ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಚಿನ್ನದ ಬಾಂಡ್‌ ರೂಪದಲ್ಲಿ ಹೂಡಿಕೆ ಮಾಡುವುದರಿಂದ ಪ್ರಯೋಜನವಿದೆಯೇ?

Last Updated 30 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಪ್ರಶ್ನೆ: ನಾನು ಸರ್ಕಾರದ ನಿವೃತ್ತ ನೌಕರ. ವಯಸ್ಸು 76 ವರ್ಷ. ವಾರ್ಷಿಕ ಪಿಂಚಣಿ ₹ 4 ಲಕ್ಷ. ಬ್ಯಾಂಕ್ ಹಾಗೂ ಅಂಚೆ ಕಚೇರಿಯ ಬಡ್ಡಿ ಸುಮಾರು ₹ 3 ಲಕ್ಷ. ಬ್ಯಾಂಕ್ ಹಾಗೂ ಅಂಚೆ ಕಚೇರಿಗೆ ಏಪ್ರಿಲ್ ಮೊದಲ ವಾರ ಫಾರಂ 15 ಎಚ್ ನೀಡುತ್ತೇನೆ. ಅಂಚೆ ಕಚೇರಿಯಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆ ಹಾಗೂ ಎನ್ಎಸ್‌ಸಿ ಹೂಡಿಕೆ ಇದೆ. ಇವುಗಳಿಗೆ ಬರುವ ಬಡ್ಡಿ ಹೊರತುಪಡಿಸಿ ಬೇರೆ ಬಡ್ಡಿ ಆದಾಯವಿಲ್ಲ. ನನಗೆ 75 ವರ್ಷಕ್ಕೂ ಹೆಚ್ಚು ವಯಸ್ಸಾಗಿರುವುದರಿಂದ ಐಟಿಆರ್ ಸಲ್ಲಿಸಲಿಲ್ಲ. ದಯವಿಟ್ಟು ಸೂಕ್ತ ಸಲಹೆ ನೀಡಿ.
-ಶಂಕರ, ಊರು ಬೇಡ

ಉತ್ತರ: ನೀವು 60ರಿಂದ 80 ವರ್ಷ ವಯೋಮಾನದಲ್ಲಿರುವ ಕಾರಣ ನಿಮ್ಮ ಗರಿಷ್ಠ ತೆರಿಗೆ ವಿನಾಯಿತಿ ಮೊತ್ತ ₹ 3 ಲಕ್ಷ. ನಿಮ್ಮ ವಯಸ್ಸು 80 ವರ್ಷ ಆದಾಗ (ಸೂಪರ್ ಸೀನಿಯರ್ ವರ್ಗ) ಈಗ ಇರುವ ಆದಾಯ ತೆರಿಗೆ ನಿಯಮದಂತೆ ₹ 5 ಲಕ್ಷದ ತನಕ ತೆರಿಗೆ ವಿನಾಯಿತಿ ಇರಲಿದೆ. ಮೇಲೆ ತಿಳಿಸಿದ ಗರಿಷ್ಠ ತೆರಿಗೆ ವಿನಾಯಿತಿ ಮಿತಿಗಿಂತ ಹೆಚ್ಚಿಗೆ ಆದಾಯ ಇರುವ ಎಲ್ಲರೂ ತೆರಿಗೆ ವಿವರ ಸಲ್ಲಿಸಬೇಕು. ಗರಿಷ್ಠ ತೆರಿಗೆ ವಿನಾಯಿತಿ ಮೊತ್ತ ನಿಮ್ಮ ವಯಸ್ಸನ್ನು ಅವಲಂಬಿತವಾಗಿರುತ್ತದೆ.

75 ವರ್ಷ ವಯಸ್ಸು ಮೀರಿದ ವ್ಯಕ್ತಿಗಳು ತೆರಿಗೆ ವಿವರ ಸಲ್ಲಿಸುವುದಕ್ಕಿರುವ ವಿನಾಯಿತಿ ಪ್ರಸ್ತಾವನೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194(ಪಿ)ಯಲ್ಲಿ ಇದೆ. ಇದರ ಪ್ರಯೋಜನ ಪಡೆಯಲು ಮೊದಲನೆಯದಾಗಿ ವ್ಯಕ್ತಿಯು ನಿವಾಸಿ ಭಾರತೀಯನಾಗಿದ್ದು ವಯಸ್ಸು 75 ವರ್ಷ ಆಗಿರಬೇಕು ಹಾಗೂ ಅಂಥವರು ಪಿಂಚಣಿ ಮತ್ತು ಬಡ್ಡಿ ಆದಾಯ ಮಾತ್ರ ಗಳಿಸುತ್ತಿರಬೇಕು. ಪಿಂಚಣಿ ಆದಾಯ ನಿಗದಿತ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದ್ದು, ತೆರಿಗೆ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಬ್ಯಾಂಕಿಗೆ ಸಲ್ಲಿಸಿರಬೇಕು. ನಿಮಗೆ ತೆರಿಗೆ ಅನ್ವಯವಾದಲ್ಲಿ ಅಂತಹ ತೆರಿಗೆ ಮೊತ್ತವನ್ನು ಕಡಿತಗೊಳಿಸಿ ಬ್ಯಾಂಕ್‌ಗಳು ಪಾವತಿಸಿರಬೇಕು.

ನೀವು ನೀಡಿರುವ ಮಾಹಿತಿಯಂತೆ, ಪಿಂಚಣಿ ಹಾಗೂ ಬಡ್ಡಿ ಆದಾಯಗಳಿಂದ ನಿಮಗೆ ಒಟ್ಟು ₹ 7 ಲಕ್ಷ ಬರುತ್ತಿದೆ. ಮೂಲ ತೆರಿಗೆ ಕಡಿತ ₹ 50,000 ಹಾಗೂ ಬಡ್ಡಿ ವಿನಾಯಿತಿ ₹ 50,000 ಪರಿಗಣಿಸಿದರೂ ₹ 6 ಲಕ್ಷ ಮೊತ್ತಕ್ಕೆ ತೆರಿಗೆ ಬರುತ್ತದೆ. ನೀವು ಈಗಾಗಲೇ ‘ಫಾರಂ 15 ಎಚ್’ಅನ್ನು ಸಂಬಂಧಿತ ಇಲಾಖೆಗೆ ನೀಡಿದ್ದು ಅವರು ಅದನ್ನು ಪರಿಗಣಿಸಿದ್ದರೂ, ನಿಮ್ಮ ಒಟ್ಟು ಆದಾಯವು ಗರಿಷ್ಠ ತೆರಿಗೆ ವಿನಾಯಿತಿ ಮಿತಿಗಿಂತ ಹೆಚ್ಚಿಗೆ ಇರುವ ಕಾರಣ ಅದರ ಪ್ರಾಮುಖ್ಯತೆ ತೆರಿಗೆ ಕಡಿತ ಮಾಡದಿರುವುದಕ್ಕೆ ಸೀಮಿತವೇ ಹೊರತು ಸಂಪೂರ್ಣ ತೆರಿಗೆ ವಿನಾಯಿತಿಗೆ ಸಂಬಂಧಿಸಿಲ್ಲ. ನಿಮ್ಮ ಪ್ಯಾನ್ ಖಾತೆಯಲ್ಲಿ ಪ್ರಸ್ತುತ ವರ್ಷದಲ್ಲಿ ತೆರಿಗೆ ಕಡಿತ ಆಗಲಿಲ್ಲವೆಂದು ಪರಿಗಣಿಸಿ ಹೇಳುವುದಾದರೆ, ನಿಮ್ಮ ಒಟ್ಟು ಆದಾಯದ ಮೇಲೆ ಇನ್ನೂ ತೆರಿಗೆ ಪಾವತಿಸಬೇಕಾಗುತ್ತದೆ ಹಾಗೂ ಜುಲೈ ನಂತರ ತಡವಾಗಿ ವಿವರ ಸಲ್ಲಿಸುವುದಕ್ಕೆ ದಂಡ ಪಾವತಿಸಬೇಕಾಗುತ್ತದೆ. ಪ್ರಸ್ತುತ ನಿಮ್ಮ ಅಂಚೆ ಕಚೇರಿಯ ಹೂಡಿಕೆ 80 ಸಿ ಸೆಕ್ಷನ್ ಅಡಿ ತೆರಿಗೆ ಲಾಭ ಕೊಡುವ ಹೂಡಿಕೆಯಾಗಿದ್ದರೆ ಇನ್ನಷ್ಟು ತೆರಿಗೆ ಉಳಿತಾಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಎಲ್ಲಾ ಆದಾಯ ಹಾಗೂ ಉಳಿತಾಯದ ಮಾಹಿತಿಯೊಂದಿಗೆ, ಸಮೀಪದ ತೆರಿಗೆ ಸಲಹೆಗಾರರ ಜೊತೆ ಚರ್ಚಿಸಿ.

**

ಪ್ರಶ್ನೆ: ಇತ್ತೀಚೆಗೆ ಬಿಡುಗಡೆಯಾದ ಚಿನ್ನದ ಬಾಂಡ್ ಖರೀದಿಸಲು ನನಗೆ ಆಗಲಿಲ್ಲ. ಇದನ್ನು ಕೇಂದ್ರ ಸರ್ಕಾರ ವರ್ಷದಲ್ಲಿ ಎರಡು ಬಾರಿ ಬಿಡುಗಡೆ ಮಾಡುತ್ತದೆ ಎಂದು ಕೇಳಿದ್ದೇನೆ. ಇದರಲ್ಲಿ ಹೂಡಿಕೆ ಮಾಡುವುದರಿಂದ ಆರ್ಥಿಕವಾಗಿ ಪ್ರಯೋಜನವಿದೆಯೇ? ಹೆಣ್ಣು ಮಕ್ಕಳ ವಿವಾಹದ ಸಂದರ್ಭದಲ್ಲಿ ಇದು ಹೇಗೆ ನೆರವಾಗುತ್ತದೆ?
-ಹೆಸರು ಬೇಡ, ಬೆಂಗಳೂರು

ಉತ್ತರ
: ಚಿನ್ನದ ಬಾಂಡ್‌ಗಳನ್ನು ಭಾರತ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್, ಬಾಂಡ್ ರೂಪದಲ್ಲಿ ಹೂಡಿಕೆದಾರರಿಗೆ ನೀಡುತ್ತದೆ. ಇದಕ್ಕೆ ಸರ್ಕಾರದ ಭದ್ರತೆ ಇದ್ದು ಭೌತಿಕ ಚಿನ್ನವನ್ನು ಮನೆಯಲ್ಲಿ ಅಥವಾ ಬ್ಯಾಂಕ್ ಲಾಕರ್‌ಗಳಲ್ಲಿ ಇಟ್ಟುಕೊಳ್ಳುವ ಬದಲು ಇರುವ ಪರ್ಯಾಯ ವ್ಯವಸ್ಥೆಯಾಗಿದೆ. ಬಾಂಡ್‌ ನೀಡುವಾಗಿನ ಚಿನ್ನದ ಮಾರುಕಟ್ಟೆ ಬೆಲೆಯನ್ನೇ ಬಾಂಡ್‌ಗೂ ನಿಗದಿ ಮಾಡಲಾಗುತ್ತದೆ. ಇದರ ವಿಶೇಷವೆಂದರೆ, ಶೇಕಡ 2.5ರಷ್ಟು ಬಡ್ಡಿಯನ್ನು ಅರ್ಧ ವರ್ಷಕ್ಕೊಮ್ಮೆ ಹೂಡಿಕೆದಾರರಿಗೆ ಆರಂಭಿಕ ಮೊತ್ತದ ಮೇಲೆ ನೀಡಲಾಗುತ್ತದೆ. ಬಾಂಡ್ ಖರೀದಿಯ ಸಂದರ್ಭದಲ್ಲಿ, ಚಿನ್ನಾಭರಣಗಳಿಗೆ ಖರೀದಿ ಸಮಯದಲ್ಲಿ ವಿಧಿಸುವ ಶುಲ್ಕ ಇರುವುದಿಲ್ಲ ಮತ್ತು ಶುದ್ಧತೆ ಪ್ರಶ್ನೆ ಇರುವುದಿಲ್ಲ. ಬಾಂಡ್‌ನಲ್ಲಿನ ಪ್ರತಿ ವರ್ಷ ಕನಿಷ್ಠ ಹೂಡಿಕೆ 1 ಗ್ರಾಂ, ಗರಿಷ್ಠ ಹೂಡಿಕೆ 4 ಕೆ.ಜಿ. ಇದು 8 ವರ್ಷಗಳ ಅವಧಿಯ ಹೂಡಿಕೆಯಾಗಿದ್ದು, 5, 6, 7ನೇ ವರ್ಷದಲ್ಲಿ ಹಣ ಹಿಂಪಡೆಯುವ ಅವಕಾಶವಿದೆ.

ಚಿನ್ನದ ಬಾಂಡ್‌ಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು, ಶೆಡ್ಯೂಲ್ಡ್ ಪ್ರೈವೇಟ್ ಬ್ಯಾಂಕ್‌ಗಳು, ನಿಗದಿತ ಅಂಚೆ ಕಚೇರಿಗಳು, ಮತ್ತು ಅಧಿಕೃತ ಸ್ಟಾಕ್ ಎಕ್ಸ್‌ಚೇಂಜ್‌ ಕಚೇರಿಗಳು ಅಥವಾ ಶಾಖೆಗಳ ಮೂಲಕ ನೇರವಾಗಿ ಅಥವಾ ಅವರ ಏಜೆಂಟ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಬಾಂಡ್ ಖರೀದಿಸುವ ಗ್ರಾಹಕರಿಗೆ ಸಾಮಾನ್ಯವಾಗಿ ₹ 50ರಷ್ಟು ಕಡಿಮೆ ದರ ನಿಗದಿ ಮಾಡಲಾಗುತ್ತದೆ.

ಗ್ರಾಹಕರಿಗೆ ಬಾಂಡ್‌ ವಿತರಿಸಿದ ದಿನಾಂಕದಂದು ಹೋಲ್ಡಿಂಗ್ ಪ್ರಮಾಣಪತ್ರ ನೀಡಲಾಗುತ್ತದೆ. ಅರ್ಜಿ ನಮೂನೆಯಲ್ಲಿ ಇಮೇಲ್ ವಿಳಾಸ ಒದಗಿಸಿದರೆ, ಬಾಂಡ್‌ಗಳನ್ನು ಇಮೇಲ್‌ ಮೂಲಕವೂ ಪಡೆಯಬಹುದು. ಬಾಂಡ್‌ಗಳನ್ನು ಡಿಮ್ಯಾಟ್ ಖಾತೆಯಲ್ಲೂ ಹೊಂದಬಹುದು. ಹೂಡಿಕೆಯ ಅವಧಿ ಮುಗಿದಾಗ ಪ್ರತಿ ಗ್ರಾಂಗೆ ಅಂದಿನ ಮಾರುಕಟ್ಟೆ ಮೌಲ್ಯವನ್ನು ನೀಡಲಾಗುತ್ತದೆ. ಇದನ್ನು ಬಳಸಿ ಅಗತ್ಯ ಭೌತಿಕ ಚಿನ್ನವನ್ನು ಮಾರುಕಟ್ಟೆಯಿಂದ ಕೊಳ್ಳಬಹುದು. ಮಕ್ಕಳ ವಿವಾಹಕ್ಕೆ ಅಥವಾ ಹೂಡಿಕೆಯ ಉದ್ದೇಶಕ್ಕೆ ಇದು ಉತ್ತಮ ಅವಕಾಶ ನೀಡುತ್ತದೆ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT