ಬುಧವಾರ, ಅಕ್ಟೋಬರ್ 21, 2020
22 °C
ಭಾಷೆಯನ್ನು ಒಪ್ಪಿಕೊಳ್ಳಲು ಒತ್ತಡ ತಂದಾಗ, ಭಾವನಾತ್ಮಕ ಪ್ರತಿರೋಧ ಎದುರಾಗುತ್ತದೆ

ವಿರೋಧ: ಭಾಷೆಗೋ, ಪಾರಮ್ಯಕ್ಕೋ?

ಪ್ರೊ. ಸಂದೀಪ್ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ಹಿಂದಿ ಭಾಷೆಯನ್ನೇ ಬಳಸಬೇಕು ಎಂಬ ಒತ್ತಾಯವನ್ನು ವಿರೋಧಿಸಿ ನಡೆದ ಪ್ರತಿಭಟನೆಗಳು ಮಾಧ್ಯಮಗಳಲ್ಲಿ
ಪ್ರಮುಖವಾಗಿ ವರದಿಯಾಗಿವೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್)‌ ಅಧಿಕಾರಿಯೊಬ್ಬರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ ಎನ್ನಲಾದ ‘ನೀವು ಭಾರತೀಯರೇ’ ಎಂಬ ಮಾತಿಗೆ ಡಿಎಂಕೆ ಪಕ್ಷದ ನಾಯಕಿ ಹಾಗೂ ಸಂಸತ್ ಸದಸ್ಯೆ ಕನಿಮೊಳಿ ಅವರು ತೀವ್ರ ಪ್ರತಿಭಟನೆ ದಾಖಲಿಸಿದ್ದಾರೆ. ತಮಗೆ ಹಿಂದಿ ಭಾಷೆ ಬರುವುದಿಲ್ಲ, ಇಂಗ್ಲಿಷ್ ಅಥವಾ ತಮಿಳಿನಲ್ಲಿ ಸಂಭಾಷಣೆ ನಡೆಸಬೇಕು ಎಂದು ಕನಿಮೊಳಿ ಕೇಳಿಕೊಂಡಾಗ ಆ ಅಧಿಕಾರಿ ಈ ರೀತಿ ಹೇಳಿದ್ದಾರೆ.‌

ತೀರಾ ಈಚೆಗೆ ಇನ್ನೊಂದು ವಿದ್ಯಮಾನ ನಡೆದಿದೆ. ಕೇಂದ್ರ ಆಯುಷ್ ಇಲಾಖೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವರು ತಮಗೆ ಹಿಂದಿ ಬಾರದು, ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ನೀಡಬೇಕು ಎಂದು ಕೇಳಿಕೊಂಡರು. ಆಗ, ಇಲಾಖೆಯ ಕಾರ್ಯದರ್ಶಿಯವರು, ಹಿಂದಿಯೇತರ ಭಾಷಿಕರು ಕಾರ್ಯಕ್ರಮದಿಂದ ಹೊರನಡೆಯಬಹುದು ಎಂದು ಹೇಳಿದ್ದರು. ದಕ್ಷಿಣ ಭಾರತದ ವಿಮಾನ ನಿಲ್ದಾಣಗಳ ಭದ್ರತಾ ಟರ್ಮಿನಲ್‌ಗಳಲ್ಲಿ ಸಿಐಎಸ್‌ಎಫ್‌ ಸಿಬ್ಬಂದಿ ಹಿಂದಿಯಲ್ಲಿ ಮಾತನಾಡುವುದನ್ನು ಕಾಣುವುದು ಈಚಿನ ವರ್ಷಗಳಲ್ಲಿ ಸಹಜ. ತಮ್ಮ ಜೊತೆ ಮಾತನಾಡುವವರೂ ಹಿಂದಿಯಲ್ಲೇ ಉತ್ತರ ನೀಡಬೇಕು ಎಂದು ಅವರು ನಿರೀಕ್ಷಿಸುತ್ತಾರೆ. ಹಿಂದಿ ಭಾಷಿಕರಲ್ಲದವರಿಗೆ ಇದರಿಂದ ಎಷ್ಟು ಕಸಿವಿಸಿ ಉಂಟಾಗಬಹುದು ಎಂಬುದರ ಆಲೋಚನೆ ಅವರಲ್ಲಿ ಇರುವುದಿಲ್ಲ. ಸರ್ಕಾರದ ಸಭೆಗಳಲ್ಲಿ ಹಾಗೂ ಅಕಾಡೆಮಿಕ್‌ ಗೋಷ್ಠಿಗಳಲ್ಲಿ ಅಧಿಕಾರಿಗಳು ಮತ್ತು ಅಕಾಡೆಮಿಕ್ ವರ್ಗದ ಜನ ಹಿಂದಿಯಲ್ಲಿ ವಿಷಯ ಪ್ರಸ್ತುತಪಡಿಸುವುದು ಹಾಗೂ ನಂತರ ಇಡೀ ಸಂಭಾಷಣೆಯನ್ನು ಹಿಂದಿಯಲ್ಲೇ ನಡೆಸುವುದು ಮಾಮೂಲು. ಸಭೆಯಲ್ಲಿ ಇರುವ ಅನೇಕರಿಗೆ ಹಿಂದಿಯ ಅರಿವು ಇರುವುದಿಲ್ಲ ಎಂಬುದನ್ನು ಅವರು ಕೂಡ ಆಲೋಚಿಸಿರುವುದಿಲ್ಲ.

ಹಿಂದಿ ನಾಡಿಗೆ ಸೇರಿಲ್ಲದ ರಾಜ್ಯದವನಾದ ನಾನು ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸುಲಲಿತವಾಗಿ ಸಂವಹನ ನಡೆಸಬಲ್ಲೆ. ನಾನು ಹಿಂದಿ ಭಾಷೆಯಲ್ಲಿ ಮಾತನಾಡಿದಾಗ, ನನ್ನ ಮಾತು ಆಲಿಸುವ ಹಿಂದಿ ಭಾಷಿಕರು ‘ನೀವು ದಕ್ಷಿಣ ಭಾರತೀಯರಾಗಿದ್ದರೂ ಹಿಂದಿಯಲ್ಲಿ ಹೇಗೆ ಚೆನ್ನಾಗಿ ಸಂಭಾಷಣೆ ನಡೆಸುತ್ತೀರಿ’ ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆ ಎದುರಾದಾಗ ನಾನು ನಕ್ಕು ಸುಮ್ಮನಾಗುತ್ತೇನೆ. ಆದರೆ, ಮಾತೃಭಾಷೆ ಹಿಂದಿ ಅಲ್ಲದವರು ಈ ಭಾಷೆಯಲ್ಲಿ ಚೆನ್ನಾಗಿ ಮಾತನಾಡಿದಾಗ ಅದನ್ನು ಪ್ರಶಂಸಿಸಬೇಕೇ ಅಥವಾ ಆ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದು ಹೇಗೆ ಎಂದು ಪ್ರಶ್ನಿಸಬೇಕೇ ಎಂಬ ಆಲೋಚನೆ ನನ್ನಲ್ಲಿ ಮೂಡುತ್ತದೆ.

ಈ ಬರಹದ ಆರಂಭದಲ್ಲಿ ಉಲ್ಲೇಖಿಸಿದ ಎರಡೂ ಪ್ರಸಂಗಗಳು ಒಂದೇ ಅಂಶವನ್ನು ವಿವರಿಸಿ ಹೇಳುತ್ತವೆ– ಹಿಂದಿ ಮಾತನಾಡುವ ಜನಸಮುದಾಯದಲ್ಲಿ ಬಹುತೇಕರು ದೇಶದ ಉದ್ದಗಲಗಳಲ್ಲಿ ಹಿಂದಿಯಲ್ಲಿ ಸಂಭಾಷಿಸುವುದು ತಮ್ಮ ಹಕ್ಕು ಎಂದು ಭಾವಿಸಿದ್ದಾರೆ. ತಾವು ಹಿಂದಿಯಲ್ಲಿ ಸಂಭಾಷಣೆ ನಡೆಸುವ ಹಕ್ಕನ್ನು ಒಪ್ಪಿಕೊಳ್ಳುವುದು ಮಾತ್ರವೇ ಅಲ್ಲದೆ, ಹಿಂದಿಯಲ್ಲೇ ಉತ್ತರ ನೀಡಬೇಕಾದುದು ಪ್ರತೀ ಭಾರತೀಯನ ಕರ್ತವ್ಯ ಕೂಡ ಎಂದು ಅವರು ಭಾವಿಸಿದ್ದಾರೆ. ಇಂಥವರ ಸಂಖ್ಯೆಯಲ್ಲಿ ಅಪಾಯಕಾರಿ ಪ್ರಮಾಣದ ಹೆಚ್ಚಳ ಆಗುತ್ತಿರುವುದು ಈಚಿನ ದಿನಗಳಲ್ಲಿ ಗುರುತಿಸಬಹುದಾದ ಬೆಳವಣಿಗೆ. ಇಪ್ಪತ್ತನಾಲ್ಕು ವರ್ಷಗಳ ಹಿಂದೆ ಸಂಯುಕ್ತ ರಂಗವು ಎಚ್.ಡಿ. ದೇವೇಗೌಡ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದಾಗ, ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ದೇವೇಗೌಡರನ್ನು ರಾಷ್ಟ್ರಪತಿ ಆಹ್ವಾನಿಸಿದಾಗ ಉತ್ತರ ಭಾರತದ ಕೆಲವು ಪತ್ರಕರ್ತರು ತಕ್ಷಣ ಕೇಳಿದ್ದ ಪ್ರಶ್ನೆ: ‘ದೇವೇಗೌಡರಿಗೆ ಹಿಂದಿ ಬರುತ್ತದೆಯೇ’ ಎಂದಾಗಿತ್ತು. ಪ್ರಧಾನಿ ಹುದ್ದೆಗೇರಲು ಇರುವ ಅಗತ್ಯ ಅರ್ಹತೆಗಳಲ್ಲಿ ಇದೂ ಒಂದು ಎಂಬಂತಿತ್ತು ಅವರ ಪ್ರಶ್ನೆ. ‘ಹಿಂದಿ ಕುರಿತ ವಿಪರೀತದ ಅಭಿಮಾನ’ವು ಹಲವರ ಪಾಲಿಗೆ ದೇಶದ ರಾಜಕಾರಣದಲ್ಲಿ ಉತ್ತರ ಭಾರತದವರ ಪಾರಮ್ಯದ ಪ್ರತಿರೂಪದಂತೆ ಕಾಣುತ್ತಿದೆ.

ಹೊಸದಾಗಿ ಅನಾವರಣ ಆಗಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ’ಯು ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸುತ್ತಲೇ, ಭಾರತದ ಭಾಷಾ ಬಹುತ್ವವನ್ನು ಗೌರವಿಸಬೇಕು ಹಾಗೂ ಅದನ್ನು ಸಂಭ್ರಮದಿಂದ ಸ್ವೀಕರಿಸಬೇಕು ಎಂದು ಗಟ್ಟಿಯಾಗಿ ಹೇಳುತ್ತದೆ. ‘ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಲು ಹಾಗೂ ರಾಷ್ಟ್ರೀಯ ಭಾವೈಕ್ಯಕ್ಕಾಗಿ ಯುವಜನರೆಲ್ಲರೂ ದೇಶದ ಭಾಷಾ ವೈವಿಧ್ಯದ ಬಗ್ಗೆ ಅರಿವು ಹೊಂದಿರಬೇಕು. ಆ ಭಾಷೆಗಳು ಹಾಗೂ ಅವುಗಳ ಸಾಹಿತ್ಯದಲ್ಲಿರುವ ಸಂಪತ್ತಿನ ಬಗ್ಗೆಯೂ ತಿಳಿದಿರಬೇಕು’ ಎಂದು ಶಿಕ್ಷಣ ನೀತಿಯಲ್ಲಿ ಹೇಳಲಾಗಿದೆ. ಈ ನೀತಿಯು ಮೋಜಿನ ಒಂದು ಕಾರ್ಯಕ್ರಮವನ್ನು ಕೂಡ ಆರರಿಂದ ಎಂಟನೆಯ ತರಗತಿವರೆಗಿನ ಮಕ್ಕಳಿಗೆ ಸೂಚಿಸಿದೆ. ಈ ಕಾರ್ಯಕ್ರಮವು ಮಕ್ಕಳಲ್ಲಿ ‘ಏಕತೆಯ ಭಾವನೆ ಮೂಡಿಸುತ್ತದೆ ಹಾಗೂ ಭಾರತದ ಸುಂದರ ಸಾಂಸ್ಕೃತಿಕ ಪರಂಪರೆ ಮತ್ತು ಬಹುತ್ವದ ಬಗ್ಗೆ ತಿಳಿಸಿಕೊಡುತ್ತದೆ’ ಎಂದು ಹೇಳಲಾಗಿದೆ. ಇವೆಲ್ಲ ಬಹಳ ಒಳ್ಳೆಯ ಆಲೋಚನೆಗಳಾದರೂ ವಾಸ್ತವದಲ್ಲಿ ಒಂದು ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಬಲವಂತವಾಗಿ ಹೇರಲು ಯತ್ನಿಸಿದಾಗ ಇಂತಹ ಆಲೋಚನೆಗಳು ಸೋಲು ಕಾಣುತ್ತವೆ.

ಭಾರತದ ಎರಡನೆಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶದ ಗೃಹ ಮಂತ್ರಿ ಆಗಿದ್ದ ಸಂದರ್ಭದಲ್ಲಿ ಹಿಂದಿ ವಿರೋಧಿ ಪ್ರತಿಭಟನೆಗಳನ್ನು ಹೇಗೆ ಶಮನಗೊಳಿಸಿದರು ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. 1962ರ ಸೆಪ್ಟೆಂಬರ್‌ನಲ್ಲಿ ತಿರುಪತಿಯಲ್ಲಿ ನಡೆದ ಸಭೆಯೊಂದರಲ್ಲಿ ಶಾಸ್ತ್ರಿ ಅವರು ಹಿಂದಿ ಭಾಷೆಯು ತಕ್ಕಮಟ್ಟಿಗೆ ಬೆಳವಣಿಗೆ ಕಂಡು, ಎಲ್ಲರೂ ಅದನ್ನು ಚೆನ್ನಾಗಿ ಕಲಿತುಕೊಳ್ಳುವವರೆಗೆ ಆ ಭಾಷೆಯನ್ನು ಹೇರುವುದರಲ್ಲಿ ಯಾವುದೇ ಆರ್ಥ ಇಲ್ಲ ಎಂದು ಹೇಳಿದ್ದರು. ಒಕ್ಕೂಟ ಸರ್ಕಾರದ ಎಲ್ಲ ಉದ್ದೇಶಗಳಿಗೆ ಹಿಂದಿಯ ಜೊತೆಯಲ್ಲೇ ಇಂಗ್ಲಿಷ್ ಭಾಷೆಯನ್ನೂ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳುವ ‘ಅಧಿಕೃತ ಭಾಷಾ ಕಾಯ್ದೆ– 1963’ ಅನ್ನು ತಂದರು.

ಕೇಂದ್ರ ಸರ್ಕಾರದ ಅಧಿಕೃತ ಸಂವಹನಗಳಲ್ಲಿ ಹಿಂದಿಯ ಬದಲು ಇಂಗ್ಲಿಷ್‌ ಇರಬೇಕು ಎಂದು ದಕ್ಷಿಣದವರು ಬಯಸುವುದನ್ನು ಗುರುತಿಸುವ ಮೂಲಕ ಶಾಸ್ತ್ರಿ ಅವರು ದಕ್ಷಿಣ ಭಾರತೀಯರ ಹೃದಯ ಗೆದ್ದರು ಎಂದು ಡಿ.ಆರ್. ಮಂಕೇಕರ್ ಅವರು ಹೇಳಿದ್ದಾರೆ. ಆದರೆ, ಇಂದಿನ ಸಂದರ್ಭದಲ್ಲಿ ಹಿಂದಿ ಭಾಷಿಕ ಪ್ರದೇಶಗಳಿಗೆ ಸೇರಿದ ನಾಯಕರು ಶಾಸ್ತ್ರಿ ಅವರಷ್ಟು (ಅವರು ಉತ್ತರಪ್ರದೇಶ ರಾಜ್ಯದವರು) ಸಂವೇದನೆ ಹೊಂದಿಲ್ಲ ಎಂಬುದು ಸ್ಪಷ್ಟ. ಇದು, ಭಾಷೆಯ ವಿಚಾರದಲ್ಲಿ ಸಂಘರ್ಷ ಹೆಚ್ಚಾಗಲು ಕಾರಣವಾಗಿದೆ.

ಹಿಂದಿ ವಿಚಾರದಲ್ಲಿ ಸಂಘರ್ಷವು ಕಾಲಕಾಲಕ್ಕೆ ನಡೆದಿದೆ. ದಕ್ಷಿಣ ಭಾರತ ಹಾಗೂ ಈಶಾನ್ಯ ಭಾರತದ ಜನರ ಸಂವೇದನೆಗಳ ವಿಚಾರದಲ್ಲಿ ಹಿಂದಿ ಭಾಷಿಕ ಪ್ರದೇಶದ ಕೆಲವರು ತೋರುತ್ತಿರುವ ಅಸೂಕ್ಷ್ಮ ಮನೋಭಾವವನ್ನು ಇತ್ತೀಚೆಗೆ ನಡೆದಿರುವ ವಿದ್ಯಮಾನಗಳು ಸ್ಪಷ್ಟವಾಗಿ ತೋರಿಸುತ್ತಿವೆ. ಸ್ವಇಚ್ಛೆಯಿಂದ ಬಳಸಲು ಅವಕಾಶ ನೀಡಿದರೆ ಜನ ಹಿಂದಿಯ ಕುರಿತು ಹೆಚ್ಚು ಪ್ರೀತಿ ತೋರಿಸುತ್ತಾರೆ. ಹಿಂದಿಯಲ್ಲಿ ಸಂವಹನ ನಡೆಸಲು ಅಥವಾ ಆ ಭಾಷೆಯನ್ನು ಒಪ್ಪಿಕೊಳ್ಳಲು ಅವರ ಮೇಲೆ ಒತ್ತಡ ತಂದಾಗ, ಭಾವನಾತ್ಮಕ ಪ್ರತಿರೋಧ ಎದುರಾಗುತ್ತದೆ. ಈ ಪ್ರತಿರೋಧವು ಭಾಷೆಯ ವಿರುದ್ಧ ಅಲ್ಲ; ಇದು ರಾಷ್ಟ್ರದ ಸಮಾಜೋ–ಸಾಂಸ್ಕೃತಿಕ ಹಾಗೂ ರಾಜಕೀಯ ಬದುಕಿನಲ್ಲಿ ಉತ್ತರ ಭಾರತೀಯರು ಹೊಂದಿರುವ ಪಾರಮ್ಯದ ವಿರುದ್ಧವಾಗಿ ಬರುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು