ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ ತುಂಬುವ ಮೊದಲೇ ಅಧಿಕಾರಕ್ಕಾಗಿನ ತಿಕ್ಕಾಟ ತೀವ್ರಗೊಳ್ಳುತ್ತಿದೆ. ಮುಖ್ಯಮಂತ್ರಿ ಜತೆಗಿರುವ ಬಣ, ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಬಹಿರಂಗವಾಗಿಯೇ ಕತ್ತಿ ಮಸೆತ ಆರಂಭಿಸಿದೆ. ಸಮರ, ಸಮಾಧಾನದ ಇಬ್ಬಗೆ ನಡೆ ಅನುಸರಿಸುತ್ತಿರುವ ಶಿವಕುಮಾರ್, ಅನುಕೂಲಕರವಾದ ಕಾಲಕ್ಕೆ ಹೊಂಚು ಹಾಕಿ ಕುಳಿತವರಂತೆ ವರ್ತಿಸುತ್ತಿದ್ದಾರೆ. ಆಂತರಿಕವಾಗಿ ನಡೆಯಬೇಕಾದ ಚರ್ಚೆಯು ಹಾದಿಬದಿಯ ವಿಷಯವಾಗಿದೆ. ಪಕ್ಷದ ವರಿಷ್ಠರು ಹಲವು
ಬಾರಿ ಎಚ್ಚರಿಕೆ ಕೊಟ್ಟರೂ ಯಾರೊಬ್ಬರೂ ಅದನ್ನು ಲೆಕ್ಕಿಸಿಲ್ಲ. ಎದುರಾಳಿಯನ್ನು ಬಗ್ಗಿಸಲು ಸಿದ್ದರಾಮಯ್ಯ
ನವರ ಬಣ, ಇದನ್ನು ಬೀದಿಗೆ ತಂದು ನಿಲ್ಲಿಸಿದೆ ಎಂಬುದೇನೂ ರಹಸ್ಯವಲ್ಲ.

ಕರ್ನಾಟಕದಲ್ಲಿ ದೀರ್ಘಾವಧಿ ಮುಖ್ಯಮಂತ್ರಿಯಾಗಿದ್ದವರು ದೇವರಾಜ ಅರಸು. ಅವರ ದಾಖಲೆಯನ್ನು ಮುರಿದು ವಿರಮಿಸುವ ಇರಾದೆಯಲ್ಲಿದ್ದ ಸಿದ್ದರಾಮಯ್ಯ, ಸರಿಸುಮಾರು ಎರಡೂವರೆ ವರ್ಷದ ಬಳಿಕ ಅಧಿಕಾರ ಬಿಟ್ಟುಕೊಡುವ ಮನಸ್ಸಿನಲ್ಲಿ ಇದ್ದರು ಎಂಬ ಮಾತು ಕಾಂಗ್ರೆಸ್ ಪಡಸಾಲೆಯಲ್ಲಿ ಹರಿದಾಡಿತ್ತು. ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಯಾವಾಗ ಅನಿರೀಕ್ಷಿತವಾಗಿ ಗೆಲುವು ಸಿದ್ಧಿಸಿತೋ ಆಗ, ಸಿದ್ದರಾಮಯ್ಯನವರ ಲೆಕ್ಕಾಚಾರಗಳು ಬದಲಾದವು. ಹಿಂದುಳಿದವರು, ಪರಿಶಿಷ್ಟರು ಹಾಗೂ ಮುಸ್ಲಿಮರ ಮತ ಇಲ್ಲದೇ ಕಾಂಗ್ರೆಸ್ಗೆ ಗೆಲುವು ಅಸಾಧ್ಯ ಎಂಬ ತರ್ಕವನ್ನು ಚುನಾವಣೆ ಫಲಿತಾಂಶ ಹೇಳಿತು. ಇದು, ಕಾಂಗ್ರೆಸ್ನ ಒಳ ರಾಜಕೀಯವನ್ನೇ ಬದಲಿಸಿತು.

ಇದೇ ವಿಧಾನಸಭೆ ಅವಧಿಯಲ್ಲಿ ಮುಖ್ಯಮಂತ್ರಿಯಾಗುವ ಉಮೇದಿನಲ್ಲಿದ್ದ ಶಿವಕುಮಾರ್, ಈ ಬೆಳವಣಿಗೆಯಿಂದ ಸಹಜವಾಗಿಯೇ ಕಂಗೆಟ್ಟರು. ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂದು ಬಿಜೆಪಿ ನಾಯಕರು ಪಾದಯಾತ್ರೆ ಹೊರಟಾಗ, ಶಿವಕುಮಾರ್ ಪ್ರತಿ ಅಭಿಯಾನ ಹಮ್ಮಿಕೊಂಡು ಸಿದ್ದರಾಮಯ್ಯ ಪರ ನಿಂತರು. ಉಪಚುನಾವಣೆ ಫಲಿತಾಂಶದ ಬಳಿಕ, ಸಿದ್ದರಾಮಯ್ಯ ಮೇಲುಗೈ ಸಾಧಿಸುತ್ತಿದ್ದಂತೆ ಶಿವಕುಮಾರ್ ವಿಚಲಿತರಾದರು. ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ‘ನಾವಿಬ್ಬರೂ ಒಂದು ಸಹಮತಕ್ಕೆ ಬಂದಿದ್ದೇವೆ’ ಎಂಬ ಶಿವಕುಮಾರ್ ಹೇಳಿಕೆ, ಕಾಂಗ್ರೆಸ್ ನಡುಮನೆಯಲ್ಲಿ ಕಂಪನ ಸೃಷ್ಟಿಸಿತು. ಅದರ ಬೆನ್ನಲ್ಲೇ, ಹಾಸನದಲ್ಲಿ ನಡೆದ ಸಮಾವೇಶದಲ್ಲಿ ‘ಕೊನೆಯ ಉಸಿರು ಇರುವವರೆಗೂ ಸಿದ್ದರಾಮಯ್ಯ ಬೆನ್ನಿಗೆ ಬಂಡೆಯಂತೆ ನಿಲ್ಲುವೆ’ ಎಂದು ಉದ್ಗರಿಸಿದರು. ವಿಧಾನಮಂಡಲದ ಬೆಳಗಾವಿ ಅಧಿವೇಶನದಲ್ಲಿ ‘ಅಧಿಕಾರ ಸುಮ್ಮನೆ ಸಿಗುವುದಿಲ್ಲ, ಒದ್ದು ಕಿತ್ತುಕೊಳ್ಳಬೇಕು’ ಎಂದು ಹೇಳಿದ್ದು ಮತ್ತೆ ಸದ್ದು ಮಾಡಿತು. ಈ ಮಾತು ಸಿದ್ದರಾಮಯ್ಯ ಮತ್ತು ಅವರ ಜತೆಗಾರರಿಗೆ ವರವಾಯಿತು.

ಶಿವಕುಮಾರ್ ಅವರ ಆಕ್ರಮಣಕಾರಿ ನಡೆ ಗೊತ್ತಿದ್ದ ಕಾಂಗ್ರೆಸ್ನ ಇತರ ನಾಯಕರು ಆಗಾಗ್ಗೆ ಔತಣ
ಕೂಟದ ನೆಪದಲ್ಲಿ ಒಂದೆಡೆ ಸೇರುತ್ತಾ, ತಮ್ಮದೇ ಆದ ರಾಜಕೀಯ ಹಾದಿಯನ್ನು ರೂಪಿಸಿಕೊಳ್ಳ ತೊಡಗಿ
ದರು. ಸಚಿವರಾದ ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಕೆ.ಎನ್. ರಾಜಣ್ಣ
ಮುಂಚೂಣಿಯಲ್ಲಿ ನಿಂತು, ಪ್ರಬಲ ಜಾತಿಯ ರಾಜಕೀಯದ ವಿರುದ್ಧ ಹಿಂದುಳಿದ–ದಲಿತರ ಪರ್ಯಾಯ
ವೊಂದನ್ನು ಹೆಣೆಯತೊಡಗಿದರು. ಒಬ್ಬರಿಗೆ ಒಂದೇ ಹುದ್ದೆ ಎಂಬ ಕಾಂಗ್ರೆಸ್ನ ‘ಉದಯಪುರ ನಿರ್ಣಯ’ವನ್ನು ಜಾರಿ ಮಾಡಬೇಕೆಂಬ ಹಕ್ಕೊತ್ತಾಯವನ್ನು ವರಿಷ್ಠರೆದುರು ಮಂಡಿಸಲು ತಯಾರಿ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ಶಿವಕುಮಾರ್ ಹೊಂದಿರುವ ನಾಲ್ಕೈದು ಖಾತೆಗಳಲ್ಲಿ ಕೆಲವನ್ನು ಕಿತ್ತುಕೊಂಡು, ಒಂದೇ ಸ್ಥಾನಕ್ಕೆ ಸೀಮಿತಗೊಳಿಸುವುದು ಈ ಗುಂಪಿನ ಶತಪ್ರಯತ್ನದ ಗುರಿ. ತಮ್ಮ ವಿರುದ್ಧ ಹಿರಿಯ ಮುಖಂಡರೆಲ್ಲ ಒಗ್ಗಟ್ಟಾಗುತ್ತಿದ್ದಂತೆ, ಶಿವಕುಮಾರ್ ಜಂಘಾಬಲವೇ ಉಡುಗಿ
ಹೋಯಿತು. ಇದನ್ನೆಲ್ಲ ಗಮನಿಸಿದ ಶಿವಕುಮಾರ್, ‘ನನಗೆ ಯಾವ ಶಾಸಕ, ಕಾರ್ಯಕರ್ತರ ಬೆಂಬಲವೂ ಬೇಡ’ ಎಂಬ ವಿಷಾದ ಯೋಗ ತಲುಪಿದಂತೆ ತೋರುತ್ತಿದ್ದಾರೆ.

ಇನ್ನು ಅಧಿಕಾರ ಹಂಚಿಕೆಯ ವಿಷಯಕ್ಕೆ ಬಂದರೆ, ‘ಆ ರೀತಿ ಏನೂ ಆಗಿಲ್ಲ’ ಎಂದು ಸಿದ್ದರಾಮಯ್ಯನವರೇ ಹೇಳಿದ್ದುಂಟು. ‘ಯಾವುದೇ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ; ಅದನ್ನು ನಾನು ಮತ್ತು ಶಿವಕುಮಾರ್ ಇಬ್ಬರೂ ಒಪ್ಪಬೇಕು’ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರೇ ಹೇಳಿದ್ದಾರೆ. ಇದರ ಬಗ್ಗೆ ಖಚಿತವಾಗಿ ಹೇಳಬಲ್ಲ ನಾಲ್ಕೈದು ವರಿಷ್ಠ ನಾಯಕರು ಮಗುಮ್ಮಾಗಿದ್ದಾರೆ. ‘ಸಿದ್ದರಾಮಯ್ಯನವರೇ ಮನಸ್ಸು ಮಾಡಿ ಸ್ಥಾನ ಬಿಡಬೇಕು. ಅವರನ್ನು ಒಲಿಸಿಕೊಂಡು ಸ್ಥಾನ ಪಡೆಯುವುದು ಬಿಟ್ಟು ಕಿತ್ತುಕೊಳ್ಳಲು ಹೋದರೆ ಅವರು ಸೆಟೆದು ಹಟಕ್ಕೆ ಬೀಳುತ್ತಾರೆ. ಆಗ, ಯಾರೊಬ್ಬರೂ ಕಿತ್ತು ಕೊಡಿಸಲು ಸಾಧ್ಯವಿಲ್ಲ. ಅಲ್ಲಿಯವರೆಗೆ ಕಾಯಿರಿ’ ಎಂದು ವರಿಷ್ಠರು ಶಿವಕುಮಾರ್ ಅವರಿಗೆ ಸೂಚಿಸಿದ್ದಾರೆ ಎಂಬ ಮಾತುಗಳೂ ದೆಹಲಿ ವಲಯದಲ್ಲಿವೆ.

ಈ ಎಲ್ಲದರ ಮಧ್ಯೆಯೇ, ಪರಿಶಿಷ್ಟ ಜಾತಿ ಮತ್ತು ಪಂಗಡದ ನಾಯಕರು ಒಟ್ಟಾಗಿದ್ದಾರೆ. ಹಿಂದುಳಿದವರಿಗೆ ಸಿಕ್ಕಿರುವ ಮುಖ್ಯಮಂತ್ರಿ ಹುದ್ದೆಯನ್ನು ಯಾವುದೇ ಕಾರಣಕ್ಕೂ ಮತ್ತೆ ಪ್ರಬಲ ಜಾತಿಗೆ ಬಿಟ್ಟುಕೊಡಬಾರದು.
ಅದನ್ನು ತಾವೇ ಉಳಿಸಿಕೊಳ್ಳಬೇಕು; ಒಂದು ವೇಳೆ ವರ್ಗಾಯಿಸುವುದೇ ಆದರೆ ಈವರೆಗೂ ಆ ಹುದ್ದೆಯನ್ನೇ ಅಲಂಕರಿಸದ ದಲಿತರಿಗೆ ವರ್ಗಾಯಿಸಬೇಕು ಎಂಬ ಆಲೋಚನೆ ಈ ಗುಂಪಿನದು. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಇದು ಒಪ್ಪಿತ ನಿಲುವೂ ಹೌದು.

ಮುಖ್ಯಮಂತ್ರಿ ಸ್ಥಾನವನ್ನು ಹೆಚ್ಚು ಅವಧಿ ಅನುಭವಿಸಿದವರು ಲಿಂಗಾಯತರು, ಒಕ್ಕಲಿಗರು ಹಾಗೂ ಬ್ರಾಹ್ಮಣರು. ಹಿಂದುಳಿದವರ ಪೈಕಿ ಡಿ. ದೇವರಾಜ ಅರಸು, ಎಸ್. ಬಂಗಾರಪ್ಪ, ಎಂ. ವೀರಪ್ಪ ಮೊಯಿಲಿ, ಎನ್. ಧರ್ಮಸಿಂಗ್, ಸಿದ್ದರಾಮಯ್ಯ ಈ ಸ್ಥಾನಕ್ಕೇರಿದ್ದಾರೆ. ಅರಸು ಅವರು 7 ವರ್ಷ 7 ತಿಂಗಳು ಮುಖ್ಯಮಂತ್ರಿ ಯಾಗಿದ್ದರು. ಈ ಮೇ ಕಳೆದರೆ ಸಿದ್ದರಾಮಯ್ಯ ಏಳು ವರ್ಷ ಪೂರ್ಣ ಗೊಳಿಸಲಿದ್ದಾರೆ. ಉಳಿದ ಮೂವರು ಎರಡು ವರ್ಷದ ಆಸುಪಾಸು ಅಧಿಕಾರ ನಡೆಸಿದ್ದರು. 76 ವರ್ಷಗಳಲ್ಲಿ ಗರಿಷ್ಠ 16 ವರ್ಷಗಳಷ್ಟೇ ಹಿಂದುಳಿದವರು ಸರ್ಕಾರವನ್ನು ಮುನ್ನಡೆಸಿದ್ದಾರೆ. ದಲಿತ ಸಮುದಾಯಕ್ಕೆ ಅಧಿಕಾರ ಸಿಕ್ಕಿಯೇ ಇಲ್ಲ. ಈ ಲೆಕ್ಕಾಚಾರದಲ್ಲಿ, ಸಿದ್ದರಾಮಯ್ಯ ಮತ್ತವರ ಗುಂಪಿನ ನಡೆ ಸಮರ್ಥನೀಯ.

ಈ ಎಲ್ಲದರ ಮಧ್ಯೆಯೇ, ‘ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕು’ ಎಂಬ ಶಿವಕುಮಾರ್ ಅವರ ಮಾತನ್ನು ಒಪ್ಪಲಾಗದು. ಅವರೇನೂ ಈ ಮಾತನ್ನು ಖಾಸಗಿಯಾಗಿ ಹೇಳಿದ್ದಲ್ಲ. ವಿಧಾನಸಭೆಯೊಳಗೆ ಏರಿದ ಧ್ವನಿಯಲ್ಲೇ ಅದನ್ನು ಪ್ರತಿಪಾದಿಸಿದ್ದಾರೆ. ಆದರೆ, ಇದೇನು ಅಳಿಯ ರಾಮರಾಯ, ಔರಂಗಜೇಬನ ಕಾಲವಲ್ಲ. ಇದು ಪ್ರಜಾಪ್ರಭುತ್ವ. ಎಷ್ಟು ಶಾಸಕರು ತಮ್ಮ ಬೆನ್ನಿಗಿದ್ದಾರೆ ಎಂಬ ಆಧಾರದ ಮೇಲೆ ನಾಯಕತ್ವ ನಿರ್ಧಾರವಾಗುತ್ತದೆ. ಹಾಗಾಗಿಯೇ, ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲೇ ನಾಯಕನ ಆಯ್ಕೆಯಾಗಲಿ ಎಂಬ ಅಸ್ತ್ರ ಹೂಡಿದ್ದಾರೆ. ಏಕೆಂದರೆ, ಕಾಂಗ್ರೆಸ್ನಲ್ಲಿ ಹಿಂದಿದ್ದ ಲಕೋಟೆ
ಪದ್ಧತಿ ಈಗ ನಡೆಯುವುದಿಲ್ಲ ಎಂಬುದು ಸಿದ್ದರಾಮಯ್ಯ ಅವರಿಗೆ ಮಾತ್ರವಲ್ಲ ಆ ಪಕ್ಷದ ವರಿಷ್ಠರಿಗೂ ಗೊತ್ತಿದೆ.

ನಾಯಕರ ಮಧ್ಯದ ಬಡಿದಾಟ ಸರ್ಕಾರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಯಾವಾಗ ಅಸ್ಥಿರತೆಯ ಮಾತುಗಳು ಹೊರಬರುತ್ತವೋ ಆಗ ಅಧಿಕಾರಿಗಳು ನಿರ್ಲಕ್ಷ್ಯ ತಾಳುತ್ತಾರೆ. ಜನರ ಕೆಲಸಗಳು ಆಗುವುದಿಲ್ಲ. ಅಭಿವೃದ್ಧಿಯೂ ಹಳಿ ತಪ್ಪುತ್ತದೆ. ಈಗ ಆಗಿರುವುದೂ ಅದೇ. ಶೇಕಡ 40ರಷ್ಟು ಕಮಿಷನ್ ಸರ್ಕಾರ ಎಂದು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಆಂದೋಲನ ನಡೆಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪರಿಸ್ಥಿತಿಯೇನೂ ಸುಧಾರಣೆಯಾಗಿಲ್ಲ. ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಳವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸೇರಿದಂತೆ ಹಲವು ಹಗರಣಗಳು ಸರ್ಕಾರಕ್ಕೆ ಮೆತ್ತಿಕೊಂಡಿವೆ. ವೇದಿಕೆ ಮೇಲೆ ಜಿಲ್ಲಾಧಿಕಾರಿಗೆ ಏರು ಧ್ವನಿಯಿಂದ ಗದರಿದರೆ ಏನೂ ಪ್ರಯೋಜನವಿಲ್ಲ. ಆಡಳಿತದಲ್ಲಿ ಬಿಗಿ ಇದ್ದರೆ ಅಧಿಕಾರಿಗಳು ಮೈಮರೆಯದೇ ಕೆಲಸ ಮಾಡುತ್ತಾರೆ.

ಅಧಿಕಾರಾರೂಢರು ಜಗಳಕ್ಕೆ ಬಿದ್ದರೆ ಜನರ ರೋದನೆ ಕೇಳುವವರಾರು? ಶ್ರೀಸಾಮಾನ್ಯರ ಬವಣೆ ನೀಗಿಸಲು ಗ್ಯಾರಂಟಿ ಯೋಜನೆಗಳೇನೋ ನೆರವಾಗಿವೆ. ಬೆಲೆ ಏರಿಕೆಯ ತಾಪ ಜನರನ್ನು ಸುಡುತ್ತಿದೆ. ಬೊಕ್ಕಸ ಭರ್ತಿಗೆ ತೆರಿಗೆ ಏರಿಕೆಯೇ ದಾರಿಯಲ್ಲ. ಸೋರಿಕೆ ತಡೆಗಟ್ಟಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಅರ್ಹರಿಗೆ ಗ್ಯಾರಂಟಿಗಳ ಫಲ ತಲುಪಿಸಬೇಕು. ಜನಪರ ಆಡಳಿತವೆಂದರೆ, ದುರ್ಬಲರ ಹಿತ ಕಾಪಾಡುತ್ತಲೇ ಸಂಪನ್ಮೂಲ ಕ್ರೋಡೀಕರಣಕ್ಕೆ ಪರ್ಯಾಯ ದಾರಿ ಹುಡುಕುವುದು. ಇಲ್ಲದಿದ್ದರೆ, ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂಬ ಪುರಂದರದಾಸರ ನುಡಿ ಸಿದ್ದರಾಮಯ್ಯನವರ ಕಾಲಕ್ಕೂ ಅನ್ವಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.