ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ: ‘ಮತ’ ಠೇಂಕಾರ; ಜನಹಿತ ದೂರ

ಜನರ ಸಿಟ್ಟು ರಟ್ಟೆಗೆ ಬಾರದಂತೆ ತಡೆಯಬೇಕಾದರೆ...
Last Updated 15 ಡಿಸೆಂಬರ್ 2021, 21:41 IST
ಅಕ್ಷರ ಗಾತ್ರ

ಚುನಾವಣೆ ವೇಳೆ ಜನರಿಗೆ ಕೊಟ್ಟ ಮಾತಿನಂತೆ ಅಧಿಕಾರಕ್ಕೇರಿದಾಗ ನಡೆದುಕೊಳ್ಳಲಾಗದವರು, ಅಭಿವೃದ್ಧಿಯತ್ತ ನಾಡನ್ನು ಕೊಂಡೊಯ್ಯಲಾಗದವರು, ಭ್ರಷ್ಟಾಚಾರ ತಡೆಯುವಲ್ಲಿ ಅಸಹಾಯಕರು‌ ಅಧಿಕಾರದಲ್ಲಿ ‘ಶಾಶ್ವತ’ವಾಗಿ ಉಳಿಯಲೇಬೇಕೆಂಬ ಹಟ ತೊಟ್ಟಾಗ ಧರ್ಮ–ದೇವರು–ಜಾತಿ ಹೆಸರಿನ ರಾಜಕಾರಣಕ್ಕೆ ಮುಗಿಬೀಳುತ್ತಾರೆ.

ನಿಕೃಷ್ಟ ದಾರಿದ್ರ್ಯ, ಹಸಿವಿನ ರೌದ್ರಾವತಾರ, ನಿರುದ್ಯೋಗ ತಂದಿತ್ತ ಹತಾಶೆ, ರೋಸಿಹೋಗುವಷ್ಟು ಭ್ರಷ್ಟಾಚಾರ ಕಂಡ ಜನ, ಆಡಳಿತಾರೂಢರ ವಿರುದ್ಧ ತನ್ನಿಂತಾನೇ ಸಿಡಿದೇಳುವುದು ಸಹಜ ಗುಣ. ಜನರ ಸಿಟ್ಟು ರಟ್ಟೆಗೆ ಬಾರದಂತೆ ತಡೆಯಬೇಕಾದರೆ ಜಾತಿಯ ಉನ್ಮಾದವನ್ನೋ ಧರ್ಮದ ಅಮಲನ್ನೋ ಬಿತ್ತಿ, ದಿನವೂ ಅದರ ಸುತ್ತವೇ ಗಿರಕಿ ಹೊಡೆಯುವಂತೆ ಮಾಡುವುದು, ‘ಧರ್ಮೋದ್ಧಾರಕ’ನಾಗದಿದ್ದರೆ ದೇಶದ್ರೋಹಿಯ ಪಟ್ಟ ಖಾತರಿ ಎಂಬ ಭಾವನೆ ತುಂಬಿ ಜನರನ್ನು ಧರ್ಮದ ಗುಂಗಿನಲ್ಲಿ ಮುಳುಗುವಂತೆ ಮಾಡುವುದು ಆಳುವವರ್ಗ ತನ್ನ ಹುಟ್ಟಿದಾರಭ್ಯ ಆಚರಿಸಿಕೊಂಡು ಬಂದ ನೀತಿ.

ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ, ಸಂವಿಧಾನದ ಆಶಯಗಳನ್ನು ಅನುಷ್ಠಾನ ಮಾಡುತ್ತೇನೆ ಎಂದು ಪ್ರಮಾಣ ಮಾಡಿ, ಸಂವಿಧಾನವನ್ನೇಕಣ್ಣಿಗೊತ್ತಿಗೊಂಡು ಅಧಿಕಾರ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿಯವರ ನಡೆ ಇಂತಹದ್ದೊಂದು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ.

ಪ್ರಧಾನಿಯಾಗಿದ್ದವರು ಧರ್ಮಗುರುಗಳು, ದೇವರ ಕಾಲಿಗೆ ಬೀಳುವುದೇನೂ ಹೊಸತಲ್ಲ. ಆದರೆ, ರಾಮಮಂದಿರ ಶಿಲಾನ್ಯಾಸದ ಕಾರ್ಯಕ್ರಮದಲ್ಲಿ ಕುಟುಂಬದ ಯಜಮಾನನಂತೆ ಹೋಮಕುಂಡದ ಮುಂದೆ ಕೂರುವುದು, ಕಾಶಿಯ ವಿಶ್ವನಾಥ ದೇಗುಲದ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ತರಾತುರಿಯಲ್ಲಿ ಗಂಗಾಜಲ ತಂದು ಅಭಿಷೇಕ ಮಾಡುವುದು... ಇಂತಹ ನಡೆ ಪ್ರಧಾನಿಯಾಗಿ ಅವರ ಹುದ್ದೆಗೆ ತಕ್ಕನಾದುದಲ್ಲ. ಪ್ರಧಾನಿ ಧರ್ಮಗುರುವಾಗಕೂಡದು. ಆದರೆ, ಉತ್ತರಪ್ರದೇಶ ಸೇರಿದಂತೆ ಉತ್ತರದ ರಾಜ್ಯಗಳ ಚುನಾವಣೆಗಾಗಿ ಕೋಮು ಧ್ರುವೀಕರಣದತ್ತ ಹೆಜ್ಜೆ ಹಾಕಿರುವ ಮೋದಿ ಇಂತಹ ನಾಟಕೀಯ ಸನ್ನಿವೇಶಗಳನ್ನು ಸೃಷ್ಟಿಸುವಲ್ಲಿ ನಿಪುಣರು.

ದೇಶದ ಪ್ರಧಾನಿಯೇ ಒಂದು ಧರ್ಮದ ಓಲೈಕೆ ರಾಜಕಾರಣಕ್ಕೆ ಮುಂದಾದಾಗ ಅದೇ ನಡೆಯನ್ನು ರಾಜ್ಯಗಳ ಮುಖ್ಯಮಂತ್ರಿಗಳು ಪಾಲಿಸುವುದು ಅಸಹಜವೇನಲ್ಲ. ಗುಜರಾತ್‌, ಉತ್ತರಪ್ರದೇಶ ರಾಜ್ಯಗಳು ಗೋಹತ್ಯೆ–ಮತಾಂತರ ನಿಷೇಧಿಸಿ ಕೋಮು ರಾಜಕೀಯದಲ್ಲಿ ಯಶಸ್ವಿಯಾದಂತೆ ಒಂದೂಕಾಲು ವರ್ಷದ ಬಳಿಕ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಕೂಡ ಅದೇ ಪ್ರಯೋಗದತ್ತ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮುಂದಡಿ ಇಟ್ಟಿದೆ. ಸಂಪನ್ಮೂಲ ಇಲ್ಲದೆ ಅಭಿವೃದ್ಧಿಯೇ ಸ್ಥಗಿತಗೊಂಡಿದ್ದು ನೀರಾವರಿ, ಕೈಗಾರಿಕೆ, ಮೂಲಸೌಕರ್ಯ ಯೋಜನೆಗಳಾವುವೂ ಮುಂದಕ್ಕೆ ಸಾಗಿಲ್ಲ. ಎಲ್ಲವೂ ನಿಂತೇ ಹೋಗಿ, ಭ್ರಷ್ಟಾಚಾರವೊಂದೇ ವಿಜೃಂಭಿಸುತ್ತಿರುವ ಕಾಲದಲ್ಲಿ ಜನರ ದಿಕ್ಕನ್ನು ಬೇರೆಡೆಗೆ ತಿರುಗಿಸಿ ಮತ ಗಟ್ಟಿ ಮಾಡಿಕೊಳ್ಳುವುದು ಬಿಜೆಪಿಗಿರುವ ಏಕೈಕ ಆಯ್ಕೆಯಾದಂತಿದೆ.

ಹಾಗಾಗಿಯೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದ ಬೆನ್ನಲ್ಲೇ, ಅದರ ಪರಿಣಾಮವೆಂಬಂತೆ ನಡೆಯತೊಡಗಿದ ಮತೀಯ ಗೂಂಡಾಗಿರಿಯನ್ನು ಒಂದರ್ಥದಲ್ಲಿ ಬೊಮ್ಮಾಯಿ ಸಮರ್ಥಿಸಿಕೊಂಡರು. ಬಳಿಕ, ಗೂಂಡಾಗಿರಿ ಪ್ರಕರಣಗಳು ಹೆಚ್ಚಿದವು. ಈಗ ಮತಾಂತರ ನಿಷೇಧ ಮಸೂದೆ ತರಲು ಹೊರಟಿರುವ ಸರ್ಕಾರ, ‘ಲವ್ ಜಿಹಾದ್‌’ ತಡೆಗೆ ಮಸೂದೆ ತರುವ ವಿಚಾರವನ್ನೂ ಮುನ್ನೆಲೆಗೆ ತಂದಿದೆ. ಅದೇ ಹೊತ್ತಿಗೆ ಮಕ್ಕಳ ಮನಸ್ಸಿನಲ್ಲಿ ಎಳವೆಯಲ್ಲಿಯೇ ಕೋಮುದ್ವೇಷ ತುಂಬುವ ಕ್ರಮವಾಗಿ, ಪಠ್ಯಪುಸ್ತಕ ಪರಿಷ್ಕರಣೆಯನ್ನೂ ಮಾಡಿಸುತ್ತಿದೆ. ಅಭಿವೃದ್ಧಿಯ ಆಶಯವಾಗಲಿ, ಮಾದರಿ ಕರ್ನಾಟಕ ನಿರ್ಮಾಣದ ಕನಸಾಗಲಿ ಇಲ್ಲದವರು ಮಾತ್ರ ಜನರ ಧಾರ್ಮಿಕ ಭಾವನೆಯನ್ನು ಉದ್ದೀಪನಗೊಳಿಸಿ, ಮತಬ್ಯಾಂಕ್‌ ಅನ್ನು ಭದ್ರಪಡಿಸಿಕೊಳ್ಳುವ ಕೆಲಸಕ್ಕೆ ಕೈಹಾಕುತ್ತಾರೆ.

ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತರಲು ಹೊರಟಿದ್ದ ಸುಧಾರಣಾ ಕ್ರಮಗಳ ಬೆಳಕಿನಲ್ಲಿ ಇವುಗಳನ್ನು ನೋಡಬೇಕಿದೆ. ವೈಭವದ ಮದುವೆಗೆ ಕಡಿವಾಣ, ಮೌಢ್ಯ ನಿಷೇಧ ಕಾಯ್ದೆ ಜಾರಿ, ಹಿಂದುಳಿದವರ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಶಿಫಾರಸು, ಕನ್ನಡಕ್ಕೆ ಪ್ರತ್ಯೇಕ ಬಾವುಟ ನೀಡಬೇಕೆಂಬ ಪ್ರಸ್ತಾವ, ಖಾಸಗಿ ಆಸ್ಪತ್ರೆಗಳ ಲೂಟಿಗೆ ಮೂಗುದಾರ ಹಾಕುವ ಕಾಯ್ದೆ, ಹಸಿದವರಿಗಾಗಿ ಇಂದಿರಾ ಕ್ಯಾಂಟೀನ್‌ ಹೀಗೆ ಹಲವು ಜನಪರ ಆಲೋಚನೆಗಳು, ಕಾರ್ಯಕ್ರಮಗಳು ಆಗ ಇದ್ದವು. ಲಿಂಗಾಯತರ ವಿರೋಧಕ್ಕೆ ಗುರಿಯಾಗಿ ಅಧಿಕಾರ ಕಳೆದುಕೊಳ್ಳಲು ಕಾರಣವಾದ ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರಕಿಸುವ ಪ್ರಯತ್ನವು ಸದಾಶಯದ ಹೆಜ್ಜೆಯೇ.

ಅಲ್ಪಾವಧಿ ಅಧಿಕಾರದಲ್ಲಿದ್ದ ಎಚ್.ಡಿ.ಕುಮಾರಸ್ವಾಮಿ ಕೂಡ ‘ಬಡವರ ಬಂಧು’, ಚೀನಾಕ್ಕೆ ಪೈಪೋಟಿ ನೀಡಲು ಕೈಗಾರಿಕಾ ಕ್ಲಸ್ಟರ್ ಸ್ಥಾಪನೆ, ಇಸ್ರೇಲ್ ಮಾದರಿ ಕೃಷಿ ಅನುಷ್ಠಾನದಂತಹ ಯೋಜನೆಗಳಿಗೆ ಚಾಲನೆ ನೀಡಿದ್ದರು. ಬೊಮ್ಮಾಯಿ ಅವರು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಷ್ಯವೇತನ, ವಿದ್ಯಾಭ್ಯಾಸಕ್ಕೆ ನೆರವು, ಅಮೃತ ಯೋಜನೆ, ಹಿರಿಯರು, ಅಂಗವಿಕಲರು, ಮಹಿಳೆಯರ ಮಾಸಾಶನದ ಮೊತ್ತ ಹೆಚ್ಚಿಸುವಂತಹ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದರು. ಆದರೆ, ಅವೆಲ್ಲವನ್ನೂ ಬದಿಗೆ ಸರಿಸುವ ರೀತಿಯಲ್ಲಿ ಕೋಮು ಧ್ರುವೀಕರಣಕ್ಕೆ ಸಚಿವ ಸಂಪುಟದ ಸದಸ್ಯರು ಆದ್ಯತೆ ಕೊಟ್ಟಂತೆ ಕಾಣಿಸುತ್ತಿದೆ. ಇವೆಲ್ಲವೂ ಅಭಿವೃದ್ಧಿಯತ್ತಲಿನ ನಡೆ ಬಿಟ್ಟು ಅಪಾಯದ ಗುಂಡಿಯ ಕಡೆ ನಾಡನ್ನು ಕೊಂಡೊಯ್ಯುವುದರಲ್ಲಿ ಅನುಮಾನ ಬೇಡ.

ಹಾಗಂತ ಕರ್ನಾಟಕದ ಮಟ್ಟಿಗೆ ನಿರಾಶರಾಗಬೇಕಿಲ್ಲ. ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನಿವೃತ್ತರಾದ ಎಚ್.ಎನ್‌.ನಾಗಮೋಹನ ದಾಸ್‌ ಹಾಗೂ ಹೋರಾಟಗಾರರಾದ ಕೆ.ಎಸ್‌.ವಿಮಲಾ, ಅನಂತ ನಾಯ್ಕ್‌ ತಂಡ ನಡೆಸುತ್ತಿರುವ ‘ಸಂವಿಧಾನ ಓದು’ ಕಾರ್ಯಕ್ರಮ ಯುವ ಸಮುದಾಯವನ್ನು ಸೆಳೆಯುತ್ತಿದೆ. ಕಿರಿದಾಗಿ ಆರಂಭವಾದ ತೊರೆ ಇಂದು ಹೊಳೆಯಾಗಿ ಹರಿಯುತ್ತಿದೆ. ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಪುಸ್ತಕ ಲಕ್ಷದಷ್ಟು ಜನರಿಗೆ ತಲುಪಿದೆ. ಕಾಲೇಜು ವಿದ್ಯಾರ್ಥಿಗಳು, ವಕೀಲರು, ರೈತ, ಕಾರ್ಮಿಕ, ಮಹಿಳಾ ಸಂಘಟನೆಗಳು ಈ ಆಂದೋಲನದಲ್ಲಿ ಭಾಗಿಯಾಗಿರುವುದು ಭರವಸೆಯ ಕಿರಣದಂತಿದೆ.

ಕವಿ ಅರುಣ್ ಜೋಳದಕೂಡ್ಲಿಗಿ ಅವರು ಒಂದೂಕಾಲು ವರ್ಷದ ಹಿಂದೆ ಶುರು ಮಾಡಿದ ‘ಬಾಬಾ ಸಾಹೇಬರ ಅರಿವಿನ ಬೆಳಗು– ಅಂಬೇಡ್ಕರ್ ಓದು ಸರಣಿ’ ಎಂಬ ಕಾರ್ಯಕ್ರಮ ಯುಟ್ಯೂಬ್‌ನಲ್ಲಿ ಕೇಳಲು ಲಭ್ಯ. ಅಂಬೇಡ್ಕರ್ ಚಿಂತನೆ, ಭಾಷಣ, ಲೇಖನಗಳನ್ನು ಓದುವ– ಕೇಳಿಸುವ ಕಾರ್ಯಕ್ರಮ 392 ಕಂತುಗಳನ್ನು ಪೂರೈಸಿದೆ. ಅಂಬೇಡ್ಕರ್ ಚಿಂತನೆಯನ್ನು 282 ಜನ ಓದಿದ್ದಾರೆ. ಏಳು ಲಕ್ಷ ಜನ ಕೇಳಿಸಿಕೊಂಡಿದ್ದಾರೆ.

ಲೇಖಕ ಅರವಿಂದ ಚೊಕ್ಕಾಡಿ ಅವರು ಆಸಕ್ತರ ಜತೆ ಸೇರಿಕೊಂಡು ರಚಿಸಿರುವ ಗಾಂಧಿ ವಿಚಾರ ವೇದಿಕೆಯು ಗಾಂಧಿ ಗ್ರಾಮ ಸಂವಾದ, ಗಾಂಧಿ ಮನೆ ಸಂವಾದ ಏರ್ಪಡಿಸುತ್ತಿದೆ. ಎಂಟು ತಾಲ್ಲೂಕು ಘಟಕಗಳು ರಚನೆಯಾಗಿದ್ದು, ಗ್ರಾಮ ಮತ್ತು ಮನೆಗಳಲ್ಲಿ ಈವರೆಗೆ 30 ಸಂವಾದಗಳನ್ನು ನಡೆಸಿವೆ. ಜಗಳವೇ ತುಂಬಿಕೊಂಡಿರುವ ಹೊತ್ತಿನಲ್ಲಿ ರಚನಾತ್ಮಕ ಸಂವಾದದ ಮೂಲಕ ಚಿಂತನೆಗಳನ್ನು ಜೀವಂತವಾಗಿರಿಸುವ ಯತ್ನವನ್ನು ಈ ವೇದಿಕೆ ಮಾಡುತ್ತಿದೆ.

ಎಲ್ಲವೂ ಮುಗಿದೇ ಹೋಯಿತು ಎಂಬ ಹೊತ್ತಿನೊಳಗೆ ದೇಶವಾಸಿಗಳಿಗೆ ಕಡೆಯ ಆಸರೆಯಾಗಿರುವ ಸಂವಿಧಾನ, ಗಾಂಧಿ, ಅಂಬೇಡ್ಕರ್ ಅವರನ್ನು ಮತ್ತೆ ಮತ್ತೆ ಕಾಣಿಸಿಕೊಡುತ್ತಿರುವ ಈ ಮೂರು ಪರ್ಯಾಯಗಳು, ಕತ್ತಲೆಯೇ ತುಂಬಿರುವ ದಾರಿಯಲ್ಲಿ ಕಿರುದೊಂದಿಗಳಂತಿವೆ. ಅರಿವಿನ ಚೈತನ್ಯ ಹೀಗೆಯೆ ಆರದೇ ಉಳಿದು ಜಗವ ಬೆಳಗಲಿ.

ಕುವೆಂಪು ಅವರು ಹೇಳುವ ಮಾತೊಂದು ನೆನಪಾಗುತ್ತದೆ– ‘ಓ ಬನ್ನಿ ಸೋದರರೆ ಬೇಗ ಬನ್ನಿ/ ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ/ ಬಡತನವ ಬುಡಮಟ್ಟ ಕೀಳಬನ್ನಿ/... ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ/ ಮತಿಯಿಂದ ದುಡಿಯಿರೈ ಲೋಕಹಿತಕೆ/ ಆ ಮತದ ಈ ಮತದ ಹಳೆಮತದ ಸಹವಾಸ/ ಸಾಕಿನ್ನು ಸೇರಿರೈ ಮನುಜ ಮತಕೆ/ ಓ ಬನ್ನಿ ಸೋದರರೆ ವಿಶ್ವಪಥಕೆ’ ಎಂಬ ಆಶಯ ಜೀವ ಪಡೆಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT