ಭಾನುವಾರ, ಜುಲೈ 3, 2022
27 °C
ದೀಪಧಾರಿಣಿ ಫ್ಲಾರೆನ್ಸ್ ನೈಟಿಂಗೇಲ್ ಜನಿಸಿ ಇಂದಿಗೆ ಇನ್ನೂರು ವರ್ಷ ಭರ್ತಿ

ಫ್ಲಾರೆನ್ಸ್ ನೈಟಿಂಗೇಲ್ ನೆನಪು | ಇಂದು ದಾದಿಯರ ದಿನ– ರಘುನಾಥ ಚ.ಹ. ಬರಹ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಈ ಲೇಖನ 2022ರ ಮೇ 12ರಂದು ಪ್ರಕಟವಾಗಿತ್ತು. ಫ್ಲಾರೆನ್ಸ್ ನೈಟಿಂಗೇಲ್ ಅವರ 200ನೇ ವರ್ಷದ ಜನ್ಮದಿನದ ಸಂದರ್ಭದಲ್ಲಿ ರಘುನಾಥ ಚ.ಹ. ಅವರು ಬರೆದ ಈ ಲೇಖನವನ್ನು ಮರು ಓದಿಗೆ ನೀಡಲಾಗಿದೆ.

***

ರಷ್ಯಾ ಮತ್ತು ಬ್ರಿಟನ್ ನಡುವೆ ನಡೆದ ಕ್ರಿಮಿಯನ್ ಯುದ್ಧದಲ್ಲಿ (1853) ಗಾಯಾಳುಗಳನ್ನು ಉಪಚರಿಸಿದ ಫ್ಲಾರೆನ್ಸ್ ನೈಟಿಂಗೇಲ್, ಅಲ್ಲಿನ ಸೈನಿಕರ ಕಣ್ಣಿಗೆ ದೇವತೆಯಾಗಿ ಕಾಣಿಸಿದ್ದರು. ಈಗ ‘ಕೋವಿಡ್ 19’ ವೈರಾಣುವಿನ ಪರಿಣಾಮವಾದ ಆರ್ಥಿಕ ಹಾಗೂ ಆರೋಗ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಜನಸೇವಕರು ಕಾಣಿಸಿಕೊಳ್ಳುತ್ತಿರುವುದು ಹೇಗೆ?


ರಘುನಾಥ ಚ.ಹ.

ಕ್ರಿಮಿಯಾದಲ್ಲಿ ನೈಟಿಂಗೇಲ್ ಗಾಯಾಳುಗಳ ಶುಶ್ರೂಷೆ ನಡೆಸಿದ್ದು ಜಾಗತಿಕ ಸೇವಾಕ್ಷೇತ್ರದಲ್ಲೊಂದು ಅಪರೂಪದ ವಿದ್ಯಮಾನ. ಆವರೆಗೆ, ಮಿಲಿಟರಿ ಆಸ್ಪತ್ರೆಗಳಲ್ಲಿನ ನರ್ಸಿಂಗ್ ಸೇವೆಯಲ್ಲಿ ಮಹಿಳೆಯರಿಗೆ ಅವಕಾಶವಿರಲಿಲ್ಲ. ಯುದ್ಧದಲ್ಲಿ ಗಾಯಾಳುಗಳನ್ನು ಸರಿಯಾಗಿ ನೋಡಿಕೊಳ್ಳುವ ವ್ಯವಸ್ಥೆಯೂ ಇರಲಿಲ್ಲ. ಅಂಥ ಸಂದರ್ಭದಲ್ಲಿ, ಸೇನಾ ಆಸ್ಪತ್ರೆ ಪ್ರವೇಶಿಸಿದ ನೈಟಿಂಗೇಲ್ ಪವಾಡವನ್ನೇ ಸಾಧಿಸಿದರು. ಗಾಯಗಳಿಗಿಂತಲೂ ಕಲುಷಿತ ಪರಿಸರದಿಂದಲೇ ಹೆಚ್ಚಿನ ಸೈನಿಕರು ಸಾಯುತ್ತಿದ್ದುದನ್ನು ಗಮನಿಸಿ, ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಒತ್ತುಕೊಟ್ಟರು. ಪ್ರತಿರಾತ್ರಿ ದೀಪ ಹಿಡಿದುಕೊಂಡು ಗಾಯಾಳುಗಳ ಬಳಿಗೆ ಹೋಗಿ ಉಪಚರಿಸುತ್ತಿದ್ದರು.

ನೈಟಿಂಗೇಲ್ ಪಾಲಿಗೆ ರೋಗಿಗಳ ಶುಶ್ರೂಷೆ ಒಂದು ವೃತ್ತಿಯಷ್ಟೇ ಆಗಿರಲಿಲ್ಲ. ನರ್ಸಿಂಗ್ ಸೇವೆ ಪವಿತ್ರವಾದುದು, ದೈವಿಕವಾದುದು ಎಂದವರು ನಂಬಿದ್ದರು. ಹೆಣ್ಣುಮಕ್ಕಳು ಹೊರಗೆ ಹೋಗಿ ದುಡಿಯುವುದನ್ನು ಸಮಾಜ ಕಡೆಗಣ್ಣಿನಿಂದ ನೋಡುತ್ತಿದ್ದ ದಿನಗಳವು. ಅಂಥ ಸಂದರ್ಭದಲ್ಲಿ ನೈಟಿಂಗೇಲ್ ತಮ್ಮ ಹದಿನಾರನೇ ವಯಸ್ಸಿನಲ್ಲಿ ನರ್ಸ್ ಆಗುವ ದೃಢ ನಿರ್ಧಾರ ಕೈಗೊಂಡರು. ವಿವಾಹ ಸಂಬಂಧವನ್ನು ನಿರಾಕರಿಸಿ ಜರ್ಮನಿಯಲ್ಲಿ ನರ್ಸಿಂಗ್ ಶಾಲೆಗೆ ಸೇರಿಕೊಂಡರು. ಬಳಿಕ ಲಂಡನ್‌ನ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ಸೇರಿಕೊಂಡ ಅವರು, ಸ್ವಲ್ಪ ಸಮಯದಲ್ಲೇ ಅಲ್ಲಿನ ವಾತಾವರಣವನ್ನೇ ಬದಲಿಸಿದರು. ಕಾಲರಾ ತೀವ್ರತೆ ಹೆಚ್ಚಾಗಿದ್ದ ದಿನಗಳಲ್ಲವರು ಸ್ವಚ್ಛತೆಗೆ ಒತ್ತು ಕೊಟ್ಟಿದ್ದರಿಂದಾಗಿ ಆಸ್ಪತ್ರೆಯಲ್ಲಿನ ಸಾವಿನ ಪ್ರಮಾಣ ತೀರಾ ಕಡಿಮೆಯಾಯಿತು. ಆ ಯಶಸ್ಸೇ ಅವರಿಗೆ ಕ್ರಿಮಿಯಾಕ್ಕೆ ರಹದಾರಿ ದೊರಕಿಸಿಕೊಟ್ಟಿತು.

ಕ್ರಿಮಿಯಾದಲ್ಲಿನ ಅನುಭವಗಳನ್ನು ಆಧರಿಸಿ 830 ಪುಟಗಳ ವರದಿಯನ್ನು ನೈಟಿಂಗೇಲ್ ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸಿದ್ದರು. ಆ ವರದಿಯನ್ನು ಆಧರಿಸಿ ಮಿಲಿಟರಿ ಆಸ್ಪತ್ರೆಗಳಲ್ಲಿನ ಕೊರತೆಗಳನ್ನು ಸರಿಪಡಿಸಲಾಯಿತು. ತಮ್ಮ ಸೇವೆಗೆ ಪುರಸ್ಕಾರ ರೂಪದಲ್ಲಿ ಸರ್ಕಾರದಿಂದ ದೊರೆತ ಬಹುಮಾನದ ಮೊತ್ತವನ್ನು ಆಸ್ಪತ್ರೆ ಮತ್ತು ನರ್ಸಿಂಗ್ ಸ್ಕೂಲ್ ಸ್ಥಾಪನೆಗೆ ನೈಟಿಂಗೇಲ್ ಬಳಸಿದರು. ಇವೆಲ್ಲ ಕಾರಣಗಳಿಂದಾಗಿ ಆಧುನಿಕ ನರ್ಸಿಂಗ್ ವ್ಯವಸ್ಥೆಯ ಸಂಸ್ಥಾಪಕಿ ಎನ್ನುವ ಅಗ್ಗಳಿಕೆ ಅವರಿಗೆ ಸಂದಿದೆ.

ಇಂದಿಗೆ (ಮೇ 12) ನೈಟಿಂಗೇಲ್ ಜನಿಸಿ ಇನ್ನೂರು ವರ್ಷಗಳು ತುಂಬಿದವು (ಜನನ: ಮೇ 12, 1820). ಕೊರೊನಾ ಬಿಕ್ಕಟ್ಟು ವಿಶ್ವವ್ಯಾಪಿಯಾಗಿರುವ ಸಂದರ್ಭದಲ್ಲಿ ದೀಪಧಾರಿಣಿಯ ಜನ್ಮ ದ್ವಿಶತಮಾನೋತ್ಸವ ಸಂದರ್ಭ ನಮ್ಮ ಮುಂದಿದೆ. ಕಳೆದ ಇನ್ನೂರು ವರ್ಷಗಳಲ್ಲಿ ಸೇವಾ ಮನೋಭಾವ ಎಲ್ಲಿಗೆ ಬಂದಿದೆ ಎನ್ನುವುದರ ವಿಶ್ಲೇಷಣೆಗೆ ದೀಪಧಾರಿ ಮಹಿಳೆಯ ನೆನಪು ಒಂದು ನೆಪವಾಗಬಲ್ಲದು.

ನಮ್ಮ ಜನಪ್ರತಿನಿಧಿಗಳ ಇಂದಿನ ಸೇವಾ ಚಟುವಟಿಕೆಗಳನ್ನು ಗಮನಿಸಿ: ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕಂಗೆಟ್ಟವರಿಗೆ ಕೆಲವರು ದವಸ ಧಾನ್ಯ ವಿತರಿಸುತ್ತಿದ್ದಾರೆ. ಆದರೆ, ಈ ದಿನಸಿಯ ಪೊಟ್ಟಣಗಳ ಮೇಲೆ ಅವರ ಚಿತ್ರಗಳಿವೆ. ಆ ದಾನಕಾರ್ಯ ಕ್ಯಾಮೆರಾಗಳ ಸಮ್ಮುಖದಲ್ಲಿ ನಡೆಯುತ್ತದೆ. ಇನ್ನೊಂದು ಬಗೆಯ ಜನನಾಯಕರಿದ್ದಾರೆ. ಬಿಕ್ಕಟ್ಟಿನ ಸಂದರ್ಭದಲ್ಲೂ ಅವರು ದಿನಪೂರ್ತಿ ವಾಹಿನಿಗಳ ಚರ್ಚೆಗಳಲ್ಲಿ ಭಾಗವಹಿಸಬಲ್ಲರು ಹಾಗೂ ರೋಗಮೂಲದ ಹೊಣೆಗಾರಿಕೆಯನ್ನು ಸಮುದಾಯವೊಂದರ ಹೆಗಲಿಗೆ ಹೊರಿಸಬಲ್ಲರು. ಕೊರೊನಾ ಹಿನ್ನೆಲೆಯಲ್ಲಿ ಇರಬಹುದಾದ ಧಾರ್ಮಿಕ ಭಯೋತ್ಪಾದನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಬಲ್ಲರು. ನಮ್ಮ ಸುತ್ತಮುತ್ತ ಆಕ್ರಂದನದ ದನಿಗಳು ತುಂಬಿಕೊಂಡಿರುವಾಗ, ಆ ನೋವನ್ನು ತೊಡೆಯಬೇಕಾದವರು ಪೋಸ್ಟ್‌ಮಾರ್ಟಂ ಪ್ರಕ್ರಿಯೆಯಲ್ಲಿ ಸುಖಿಸುತ್ತಿರುವುದನ್ನು ನೋಡಿದರೆ, ದೀಪಧಾರಿಗಳಾಗಬೇಕಾದವರು ಬೆಳಕಿನ ಬದಲು ಬೆಂಕಿಯನ್ನು ಹಂಚುತ್ತಿದ್ದಾರೆ ಎನಿಸುತ್ತದೆ.

ಪಶ್ಚಿಮದ ನೈಟಿಂಗೇಲ್ ಮಾದರಿಯ ಜೊತೆಗೆ ನಮ್ಮವರೇ ಆದ ಗಾಂಧಿ ಮಾದರಿಯನ್ನೂ ನೆನಪಿಸಿಕೊಳ್ಳಬೇಕು. ಮಹಾತ್ಮನೊಳಗೊಬ್ಬ ಅದ್ಭುತ ನರ್ಸ್ ಇದ್ದುದಕ್ಕೆ ಅವರ ಜೀವನದುದ್ದಕ್ಕೂ ಉದಾಹರಣೆಗಳಿವೆ. ಅವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಕಪ್ಪು ಪ್ಲೇಗು ಕಾಣಿಸಿಕೊಂಡಿತ್ತು. ‘ಕೋವಿಡ್ 19’ರಂತೆ ಕಪ್ಪು ಪ್ಲೇಗು ಕೂಡ ಶ್ವಾಸಕೋಶವನ್ನು ಬಾಧಿಸುವ ಮಾರಣಾಂತಿಕ ಕಾಯಿಲೆ. ಜೊಹಾನ್ಸ್‌ಬರ್ಗ್‌ನ ಚಿನ್ನದ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 23 ಭಾರತೀಯರಿಗೆ ಕಪ್ಪು ಪ್ಲೇಗು ತಗುಲಿದಾಗ, ಅವರ ಶುಶ್ರೂಷೆಗೆ ಗಾಂಧೀಬಳಗ ಮುಂದಾಯಿತು. ಔಷಧಿ ಕೊಡುವುದು, ಬಟ್ಟೆ-ಹಾಸಿಗೆ ಶುಚಿಯಾಗಿಡುವುದು ಸೇರಿದಂತೆ ರೋಗಿಗಳ ಎಲ್ಲ ಅಗತ್ಯಗಳನ್ನು ಗಾಂಧೀಜಿ ಪೂರೈಸುತ್ತಿದ್ದರು. ಬೋಯರ್ ಯುದ್ಧ ಮತ್ತು ಜೂಲೂ ದಂಗೆ ಸಂದರ್ಭದಲ್ಲೂ ಅವರು ಗಾಯಾಳುಗಳನ್ನು ಉಪಚರಿಸಿದ್ದರು. ಬೊಂಬಾಯಿಯಲ್ಲಿ ಪ್ಲೇಗು ತಲೆದೋರಿದಾಗ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದ್ದರು.

ಗಾಂಧೀಜಿ ಪಾಲಿಗೆ ರೋಗಿಗಳು ಮತ್ತು ದೀನದಲಿತರ ಸೇವೆ ಆತ್ಮಶುದ್ಧೀಕರಣದ ಮಾರ್ಗದಂತಿತ್ತು. ಆ ಕಾರಣದಿಂದಲೇ, ಆಶ್ರಮವಾಸಿಯೊಬ್ಬರು ಕಾಯಿಲೆ ಬಿದ್ದ ವಿಷಯವನ್ನು ಆಶ್ರಮದ ಯಜಮಾನಿಯಾದ ಕಸ್ತೂರಬಾ ಗಮನಿಸದೆ ಹೋದುದು ದೊಡ್ಡ ಪ್ರಮಾದವೆಂದು ಅವರಿಗನ್ನಿಸಿತ್ತು. ‘ನಿನ್ನ ಮಗ ಕಾಯಿಲೆ ಬಿದ್ದಿದ್ದರೆ ಆ ವಿಷಯ ನಿನಗೆ ತಿಳಿಯುತ್ತಿರಲಿಲ್ಲವೇ’ ಎಂದು ಪತ್ನಿಯನ್ನು ಸಾರ್ವಜನಿಕವಾಗಿ ಅವರು ಪ್ರಶ್ನಿಸಿದ್ದರು. 

ಗಾಂಧೀಜಿ ಅವರ ಸೇವಾ ಮನೋಭಾವದ ಹಿಂದೆ ನೈಟಿಂಗೇಲ್ ಅವರ ಪ್ರೇರಣೆಯಿತ್ತೇ? ಹೌದೆಂದು ಸ್ಪಷ್ಟವಾಗಿ ಹೇಳುವುದು ಕಷ್ಟ. ಆದರೆ, ನೈಟಿಂಗೇಲರ ಸೇವೆಯ ಬಗ್ಗೆ ಗಾಂಧೀಜಿಗೆ ಅರಿವಿತ್ತು. ನೈಟಿಂಗೇಲ್ ಅವರ ನಿಸ್ವಾರ್ಥ ಸೇವೆಯನ್ನು ಮೆಚ್ಚಿಕೊಂಡು 1905ರಲ್ಲಿ ‘ಇಂಡಿಯನ್ ಒಪೀನಿಯನ್’ ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದರು. ನೈಟಿಂಗೇಲ್ ಮತ್ತು ಗಾಂಧೀಜಿ ಇಬ್ಬರೂ ರೋಗಿಗಳ ಸೇವೆಯನ್ನು ಭಗವಂತನ ಸೇವೆಯೆಂದು ನಂಬಿದ್ದರು. ನೈಟಿಂಗೇಲ್ ಅವರು ರೋಗಿಗಳ ಸೇವೆಗೆಂದೇ ತಾವು ಜನಿಸಿರುವುದಾಗಿ ಭಾವಿಸಿದ್ದರು ಹಾಗೂ ವೃತ್ತಿಗೆ ಅಡಚಣೆಯಾಗಬಾರದೆಂದು ಮದುವೆಯಿಂದ ದೂರವುಳಿದಿದ್ದರು. ಜೂಲೂ ದಂಗೆಯ ಸಮಯದಲ್ಲಿ ಗಾಯಾಳುಗಳ ಸೇವೆ ಮಾಡುವಾಗ, ಸೇವಾಕಾರ್ಯಕ್ಕೆ ಭೋಗ ಅಡ್ಡಿಯಾಗಬಹುದೆಂದು ಗಾಂಧೀಜಿಗೆ ಬಲವಾಗಿ ಅನ್ನಿಸಿತು. ಜೀವನಪರ್ಯಂತ ಬ್ರಹ್ಮಚರ್ಯ ಅನುಸರಿಸುವುದಾಗಿ ಅವರು ಸಂಕಲ್ಪ ತೊಟ್ಟಿದ್ದು ಆಗಲೇ.

‘ಹೃದಯ ಶುದ್ಧವಾಗಿದ್ದರೆ ಸಂಕಟದ ಕಾಲದಲ್ಲಿ ಮನುಷ್ಯರೂ ಸೌಕರ್ಯಗಳೂ ತಂತಾನೇ ಒದಗಿಬರುತ್ತವೆ’ ಎನ್ನುವುದು ಗಾಂಧೀಜಿಯ ಅನುಭವ. ಈ ಮಾತನ್ನು ಈಗ ಹೇಗೆ ಅನ್ವಯಿಸುವುದು? ಸಹಸ್ರ ಸಹಸ್ರ ಕಾರ್ಮಿಕರು ಬೀದಿಗಳಲ್ಲಿದ್ದಾರೆ. ಅವರಿಂದ ಲಾಭ ಮಾಡಿಕೊಳ್ಳುವುದೇನಾದರೂ ಉಳಿದಿದೆಯೇ ಎಂದು ವ್ಯವಸ್ಥೆ ಯೋಚಿಸುತ್ತಿದೆ. ಹಸಿವಿನ ದವಡೆಗೆ ಸಿಲುಕಿರುವವರ, ರೋಗಭೀತಿಯ ಆತಂಕಕ್ಕೆ ಈಡಾಗಿರುವವರ ನೋವಿಗೆ ಮಿಡಿಯಬೇಕಾದ  ಗಾಂಧೀಜಿ-ನೈಟಿಂಗೇಲ್ ಅವರಂತಹ ದೀಪಧಾರಿಗಳೇ ಕಾಣಿಸುತ್ತಿಲ್ಲ. ತಮ್ಮ ಆಶ್ರಮದಲ್ಲಿ ಯಾರೊಬ್ಬರಿಗೆ ಅನಾರೋಗ್ಯವಾದರೂ ಅವರನ್ನು ಉಪಚರಿಸುವುದು ತಮ್ಮ ಕರ್ತವ್ಯ ಎಂದು ಗಾಂಧೀಜಿ ಭಾವಿಸಿದ್ದರು. ಆದರೆ, ಕರುಳಿನ ಬಾಧೆಗೊಳಗಾದ ಚಿಂಚೋಳಿ ತಾಲ್ಲೂಕಿನ ಹೆಣ್ಣುಮಗಳು ಚಿಕಿತ್ಸೆ ದೊರೆಯದೆ ಸಾವಿಗೀಡಾದಾಗ ಅದು ತಮ್ಮ ವೈಫಲ್ಯವೆಂದು ಜನಪ್ರತಿನಿಧಿಗಳಿಗೆ ಅನ್ನಿಸುವುದಿಲ್ಲ. ಹಳಿಗಳ ಮೇಲೆ ಮಲಗಿದ ಕಾರ್ಮಿಕರು ರೈಲಿಗೆ ಬಲಿಯಾದಾಗ, ಅದರ ನೈತಿಕ ಹೊಣೆಗಾರಿಕೆ ತಮ್ಮದೆಂದು ಯಾರೂ ಭಾವಿಸುವುದಿಲ್ಲ.

‘ಭರತೇಶ ವೈಭವ’ ಕಾವ್ಯದಲ್ಲಿ ‘ಬಡವಗೆ ಬಲುರೋಗ ಬಂದು ಬಾಯ್ಬಿಡಲೊರ್ವ/ ರೆಡಹಿಯು ಕಾಣರುರ್ವಿಯೊಳು/ ಒಡವೆಯುಳ್ಳವಗಲ್ಪರುಜೆ ಬರೆ ವಿಸ್ಮಯ/ ಬಡುತ ಸಾರುವರದು ಸಹಜ’ ಎಂದು ಕವಿ ರತ್ನಾಕರವರ್ಣಿ ಉದ್ಗರಿಸುತ್ತಾನೆ. ಎಲ್ಲ ಕಾಲದಲ್ಲೂ ಬಡವರ ಜೀವ ಅಗ್ಗವೇ, ಮಾನವೀಯತೆ ದುರ್ಲಭವೇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು