ಬುಧವಾರ, ಸೆಪ್ಟೆಂಬರ್ 29, 2021
20 °C

ಸಚ್ಚಿದಾನಂದ ಸತ್ಯಸಂದೇಶ| ಜ್ಞಾನದ ಸಂಕೇತವೇ ಗುರು

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ನಮ್ಮ ಸಮಾಜದಲ್ಲಿ ತಂದೆ-ತಾಯಿಗಿರುವಷ್ಟೆ ಗೌರವವನ್ನು ಗುರುವಿಗೆ ನೀಡಲಾಗಿದೆ. ತಂದೆ-ತಾಯಿ ಜೀವ ನೀಡಿದರೆ, ಗುರು ಜೀವನ ನೀಡುತ್ತಾರೆ. ಹೆತ್ತವರು ವ್ಯಕ್ತಿಯನ್ನು ರೂಪಿಸಿದರೆ, ಗುರು ವ್ಯಕ್ತಿತ್ವ ರೂಪಿಸುತ್ತಾರೆ. ಹೀಗಾಗಿ ನಾವು ಹೆತ್ತವರಿಗೆ ನೀಡುವ ಪೂಜನೀಯ ಸ್ಥಾನವನ್ನು ಗುರುವಿಗೆ ನೀಡಿದ್ದೇವೆ. ಎಲ್ಲಾ ವೃತ್ತಿಗಿಂತ ಶಿಕ್ಷಕ ವೃತ್ತಿ ಶ್ರೇಷ್ಠ ಅಂತ ಗೌರವಿಸುತ್ತೇವೆ. ಗುರು ಇಲ್ಲದೆ ಅರಿವೂ ಇಲ್ಲ, ಗುರಿಯೂ ಇಲ್ಲ. ಮಾನವಕುಲವನ್ನು ಪೊರೆದ ಬಹು ದೊಡ್ಡ ಶಕ್ತಿ ಗುರು. ನಮ್ಮ ಭಾರತೀಯ ಪರಂಪರೆಯಲ್ಲಂತೂ ಗುರುವೇ ನಮಗೆ ದೈವಸಮಾನ. ಬದುಕನ್ನು ಕಲ್ಪಿಸಿದ, ಬದುಕುವುದನ್ನು ಕಲಿಸಿದ ಶಿವ ನಮಗೆ ದೇವರೂ ಮಾತ್ರವಲ್ಲ, ಆದಿ ಗುರುವೂ ಹೌದು.

ನಮ್ಮಲ್ಲಿ ಗುರುಪರಂಪರೆಯ ದೊಡ್ಡ ಇತಿಹಾಸವೇ ಇದೆ. ಆದಿಗುರು ಶಿವನಿಂದ ಉಪದೇಶಿತರಾದ ಸಪ್ತರ್ಷಿಗಳು ಜಗತ್ತಿನ ಗುರುಪರಂಪರೆಗೆ ನಾಂದಿಯಾದರು. ಅಂದಿನಿಂದ ಇಂದಿನವರೆಗೂ ಗುರು-ಶಿಷ್ಯ ಪರಂಪರೆ ಮುಂದುವರೆಯುತ್ತಾ ಬಂದಿದೆ. ಶಿವನಿಂದ ಸಪ್ತರ್ಷಿಗಳು ಜ್ಞಾನದೀಕ್ಷೆ ಪಡೆದ ದಿನವಾಗಿ ಮತ್ತು ಸಪ್ತರ್ಷಿಗಳಲ್ಲಿ ಒಬ್ಬರಾದ ವಸಿಷ್ಠರ ಮುಮ್ಮಗ ವೇದವ್ಯಾಸರ ಜನ್ಮದಿನವಾಗಿ ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮವಾಗಿ ಆಚರಿಸಿ, ಗುರುವರ್ಯರನ್ನು ಆರಾಧಿಸುತ್ತೇವೆ. ‘ಗು-ರು’ ಎಂಬ ಎರಡಕ್ಷರದಲ್ಲೇ ಗುರುವಿನ ಮಹತ್ವವಿದೆ. ‘ಗು’ ಎಂದರೆ ಕತ್ತಲು ಅಥವಾ ಅಜ್ಞಾನ. ‘ರು’ ಎಂದರೆ ಬೆಳಕು ಅಥವಾ ಜ್ಞಾನ. ಕತ್ತಲಿನಿಂದ ಬೆಳಕಿನೆಡೆಗೆ ಮಾರ್ಗದರ್ಶನ ನೀಡುವವನೇ ‘ಗುರು’ ಎಂಬ ಅರ್ಥವಿದೆ. ಮೌಢ್ಯವನ್ನು ನಾವು ಕತ್ತಲೆಗೆ ಹೋಲಿಸುತ್ತೇವೆ. ಬೆಳಕನ್ನು ಜ್ಞಾನವೆನ್ನುತ್ತೇವೆ. ಇದಕ್ಕಾಗಿಯೇ ನಮ್ಮಲ್ಲಿ ಯಾವುದೇ ಶುಭ ಕಾರ್ಯಕ್ಕೂ ಜ್ಯೋತಿ ಬೆಳಗಿಸುವ ಸತ್ಸಂಪ್ರದಾಯ ಬೆಳೆದುಬಂದಿದೆ.

ಗುರುವಿನಂತೆ ಶಿಷ್ಯ ಎಂಬ ಲೋಕರೂಢಿ ಮಾತು ಹೇಗೆ ಸತ್ಯವೋ, ಹಾಗೇ ಗುರುವಿನ ಮನಃಸ್ಥಿತಿಯಂತೆಯೇ ಇಡೀ ಸಮಾಜ ಅನ್ನೋದು ಅಷ್ಟೇ ಸತ್ಯ. ಗುರು ಹೇಳಿದ್ದನ್ನೆಲ್ಲ ನಂಬುವ ಶಿಷ್ಯರು, ಅವರು ಹೇಳಿದಂತೆ ನಡೆಯುತ್ತಾರೆ. ಹೀಗಾಗಿ ಗುರು ತಪ್ಪು ಮಾಡಿದರೆ, ಇಡೀ ಸಮಾಜ ತಪ್ಪು ದಾರಿಯಲ್ಲಿ ನಡೆಯುತ್ತೆ. ಅದಕ್ಕಾಗಿ ಗುರುವಾದವನು ಸರಿಯಾಗಿರಬೇಕು. ಕಾಮ-ಕ್ರೋಧ-ಮದ-ಮಾತ್ಸರ್ಯಗಳಿಂದ ಮುಕ್ತನಾಗಿ ಪರಿಶುದ್ಧ ಮನಸ್ಸಿನವನಾಗಿರಬೇಕು. ಶುದ್ಧ ಮನಸ್ಸಿಲ್ಲದ ಗುರುವಿನಿಂದ ಕಲಿತ ಶಿಷ್ಯರ ಮನಸ್ಸು ಸಹ ಬಗ್ಗಡವಾಗಿ ಇಡೀ ಸಮಾಜ ಹಾಳಾಗುತ್ತೆ. ಆದ್ದರಿಂದ ಗುರುವಾದವನು ಮೊದಲಿಗೆ ತನ್ನ ಮನಸ್ಸನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಅಲ್ಲಿ ತಾರತಮ್ಯದ ಸಣ್ಣ ಕುಂದು ಕಾಣಬಾರದು. ಏಕೆಂದರೆ, ಗುರು ಶುದ್ಧನಾದರೆ, ಇಡೀ ನಾಡು ಸುಭಿಕ್ಷವಾಗಿರುತ್ತದೆ. ಇದನ್ನೇ ಬಸವಣ್ಣನವರು ನಮ್ಮ ಅಂತರಂಗ ಶುದ್ಧವಾಗಿದ್ದರೆ, ಸಮಾಜದ ಬಹಿರಂಗ ಶುದ್ಧವಾಗಿರುತ್ತದೆ ಎಂದು ಸಾರಿದ್ದರು.

ಇಡೀ ಮಾನವಸಮಾಜವನ್ನು ರೂಪಿಸುವ ಮಹತ್ವದ ಹೊಣೆಗಾರಿಕೆ ಗುರುವಿನ ಹೆಗಲ ಮೇಲೆ ಇದ್ದಿದ್ದರಿಂದಲೇ, ನಮ್ಮಲ್ಲಿ ಋಷಿಸಂಸ್ಕೃತಿ ಬೆಳೆದು ಬಂತು. ಗುರುಕುಲದಲ್ಲಿ ವಿದ್ಯೆ ಕಲಿಯುವ ಪರಂಪರೆ ಬೆಳೆಯಿತು. ಮನಃಶುದ್ಧಿಯಿಂದ ಮಾತ್ರ ಜ್ಞಾನ ಬೆಳಗುತ್ತದೆ ಅಂತ ಋಷಿಗಳು ಧ್ಯಾನಕ್ಕೆ ಆದ್ಯತೆ ಕೊಟ್ಟರು. ಮನಸ್ಸಿನಲ್ಲೇ ವಿಶ್ವಗುರು ಶಿವನನ್ನು ಧ್ಯಾನಿಸುತ್ತಾ, ಮನಸ್ಸಿನೊಳಗಿನ ಕಶ್ಮಲ-ಗೊಂದಲಗಳನ್ನೆಲ್ಲ ಕರಗಿಸಿಕೊಳ್ಳುವುದನ್ನು ಕಲಿಸಿದರು. ದುರಾಸೆ-ದ್ವೇಷಗಳಂಥ ಕಶ್ಮಲಗಳು ಇದ್ದಷ್ಟು ಮನಸ್ಸು ದುರ್ಬಲವಾಗುತ್ತದೆ ಎಂದು ಎಚ್ಚರಿಸಿದರು. ನಿತ್ಯ ಯೋಗ-ಧ್ಯಾನದಿಂದ ಮನಸ್ಸನ್ನು ಆರೋಗ್ಯಕರವಾಗಿಟ್ಟುಕೊಂಡು, ಸಂಕುಚಿತ ಬುದ್ಧಿಯಿಂದ ಹೊರಬರುವುದನ್ನು ಹೇಳಿಕೊಟ್ಟರು. ಆರೋಗ್ಯಕರ ದೇಹಕ್ಕೆ ಪೌಷ್ಟಿಕ ಆಹಾರ ನೀಡಿದಂತೆ, ಆರೋಗ್ಯಕರವಾದ ಮನಸ್ಸಿಗೆ ಸಾತ್ವಿಕ ವಿಚಾರಧಾರೆಗಳ ಅಗತ್ಯವನ್ನು ತಿಳಿಸಿಕೊಟ್ಟರು. ಸಾಧಕನ ಹಿಂದೆ ಗುರು ಮತ್ತು ಸಾಧನೆಯ ಮುಂದೆ ಗುರಿ ಇದ್ದಾಗಲೇ, ಮಾನವರ ಬದುಕು ‘ಸಚ್ಚಿದಾನಂದ’ದಲ್ಲಿ ಬೆಳಗುವುದೆಂಬುದನ್ನು ತೋರಿಸಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು