತೋರುತ್ತಿದೆ. ಹೀಗೆಲ್ಲ ಮಾಡಿ ಬಿಜೆಪಿ ಅಲ್ಲಿ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದರೆ ಆಗ ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆಗೆ ಆ ಪಕ್ಷದ ವರಿಷ್ಠರು ಕೈಹಾಕುವ ಸಾಧ್ಯತೆಯೂ ಇದೆ.

ಬಿಹಾರ ಬಿಜೆಪಿಗೆ ‘ಹಾರ’ವಾದರೆ ಯಡಿಯೂರಪ್ಪ ಅಧಿಕಾರಕ್ಕೆ ಪ್ರಹಾರ ಬೀಳುವುದು ಖಚಿತ. ಅದಾಗದಿದ್ದರೂ ಕರ್ನಾಟಕದ ಬಿಜೆಪಿಯೊಳಗೆ ಹುರಿಗೊಳ್ಳುತ್ತಿರುವ ಯಡಿಯೂರಪ್ಪ ಹಾಗೂ ಅವರ ಕುಟುಂಬದ ‘ಕೈವಾಡ’ದ ವಿರುದ್ಧದ ಅಸಹನೆಯೂ ನಾಯಕತ್ವ ಬದಲಾವಣೆಗೆ ದಾರಿ ಮಾಡಿಕೊಡಬಹುದು ಎಂಬುದು ಬಿಜೆಪಿಯಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ಸಂಗತಿ.

2008ರ‌ಲ್ಲಿ ಅಧಿಕಾರ ದಕ್ಕಿಸಿಕೊಂಡಿದ್ದ ಯಡಿಯೂರಪ್ಪ, ಪುತ್ರ ವ್ಯಾಮೋಹಕ್ಕೆ ಬಲಿ ಬಿದ್ದು ಅಧಿಕಾರ ಕಳೆದುಕೊಂಡಿದ್ದರು. ಹಿಂದೆ ಮಾಡಿದ ತಪ್ಪನ್ನು ಈಗ ಮಾಡುವುದಿಲ್ಲ, ಉತ್ತಮ ಆಡಳಿತ ಕೊಡಲಿದ್ದಾರೆ ಎಂಬ ನಿರೀಕ್ಷೆ ಬಿಜೆಪಿಯ ಅವರ ಅಭಿಮಾನಿಗಳಲ್ಲಿ ಇತ್ತು. ಈಗ ಉತ್ತಮ ಆಡಳಿತವೆಂಬುದು ಲೊಳಲೊಟ್ಟೆ
ಯಾಗಿದ್ದು, ಅಧಿಕಾರವೆಂಬುದು ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ ಎಂಬ ವ್ಯಂಗ್ಯದ ಮಾತುಗಳು ಬಿಜೆಪಿ ನಿಷ್ಠರಿಂದಲೇ ಹರಿದುಬರುತ್ತಿವೆ.

‘ಆನೆಯನೇರಿಕೊಂಡು ಹೋದಿರೇ ನೀವು/ ಕುದುರೆಯನೇರಿಕೊಂಡು ಹೋದಿರೇ ನೀವು/ ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೇ ಅಣ್ಣಾ !/ ಸತ್ಯದ ನಿಲವನರಿಯದೆ ಹೋದಿರಲ್ಲಾ, ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ! ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ! ನಮ್ಮ ಕೂಡಲಸಂಗಮದೇವನರಿಯದೆ ನರಕಕ್ಕೆ ಭಾಜನವಾದಿರಲ್ಲಾ/’ ಎಂಬ ಬಸವಣ್ಣನವರ ವಚನ, ಅಣ್ಣನ ಅನುಯಾಯಿ ಎಂದು ಹೇಳುವ ಯಡಿಯೂರಪ್ಪನವರಿಗೆ ಈಗಲಾದರೂ ದಾರಿ ತೋರಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು