ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟರಾಜ್ ಹುಳಿಯಾರ್ ಅಂಕಣ| ಹೊಸ ವರ್ಷಕ್ಕೆ ಹೊಸ ಪುಸ್ತಕದ ಸಖ್ಯ

ಶ್ರೇಷ್ಠ ಪುಸ್ತಕಗಳ ಒಡನಾಟವಿದ್ದರೆ ನಮ್ಮ ನಾಯಕರ ನಡೆ ನುಡಿಗಳು ಕೊಂಚ ನೆಟ್ಟಗಾಗಬಲ್ಲವು
Last Updated 31 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಕಳೆದ ಹೊಸ ವರ್ಷದ ಮೊದಲ ದಿನ ‘ಪ್ರಜಾವಾಣಿ’ಯ ಇದೇ ಅಂಕಣದಲ್ಲಿ, ದೆಹಲಿ ಗಡಿಯಲ್ಲಿ ನಡೆಯುತ್ತಿದ್ದ ರೈತ ಚಳವಳಿಯ ಗೆಲುವಿನ ಬಗ್ಗೆ ಆಶಾವಾದದಿಂದ ಬರೆದಿದ್ದು ನೆನಪಾಗುತ್ತಿದೆ. ಆ ಆಶಾವಾದ ಅಷ್ಟಿಷ್ಟು ನಿಜವಾಗಿ, ರೈತರು ಒಂದು ಹಂತದಲ್ಲಾದರೂ ಗೆದ್ದಿದ್ದಾರೆ. ಈ ಗೆಲುವಿನ ಹುಮ್ಮಸ್ಸು ರೈತ ಸಂಘಟನೆಗಳ ಒಕ್ಕೂಟವನ್ನು ಪಂಜಾಬ್ ಚುನಾವಣೆಯತ್ತಲೂ ಒಯ್ದಿದೆ.

ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್

ಚಳವಳಿಗಳಂತೆ ಮಾನವಜೀವಿಗಳಿಗೂ ಕಾಲಕಾಲದ ಗೆಲುವುಗಳು ಹೊಸ ಎನರ್ಜಿ ಉಕ್ಕಿಸುತ್ತಿರುತ್ತವೆ. ಇಂಥ ಗೆಲುವಿನ ಕಾತರ ಹೊಸ ವರ್ಷದಲ್ಲಿ ಹೊಸ ದಿಕ್ಕಿಗಾಗಿ ಹಂಬಲಿಸುವವರಲ್ಲೂ ಕಾಣುತ್ತಿರುತ್ತದೆ. ಪ್ರತಿವರ್ಷದ ಶುರುವಿನಲ್ಲಿ, ಆರೋಗ್ಯಕರ ಮನಃಸ್ಥಿತಿಯುಳ್ಳ ಯಾರನ್ನೇ ಕೇಳಿ ನೋಡಿ: ಹೊಸತೇನನ್ನೋ ಮಾಡುವ ಕನಸು, ತುಡಿತ ಚಿಮ್ಮುತ್ತಿರುತ್ತದೆ. ಬರೆಯುವವರು, ಕಲಾವಿದರು, ನಾಟಕದವರು, ಸಿನಿಮಾದವರು… ಮುಂತಾದವರೆಲ್ಲ ಹೊಸ ಕೃತಿ, ಹೊಸ ಯೋಜನೆಗಳ ಬಗ್ಗೆ ಮಾತಾಡುತ್ತಿರುತ್ತಾರೆ. ಇಂಥ ಉತ್ಸಾಹ ಕಂಡು ಕರುಬುತ್ತಾ, ‘ಇದು ಪಶ್ಚಿಮದ ಹೊಸ ವರ್ಷ, ನಮ್ಮದಲ್ಲ’ ಎಂದು ಗೊಣಗುವವರೂ ಇದ್ದಾರೆ. ಆದರೆ ಮುಕ್ತ ಮನಸ್ಸಿನ ಆಶಾವಾದ ಉಕ್ಕಿಸುವ ಆರೋಗ್ಯವನ್ನು ಯಾರೂ ಕೊಲ್ಲಲಾರರು. ರಾಜಕೀಯ ಸಭೆಗಳಿಗೊಂದು, ಜನರಿಗೊಂದು ಕಾನೂನು ಮಾಡಿ ಹೊಸ ವರ್ಷಾ ಚರಣೆಗಳ ಸಂಭ್ರಮವನ್ನು ಕೊಲ್ಲುವ ಸರ್ಕಾರಗಳು ಜನರಿಗೆ ಕಿರಿಕಿರಿ ಉಂಟು ಮಾಡಬಲ್ಲವೇ ವಿನಾ ಅವರ ಹುಮ್ಮಸ್ಸನ್ನು ಕೊಲ್ಲಲಾರವು.

ಇಲ್ಲೊಂದು ವೈರುಧ್ಯಮಯ ಸತ್ಯ ಕಾಣುತ್ತದೆ: ಕೊಂಚ ಮುಕ್ತ ಮನಸ್ಸಿನ ಯಾರನ್ನು ಕೇಳಿದರೂ ಏನಾದರೂ ಒಳಿತನ್ನು ಮಾಡುವ ಮಾತಾಡುತ್ತಲೇ ಇರುತ್ತಾರೆ. ಆದರೂ ನಮ್ಮ ಸುತ್ತಮುತ್ತಲ ಸಮಾಜ ದಲ್ಲಿ ಇಷ್ಟೊಂದು ಕೆಡುಕಿದೆ ಎಂದು ಯಾಕೆ ಎಲ್ಲ ಸೂಕ್ಷ್ಮಜೀವಿಗಳಿಗೂ ಅನ್ನಿಸುತ್ತಿರುತ್ತದೆ? ರಾಜಕಾರಣಿ ಗಳು, ಧಾರ್ಮಿಕ ನಾಯಕರು, ಸಾಂಸ್ಕೃತಿಕ ವಾಚಾಳಿಗಳು ಸದಾ ಯಾರನ್ನಾದರೂ ಹೊಡೆಯಲು ಹೊರಟವರಂತೆ ಮಾತಾಡುವುದು ಕೂಡ ಜನರ ಕಿರಿಕಿರಿಯನ್ನು ಹೆಚ್ಚಿಸುತ್ತಿರುತ್ತದೆ. ಜನರನ್ನು ಒಳಿತಿನ ಹಾದಿಗೆ ತರುವ ಒಳ್ಳೆಯ ಭಾಷೆಯನ್ನೇ ಬಹುತೇಕ ಸಾರ್ವಜನಿಕ ಮಾತು ಗಾರರು ಕಳೆದುಕೊಂಡಿದ್ದಾರೆ. ಸರ್ಕಾರಗಳು ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಿಸುವ ಅರೆಬೆಂದ ವಾಚಾಳಿಗಳಂತೂ ತಮ್ಮ ನಾಯಕರಿಗಿಂತ ವಿಕಾರವಾಗಿ ಕೂಗುತ್ತಿರುತ್ತಾರೆ.

ನಮ್ಮ ಕಣ್ಣೆದುರೇ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಕೆ.ಎಚ್.ರಂಗನಾಥ್ ಥರದವರು ಎಷ್ಟು ಬಿಡು ಬೀಸಾಗಿ, ಜನರ ತಿಳಿವಳಿಕೆ ಬೆಳೆಸುವಂತೆ ಮಾತಾಡುತ್ತಿ ದ್ದರೆಂಬುದು ರಾಜಕಾರಣಿಗಳಿಗೇ ಮರೆತುಹೋಗಿದೆ. ಶಾಂತವೇರಿ ಗೋಪಾಲಗೌಡ, ಜೆ.ಎಚ್.ಪಟೇಲ್ ಥರದವರು ಸಹಜ ಹಾಸ್ಯ ಬಳಸಿ ಒಳ್ಳೆಯ ಬದಲಾವಣೆ ಗಳತ್ತ ಜನರನ್ನು ತಿರುಗಿಸುತ್ತಿದ್ದ ಸಾಧ್ಯತೆಯೂ ಕಣ್ಮರೆ ಯಾಗಿದೆ. ಚಾನೆಲ್ಲುಗಳ ಶೂರರಂತೂ ಮಹಾಯುದ್ಧ
ಕ್ಕೆಂದೇ ಹಾಜರಾದವರಂತೆ ಚೀರಿ ಚೀರಿ ಸಂಜೆಗಳೇ ಮಲಿನಗೊಳ್ಳುತ್ತಿವೆ.

ಸಾರ್ವಜನಿಕ ವಲಯದಲ್ಲಿ ಎದ್ದು ಕಾಣುತ್ತಿರುವ ಅಸೂಕ್ಷ್ಮತೆಗೆ ಮತ್ತೊಂದು ಮುಖ್ಯ ಕಾರಣ: ರಾಜ ಕಾರಣಿಗಳು ಹಾಗೂ ಸಾರ್ವಜನಿಕ ಭಾಷೆಯನ್ನು ಬಳಸು ವವರು ಪುಸ್ತಕಗಳನ್ನು ಓದುವುದಿರಲಿ, ಮುಟ್ಟುವುದನ್ನು ಕೂಡ ಬಿಟ್ಟಿರುವುದು. ಎಷ್ಟೋ ವರ್ಷಗಳಿಂದ ಕೆಲವರನ್ನು ಬಿಟ್ಟರೆ ಕರ್ನಾಟಕದ ರಾಜಕಾರಣಿಗಳ ಕೈಯಲ್ಲಿ ಯಾವುದಾದರೂ ಪುಸ್ತಕ ಕಂಡಿದೆಯೇ? ಒಳ್ಳೆಯ ಪುಸ್ತಕಗಳ ಬಗ್ಗೆ ಮಾತಾಡಿದ್ದು ನೆನಪಿದೆಯೇ? ಇನ್ನು ಹೊಸ ವರ್ಷದ ಶುರುವಿನಲ್ಲಿ ಜಗತ್ತಿನುದ್ದಕ್ಕೂ ಹೆಣ್ಣು, ಗಂಡುಗಳು ಈ ವರ್ಷ ತಾವು ಓದಲೇಬೇಕಾದ ಪುಸ್ತಕಗಳ ಪಟ್ಟಿ ಹಂಚಿಕೊಳ್ಳುತ್ತಿರುವುದು ಈ ಜಡಜೀವಿಗಳ ಕಣ್ಣಿಗೆ ಬೀಳುವ ಸಾಧ್ಯತೆ ದೂರವೇ ಉಳಿಯಿತು.

ವರ್ಷದಲ್ಲಿ ಕೆಲವಾದರೂ ಮುಖ್ಯ ಪುಸ್ತಕಗಳನ್ನು ಓದದಿದ್ದರೆ ರಾಜಕಾರಣಿಗಳಿಗೆ, ಸಾರ್ವಜನಿಕ ಮಾತುಗಾರರಿಗೆ ಒಳ್ಳೆಯ ಐಡಿಯಾಗಳು ಎಲ್ಲಿಂದ ಬರುತ್ತವೆ? ಒಳ್ಳೆಯ ಪುಸ್ತಕಗಳನ್ನು ಓದದ ತಲೆ ತುಂಬ ಮನೆಹಾಳು ಐಡಿಯಾಗಳಷ್ಟೇ ತುಂಬಿರುತ್ತವೆ. ಮಹಿಳಾ ರಾಜಕಾರಣಿಗಳಿಗೆ ಸ್ತ್ರೀವಾದಿ ಚಿಂತನೆಗಳ ಪರಿಚಯವೇ ಇಲ್ಲದಿದ್ದರೆ, ಪುರುಷರ ರಾಜಕೀಯ ಅಬ್ಬರವನ್ನು ಎದುರಿಸಬಲ್ಲ ಸಿದ್ಧಾಂತ, ಭಾಷೆ, ನೋಟ, ನಿಲುವುಗಳು ಎಲ್ಲಿಂದ ಸಿಗುತ್ತವೆ? ಬಹಳಷ್ಟು ಶಾಸಕರು ಈ ಹಿಂದೆ ವಿಧಾನಸಭೆ, ವಿಧಾನ ಪರಿಷತ್ತುಗಳಲ್ಲೇ ಮಾತಾಡಿರುವ ಜ್ಞಾನಿಗಳ ಭಾಷಣಗಳ ಕಡತಗಳ ಮೇಲೆ ಕಣ್ಣಾಡಿಸಿರುವ ಸೂಚನೆ ಕೂಡ ಅವರ ಶಾಸನಸಭೆಯ ಮಾತುಗಳಲ್ಲಿ ಕಾಣುತ್ತಿಲ್ಲ. ಪುಸ್ತಕಗಳ ಸಂಗದಲ್ಲಿರುವ ಕಿಮ್ಮನೆ ರತ್ನಾಕರ್ ಥರದ ನಾಯಕರು ಕರ್ನಾಟಕದ ಎಲ್ಲ ಬಜೆಟ್ಟುಗಳನ್ನೂ ಅಧ್ಯಯನ ಮಾಡಿರುವ ರೀತಿ ಕೂಡ ಈ ಶಾಸಕರುಗಳಿಗೆ ಪ್ರೇರಣೆ ನೀಡಿದಂತಿಲ್ಲ. ಶಾಸನಸಭೆಯಲ್ಲೇ ವಿಕಾಸಗೊಂಡ ಚಿಂತನೆಗಳನ್ನಾದರೂ ಓದದ ನಾಯಕರು ಬಾಯಿಗೆ ಬಂದ ಭಾಷೆ ಬಳಸುತ್ತಿರುವ ಚಾಳಿ ಪುರಸಭೆ, ಪಂಚಾಯಿತಿಗಳಿಗೂ ಹಬ್ಬುತ್ತಿದೆ.

ಇದೆಲ್ಲವನ್ನೂ ಹೊಸ ವರ್ಷದ ಶುರುವಿನಲ್ಲಿ ನೆನಪಿಸಲು ಕಾರಣವಿದೆ: ಜಗತ್ತಿನೆಲ್ಲೆಡೆ ವರ್ಷಾರಂಭ ದಲ್ಲಿ ಸಿಗರೇಟು, ಮದ್ಯಪಾನ ಬಿಡುವುದು, ತೂಕ ಇಳಿಸುವುದು, ಜಗಳಗಂಟತನ ಬಿಡುವುದು ಮುಂತಾದ ಪ್ರತಿಜ್ಞೆ ಮಾಡುವುದು ಸಾಮಾನ್ಯ. ಆದರೆ ವರ್ಷಾರಂಭದಲ್ಲಿ ಪುಸ್ತಕಗಳನ್ನು ಓದುವುದರ ಕುರಿತ ಪ್ರತಿಜ್ಞೆಗಳನ್ನು ಪ್ರಜ್ಞಾವಂತರೆಲ್ಲರೂ ಅತ್ಯಗತ್ಯವಾಗಿ ಗಮನಿಸಬೇಕು. ಕಳೆದ ವರ್ಷ ಆರಿಸಿದ್ದ ಪುಸ್ತಕಗಳಲ್ಲಿ ಹತ್ತನ್ನಷ್ಟೇ ಓದಿದೆ ಎಂದು ಒಬ್ಬಳಿಗೆ ಬೇಸರ; ಮತ್ತೊಬ್ಬಳಿಗೆ ಕಳೆದ ವರ್ಷ ಓದದ ಪುಸ್ತಕಗಳ ಜೊತೆಗೆ ಹೊಸ ಪುಸ್ತಕಗಳ ಪಟ್ಟಿ ರೂಪಿಸುವ ಉತ್ಸಾಹ.

ಇವುಗಳ ನಡುವೆ ಕುತೂಹಲಕ್ಕೆ, ನನ್ನ ನೆಚ್ಚಿನ ಮಹಿಳಾ ಲೀಡರ್, ನ್ಯೂಜಿಲೆಂಡಿನ ಜನಪ್ರಿಯ ಪ್ರಧಾನಿ, ಜೆಸಿಂದಾ ಆರ್ಡರ್ನ್ ಯಾವ ಪುಸ್ತಕಗಳನ್ನು ಓದುತ್ತಿದ್ದಾರೆ ಎಂದು ನೋಡಿದೆ. ಜೆಸಿಂದಾ, ಕೊರೊನಾ ಬಿಕ್ಕಟ್ಟಿನಲ್ಲಿ ನ್ಯೂಜಿಲೆಂಡಿಗೆ ಅದ್ಭುತ ಸ್ಥೈರ್ಯ, ಮುನ್ನೋಟ ಕೊಟ್ಟ ನಾಯಕಿ. ಕೊರೊನಾದ ಆರಂಭದಲ್ಲೇ ಕ್ರಮ ತೆಗೆದುಕೊಳ್ಳಲು ಸಲಹೆ ಕೊಟ್ಟ ರಾಹುಲ್ ಗಾಂಧಿಯವರ ಮಾತನ್ನು ಗಂಭೀರವಾಗಿ ಪರಿಗಣಿಸದೆ ಭಾರತ ಆಹ್ವಾನಿಸಿಕೊಂಡ ದುರಂತದ ಕಾಲದಲ್ಲಿ ಜೆಸಿಂದಾ ಎಚ್ಚರವಾಗಿದ್ದರು. ನ್ಯೂಜಿಲೆಂಡ್‌ನಲ್ಲಿ ವಿಮಾನ ನಿಲ್ದಾಣ ಗಳಿಗೆ ಬಂದಿಳಿಯುತ್ತಿದ್ದ ಪ್ರಯಾಣಿಕರ ಬಗ್ಗೆ ಸರ್ಕಾರದ ಕಟ್ಟುನಿಟ್ಟಾದ ಮುನ್ನೆಚ್ಚರಿಕೆಯಿಂದ ಅಲ್ಲಿ ಸಾವಿನ ಪ್ರಮಾಣ ಅತ್ಯಂತ ಕಡಿಮೆಯಾಯಿತು.

ಪುಸ್ತಕಗಳ ಸಂಗ ಬಿಡದ ಡೈನಮಿಕ್ ನಾಯಕಿ ಜೆಸಿಂದಾ ಕಳೆದ ವರ್ಷ ತಾವು ಮೆಚ್ಚಿದ ಪುಸ್ತಕಗಳ ಪಟ್ಟಿ ಕೊಟ್ಟರು. ನ್ಯೂಜಿಲೆಂಡಿನಲ್ಲಿ ರಾಜಕಾರಣಿ
ಗಳಿಗೆ ಒಳ್ಳೆಯ ಪುಸ್ತಕಗಳನ್ನು ಕೊಡುವ ಸಂಸ್ಥೆಗಳೇ ಇವೆ. ಜೆಸಿಂದಾ ಪಟ್ಟಿಯ ಜೊತೆಗೇ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಾಲಕಾಲಕ್ಕೆ ಕೊಟ್ಟ ನೂರು ಪುಸ್ತಕಗಳ ಪಟ್ಟಿ ಗಮನಿಸಿದೆ. ಜೆಸಿಂದಾರಂತೆ ಒಬಾಮ ಕೂಡ ತಮ್ಮ ಆಯ್ಕೆಯ ಪುಸ್ತಕಗಳನ್ನು ಓದಿದ್ದಾರೆ. ಕೊರೊನಾ ಕಾಲದಲ್ಲಿ ಪುಸ್ತಕ, ಸಂಗೀತ ತಮ್ಮನ್ನು ಪೊರೆದಿದ್ದನ್ನು ನೆನೆದಿದ್ದಾರೆ. ಒಬಾಮರ ಪ್ರಿಯ ಪುಸ್ತಕಗಳ ಪಟ್ಟಿಯಲ್ಲಿ ಚಿನುವ ಅಚಿಬೆ, ಟೋನಿ ಮಾರಿಸನ್, ಅಡಿಚಿಯರ ಕಾದಂಬರಿಗಳು, ಆರ್ಥಿಕ, ರಾಜಕೀಯ ಲೋಕದ ಪುಸ್ತಕಗಳಿವೆ. ಪುಸ್ತಕ ಓದಿ ಹುಟ್ಟಿದ ಸೂಕ್ಷ್ಮತೆ ಜೆಸಿಂದಾ, ಒಬಾಮರ ಮಾತು, ನಡವಳಿಕೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಲಿಂಕನ್, ಫಿಡೆಲ್ ಕ್ಯಾಸ್ಟ್ರೊ, ನೆಹರೂ ಸೇರಿದಂತೆ ಪುಸ್ತಕಗಳ ಸಖ್ಯದಲ್ಲಿದ್ದ ದೊಡ್ಡ ನಾಯಕರುಗಳ ಎದುರು ಯಾವ ಪುಸ್ತಕಗಳನ್ನೂ ಓದದೆ ಪಶುಗಳಂತೆ ವರ್ತಿಸುವ ಲೀಡರುಗಳನ್ನು ಹೋಲಿಸಿ: ಒಳ್ಳೆಯ ಪುಸ್ತಕಗಳ ಸಂಗದಲ್ಲಿರುವ ರಾಜಕಾರಣಿಗಳು ದೇಶದ ಆರೋಗ್ಯಕ್ಕೆ ಎಷ್ಟು ಅತ್ಯಗತ್ಯ ಎನ್ನುವುದು ತಂತಾನೇ ಹೊಳೆಯುತ್ತದೆ.

ರಾಜಕಾರಣಿಗಳಿರಲಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅಧ್ಯಾಪಕರು ಕೂಡ ತಂತಮ್ಮ ವಿಷಯಗಳಿಗೆ ಸಂಬಂಧಿಸಿದ ಒಂದೆರಡು ಹೊಸ ಪುಸ್ತಕಗಳನ್ನಾದರೂ ಪ್ರತೀ ತಿಂಗಳು ಕೊಳ್ಳದಿರುವ ಬೇಜವಾಬ್ದಾರಿತನ ಕೂಡ ಇಲ್ಲಿದೆ. ಡಿಜಿಟಲ್ ಮಂದಿ ಕಿಂಡಲ್, ಇ-ಪುಸ್ತಕ, ಕೇಳು ಪುಸ್ತಕಗಳಲ್ಲಿ ಮುಳುಗಿದ್ದಾರೆ. ಆದರೂ ಕೈಯಲ್ಲಿ ಪುಸ್ತಕ ಹಿಡಿಯುವ ಪುಳಕ, ಪುಸ್ತಕಗಳೊಡನೆ ಗಂಟೆಗಟ್ಟಲೆ ಬದುಕುವ ಸುಖ ಇತರ ಬಗೆಯ ಓದಿನಲ್ಲಿರುವಂತಿಲ್ಲ. ಶ್ರೇಷ್ಠ ಪುಸ್ತಕಗಳ ಒಡನಾಟದಲ್ಲಿರುವುದೆಂದರೆ ನಮ್ಮೊಳಗಿನ ವಿಕಾರಗಳನ್ನು ಮೀರಿ ಇತರರನ್ನು, ಲೋಕದ ಕಷ್ಟಗಳನ್ನು ಅರಿಯುವುದು.

ಹೊಸ ವರ್ಷದಲ್ಲಾದರೂ ಈ ಸರಳ ಸುಂದರ ದಿನಚರಿ ಎಲ್ಲರ ಬದುಕಿನ ಭಾಗವಾಗಲಿ. ಒಳ್ಳೆಯ ಪುಸ್ತಕಗಳ ಪಟ್ಟಿ ಸಿದ್ಧವಾಗಲಿ! ಚಿಯರ್ಸ್!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT