ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕತೆಯ ವಾರಸುದಾರರು ಯಾರು?

ಜನಸಾಮಾನ್ಯರ ಅಂಗಳದಲ್ಲಿ, ನೈತಿಕತೆ ಎಂಬ ಅಸಹಾಯಕ ಶಿಶುವಿನ ರೋದನ
Last Updated 14 ನವೆಂಬರ್ 2019, 20:30 IST
ಅಕ್ಷರ ಗಾತ್ರ

‘ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೆ’– ‘ವಿಧಿಯ ಸೆಳೆತಕ್ಕೆ ಸಿಕ್ಕಿದ ರಾವಣನು ನೈತಿಕತೆಯ ರೇಖೆಯನ್ನು ದಾಟಿದಾಗ, ಕಾಲವಶದಿಂದ ಒಮ್ಮೊಮ್ಮೆ ಸಮುದ್ರವೂ ತನ್ನ ಎಲ್ಲೆಯನ್ನು ಮೀರುತ್ತದೆಯಲ್ಲವೇ?’ ಎಂದು ನಾಗಚಂದ್ರ ತನ್ನ ‘ರಾಮಚಂದ್ರ ಚರಿತ ಪುರಾಣ’ ಕಾವ್ಯದಲ್ಲಿ ಉದ್ಗರಿಸುತ್ತಾನೆ. ಅಯೋಧ್ಯೆಯ ಭೂವಿವಾದ ಮತ್ತು ಕರ್ನಾಟಕದ ಅನರ್ಹ ಶಾಸಕರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳ ಹಿನ್ನೆಲೆಯಲ್ಲಿ, ನೈತಿಕತೆ ಹಾಗೂ ವಸ್ತುನಿಷ್ಠತೆಯ ಬಗ್ಗೆ ನಂಬಿಕೆಯುಳ್ಳವರು ನಾಗಚಂದ್ರನಂತೆಯೇ ನಿಟ್ಟುಸಿರುಬಿಡಬೇಕಾಗಿದೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಹಾಗೂ ವಸ್ತುನಿಷ್ಠತೆಗೆ ಪರ್ಯಾಯ ಹೆಸರು ಸುಪ್ರೀಂ ಕೋರ್ಟ್‌. ಈಗ ಅದೇ ನ್ಯಾಯಪೀಠ ನೀಡಿರುವ ಎರಡು ಪ್ರಮುಖ ತೀರ್ಪುಗಳು, ನೈತಿಕತೆಯನ್ನು ಜೀವನಧರ್ಮ ಎಂದುತಿಳಿದಿರುವವರಿಗೆ ಅರಗಿಸಿಕೊಳ್ಳಲು ಕಷ್ಟಕರವಾಗಿವೆ.

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಮಸೀದಿಯ ನಾಶ ತಪ್ಪೆಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ನಾಶಕ್ಕೆ ಕಾರಣರಾದವರನ್ನು ಪ್ರತಿನಿಧಿಸುವವರಿಗೆ ವಿವಾದಿತ ಭೂಮಿ ಸೇರಬೇಕು ಎಂದಿದೆ. ಕರ್ನಾಟಕ ವಿಧಾನಸಭೆಯ 17 ಶಾಸಕರನ್ನು ವಿಧಾನಸಭಾಧ್ಯಕ್ಷರು ಅನರ್ಹಗೊಳಿಸಿದ್ದನ್ನು ಕ್ರಮಬದ್ಧ ಎಂದು ಹೇಳುತ್ತಲೇ, ಅನರ್ಹರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಹಸಿರುನಿಶಾನೆ ತೋರಿಸಿದೆ. ಈ ಮೂಲಕ, ತಾನು ಯಾವುದನ್ನು ತಪ್ಪೆಂದು ವ್ಯಾಖ್ಯಾನಿಸಿದೆಯೋ, ಆ ತಪ್ಪಿಗೆ ಶಿಕ್ಷೆ ಅಗತ್ಯವಿಲ್ಲವೆಂದೂ ಹೇಳುತ್ತಿದೆ. ಪರಮೋಚ್ಚ ನ್ಯಾಯಾಲಯದ ವಿರೋಧಾಭಾಸದ ಈ ತೀರ್ಪುಗಳು ನೈತಿಕತೆಯ ಕುರಿತಾದ ಸೂಕ್ಷ್ಮ ಪ್ರಶ್ನೆಯೊಂದಕ್ಕೆ– ನೈತಿಕತೆಯ ವಾರಸುದಾರರು ಯಾರೆನ್ನುವ ಪ್ರಶ್ನೆಗೆ– ಆಸ್ಪದ ಕಲ್ಪಿಸಿವೆ.

ಚರಿತ್ರೆಯ ಪುಟಗಳನ್ನು ತಿರುವಿದರೆ, ನೈತಿಕತೆಯ ಬಗ್ಗೆ ಎಲ್ಲ ಕಾಲದಲ್ಲೂ ತಲೆ ಕೆಡಿಸಿಕೊಂಡಿರುವವರು ಹಾಗೂ ಬದುಕಿಗದು ಅತ್ಯಗತ್ಯ ಎಂದು ನಂಬಿರುವವರು ಜನಸಾಮಾನ್ಯರೇ. ನೈತಿಕತೆಗೆ ಚ್ಯುತಿಯೊದಗಿದಾಗ ಬದುಕು ಅರ್ಥಹೀನ ಎನ್ನುವ ನಂಬಿಕೆ ಜನಪದರದು. ಮರ್ಯಾದೆಯನ್ನು ಆಸ್ತಿ– ಅಂತಸ್ತಿನ ಮೇಲೆ ಅಳೆಯುವವರು ಇಲ್ಲವೇ ನೈತಿಕತೆಯ ಮೇಲೆ ಸವಾರಿ ಮಾಡುವ ಧರ್ಮವನ್ನು ಮೈಗೂಡಿಸಿಕೊಂಡವರು ‘ಮರ್ಯಾದೆಗೇಡು ಹತ್ಯೆ’, ‘ನೈತಿಕ ಪೊಲೀಸ್‌ಗಿರಿ’ಯಂತಹ ಅಪಕಲ್ಪನೆಗಳು ರೂಪುಗೊಳ್ಳಲು ಕಾರಣರಾಗಿರುವ ಉದಾಹರಣೆಗಳು ಹೆಚ್ಚಿವೆಯೇ ಹೊರತು, ಸಾಮಾಜಿಕಶೀಲಕ್ಕೆ ಪೂರಕವಾದ ಸಂಗತಿಗಳಲ್ಲ.

ಅಪವಾದ ಎನ್ನುವಂತೆ ಆಗಾಗ ‘ದೊಡ್ಡವರು’ ಕೂಡ ನೈತಿಕತೆಗೆ ಕಟ್ಟುಬಿದ್ದು ಮಹಾತ್ಮ ಎನ್ನಿಸಿಕೊಂಡಿದ್ದಾರೆ; ದೈವಸ್ವರೂಪ ಪಡೆದುಕೊಂಡಿದ್ದಾರೆ. ಆದರೆ, ನೈತಿಕತೆ ಎನ್ನುವುದು ಅನಿವಾರ್ಯ ಧರ್ಮವಾಗಿರುವುದು ಹಾಗೂ ಅನುದಿನದ ಕರ್ಮವಾಗಿರುವುದು ಶ್ರೀಸಾಮಾನ್ಯರ ಪಾಲಿಗಷ್ಟೇ. ದೊಡ್ಡವರ ಪಾಲಿಗೆ ನೈತಿಕತೆಯು ಬಹುತೇಕ ಸಂದರ್ಭಗಳಲ್ಲಿ ಸಾಂದರ್ಭಿಕವಾದುದು ಹಾಗೂ ಅನುಕೂಲ ಸಿಂಧು. ಈ ಚಾರಿತ್ರಿಕ ಸತ್ಯಕ್ಕೆ ‘ಸುಪ್ರೀಂ’ ತೀರ್ಪುಗಳು ಅಡಿಗೆರೆ ಎಳೆದಿದ್ದು, ನೈತಿಕತೆಯ ವಾರಸುದಾರಿಕೆ ಜನಸಾಮಾನ್ಯರದಷ್ಟೇ ಎಂದು ಸ್ಪಷ್ಟಪಡಿಸಿರುವಂತಿದೆ.

ನಮಗೆ ಒಗ್ಗದ ಎಲ್ಲವನ್ನೂ ಬದಲಿಸಲು ಹಂಬಲಿಸುತ್ತಿರುವ ಸಂದರ್ಭವಿದು. ಬದಲಿಸುವ ಈ ಹಟವೇ ನೈತಿಕತೆಯ ಮರುವ್ಯಾಖ್ಯಾನಕ್ಕೂ ಕಾರಣವಾದಂತಿದೆ. ಒಳ್ಳೆಯ ನಡತೆ ಅಥವಾ ಸದಾಚಾರವನ್ನು ನೈತಿಕತೆಯೆಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಗಾಂಧೀಜಿಯವರು ಪಟ್ಟಿ ಮಾಡುವ– ತತ್ವರಹಿತ ರಾಜಕೀಯ, ದುಡಿಮೆ ಮಾಡದ ಸಂಪತ್ತು, ನೀತಿಹೀನ ವಾಣಿಜ್ಯ, ಶೀಲವಿಲ್ಲದ ಶಿಕ್ಷಣ, ಆತ್ಮಸಾಕ್ಷಿರಹಿತ ಭೋಗ, ಮಾನವತೆಯಿಲ್ಲದ ವಿಜ್ಞಾನ, ತ್ಯಾಗವಿಲ್ಲದ ಪೂಜೆ– ‘ಸಾಮಾಜಿಕ ಸಪ್ತ ಪಾತಕಗಳು’ ಒಕ್ಕೊರಲಿನಿಂದ ಹೇಳುವುದು ಸಮಾಜಕ್ಕೆ ಅಗತ್ಯವಾದ ನೈತಿಕತೆಯನ್ನೇ. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಹಾಗೂ ರಾಜಕೀಯ ನೈತಿಕತೆಯನ್ನು ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದರು. ಆದರೆ, ಇವತ್ತಿನ ಸಂದರ್ಭ ಬೇರೆಯದೇ ಮಾದರಿಯನ್ನು ಮುಂದಿಡುತ್ತಿದೆ.

ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿಯುತ್ತದೆ. ಆದರೆ, ಹೀಗೆ ಮಸಿ ಮೆತ್ತಿಸಿಕೊಂಡಿದ್ದು ಯಾರಿಗೂ ಮುಜುಗರಕ್ಕೆ ಕಾರಣವಾಗುವುದಿಲ್ಲ. ಅನರ್ಹತೆಯನ್ನು ಕಾಯಂಗೊಳಿಸಿದ ತೀರ್ಪು ಹೊರಬಿದ್ದ ಮರುದಿನವೇ, ‘ಅನರ್ಹ ಶಾಸಕ’ರ ಕೈಗೆ ಬಿಜೆಪಿ ತನ್ನ ಧ್ವಜ ನೀಡುತ್ತದೆ. ‘ಅನರ್ಹ ಶಾಸಕರನ್ನು ಕೈಬಿಡುವುದಿಲ್ಲ’ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ನಾಡಿನ ಆಡಳಿತ ವ್ಯವಸ್ಥೆಯ ಮುಖ್ಯಸ್ಥ ಕೈಹಿಡಿಯಬೇಕಾದುದು ಯಾರನ್ನು– ಅರ್ಹರನ್ನೋ ಅನರ್ಹರನ್ನೋ ಎನ್ನುವ ಪ್ರಶ್ನೆ ಪಕ್ಷದಲ್ಲಿ ಯಾರಿಗೂ ಮುಖ್ಯವೆನ್ನಿಸಿದಂತಿಲ್ಲ.

ಗಾಂಧಿಯನ್ನು ‘ಸ್ವಚ್ಛ ಭಾರತ’ದ ರಾಯಭಾರಿಯಾಗಿ ಬಳಸಿಕೊಳ್ಳುವ ಪಕ್ಷವೇ, ಅವರು ಪಾತಕವೆಂದು ಗುರುತಿಸಿದ ‘ತತ್ವರಹಿತ ರಾಜಕೀಯ’ದ ಭಾಗವಾಗುತ್ತದೆ. ನೈತಿಕತೆಯು ಅನುಕೂಲಸಿಂಧು ಆಗುವುದು ಹೀಗೆಯೇ. ‘ನೈತಿಕ ಮೌಲ್ಯಗಳನ್ನು ಕಳೆದುಕೊಂಡ ಕ್ಷಣವೇ ನಮ್ಮ ಧರ್ಮವನ್ನು ಕಳೆದುಕೊಳ್ಳುತ್ತೇವೆ. ಧರ್ಮವು ನಮಗೆ ಅನೈತಿಕತೆಯನ್ನು ಹೇಳಿಕೊಡುವುದಿಲ್ಲ’ ಎನ್ನುವುದು ಗಾಂಧೀಜಿ ಅವರ ಇನ್ನೊಂದು ಮಾತು. ಧರ್ಮವನ್ನೇ ರಾಜಕಾರಣದ ಬುನಾದಿಯಾಗಿಸಿಕೊಂಡವರು, ನೈತಿಕ ಮೌಲ್ಯಗಳನ್ನು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ವಿಶ್ಲೇಷಿಸುವುದು ಕೂಡ ಅನುಕೂಲಸಿಂಧುವೇ.

ಧರ್ಮ ಮತ್ತು ರಾಜಕಾರಣದ ನಡುವಣ ಸಂಬಂಧ ಹೇಗಿರಬೇಕು ಎನ್ನುವುದಕ್ಕೆ ರಾಮನ ಅನನ್ಯತೆಯನ್ನೇ ಉದಾಹರಿಸಬಹುದು. ಈ ರಾಮ ಇರುವುದಾದರೂ ಎಲ್ಲಿ? ಯಾವುದೋ ಊರಿನ ಯಾವುದೋ ವಿಳಾಸದಲ್ಲೋ ಸ್ಥಾವರದಲ್ಲೋ ಅಲ್ಲ. ರಾಮರಸಪಾಕ ಯಾವ
ಅಡುಗೆಮನೆಯಲ್ಲೂ ತಯಾರಾಗುವುದಿಲ್ಲ. ರಾಮ ಇರುವುದು ಸತ್ಯದಲ್ಲಿ, ಧರ್ಮದಲ್ಲಿ ಹಾಗೂ ‘ರಾಮರಸಪಾಕ’ ರೂಪುಗೊಳ್ಳುವುದು ಸತ್ಯ–ಧರ್ಮದ ಅನುಸರಣೆಯ ಸಂದರ್ಭದಲ್ಲಿ. ಅಗ್ನಿಯೇ ಪುನೀತಳೆಂದು ಸಾರಿದ ಸೀತೆಯ ಚಾರಿತ್ರ್ಯದ ಬಗ್ಗೆ ಸಾಮಾನ್ಯ ಪ್ರಜೆಯೊಬ್ಬ ಎತ್ತಿದ ಪ್ರಶ್ನೆಯನ್ನು ರಾಮ ಗಂಭೀರವಾಗಿ ಪರಿಗಣಿಸಿದ.

ವೈಯಕ್ತಿಕ ಭಾವನೆಗಳನ್ನು ಹತ್ತಿಕ್ಕಿ, ಒಬ್ಬ ರಾಜನಾಗಿ ಪ್ರಜೆಯೊಬ್ಬನ ಮಾತಿಗೆ ಓಗೊಟ್ಟು ಪತ್ನಿಯನ್ನು ತ್ಯಜಿಸಿದ. ರಾಮನ ಈ ಕಠೋರ– ನಿಷ್ಠುರ ನಿಲುವು ಬಹುಸಮ್ಮತವೇನಲ್ಲ. ಆದರೆ, ಒಬ್ಬ ಪ್ರಜಾಪ್ರತಿನಿಧಿಯ ನೈಜ ವ್ಯಕ್ತಿತ್ವ ಪ್ರಕಟಗೊಳ್ಳುವುದೇ ಇಂಥ ನಿಷ್ಠುರ ನಿಲುವುಗಳಲ್ಲಿ. ರಾಮರಾಜ್ಯ ಸಾಕಾರಗೊಳ್ಳುವುದು ಅಲ್ಪಸಂಖ್ಯಾತರನ್ನು ಗೌರವಿಸುವ, ಒಳಗೊಳ್ಳುವ ಪ್ರಯತ್ನದಲ್ಲೇ ಹೊರತು, ಬಹುಸಂಖ್ಯಾತರ ಓಲೈಕೆಯಲ್ಲಿ ಅಲ್ಲ ಎನ್ನುವ ಸತ್ಯವನ್ನು ರಾಮಮಂದಿರವನ್ನು ಕಟ್ಟಲು ಹೊರಟವರು ಗಮನಿಸಬೇಕು.

ಇದೆಲ್ಲ ಚರ್ಚೆಯ ನಂತರ, ನೈತಿಕತೆ ಎಂದರೆ ಏನು ಎನ್ನುವ ಪ್ರಶ್ನೆಗೆ ಉತ್ತರವನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಳ್ಳಬೇಕು. ಗಾಂಧೀಜಿ ಹೇಳುತ್ತಾರೆ: ‘ನಮ್ಮ ಆಸೆಗಳು ಮತ್ತು ಉದ್ದೇಶಗಳನ್ನು ಸ್ವಾರ್ಥ ಮತ್ತು ನಿಸ್ವಾರ್ಥ ಎಂದು ವರ್ಗೀಕರಿಸಬಹುದು. ಸ್ವಾರ್ಥದಿಂದ ಕೂಡಿದ ಎಲ್ಲ ಆಸೆಗಳು ಅನೀತಿಯಿಂದ ಕೂಡಿದವು. ಇತರರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿ ನಮ್ಮನ್ನು ನಾವು ಸುಧಾರಿಸಿಕೊಳ್ಳುವ ಆಸೆಗಳು ನೈತಿಕವಾದವು. ಮನುಕುಲಕ್ಕೆ ಒಳಿತಾಗುವಂತೆ ಅವಿರತವಾಗಿ ಶ್ರಮಿಸುವುದು ನೈತಿಕತೆಯ ಉತ್ತುಂಗ.’ ಜನಪ್ರಿಯತೆಯ ಹಂಬಲವನ್ನು ಒಡಲಲ್ಲಿ ಇಟ್ಟುಕೊಂಡ ಭೂವಿವಾದದ ತೀರ್ಪು ಹಾಗೂ ಅನರ್ಹ ಶಾಸಕರ ಪ್ರಕರಣದಲ್ಲಿ ನಿಸ್ವಾರ್ಥ ಅಥವಾ ಮನುಕುಲದ ಏಳಿಗೆ ಇದೆಯೆಂದು ಹೇಳಲಿಕ್ಕೆ ಸಾಧ್ಯವಿದೆಯೇ?

ಜನಮೆಚ್ಚುಗೆಯ ಹಂಬಲಕ್ಕೆ ಹೊರತಾಗಿ, ವಸ್ತುನಿಷ್ಠತೆಯನ್ನೇ ಮುಖ್ಯವಾಗಿಸಿಕೊಂಡು ಸುಪ್ರೀಂ ಕೋರ್ಟ್‌ ಈವರೆಗೆ ತೀರ್ಪು ನೀಡುತ್ತಿತ್ತು. ಇದೇ ಮೊದಲ ಬಾರಿಗೆ ನ್ಯಾಯಪೀಠದ ತೀರ್ಮಾನಗಳಲ್ಲಿ ಭಾವುಕತೆ ಹಾಗೂ ಎಲ್ಲರನ್ನೂ ಒಪ್ಪಿಸುವ ಮನೋಭಾವ ಕಾಣಿಸುತ್ತಿದೆ; ನೈತಿಕತೆಯ ನಿರ್ಣಯದ ಹೊಣೆಗಾರಿಕೆಯನ್ನು ಅದು ಪರೋಕ್ಷವಾಗಿ ಜನಸಾಮಾನ್ಯರಿಗೆ ವರ್ಗಾಯಿಸಿದೆ. ಈ ಹೊಣೆಗಾರಿಕೆಯನ್ನು (ನೈತಿಕತೆಯ ವಾರಸುದಾರಿಕೆಯನ್ನು) ಜನಸಾಮಾನ್ಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಸಮಾಜ ಹೇಗೆ ನಿರ್ವಹಿಸುತ್ತದೆ ಎನ್ನುವುದು ಈಗ ಉಳಿದಿರುವ ಕುತೂಹಲ. ನೈತಿಕತೆ ಎನ್ನುವ ಅಸಹಾಯಕ ಶಿಶುವಿನ ರೋದನವು ಪ್ರಸ್ತುತ ಜನಸಾಮಾನ್ಯರ ಅಂಗಳದಲ್ಲಿ ಕೇಳಿಸುತ್ತಿದೆ. ಆ ಅಳುಬುರುಕ ಶಿಶುವನ್ನು, ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಾಧಾರವಾದ ಶ್ರೀಸಾಮಾನ್ಯ ಸಲಹುವನೋ ಅಥವಾ ನೈತಿಕತೆಯ ಗೊಡವೆ ತನಗೂ ಬೇಡವೆಂದು ಸಂದರ್ಭದೊಂದಿಗೆ ರಾಜಿಯಾಗುವನೋ ಎನ್ನುವುದನ್ನು ತಿಳಿಯಲಿಕ್ಕೆ ಹೆಚ್ಚು ಕಾಲವೇನೂ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT