ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ | ಪ್ರತಿಮಾ ನಾಟಕ: ಓಲೈಕೆಯೇ ಕಾಯಕ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ; ಅಣ್ಣನ ಮಾತು ಅರ್ಥವಾದೀತೆಂದು?
Last Updated 15 ನವೆಂಬರ್ 2022, 20:15 IST
ಅಕ್ಷರ ಗಾತ್ರ

‘ದೇಶ ಸುತ್ತುವ ಹೊತ್ತಿನಲ್ಲಿ ಕಾಣಸಿಗುವ ಪ್ರತಿಮಾರೂಪದ ರಾಜರ ಕೈಯಲ್ಲಿ ಕತ್ತಿ ರಾರಾಜಿಸುವುದನ್ನು ನೋಡುತ್ತೇವೆ. ಕರ್ನಾಟಕ ರಾಜ್ಯದಲ್ಲಿರುವ ಪ್ರತಿಮೆಗಳ ಪೈಕಿ ನನ್ನ ಮುತ್ತಾತ ಕಿಟೆಲ್ ಅವರ ಪ್ರತಿಮೆಗಳ ಕೈಯಲ್ಲಿ ಮಾತ್ರ ಪುಸ್ತಕ ನೋಡಿದೆ. ಅವರು ಜ್ಞಾನದ ಮೂಲಕ ಎಲ್ಲರನ್ನೂ ಗೆಲ್ಲಲು ಪ್ರಯತ್ನಿಸಿದರು- ಬಹುಶಃ ಅವರು ಬಳಸಿದ ಒಂದೇ ಆಯುಧ ಎಂದರೆ ಅದು ಲೇಖನಿ; ಅದು ಒಂದು ರೆಕ್ಕೆಯ ಪುಕ್ಕವಾಗಿದ್ದಿರಬಹುದು...’

1894ರ ಸುಮಾರಿಗೆ 70 ಸಾವಿರ ಕನ್ನಡ ಪದಗಳು, ಅವುಗಳ ಬಳಕೆಯ ವಿಧಾನದ ವಿವರ ಇರುವ ಕನ್ನಡ– ಇಂಗ್ಲಿಷ್ ನಿಘಂಟನ್ನು ಕನ್ನಡಕ್ಕೆ ಕೊಟ್ಟ ರೆವರೆಂಡ್ ಫರ್ಡಿನಾಂಡ್ ಕಿಟೆಲ್‌ ಅವರ ಮರಿ ಮೊಮ್ಮಗ ಯುವೆಸ್ ಪ್ಯಾಟ್ರಿಕ್ ಮೇಯರ್ ತಮ್ಮ ಮುತ್ತಜ್ಜನನ್ನು ನೆನಪಿಸಿಕೊಂಡಿದ್ದು ಹೀಗೆ. ಜರ್ಮನಿಯವರಾದ ಕಿಟೆಲ್ ಧರ್ಮಪ್ರಚಾರಕರಾಗಿ ಕನ್ನಡ ನಾಡಿಗೆ ಕಾಲಿಟ್ಟರೂ ಮಾಡಿದ್ದು ಮಾತ್ರ ಕನ್ನಡದ ಕೆಲಸ. ಸಂಚಯ ಹಾಗೂ ಸಂಚಿ ಫೌಂಡೇಷನ್ ಸೇರಿಕೊಂಡು ‘ಕರ್ನಾಟ ಎಫ್–ಕಿಟೆಲ್’ ಎಂಬ ಹೆಸರಿನಡಿ ಕನ್ನಡದ ಹಳೆಯ ಫಾಂಟ್‌ವೊಂದನ್ನು ಮರುವಿನ್ಯಾಸಗೊಳಿಸಿವೆ. ಅದನ್ನು ಬಿಡುಗಡೆ ಮಾಡಲೋಸುಗ ಯುವೆಸ್‌ ಬೆಂಗಳೂರಿಗೆ ಬಂದಿದ್ದರು.

ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಂಡ ಎರಡೇ ದಿನಗಳಲ್ಲಿ ಈ ಕಾರ್ಯಕ್ರಮ ನಡೆಯಿತು. ಧರ್ಮಪ್ರಚಾರಕ್ಕೆ ಬಂದಿದ್ದ ಕಿಟೆಲ್ ಹೀಗೆ ಕನ್ನಡದ ಮನಸ್ಸುಗಳನ್ನು ಕಟ್ಟಿ, ಕನ್ನಡದ ಸೊಬಗನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದರು.

‘ಸಂವಿಧಾನದ ಆಶಯಕ್ಕೆ ಅನುಗುಣವಾಗಿ, ಜಾತ್ಯತೀತ– ಧರ್ಮಾತೀತವಾಗಿ ಅಧಿಕಾರ ಚಲಾಯಿಸುತ್ತೇನೆ’ ಎಂದು ಪ್ರತಿಜ್ಞೆ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿಯವರು ಈ ಔದಾರ್ಯ ತೋರಲಿಲ್ಲ. ‘ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಾರೆ’ ಎಂದು ವಿರೋಧ ಪಕ್ಷಗಳ ನಾಯಕರನ್ನು ಟೀಕಿಸುವ ಮೋದಿಯವರು, ವಿಶಾಲ ದೂರದೃಷ್ಟಿ ಹೊಂದಿದ್ದ ಕೆಂಪೇಗೌಡರನ್ನು ಒಂದು ಜಾತಿಗೆ ಸೀಮಿತವಾಗಿಸುವ ಯತ್ನ ನಡೆಸಿದ್ದು ಅವರ ಘನತೆಗೆ ತಕ್ಕುದಲ್ಲ.

ಚುನಾವಣೆ ಹೊತ್ತಿನೊಳಗೆ ಪ್ರತಿಮೆ ಮುಂದಿಟ್ಟುಕೊಂಡು ಇಂತಹ ನಾಟಕಗಳು ಮೊದಲಾಗುವುದು ಹೊಸತೇನಲ್ಲ. ಬೆಂಗಳೂರನ್ನು ಕಟ್ಟಿದ ಕೀರ್ತಿ ಹೊತ್ತ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಕೂಡ ಮತ ಸೆಳೆಯುವ ಒಂದು ನಾಟಕದ ಭಾಗವಾಗಿದ್ದು ವಿಪರ್ಯಾಸ. ಹಳೆ ಮೈಸೂರು ವ್ಯಾಪ್ತಿಯ ಒಕ್ಕಲಿಗ ಪ್ರಾಬಲ್ಯದ ಮತಕ್ಷೇತ್ರಗಳು ಇವತ್ತಿಗೂ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಕೋಟೆಯೇ ಆಗಿವೆ. ಹಾಸನ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಬಿಜೆಪಿಗೆ ತಳವೇ ಇಲ್ಲ. ತುಮಕೂರಿನಲ್ಲಿ ಆಯಾ ಕಾಲದ ವಿದ್ಯಮಾನಗಳಿಂದಾಗಿ ಬಿಜೆಪಿ ಗೆದ್ದಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಈ ಪ್ರದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಮಹದಾಸೆಯಿಂದ ರೂಪುಗೊಂಡಿದ್ದೇ ‘ಪ್ರತಿಮಾ ನಾಟಕ’. ಕೆಂಪೇಗೌಡರ ಪ್ರತಿಮೆ ಅನಾವರಣದ ಭಾಗವಾಗಿ ಎಲ್ಲ ಜಿಲ್ಲೆಗಳ ಐತಿಹಾಸಿಕ ಕ್ಷೇತ್ರಗಳಿಂದ ಮೃತ್ತಿಕೆ (ಮಣ್ಣು) ಸಂಗ್ರಹಿಸುವ ಯಾತ್ರೆಯನ್ನೂ ಬಿಜೆಪಿ ನೇತೃತ್ವದ ಸರ್ಕಾರವು ಜನರ ದುಡ್ಡಿನಲ್ಲಿ ನಡೆಸಿತು. ಮೃತ್ತಿಕೆ ಹೆಸರಿನಲ್ಲಿ ಮತಬ್ಯಾಂಕ್ ಭದ್ರಪಡಿಸುವ ಪ್ರಯತ್ನವನ್ನೂ ಮಾಡಿತು. ಸರ್ಕಾರ ನಡೆಸುವ ಪಕ್ಷವೊಂದು ಅಧಿಕಾರವನ್ನು ತನ್ನ ಪಕ್ಷದ ಹಿತಕ್ಕೆ, ಸಂಘಟನೆಗೆ ಬಳಸಿಕೊಳ್ಳುವುದು ಇದೇನೂ ಮೊದಲಲ್ಲ.

ಕೆಂಪೇಗೌಡರ ಪ್ರತಿಮೆ ಅನಾವರಣದ ಸರ್ಕಾರಿ ಕಾರ್ಯಕ್ರಮವನ್ನು ಪಕ್ಷದ ವೇದಿಕೆಯಾಗಿ ಬಳಸಿ, ನಾಡು ಕಟ್ಟಿದ್ದೇ ತಾವು ಎಂದು ಬಿಂಬಿಸಿಕೊಳ್ಳಲು ಹೊರಟಿದ್ದನ್ನು ನೋಡಿದರೆ ಇದರಲ್ಲಿ ಬಿಜೆಪಿಯ ರಾಜಕಾರಣದ ನೆರಳು ಕಾಣುತ್ತದೆ. ಬೆಂಗಳೂರು ನಗರದ ನೆಲೆಗಟ್ಟು ಹಾಕಿಕೊಟ್ಟವರೇ ಕೆಂಪೇಗೌಡರು. ಬೆಂಗಳೂರು ವಿಶ್ವಖ್ಯಾತಿ ಪಡೆಯಲು ಇಲ್ಲಿಯ ತಂಪನೆಯ ಹವಾಮಾನದ ಜತೆಗೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಾದ ಬೃಹತ್‌ ನೆಗೆತವೂ ಕಾರಣ. ಮಾಹಿತಿ ತಂತ್ರಜ್ಞಾನಕ್ಕೆ ಮೊದಲು ನೆಲೆ ಒದಗಿಸಿದ್ದು ಎಲೆಕ್ಟ್ರಾನಿಕ್‌ ಸಿಟಿಯ ಕಲ್ಪನೆ. ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಯೋಜನೆಯ ರೂಪದಲ್ಲಿದ್ದ ‘ಐಟಿ ನಗರ’ಕ್ಕೆ ನಿಜವಾದ ಅಸ್ಥಿಭಾರ ಹಾಕಿದವರು ನಂತರ ಮುಖ್ಯಮಂತ್ರಿಯಾದ ಎಚ್.ಡಿ. ದೇವೇಗೌಡರು. ಆ ಬಳಿಕ ಮುಖ್ಯಮಂತ್ರಿಗಳಾದವರೂ ಇದಕ್ಕೆ ಎಲ್ಲ ಸಹಕಾರವನ್ನು ಕೊಟ್ಟರು. ಕೆಂಪೇಗೌಡರ ಪ್ರತಿಮೆ ಇರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಲ್ಪನೆಗೆ ಇಂಬು ದೊರೆತದ್ದು ದೇವೇಗೌಡರು ಪ್ರಧಾನಿ ಆಗಿದ್ದಾಗ. ಎನ್‌ಡಿಎ ಆಳ್ವಿಕೆಯಲ್ಲಿ ಇದಕ್ಕೆ ಒತ್ತಾಸೆಯಾಗಿ ನಿಂತವರು ಕೇಂದ್ರ ಸಚಿವರಾಗಿದ್ದ ಎಚ್.ಎನ್. ಅನಂತಕುಮಾರ್‌. ಜಾಗ ಕೊಟ್ಟು ಅದನ್ನು ಪೋಷಿಸಿದವರು ಹಾಗೂ ಬೆಂಗಳೂರಿನ ಈ ಪ್ರಮಾಣದ ಹೆಗ್ಗಳಿಕೆಗಳಿಗೆ ಕಾರಣರಾದವರು ಎಸ್.ಎಂ. ಕೃಷ್ಣ. ಪ್ರಧಾನಿ ಮೋದಿಯವರು ಪಾಲ್ಗೊಂಡ ಕಾರ್ಯಕ್ರಮಕ್ಕೆ ಸಂಬಂಧಿಸಿದ ಆಹ್ವಾನ ಪತ್ರಿಕೆಯಲ್ಲಿ ರಾಜ್ಯಸಭಾ ಸದಸ್ಯರೂ ಆಗಿರುವ ದೇವೇಗೌಡ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಶಿಷ್ಟಾಚಾರದ ಅನುಸಾರ ಸೇರಿಸಬೇಕಾಗಿತ್ತು. ದೇವೇಗೌಡರು ವೇದಿಕೆಯೇರಿದರೆ ಒಕ್ಕಲಿಗರ ‘ಹಕ್ಕುಸ್ವಾಮ್ಯ’ ಅವರ ಪಹಣಿಗೆ ಸೇರಿಹೋಗುತ್ತದೆ ಎಂಬ ಭಯದಿಂದ ಅವರನ್ನು ನೆಪಮಾತ್ರಕ್ಕೆ ಕರೆದಂತೆ ಮಾಡಿದ್ದು ಒಪ್ಪುವಂತಹದ್ದಲ್ಲ.

ಜನನಾಯಕರು ಸೃಷ್ಟಿಸಿದ ಆದರ್ಶಗಳು, ಹಾಕಿಕೊಟ್ಟ ಮಾದರಿಗಳನ್ನು ನೆನಪಿಸುವ ಕಾರಣಕ್ಕೆ ಪ್ರತಿಮೆ ಸ್ಥಾಪನೆ ಚಾಲ್ತಿಗೆ ಬಂದಿದೆ. ಆ ಕಾಲಕ್ಕೆ ನವನಗರದ ಪರಿಕಲ್ಪನೆ ಹೊಂದಿದ್ದ ಕೆಂಪೇಗೌಡರು ಸುಸಜ್ಜಿತ ನಗರವನ್ನುಕಟ್ಟಿದ್ದಲ್ಲದೇ ಕೆರೆಗಳನ್ನು ನಿರ್ಮಿಸಿದ್ದರು. ಆದರೆ, ಕೆರೆಗಳನ್ನು ಒಡೆದು ನೀರು ಬತ್ತಿಸಿ ಕೆರೆ ಅಂಗಳವನ್ನು ಬಡಾವಣೆಗಳನ್ನಾಗಿ ಮಾಡಲಾಗಿದೆ. ನಗರಕ್ಕೆ ಒಂದು ಸುಸಜ್ಜಿತ ವ್ಯವಸ್ಥೆಯೇ ಇಲ್ಲ. ಸಂಚಾರ ಸಮಸ್ಯೆಯಂತೂ ವಿಶ್ವದ ಯಾವುದೇ ನಗರದ ಎದುರು ತಲೆ ತಗ್ಗಿಸುವಂತಿದೆ. ಕೆಂಪೇಗೌಡರ ಪ್ರತಿಮೆಗೆ ನೀಡಿದ ಆದ್ಯತೆಯನ್ನು, ಅವರು ಸೃಜಿಸಿದ ನಗರದ ಮರುಸೃಷ್ಟಿಗೆ ನೀಡದಿದ್ದರೆ ಪ್ರತಿಮೆಯಿಂದಾಗುವ ಪ್ರಯೋಜನವಾದರೂ ಏನು?

ಒಂದು ಮಳೆಗೆ ಬೆಂಗಳೂರು ಹೊಳೆಯಾಗಿ ತೆಪ್ಪದಲ್ಲಿ ಓಡಾಡುವ ಪರಿಸ್ಥಿತಿ ಇದೆ, ಕಾರು–ಬಸ್‌ಗಳೇ ತೇಲಾಡುತ್ತವೆ. ಬೆಂಗಳೂರಿನ ಗುಂಡಿಗಳಿಂದ ಈ ವರ್ಷದಲ್ಲೇ ಏಳು ಜನರ ಜೀವ ಹೋಗಿದೆ. ದೇಶದ ಗಡಿಯಲ್ಲಿ ಬಂದೂಕಿನ ಗುಂಡಿಗೆ ಹೆದರದೇ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಯೋಧರೊಬ್ಬರು ರಸ್ತೆಗುಂಡಿಗೆ ಬಿದ್ದು ಜೀವ ಕಳೆದುಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. ನಗರ ನಿರ್ಮಾತೃ ಕೆಂಪೇಗೌಡರ ಆದರ್ಶವನ್ನು ಮೃತ್ತಿಕೆ ಹೆಸರಿನಲ್ಲಿ ಮಂಡ್ಯ–ಮೈಸೂರಿಗೆ ಕೊಂಡೊಯ್ದ ಆಳುವ ಬಿಜೆಪಿ ನಾಯಕರು, ಕೆಂಪೇಗೌಡರ ಆದರ್ಶಮಯ ನಗರ ವಿನ್ಯಾಸಕ್ಕೆ ಒತ್ತುಕೊಡಲಿಲ್ಲವೇಕೆ? ಪ್ರತಿಮೆಗಳು ನೋಡಲು ಚೆಂದವಿದ್ದರೆ ಸಾಲದು, ಅವು ನಮ್ಮ ನಡೆ–ನುಡಿ, ಆಡಳಿತಕ್ಕೆ ಮಾರ್ಗದರ್ಶನವಾದರಷ್ಟೇ ನಾಡವರ ಬದುಕು ಹಸನಾದೀತು.

‘ದೇವಾಲಯಗಳು ಒಂದು ಜಾತಿಯ ಕೇಂದ್ರವಾಗಿದ್ದುಕೊಂಡು, ದೇವರನ್ನು ಜನರಿಂದ ದೂರವಾಗಿಸುವ ಕೆಲಸ ಮಾಡುತ್ತಿವೆ. ಅಸ್ಪೃಶ್ಯತೆ, ಮೇಲು–ಕೀಳಿನ ಶ್ರೇಣೀಕೃತ ವ್ಯವಸ್ಥೆಯ ಜಾಗಗಳಾಗಿವೆ’ ಎಂಬ ಕಾರಣಕ್ಕಾಗಿಯೇ ಬಸವಣ್ಣನವರು, ‘ಎನ್ನ ಕಾಲೇ ಕಂಬ, ದೇಹವೇ ದೇಗುಲ’ದ ಕಲ್ಪನೆ ಕೊಟ್ಟರು. ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದೂ ಘೋಷಿಸಿದರು. ಆದರೆ, ಆ ಬಸವಣ್ಣನವರನ್ನೇ ಸ್ಥಾವರವಾಗಿಸಿ, ಅವರ ಜಂಗಮತತ್ವದ ಕಲ್ಪನೆಯನ್ನೇ ಬುಡಮೇಲಾಗಿಸುವ ಕೆಲಸಗಳೂ ನಡೆಯುತ್ತಲೇ ಇವೆ. ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ಬಸವಣ್ಣನವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆಯನ್ನು ಪೀಠಾಧಿಪತಿ ಹಾಕಿಕೊಂಡಿದ್ದರು. ಬಸವಣ್ಣನವರ ತತ್ವಾದರ್ಶ ಪಾಲಿಸುವುದಾಗಿ ಹೇಳುತ್ತಿದ್ದ ಶಿವಮೂರ್ತಿ ಅವರು ಈಗ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಅಳಿದುಹೋದವರ ಆದರ್ಶಗಳನ್ನು ಜನರ ಮಧ್ಯೆ ಬಿತ್ತಿ, ಅವುಗಳನ್ನು ಜೀವಂತವಾಗಿ ಇರಿಸಲು ಪ್ರತಿಮೆಗಳು ಬೇಕು. ಆದರೆ, ಅವು 100–200 ಅಡಿಗಳಷ್ಟು ಎತ್ತರವೇ ಇರಬೇಕೆಂದಿಲ್ಲ. ಮೂರ್ತಿ ಚಿಕ್ಕದಾದ ಮಾತ್ರಕ್ಕೆ, ನಾಡು ಬೆಳಗಿದವರ ಆದರ್ಶವೇನೂ ಕುಗ್ಗಿಹೋಗುವುದಿಲ್ಲ. ಎತ್ತರೆತ್ತರಕ್ಕೆ ಪ್ರತಿಮೆ ಸ್ಥಾಪಿಸುವ ಪೈಪೋಟಿಗೆ ಬಿದ್ದವರಿಗೆ ಇದು ಅರ್ಥವಾಗಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT