ಬೆಳ್ಳಿ, ನೆಲದ ಮೇಲೆ ಬಿದ್ದಿದ್ದಾಳೆ. ಅವಳ ತಮ್ಮ ಕಾಳ ಅಕ್ಕನನ್ನೊಮ್ಮೆ, ಅಪ್ಪನನ್ನೊಮ್ಮೆ ಅಸಹಾಯಕತೆಯಿಂದ ನೋಡುತ್ತಿದ್ದಾನೆ. ಮಕ್ಕಳೊಂದಿಗಿನ ಸಂಬಂಧ ಕಡಿದುಕೊಳ್ಳುವುದರ ಜೊತೆಗೆ, ತನ್ನ ಜೀವದ ಭಾಗವಾದ ಎತ್ತುಗಳನ್ನೂ ಚೋಮ ಬಿಟ್ಟುಕೊಟ್ಟಿದ್ದಾನೆ. ನೇಗಿಲನ್ನು ಮುರಿದು ಬೆಂಕಿಯಿಟ್ಟು, ಗುಡಿಸಲ ಒಳಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾನೆ. ಒಳಗಿನಿಂದ ದುಡಿಯ ದನಿ. ಸ್ವಲ್ಪ ಸಮಯದಲ್ಲಿ ಆ ದನಿಯೂ ನಿಲ್ಲುವುದು. ದುಡಿ ಹಾಗೂ ಚೋಮನ ಹೃದಯ ಭಿನ್ನವಲ್ಲ. ದುಡಿಯ ದನಿ ನಿಲ್ಲುವುದರೊಂದಿಗೆ ಚೋಮನ ಹೃದಯವೂ ಸ್ತಬ್ಧ. ಎಲ್ಲವೂ ಕತ್ತಲು ಕತ್ತಲು.

ಇದು, ಐವತ್ತು ವರ್ಷಗಳ ಹಿಂದೆ ತೆರೆಕಂಡ ‘ಚೋಮನ ದುಡಿ’ ಸಿನಿಮಾದ ಅಂತ್ಯ. ಚೋಮನೇನೋ ಕೊನೆಯುಸಿರೆಳೆದ. ಆದರೆ, ಅವನ ಮಕ್ಕಳ ಪಾಡೇನು? ಬೆಳ್ಳಿ ಏನಾದಳು? ಅವಳ ತಮ್ಮ ಕಾಳ ಏನಾದ?

ಸಿನಿಮಾ ಚೌಕಟ್ಟನ್ನು ಮೀರಿ ನೋಡಿದರೆ, ಚೋಮ ಸತ್ತ ಎನ್ನುವುದೇ ಒಂದು ಸುಳ್ಳು. ಚೋಮ ಯಾಕೆ ಸತ್ತಿಲ್ಲ ಎಂದು ನಿರ್ಣಯಿಸುವುದಕ್ಕೆ ಮೊದಲು, ಚೋಮನ ಹುಟ್ಟು ಹಾಗೂ ಬದುಕನ್ನು ತಿಳಿಯಬೇಕು. ಈ ಚೋಮ ಹುಟ್ಟಿದ್ದು 1931ರಲ್ಲಿ; ಒಂಬತ್ತೂವರೆ ದಶಕಗಳ ಹಿಂದೆ ಶಿವರಾಮ ಕಾರಂತರು ಬರೆದ ‘ಚೋಮನ ದುಡಿ’ ಕಾದಂಬರಿ ಮೂಲಕ. ಈ ಚೋಮನ ಕಥನ ಬಿ.ವಿ. ಕಾರಂತರ ನಿರ್ದೇಶನದಲ್ಲಿ ಸಿನಿಮಾ ಆಗಿ 1975ರಲ್ಲಿ ತೆರೆಕಂಡಿತು. ‘ಸಂಸ್ಕಾರ’ ಸಿನಿಮಾ ನಂತರ ಕನ್ನಡ ಚಿತ್ರರಂಗಕ್ಕೆ ಎರಡನೇ ಸ್ವರ್ಣಕಮಲ ತಂದುಕೊಟ್ಟಿತು. ದೇಶದ ಅತ್ಯುತ್ತಮ ಸಿನಿಮಾಗಳಲ್ಲೊಂದಾದ ‘ಚೋಮನ ದುಡಿ’, ದಲಿತ ಪ್ರಜ್ಞೆಯನ್ನೊಳಗೊಂಡ ಯಾವುದೇ ಭಾಷೆಯ ಅತ್ಯುತ್ತಮ ಸಿನಿಮಾಗಳ ಜೊತೆಗೆ ನಿಲ್ಲುವಂತಹದ್ದು.

ಚೋಮನಿಗೆ ಇದ್ದುದು ಒಂದೇ ಕನಸು. ತುಂಡು ಭೂಮಿಯನ್ನು ಹೊಂದುವುದು. ಸಾಯೋದರೊಳಗೆ ತನ್ನದೇ ಒಂದು ತುಂಡು ಗೇಣಿ ನೆಲ ಉತ್ತರೆ ಬದುಕಿಗೂ ಸಾರ್ಥಕ ಎನ್ನುವ ನಂಬಿಕೆ ಅವನದು. ವಡೇರು ಒಂದು ಚೂರು ನೆಲವನ್ನು ಈ ಬಡವನಿಗೆ ಕೊಟ್ಟೇ ಕೊಡುತ್ತಾರೆ ಹಾಗೂ ಹಾಗೆ ಕೊಡುವ ಮನಸ್ಸನ್ನು ಪಂಜುರ್ಲಿ ಕರುಣಿಸುತ್ತಾನೆ ಎನ್ನುವುದು ಚೋಮನ ಭರವಸೆ. ಆದರೆ, ಚೋಮನಿಗೆ ಭೂಮಿ ದಕ್ಕುವುದಿಲ್ಲ. ಮತಾಂತರ ಹೊಂದುವ ಮೂಲಕ ಭೂಮಿ ಪಡೆಯುವ ಅವಕಾಶ ಎದುರಿಗಿದ್ದರೂ, ಜಾತಿಯನ್ನು ಬಿಟ್ಟುಕೊಡುವುದು ಅವನಿಗೆ ಸಾಧ್ಯವಾಗುವುದಿಲ್ಲ. ತನ್ನ ಜಾತಿಯನ್ನು ಬಿಟ್ಟುಹೋಗಲಿಕ್ಕೆ ಅವನಿಗೆ ಯಾವ ದೈವ–ನಂಬಿಕೆ ಅಡ್ಡಿ
ಆಗಿದೆಯೋ, ಅದುವೇ ಸಂಕಪ್ಪಯ್ಯನಿಗೆ ತುಂಡು ಭೂಮಿಯನ್ನು ಚೋಮನಿಗೆ ಕೊಡದಿರಲೂ ಕಾರಣವಾಗಿದೆ. ಹೊಲೆಯರು ನೇಗಿಲು ಹಿಡಿದರೆ ಪ್ರಳಯವೇ ಬಂದೀತೆನ್ನುವುದು ಸಂಕಪ್ಪಯ್ಯನ ತಾಯಿಯ ನಂಬಿಕೆ. ಅಮ್ಮನ ಮಾತಿಗೆ ವಿರುದ್ಧವಾಗಿ ಸಂಕಪ್ಪಯ್ಯ ನಡೆದುಕೊಳ್ಳಲಾರ.

ಜಾತಿ, ಧರ್ಮ ಹಾಗೂ ನಂಬಿಕೆಗಳ ಉರುಳಿಗೆ ಚೋಮ ಬಲಿಯಾದರೆ, ಅಪ್ಪ ಮಾಡಿದ ಸಾಲಕ್ಕೆ ಅವನ ಮಕ್ಕಳು ಮಿಕಗಳಾಗಿದ್ದಾರೆ. ಚನಿಯಾ ಘಟ್ಟದ ಜ್ವರಕ್ಕೆ ಬಲಿಯಾಗುತ್ತಾನೆ. ಮತಾಂತರಗೊಂಡು ಮೇರಿ
ಯನ್ನು ಮದುವೆಯಾಗುವ ಗುರುವನನ್ನು ಚೋಮನೇ ತ್ಯಜಿಸಿದ್ದಾನೆ. ಮತ್ತೊಬ್ಬ ಮಗ ನೀಲ ನೀರಿನಲ್ಲಿ ಕೊಚ್ಚಿಹೋಗುವುದನ್ನು ಊರಿನ ಜನ ನಿಂತು ನೋಡುತ್ತಾರೆ. ಹೊಲೆಯ ಹುಡುಗನನ್ನು ರಕ್ಷಿಸದೆ ಸಾಯಲು ಬಿಡುವ ಜನರನ್ನು ನೋಡಿದಾಗ ಚೋಮನಿಗೆ ಅನ್ನಿಸುವುದು: ‘ಹೊಲೇರ ಕುಲ ದೇವರಿಗೂ ಬೇಡವಾದೀತು’. ಗುರುವನ ದಾರಿಯೇ ಸರಿಯೆಂದು ಅವನಿಗೆ ಅನ್ನಿಸಿದರೂ ಪಂಜುರ್ಲಿಯ ಪ್ರಭಾವಳಿಯನ್ನು ದಾಟಲಾರ.

ಚೋಮನ ಪಾಲಿಗೆ ಉಳಿಯುವ ಏಕೈಕ ಆಶಾಕಿರಣ ಬೆಳ್ಳಿ. ಆದರೆ, ಎಸ್ಟೇಟ್ನ ಮಾಲೀಕ (ಬ್ರಿಟಿಷ್) ಹಾಗೂ ಅವನ ಕೈಕೆಳಗಿನ ರೈಟರ್ ಬೆಳ್ಳಿಯನ್ನು ಸುಲಿದು ಮುಕ್ಕಿದ್ದಾರೆ. ಮಗಳ ಬದುಕಿನ ದುರಂತ ತಿಳಿದ ನಂತರ ಚೋಮನಿಗೆ ಬದುಕಿನ ಎಲ್ಲ ಸಾಧ್ಯತೆಗಳೂ ಮುಚ್ಚಿಹೋಗಿ, ಅವನ ಬದುಕು, ಅವನ ದುಡಿ, ಎರಡೂ ಸ್ತಬ್ಧಗೊಳ್ಳುತ್ತವೆ.

ಚೋಮನನ್ನು ಸೃಷ್ಟಿಸಿದ ಶಿವರಾಮ ಕಾರಂತರು ಹಾಗೂ ಚೋಮನನ್ನು ಸಿನಿಮಾಕ್ಕೆ ಕರೆತಂದ ಬಿ.ವಿ. ಕಾರಂತರು, ತಮ್ಮ ಕಥಾನಾಯಕನನ್ನು ಕೊನೆಗೊಳಿಸುವ ಮೂಲಕ ನಿರಾಳತೆಯನ್ನು ಪಡೆದರೋ ಇಲ್ಲವೇ ಮತ್ತಷ್ಟು ಕ್ಷೋಭೆಗೊಂಡರೋ ತಿಳಿಯದು. ಆದರೆ, ಸೃಷ್ಟಿಕರ್ತರ ಹಿಡಿತ ಮೀರಿ ಚೋಮ ಇಂದಿಗೂ ಜೀವಂತವಾಗಿದ್ದಾನೆ. ಅವನಿಗೆ ಸಾವೆನ್ನುವುದೇ ಇಲ್ಲ. ಏಕೆಂದರೆ, ನಮ್ಮ ಕಾಲ ಚೋಮನನ್ನು ಮತ್ತೆ ಮತ್ತೆ ಸೃಷ್ಟಿಸುತ್ತಿದೆ; ಅವನನ್ನು ಚಿರಂಜೀವಿಯನ್ನಾಗಿಸಿದೆ.

ಅಧಿಕಾರ, ಜಾತಿ, ಹಣ, ರಾಜಕೀಯ ವ್ಯವಸ್ಥೆ, ದೈವ, ಎಲ್ಲವೂ ಚೋಮನಿಗೆ ವಿರುದ್ಧವಾಗಿದ್ದವು. ಅವುಗಳಿಗೆ ಚೋಮ ಸಾಯುವುದು ಬೇಕಿಲ್ಲ. ಏಕೆಂದರೆ, ಚೋಮನ ಸಾವು ಈ ಅನೈತಿಕ ವ್ಯವಸ್ಥೆಯ ಸಾವೂ ಹೌದು. ಚೋಮ ಜೀವಂತವಾಗಿದ್ದರಷ್ಟೇ ಇವುಗಳ ಅಸ್ತಿತ್ವ. ಹಾಗಾಗಿ, ಒಬ್ಬ ಚೋಮ ಕೊನೆಯುಸಿರೆಳೆದರೂ, ಅವನ ಜಾಗದಲ್ಲಿ ಅಸಂಖ್ಯ ಚೋಮರನ್ನು ಕಾಲ ಸೃಷ್ಟಿಸುತ್ತಿದೆ.

ಚೋಮ ಜನಸಾಮಾನ್ಯರ ಪ್ರತಿನಿಧಿ. ದಲಿತಲೋಕ ಈಗ ದೊಡ್ಡದಾಗಿದೆ. ವ್ಯವಸ್ಥೆಯ ಕಪಿಮುಷ್ಟಿಯೂ ಬಲಗೊಂಡಿದೆ. ಶೋಷಣೆಯ ವರ್ತುಲದೊಳಗೆ ಚೋಮ, ಚೋಮನಂಥ ಅಸಂಖ್ಯಾತರು ಪತರುಗುಟ್ಟುವ ಅಸಹಾಯಕ ಹುಳುಗಳು. ಕಾಲಚಕ್ರದಲ್ಲಿ ಕೆಲವು ಚೋಮಂದಿರಿಗೆ ತುಂಡು ಭೂಮಿ ದಕ್ಕಿರಬಹುದು. ಆದರೆ, ದೊರೆತ ಭೂಮಿಯನ್ನು (ಸೂರನ್ನು) ಉಳಿಸಿಕೊಳ್ಳುವುದು ಸುಲಭವಲ್ಲ. ಅಧಿಕಾರ ಮತ್ತು ಧರ್ಮಗಳು ಬುಲ್ಡೋಜರ್ ರೂಪದಲ್ಲಿ ಕೆಲವರ ಮನೆಗಳ ಮೇಲೆ ದಾಳಿ ಮಾಡುತ್ತಿವೆ. ಭೂಮಿಯನ್ನು, ಸೂರನ್ನು ಕಳೆದುಕೊಳ್ಳುವವರೆಲ್ಲ ಚೋಮನ ಒಕ್ಕಲೇ ಆಗಿದ್ದಾರೆ. ಈ ಬುಲ್ಡೋಜರ್ ಸಂಕಥನದಿಂದ ತನ್ನ ಆತ್ಮಸಾಕ್ಷಿ ಅಲುಗಾಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ಆತ್ಮಸಾಕ್ಷಿಯ ಬಗ್ಗೆ ಮಾತನಾಡುವುದಕ್ಕಿಂತಲೂ ಮಿಗಿಲಾದ ವ್ಯಂಗ್ಯ ಮತ್ತು ಅಸಹಾಯಕತೆ ಮತ್ತೊಂದಿದೆಯೇ?

‘ಚೋಮನ ದುಡಿ’ ಚೋಮನ ಕಥನಆಗಿರುವಂತೆಯೇ ಬೆಳ್ಳಿಯ ಕಥನವೂ ಹೌದು. ಚೋಮನ ಒಡಲುರಿ ಪ್ರಕಟಗೊಳ್ಳುವುದಕ್ಕೆ ದುಡಿಯಾದರೂ ಜೊತೆಗಿತ್ತು. ಬೆಳ್ಳಿಗೆ ಯಾವುದರ ಆಸರೆ? ಅವಳ ದುರಂತ ವರ್ತಮಾನದಲ್ಲೂ ದೇಶದ ಒಂದಲ್ಲಾ ಒಂದು ಭಾಗದಿಂದ ಅನುರಣನಗೊಳ್ಳುತ್ತಲೇ ಇದೆ. ಕುಡಿಯುವ ನೀರು, ದೇವರು, ಊರು–ಸೂರು, ಅಸ್ಪೃಶ್ಯತೆ ಆಚರಣೆಯ ಘಟನೆಗಳಿಗೆ ಕೊನೆಮೊದಲಿಲ್ಲ.

ಐವತ್ತು ವರ್ಷಗಳ ನಂತರವೂ ‘ಚೋಮನ ದುಡಿ’ ನಮ್ಮ ಕಾಲದ ಕಥನವೆಂಬಂತೆ ಕಾಣಿಸುತ್ತಿರುವುದೇ ಚೋಮ ಚಿರಂಜೀವಿ ಎನ್ನುವುದಕ್ಕೆ ನಿದರ್ಶನದಂತಿದೆ. ಚೋಮನ ದುಡಿಯಂಥ ಮತ್ತೊಂದು ಸಿನಿಮಾವನ್ನು ಕಟ್ಟಿಕೊಡುವುದು ಕನ್ನಡ ಚಿತ್ರರಂಗಕ್ಕೆ ಸಾಧ್ಯವಾಗಿಲ್ಲ. ದಲಿತ ಬದುಕಿನ ಸಂಕಟದ ಆತ್ಯಂತಿಕ ರೂಪದಲ್ಲಿ ಚೋಮನ ಬದುಕಿಗಿಂತಲೂ ದಾರುಣವಾಗಿರುವುದೂ ಇರಲಿಕ್ಕಿಲ್ಲ. ದಲಿತ ಬದುಕಿನ ಅಧಿಕೃತ ದಾಖಲೆಯಂತಿರುವ ಚೋಮನ ಕಥನ, ಜಾತಿ–ಧರ್ಮ–ರಾಜಕೀಯದ ಭ್ರಷ್ಟತೆಯ ಆತ್ಯಂತಿಕ ರೂಪದ ದಾಖಲೆಯೂ ಆಗಿದೆ.

ಕಲುಷಿತಗೊಂಡ ಜಾತಿ, ಧರ್ಮ, ರಾಜಕೀಯ ವ್ಯವಸ್ಥೆಯ ವಿರುದ್ಧ ಕನ್ನಡದ ಕಲಾಜಗತ್ತಿನ ಪ್ರತಿಭಟನೆ ಕಾರಂತದ್ವಯರ ‘ಚೋಮನ ದುಡಿ’. ಈ ಸೊಲ್ಲು ಅಸಹಾಯಕತೆಯಲ್ಲಿ ಕೊನೆಗೊಳ್ಳುತ್ತದೆಯಾದರೂ ಚೋಮನ ‘ದುಡಿ’ಯ ದನಿ ಸಾವಿಲ್ಲದ ನಾದವಾಗಿ, ಜೀವಪರ ಮನಸ್ಸುಗಳನ್ನೆಲ್ಲ ವಿಷಣ್ಣಗೊಳಿಸುತ್ತ ತಬ್ಬಿಕೊಂಡಿದೆ. ಕನಿಷ್ಠ ಇಂಥದೊಂದು ಸೊಲ್ಲು ಜೀವಂತವಾಗಿದೆ ಎನ್ನುವುದನ್ನೇ ಆಶಾದಾಯಕ ಸಂಗತಿ ಎಂದು ಭಾವಿಸುವಷ್ಟು ನಮ್ಮ ಕಾಲಘಟ್ಟ ದುರ್ಬರವಾಗಿದೆ.

ಅಪ್ಪನ ಭೂಮಿಯ ಹಂಬಲವನ್ನು ಮಗಳು ‘ಬೋಳು ಭ್ರಮೆ’ ಎನ್ನುತ್ತಾಳೆ. ಕಟ್ಟಕಡೆಯ ಮನುಷ್ಯ ಘನತೆಯ ಬದುಕಿಗಾಗಿ ಹಂಬಲಿಸುವುದು ಈಗಲೂ ಭ್ರಮೆಯೇ. ‘ಚೋಮನ ದುಡಿ’ ನಮ್ಮೊಳಗಿನ ಹಾಗೂ ಹೊರಗಿನ ಪೊಳ್ಳುತನವನ್ನು ಬಯಲು ಮಾಡುವ ಕಲಾಕೃತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.