ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಗ.ಜಗದೀಶ್ ಬರಹ | ‘ರಾಮ’ರಾಜ್ಯ: ಸುಗ್ರೀವಾಜ್ಞೆಯದೇ ಭಾರ

ಹೆಳವನಂಥ ಆಡಳಿತ ಪಕ್ಷವೂ ಕುರುಡಾಗಿರುವ ವಿರೋಧ ಪಕ್ಷವೂ
Last Updated 18 ಸೆಪ್ಟೆಂಬರ್ 2020, 1:05 IST
ಅಕ್ಷರ ಗಾತ್ರ
ADVERTISEMENT
""

ಮಸೂದೆ ರಚಿಸಿ ಸದನದಲ್ಲಿ ಮಂಡಿಸುವುದು, ಅದರ ಮೇಲಿನ ಚರ್ಚೆಯ ಮಥನದ ಮಧ್ಯೆ ಜನಪರವಾಗಿ ಹರಳುಗಟ್ಟುವ ಸಲಹೆ ಆಧರಿಸಿ ಶಾಸನ ರೂಪಿಸುವುದು ‘ಶಾಸನಸಭೆ’ಗಳ ಹೊಣೆ.

ಸಂಸದೀಯ ಪಟುಗಳು, ಮುತ್ಸದ್ದಿಗಳ ಸಂಖ್ಯೆ ಬೆರಳೆಣಿಕೆಗೆ ಇಳಿದಿದೆ.ಆ ಪ್ರಾತಿನಿಧ್ಯವನ್ನು ಶಿಕ್ಷಣದ ಉದ್ಯಮಪತಿಗಳು, ರಿಯಲ್ ಎಸ್ಟೇಟ್‌ ಕುಳಗಳು, ಗಣಿ ‘ಧಣಿ’ಗಳು ಆವರಿಸಿಕೊಳ್ಳತೊಡಗಿದ ಮೇಲೆ ಶಾಸನಸಭೆಯು ‘ಆಸನ ಸಭೆ’ಯಾಗಿದೆ.

ಕೊರೊನಾ ಲಾಕ್‌ಡೌನ್‌ ಕಾಲದಲ್ಲಿ ಪ್ರತಿಭಟನೆ, ರ‍್ಯಾಲಿಗಳನ್ನು ನಿರ್ಬಂಧಿಸಲಾಗಿತ್ತು. ಈ ದೇಶದ ಬಹುಸಂಖ್ಯಾತರಾದ ರೈತಾಪಿಗಳು– ಕಾರ್ಮಿಕರ ಬದುಕನ್ನು ಸಹನೀಯಗೊಳಿಸಿದ್ದ ಕಾಯ್ದೆಗಳಿಗೆ ಇಂತಹ ಅಘೋಷಿತ ತುರ್ತುಪರಿಸ್ಥಿತಿಯ ಹೊತ್ತಿನಲ್ಲೇ ಕೇಂದ್ರ ಮತ್ತು ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರಗಳುಸುಗ್ರೀವಾಜ್ಞೆ ಮುಖೇನ ತಿದ್ದುಪಡಿ ತಂದವು. ತಿದ್ದುಪಡಿಗಳನ್ನು ಜೋರು ದನಿಯಲ್ಲಿ ಪ್ರಶ್ನಿಸುವ, ನೇರ ಪರಿಣಾಮಕ್ಕೆ ತುತ್ತಾಗುವವರಿಗೆ ತಿದ್ದುಪಡಿಯ ಒಳಿತು–ಕೆಡುಕುಗಳನ್ನು ತಿಳಿಸುವ ಅವಕಾಶವನ್ನೇ ಕಿತ್ತುಕೊಂಡಿದ್ದು ಪ್ರಜಾತಂತ್ರದ ವ್ಯಂಗ್ಯ.

ಕೊರೊನಾ ಸೋಂಕು ವ್ಯಾಪಕವಾಗಿರುವ ಈ ಸಮಯದಲ್ಲಿ ರಾಜ್ಯ ವಿಧಾನಮಂಡಲದ ಅಧಿವೇಶನ ನಿಗದಿಯಾಗಿದೆ. ಹಿಂದಿನ ವರ್ಷಗಳಲ್ಲಿ ಬಜೆಟ್‌ ಅಧಿವೇಶನದಲ್ಲಿ ಜುಲೈವರೆಗೆ ಲೇಖಾನುದಾನಕ್ಕೆ ಒಪ್ಪಿಗೆ ಪಡೆದು, ಜೂನ್‌–ಜುಲೈನಲ್ಲಿ ಅಧಿವೇಶನ ನಡೆಸಿ ಪೂರ್ಣ ಬಜೆಟ್‌ಗೆ ಅನುಮೋದನೆ ಪಡೆಯಲಾಗುತ್ತಿತ್ತು. ಈ ವರ್ಷ ಮಾರ್ಚ್‌ನಲ್ಲೇ ಧನವಿನಿಯೋಗ ಮಸೂದೆಗೆ ಒಪ್ಪಿಗೆ ‍ಪಡೆಯಲಾಗಿದೆ. ಹೀಗಾಗಿ, ಅಧಿವೇಶನದ ಜರೂರು ಏನೂ ಇರಲಿಲ್ಲ.

ಲಾಕ್‌ಡೌನ್‌ ಸನ್ನಿವೇಶ ಬಳಸಿಕೊಂಡ ರಾಜ್ಯ ಸರ್ಕಾರವು 19 ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ. ಅಧಿವೇಶನ ನಡೆಸಲು ಸಾಧ್ಯವಾಗದ, ಅಧಿವೇಶನ ಕರೆಯಲು ನಾಲ್ಕೈದು ತಿಂಗಳು ಅಸಾಧ್ಯ ಎಂಬ ಹೊತ್ತಿನಲ್ಲಿ, ಸಮಾಜದ ಹಿತದೃಷ್ಟಿಯಿಂದ ಅತ್ಯಂತ ತುರ್ತೆಂದು ಸರ್ಕಾರ ಭಾವಿಸಿದಾಗ ಸುಗ್ರೀವಾಜ್ಞೆ ತರುವ ಪದ್ಧತಿ ಇದೆ. ಸುಗ್ರೀವಾಜ್ಞೆಗೆ ಆರು ತಿಂಗಳ ಆಯಸ್ಸಿದ್ದು, ಅಷ್ಟರೊಳಗೆ ಸದನದ ಒಪ್ಪಿಗೆ ಪಡೆಯದಿದ್ದರೆ ಕಾಯ್ದೆಗೆ ತಂದ ತಿದ್ದುಪಡಿ ಅನೂರ್ಜಿತಗೊಳ್ಳುತ್ತದೆ. ಆರು ತಿಂಗಳೊಳಗೆ ಸದನ ನಡೆಸಲು ಆಗದೇ ಇದ್ದರೆ, ರಾಜ್ಯಪಾಲರು (ಕೇಂದ್ರದಲ್ಲಿ ರಾಷ್ಟ್ರಪತಿ) ಮತ್ತೆ ಆರು ತಿಂಗಳಿಗೆ ಸುಗ್ರೀವಾಜ್ಞೆಯ ಅವಧಿ ವಿಸ್ತರಿಸಿ ಮರು ಆದೇಶಿಸಬಹುದು. ಆದರೆ ಇದು ತೀರಾ ವಿರಳ. ಕರ್ನಾಟಕದಲ್ಲಿ ಒಂದೆರಡು ಬಾರಿ ನಡೆದ ನಿದರ್ಶನ ಇದೆ.

‘ರಾಮ’ರಾಜ್ಯವನ್ನೇ ಧರೆಗಿಳಿಸುವುದಾಗಿ ಹೇಳುತ್ತಲೇ ಬಂದಿರುವ ಬಿಜೆಪಿ ನಾಯಕರು ಮಾತ್ರ ಕೊರೊನಾ ಕಾಲದಲ್ಲಿ ಸುಗ್ರೀವಾಜ್ಞೆಯ ಮೂಲಕವೇ ರಾಜ್ಯಭಾರ ನಡೆಸಿದ್ದಾರೆ. ರಾಮನಿಗಿಂತ ‘ಸುಗ್ರೀವ’ ಸಂಕುಲದ ಮೇಲೆ ಹೆಚ್ಚು ಮಮಕಾರ ಇದ್ದಂತಿದೆ.

ಈ ಹೊತ್ತಿನೊಳಗೆ ಹೊರಡಿಸಿದ ಸುಗ್ರೀವಾಜ್ಞೆಗಳು ಜನಹಿತವನ್ನೇ ಪ್ರಧಾನವಾಗಿ ಇಟ್ಟುಕೊಂಡವೇನಲ್ಲ; ಅದರ ಹಿಂದೆ ತಮ್ಮವರ ಹಿತಾಸಕ್ತಿ ಕಾಯುವ ಆಶಯವೇ ಬಲವಾಗಿದೆ. ಎಪಿಎಂಸಿ, ಪಂಚಾಯತ್‌ ರಾಜ್, ಕಾರ್ಮಿಕ ಕಾಯ್ದೆಗಳು, ಕೈಗಾರಿಕಾ‌ ವ್ಯಾಜ್ಯಗಳು ಹಾಗೂ ಭೂಸುಧಾರಣೆ ಕಾಯ್ದೆಗೆ ತಂದ ತಿದ್ದುಪಡಿಗಳು ಪ್ರಮುಖವಾದವು.

ಎಂಟು ದಿನಗಳ ಅಧಿವೇಶನದಲ್ಲಿ 19 ಸುಗ್ರೀವಾಜ್ಞೆಗಳು ಸೇರಿದಂತೆ 31 ಮಸೂದೆಗಳನ್ನು ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ದಿನದಲ್ಲಿ 7 ಗಂಟೆ ಕಲಾಪ ನಡೆದರೆ, ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ, ನಿಲುವಳಿ ಸೂಚನೆ... ಇದಕ್ಕೆ ನಿತ್ಯ ಕನಿಷ್ಠ 3 ಗಂಟೆ ಕಳೆದುಹೋಗುತ್ತದೆ. ಏನೂ ಗಲಾಟೆ–ಗದ್ದಲ ನಡೆಯದೆ, ದಿನದಲ್ಲಿ 4 ಗಂಟೆಯಂತೆ 32 ಗಂಟೆ ಮಸೂದೆಯ ಮೇಲೆ ಚರ್ಚೆಗೆ ಅವಕಾಶ ಸಿಕ್ಕಿದರೆ ಒಂದು ಮಸೂದೆ ಮೇಲೆ ಗರಿಷ್ಠ ಸಿಗುವ ಅವಕಾಶ 1 ಗಂಟೆ ಮಾತ್ರ.

ರಾಜ್ಯದ ಜನಸಂಖ್ಯೆಯ (7 ಕೋಟಿ) ಶೇ 61ರಷ್ಟು (4.27 ಕೋಟಿ) ಜನರ ಮೇಲೆ ಪರಿಣಾಮ ಬೀರುವ ಮಸೂದೆಗಳ ಮೇಲೆ ಸುದೀರ್ಘ ಚರ್ಚೆ ನಡೆಸುವುದು ಸದನದ ಕರ್ತವ್ಯ. ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರುವ, ಯಾರು ಬೇಕಾದರೂ ಭೂಮಿ ಖರೀದಿಸಬಹುದಾದ ಸ್ವಾತಂತ್ರ್ಯ ಕೊಡುವ ಎಪಿಎಂಸಿ, ಭೂಸುಧಾರಣೆ ಕಾಯ್ದೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಲಾದರೂ ಚರ್ಚೆ ನಡೆಯಬೇಕು.

ಹಾಗೆ ನೋಡಿದರೆ, ಮೊದಲು ತಿದ್ದುಪಡಿಯ ಕರಡನ್ನು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಿಟ್ಟು, ಬಳಿಕ ಸದನಕ್ಕೆ ತರಬೇಕಾದ ಹೊಣೆ ಸರ್ಕಾರಕ್ಕೆ ಇದೆ. ಅದನ್ನು ಮಾಡಲು ಮನಸ್ಸಿಲ್ಲ; ಎಂಟು ದಿನಗಳಲ್ಲೇ 31 ಮಸೂದೆಗಳನ್ನು ತಂದು, ಗಲಾಟೆ ಮಧ್ಯೆಯೇ ಅನುಮೋದನೆ ಪಡೆಯುವ ಲೆಕ್ಕದ ಹಿಂದೆ ಅನುಮಾನ ಗೂಡು ಕಟ್ಟುತ್ತದೆ.

ಭೂಸುಧಾರಣೆ ಕಾಯ್ದೆಗೆ ತಂದಿರುವ ತಿದ್ದುಪಡಿಯ ಹಿಂದೆ ಎಲ್ಲರಿಗೂ ಜಮೀನು ಖರೀದಿಸಲು ಅವಕಾಶ ನೀಡಬೇಕೆಂಬ ಉದಾತ್ತ ಆಶಯಕ್ಕಿಂತ, ಬೆಂಗಳೂರಿನ ನಾಲ್ಕು ದಿಕ್ಕುಗಳಿಂದ ಆಯ್ಕೆಯಾಗಿ ಸಚಿವರಾಗಿರುವ ‘ಪ್ರಭಾವಿ’ಗಳ ಒತ್ತಡ ಇದೆ ಎಂಬ ಮಾತು ಬಿಜೆಪಿಯ ಗರ್ಭಗುಡಿಯಲ್ಲಿ ಅನುರಣನವಾಗುತ್ತಿದೆ. ಜಮ್ನಾಲಾಲ್‌ ಬಜಾಜ್‌ ಸೇವಾ ಟ್ರಸ್ಟ್‌ ಜಮೀನುಪ್ರಕರಣವನ್ನು ಮುಕ್ತಾಯಗೊಳಿಸಲು ನಡೆದಿರುವ ಯತ್ನವು ಇದನ್ನೇ ಬಿಂಬಿಸುವಂತಿದೆ.

ವೈ.ಗ.ಜಗದೀಶ್‌

ಬಾಂಬೆ ಪಬ್ಲಿಕ್‌ ಟ್ರಸ್ಟ್‌ ಕಾಯ್ದೆ ಅಡಿ 1942ರಲ್ಲಿ ನೋಂದಣಿಯಾದ ಟ್ರಸ್ಟ್‌, ಬೆಂಗಳೂರಿನಲ್ಲಿ ಶಾಖೆ ಹೊಂದಿದೆ. ಭೂಸುಧಾರಣೆ ಕಾಯ್ದೆ ಜಾರಿಗೆ ಬಂದ ಬಳಿಕ ಟ್ರಸ್ಟ್‌, ತನ್ನ ಒಡೆತನದ 404 ಎಕರೆ 10 ಗುಂಟೆಯ ವಿವರವನ್ನು ನಮೂನೆ 11ರ ಮೂಲಕ ಕಂದಾಯ ಇಲಾಖೆಗೆ 1974–75ರಲ್ಲಿ ಸಲ್ಲಿಸಿತ್ತು. ಕಾಯ್ದೆಯಲ್ಲಿ ನಿಗದಿಗೊಳಿಸಿರುವ ಮಿತಿಗಿಂತ ಹೆಚ್ಚುವರಿ ಭೂಮಿ ಹೊಂದಿದ್ದರಿಂದ ಪ್ರಕರಣ ದಾಖಲಿಸಿದ ಭೂ ನ್ಯಾಯಮಂಡಳಿ, ವಿಚಾರಣೆ ನಡೆಸಿತ್ತು. ಟ್ರಸ್ಟ್‌ 213 ಎಕರೆ 20 ಗುಂಟೆ ಹೆಚ್ಚುವರಿ ಭೂಮಿ ಹೊಂದಿದ್ದು, ಅದನ್ನು ಸರ್ಕಾರಕ್ಕೆ ಮರಳಿಸಬೇಕು ಎಂದು 2010ರಲ್ಲಿ ತೀರ್ಪು ನೀಡಿತ್ತು. ಈಗ ಈ ಭೂಮಿಯ ಬೆಲೆ ಸುಮಾರು ₹2,500 ಕೋಟಿ ಎಂಬ ಅಂದಾಜಿದೆ. ಕಾಯ್ದೆಯ ಎಲ್ಲ ನಿಯಮಗಳು ರದ್ದಾಗಿರುವುದರಿಂದ ಟ್ರಸ್ಟ್‌ಗೆ ಖಾತೆ ಮಾಡಿಕೊಡಿ ಎಂದು ‘ಪ್ರಭಾವಿ’ಗಳು ಒತ್ತಡ ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ಮೆಲುದನಿಯಲ್ಲಿ ಉಸುರುತ್ತಾರೆ. ಬೆಂಗಳೂರು ನಗರ– ಗ್ರಾಮಾಂತರ ಜಿಲ್ಲೆಯ ಆಸುಪಾಸಿನಲ್ಲಿ ಆರೇಳು ತಿಂಗಳಿನಿಂದ ನೂರಾರು ಎಕರೆ ಖರೀದಿಸಿದವರು, ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಖಾತೆ ಮಾಡಿಕೊಡಲು ದುಂಬಾಲು ಬಿದ್ದಿರುವುದು ಸಂದೇಹಗಳನ್ನು ಹರವಿಡುತ್ತದೆ.

ಸರ್ಕಾರದ ಮಾಹಿತಿಯಂತೆ, ರಾಜ್ಯದಲ್ಲಿ 19.21 ಲಕ್ಷ ಹೆಕ್ಟೇರ್‌ನಷ್ಟು ಜಮೀನು ಸಾಗುವಳಿಗೆ ಒಳಗಾಗದೆ ಬೀಳುಬಿದ್ದಿದೆ. ಈ ಜಮೀನನ್ನು ವಶಕ್ಕೆ ಪಡೆದು ಕೃಷಿ ಆಸಕ್ತರಿಗೆ ಷರತ್ತಿನ ಮೇಲೆ ಹಂಚಲು ಅಥವಾ ಗುತ್ತಿಗೆ ಆಧಾರದಲ್ಲಿ ನೀಡಲು ಸಾಧ್ಯ ಇದೆ. ಇದೆಲ್ಲವನ್ನೂ ಬದಿಗಿಟ್ಟು, ಭೂ ಸುಧಾರಣೆ ಕಾಯ್ದೆಗೆ ತಂದ ತಿದ್ದುಪಡಿಯ ಹಿಂದೆ ಸದುದ್ದೇಶ ಇದೆಯೇ? ಇಂತಹ ಸುಗ್ರೀವಾಜ್ಞೆಗಳಿಗೆ ಅನುಮೋದನೆ ಪಡೆಯಲೋಸುಗವೇ ಅಧಿವೇಶನವೆಂಬ ‘ಶಾಸ್ತ್ರ’ಕ್ಕೆ ಸರ್ಕಾರ ಮುಂದಾಯಿತೇ ಎಂಬ ಚರ್ಚೆಯೂ ನಡೆದಿದೆ.

ಜನಾಸಕ್ತಿಯ ವಿಷಯಗಳ ಮೇಲೆ ಚರ್ಚೆ ಮಾಡಲು, ಕಾಯ್ದೆ ತರಲು ಜನಪ್ರತಿನಿಧಿಗಳಿಗೆ ತಮ್ಮ ಹಿತಾಸಕ್ತಿ ಅಡ್ಡಿಯಾಗುವುದು ಹೊಸತೇನಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕುವ, ಮೌಢ್ಯ ಹಾಗೂ ವೈಭವದ ಮದುವೆಗಳಿಗೆ ಕಡಿವಾಣ ಹಾಕುವ ಮಸೂದೆ ತರಲು ಯತ್ನಿಸಿದ್ದರು. ಅದಕ್ಕೆ ಬೆಂಬಲವೇ ಸಿಗಲಿಲ್ಲ.ಸಾಮಾನ್ಯ ಆದೇಶದ ಮೂಲಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಿ, ಬಲಿಷ್ಠವಾಗಿದ್ದ ಲೋಕಾಯುಕ್ತವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದುರ್ಬಲಗೊಳಿಸಿತು. ಇಂತಹ ಮಹತ್ವದ ನಿರ್ಣಯಕ್ಕೆ ಮೊದಲು ಸದನದಲ್ಲಿ ಚರ್ಚಿಸಬಹುದಿತ್ತು. ಅದನ್ನು ಮಾಡಲಿಲ್ಲ. ಎಸಿಬಿ ರದ್ದು ಮಾಡುವುದಾಗಿ ವಾಗ್ದಾನ ನೀಡಿದ್ದ ಕುಮಾರಸ್ವಾಮಿ, ಯಡಿಯೂರಪ್ಪ ಅತ್ತ ಮುಖ ಹಾಕಲಿಲ್ಲ.

ಈಗಂತೂ ಕೇಂದ್ರದ ಅವಲಂಬನೆ, ಬಲಿಷ್ಠರಾಗಿರುವ ವರಿಷ್ಠರ ಆಣತಿಗೆ ತಕ್ಕಂತೆ ನಡೆಯಬೇಕಾದ ಸರ್ಕಾರ ಕರ್ನಾಟಕದಲ್ಲಿದೆ. ಕೊರೊನಾ ಕಾರಣಕ್ಕೋ ಏನೋ ವಿರೋಧ ಪಕ್ಷ ಟ್ವೀಟ್‌, ಪತ್ರಿಕಾಗೋಷ್ಠಿಯಲ್ಲಷ್ಟೇ ಗರ್ಜನೆ ಮಾಡುತ್ತಿದೆ. ಸದ್ಯ ತೆವಳಲೂ ಆಗದೆ ಕುಳಿತಿರುವ ಆಡಳಿತ ಪಕ್ಷದ ಮುಂದೆ, ಕಣ್ಣಿದ್ದೂ ಕಾಣದಂತಹ ವಿರೋಧ ಪಕ್ಷ ಇದೆ. ರಾಜ್ಯದ ಸ್ಥಿತಿ ಮಾತ್ರ, ಕವಿ ಗೋಪಾಲಕೃಷ್ಣ ಅಡಿಗರು ಹೇಳಿದಂತೆ, ‘ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ ದಾರಿಸಾಗುವುದೆಂತೋ ನೋಡಬೇಕು...’ ಎಂಬಷ್ಟು ಕರುಣಾಜನಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT