ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ –ಪ್ರೊ. ಸಂದೀಪ್ ಶಾಸ್ತ್ರಿ ಲೇಖನ | ಚುನಾವಣೆ: ಎಲ್ಲಿ ನಡೆವುದು ಹಣಾಹಣಿ?

ಯಾವುದೇ ಒಂದು ಪ್ರದೇಶದಲ್ಲಿ ಸ್ಥಾನಗಳ ಸಂಖ್ಯೆ ಕುಸಿದರೂ ಬಹುಮತ ಮರೀಚಿಕೆ
Last Updated 13 ಜನವರಿ 2023, 19:31 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿವೆ. ತಂತ್ರ, ಪ್ರತಿತಂತ್ರಗಳನ್ನು ಹೆಣೆಯುತ್ತಿವೆ. ಪ್ರತಿದಿನವೂ ಹೊಸ ಅಂಶಗಳು ಕೇಂದ್ರಸ್ಥಾನಕ್ಕೆ ಬರುತ್ತಿವೆ, ಪಕ್ಷಗಳು ಅವುಗಳಿಂದ ಮತದಾರರ ಮೇಲೆ ಆಗುವ ಪರಿಣಾಮವನ್ನು ಪರೀಕ್ಷಿಸುತ್ತಿವೆ. ರಾಜ್ಯದ ಪ್ರತೀ ಪ್ರದೇಶದಲ್ಲಿ ಮುನ್ನೆಲೆಗೆ ಬರುವ ಸಣ್ಣ ಸಣ್ಣ ಚಿತ್ರಣಗಳು ಚುನಾವಣೆ ಹತ್ತಿರವಾಗುತ್ತಿದ್ದಂತೆಲ್ಲ ಹೆಚ್ಚಿನ ಗಮನವನ್ನು ಸೆಳೆಯಲಿವೆ.

ಜನರಾಜಕಾರಣ –ಪ್ರೊ. ಸಂದೀಪ್ ಶಾಸ್ತ್ರಿ ಲೇಖನ | ಚುನಾವಣೆ: ಎಲ್ಲಿ ನಡೆವುದು ಹಣಾಹಣಿ?

ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಹಳೆ ಮೈಸೂರು ಪ್ರದೇಶಗಳ ಚುನಾವಣಾ ಹಣಾಹಣಿಗಳಲ್ಲಿ ವ್ಯತ್ಯಾಸ ಇರುವುದನ್ನು ನಾವು ಸಾಮಾನ್ಯವಾಗಿ ಗುರುತಿಸುತ್ತೇವೆ. ಈ ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳು ತಮ್ಮದೇ ಆದ ಹಿಡಿತ ಹೊಂದಿವೆ. ಹಳೆ ಮೈಸೂರು, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಪ್ರದೇಶಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಳ್ಳದಿದ್ದರೆ ಯಾವುದೇ ರಾಜಕೀಯ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಕಷ್ಟ ಎಂಬುದನ್ನು ಇತಿಹಾಸ ಹೇಳುತ್ತದೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯು ಉತ್ತರ, ಮಧ್ಯಮ ಹಾಗೂ ಪಶ್ಚಿಮ ಭಾರತದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದೆ. ಕರ್ನಾಟಕದಲ್ಲಿ, ಅದರಲ್ಲೂ ಮುಖ್ಯವಾಗಿ 1983ರ ನಂತರದಲ್ಲಿ, ಪಕ್ಷವೊಂದು ಬಹುಮತ ಗಳಿಸಬೇಕು ಎಂದಾದರೆ ಮೇಲೆ ಹೇಳಿದ ಮೂರು ಪ್ರದೇಶಗಳಲ್ಲಿ ಒಳ್ಳೆಯ ಸಾಧನೆ ತೋರಬೇಕು. ಯಾವುದೇ ಒಂದು ಪ್ರದೇಶದ ಬಹುಪಾಲು ಸ್ಥಾನಗಳನ್ನು ರಾಜಕೀಯ ಪಕ್ಷವೊಂದು ಗೆದ್ದುಕೊಳ್ಳುವ ಸಾಧ್ಯತೆ ತೀರಾ ಕಡಿಮೆ.

ರಾಜ್ಯ ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದಿದ್ದ ನಾಲ್ಕು ಚುನಾವಣೆಗಳಲ್ಲಿ (1983, 2004, 2008 ಮತ್ತು 2018), ಅತಿಹೆಚ್ಚಿನ ಸ್ಥಾನ ಪಡೆದಿದ್ದ ಪಕ್ಷಗಳು ಈ ಮೂರು ಪ್ರದೇಶಗಳಲ್ಲಿ ಸಮಾನವಾಗಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆದ್ದಿರಲಿಲ್ಲ. 1983ರಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಜನತಾ ಪಕ್ಷವು, ಹಳೆ ಮೈಸೂರು ಪ್ರದೇಶದಲ್ಲಿ ಭಾರಿ ಸಾಧನೆ ಮೆರೆಯಿತು. ಆದರೆ, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ನಾಲ್ಕನೆಯ ಒಂದರಷ್ಟಕ್ಕಿಂತ ತುಸು ಹೆಚ್ಚಿನ ಸ್ಥಾನಗಳನ್ನು ಮಾತ್ರ ಪಡೆಯಿತು. ಆಗ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಒಳ್ಳೆಯ ಸಾಧನೆ ತೋರಿದ್ದ ಕಾಂಗ್ರೆಸ್, ಹಳೆ ಮೈಸೂರು ಪ್ರದೇಶದಲ್ಲಿ ಮುಗ್ಗರಿಸಿತ್ತು.

2004ರಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತ ಇರಲಿಲ್ಲ. ಆಗ ಬಿಜೆಪಿಯು ಹಳೆ ಮೈಸೂರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಸ್ಥಾನಗಳನ್ನು ಗಟ್ಟಿ ಮಾಡಿಕೊಂಡಿರಲಿಲ್ಲ. 2008ರಲ್ಲಿ ಬಿಜೆಪಿ ಹಳೆ ಮೈಸೂರು ಪ್ರದೇಶದಲ್ಲಿ ಸ್ಥಾನಗಳನ್ನು ಉತ್ತಮಪಡಿಸಿಕೊಂಡಿತಾದರೂ, ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಅದರ ಸಂಖ್ಯೆ ಕುಸಿದಿತ್ತು. 2018ರಲ್ಲಿ ಕೂಡ ಇದೇ ರೀತಿ ಆಯಿತು. ಬಿಜೆಪಿಯು ಕಿತ್ತೂರು ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದಲ್ಲಿ ಭಾರಿ ಸಾಧನೆ ತೋರಿತು. ಹಳೆ ಮೈಸೂರು ಪ್ರದೇಶದಲ್ಲಿ ವಿರೋಧಿಗಳ ಕೋಟೆಯನ್ನು ಒಂದಿಷ್ಟು ಪ್ರವೇಶಿಸಿತು. ಆದರೆ, ಪಕ್ಷವು ಕಲ್ಯಾಣ ಕರ್ನಾಟಕದಲ್ಲಿ ಮತ್ತು (ಹಳೆ ಮೈಸೂರು ಪ್ರದೇಶದ ಭಾಗವಾಗಿರುವ) ಬೆಂಗಳೂರಿನಲ್ಲಿ ಸೀಮಿತ ಯಶಸ್ಸು ಕಂಡಿತು. ಆ ಚುನಾವಣೆಯಲ್ಲಿ ಬಿಜೆಪಿಯು ಕೆಲವೇ ಸ್ಥಾನಗಳ ಅಂತರದಲ್ಲಿ ಬಹುಮತದ ಕೊರತೆ ಎದುರಿಸಿತು.

1983ರ ನಂತರದಲ್ಲಿ ಪಕ್ಷವೊಂದು ಸ್ಪಷ್ಟ ಬಹುಮತ ಪಡೆದ ಚುನಾವಣೆಗಳನ್ನು ಗಮನಿಸಿದಾಗಲೂ, ಈ ಮೂರು ಪ್ರದೇಶಗಳ ಪ್ರಾಮುಖ್ಯ ಗೊತ್ತಾಗುತ್ತದೆ. 1985ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷವು ಹಳೆ ಮೈಸೂರು ಪ್ರದೇಶದಲ್ಲಿ ಸ್ಥಾನ ಭದ್ರ
ಪಡಿಸಿಕೊಂಡು, ಕಿತ್ತೂರು ಕರ್ನಾಟಕ (ಅಲ್ಲಿ ನಾಲ್ಕನೆಯ ಮೂರರಷ್ಟು ಸ್ಥಾನ ಗೆದ್ದಿತ್ತು) ಮತ್ತು ಕಲ್ಯಾಣ ಕರ್ನಾಟಕದಲ್ಲಿ (ಅರ್ಧದಷ್ಟು ಸ್ಥಾನ ಗೆದ್ದುಕೊಂಡಿತ್ತು) ಉತ್ತಮ ಸಾಧನೆ ತೋರಿತ್ತು. 1994ರಲ್ಲಿ ಜನತಾದಳ ಕೂಡ ಇದೇ ಬಗೆಯಲ್ಲಿ ಸಾಧನೆ ತೋರಿತು. 1989, 1999 ಮತ್ತು 2013ರಲ್ಲಿ ಕಾಂಗ್ರೆಸ್ ಆಡಳಿತ ಪಕ್ಷವಾಗಿ ಹೊರಹೊಮ್ಮಿದ್ದು, ಈ ಮೂರು ಪ್ರದೇಶಗಳಲ್ಲಿ ಒಳ್ಳೆಯ ಸಾಧನೆ ತೋರಿದ ಕಾರಣದಿಂದಾಗಿ.

2023ರ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ಹೆಣೆಯುತ್ತಿರುವ ಬಿಜೆಪಿ ನಾಯಕತ್ವವು, ಬೆಂಗಳೂರನ್ನೂ ಒಳಗೊಂಡಿರುವ ಹಳೆ ಮೈಸೂರು ಪ್ರದೇಶದ ಮೇಲೆ ಹೆಚ್ಚಿನ ಗಮನಹರಿಸಿದೆ. ಹಳೆ ಮೈಸೂರು ಪ್ರದೇಶದಲ್ಲಿ ದೊಡ್ಡ ಜನಾದೇಶ ಪಡೆಯಲು ಸಾಧ್ಯವಾಗದೇ ಇರುವುದು ಪಕ್ಷಕ್ಕೆ ಹಿಂದಿನ ಚುನಾವಣೆಗಳಲ್ಲಿ ಬಹುಮತ ಪಡೆಯಲು ಆಗದಂತೆ ಮಾಡಿತು. ಹಳೆ ಮೈಸೂರು ಪ್ರದೇಶದಲ್ಲಿ ಪಕ್ಷ ಕಂಡ ಸೀಮಿತ ಯಶಸ್ಸು, ಅದು ಬಹುಮತದ ಗಡಿ ದಾಟದಂತೆ ಮಾಡಿತು. ಈ ಬಾರಿ ಬಿಜೆಪಿಗೆ ಇರುವ ಸವಾಲು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಪ್ರದೇಶಗಳಲ್ಲಿ ಸಾಧನೆಯು ಕೆಳಮಟ್ಟಕ್ಕೆ ಬರದಂತೆ ನೋಡಿಕೊಳ್ಳುವುದು ಹಾಗೂ ಹಳೆ ಮೈಸೂರು ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡು, ಇತರ ಮೂರು ಪ್ರದೇಶಗಳಲ್ಲಿ ಆಗಬಹು ದಾದ ಸ್ಥಾನನಷ್ಟವನ್ನು ಸರಿದೂಗಿಸಿಕೊಳ್ಳುವುದು.

ಇಷ್ಟು ಸಾಧ್ಯವಾಗದೇ ಇದ್ದರೆ ಬಿಜೆಪಿ ಪಾಲಿಗೆ, ಬಹುಮತ ಗಳಿಸುವ ಬಯಕೆಯು ಮರೀಚಿಕೆ ಆಗಿಯೇ ಉಳಿಯುತ್ತದೆ. ಬಿಜೆಪಿ ಅಭಿಯಾನದಲ್ಲಿ ಹಳೆ ಮೈಸೂರು ಪ್ರಾಂತ್ಯವು ಆದ್ಯತೆಯನ್ನು ಪಡೆದಿರುವುದು ಏಕೆ ಎಂಬುದನ್ನು ಇದು ಹೇಳುತ್ತದೆ. ಹಳೆ ಮೈಸೂರು ಪ್ರದೇಶದಲ್ಲಿ ಪ್ರಬಲ ಸಮುದಾಯವಾದ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಒಕ್ಕಲಿಗರ ಮತಗಳು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ಹಂಚಿಹೋಗಿವೆ. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡ ಕಾಂಗ್ರೆಸ್ ಹಾಗೂ ಜೆಡಿಎಸ್‌, ಬಿಜೆಪಿಗೆ ಈ ಪ್ರದೇಶದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಒಂದು ಅವಕಾಶ ಕಲ್ಪಿಸಿದವು. ಬಿಜೆಪಿಯು ಅವಕಾಶವನ್ನು ಬಳಸಿಕೊಂಡಿತು. ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆಯನ್ನು ಪ್ರತ್ಯೇಕವಾಗಿ ಎದುರಿಸಲಿವೆ. ಹೀಗಾಗಿ, ಒಕ್ಕಲಿಗರ ಮತಗಳ ಮೇಲೆ ಸೂಕ್ಷ್ಮವಾಗಿ ಗಮನ ಇರಿಸಲಾಗುತ್ತದೆ. ಈ ಪ್ರದೇಶದಲ್ಲಿ ಪ್ರಬಲ ಅಲ್ಲದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮತಗಳೂ ಬಹಳ ಮುಖ್ಯ.

ಪ್ರಬಲ ಅಲ್ಲದ ಒಬಿಸಿ ವರ್ಗಗಳ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿ ಹಾಗೂ ಕಾಂಗ್ರೆಸ್ ಯತ್ನ ನಡೆಸಿವೆ. ಕಾಂಗ್ರೆಸ್ ಪಕ್ಷವು ಕಿತ್ತೂರು ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಪ್ರದೇಶದಲ್ಲಿ ಕಳೆದುಕೊಂಡ ನೆಲೆಗಳನ್ನು ಮತ್ತೆ ಗಳಿಸಿಕೊಳ್ಳಲು ಪ್ರಯತ್ನ ನಡೆಸಿದೆ. ಅಲ್ಲದೆ, ಹಳೆ ಮೈಸೂರು ಪ್ರದೇಶದಲ್ಲಿ ತನ್ನ ಸಾಧನೆಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಕೂಡ ಅದು ಗಮನಹರಿಸಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕಿತ್ತೂರು ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದಲ್ಲಿ ಉತ್ತಮ ಸಾಧನೆ ತೋರಲಿಲ್ಲ. ಹಳೆ ಮೈಸೂರು ಪ್ರದೇಶದಲ್ಲಿ ಅದರ ಸ್ಥಾನ ತುಸು ಕಡಿಮೆ ಆಯಿತು. ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪಕ್ಷವು ತನ್ನ ಸ್ಥಾನಗಳನ್ನು ಉಳಿಸಿಕೊಳ್ಳಲಿಲ್ಲ.

ವಿಧಾನಸಭೆಯಲ್ಲಿ ಬಹುಮತ ಸಾಧಿಸಬೇಕು ಎಂದಾದರೆ ಹಳೆ ಮೈಸೂರು, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಪ್ರದೇಶಗಳಲ್ಲಿ ಉತ್ತಮ ಸಾಧನೆ ತೋರಬೇಕು ಎಂಬುದನ್ನು ಕಾಂಗ್ರೆಸ್ ಮತ್ತು ಬಿಜೆಪಿ ಅರ್ಥ ಮಾಡಿಕೊಂಡಿವೆ. ಈ ಮೂರರಲ್ಲಿ ಯಾವುದೇ ಒಂದು ಪ್ರದೇಶದಲ್ಲಿ ಸ್ಥಾನಗಳ ಸಂಖ್ಯೆ ಕುಸಿದರೂ, ಬಹುಮತವು ಮರೀಚಿಕೆ ಆಗುತ್ತದೆ. ಹೀಗಾಗಿ, ಈ ಮೂರು ಪ್ರದೇಶಗಳಲ್ಲಿನ ಚುನಾವಣಾ ಕಣದ ಮೇಲೆ ಗಮನ ಇರಿಸಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT