ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಎನ್ಎಫ್‌ಒ ಹೂಡಿಕೆ ಅಪಾಯಕಾರಿಯೇ?

Last Updated 13 ಸೆಪ್ಟೆಂಬರ್ 2022, 19:32 IST
ಅಕ್ಷರ ಗಾತ್ರ

ಹೆಸರು ಬೇಡ, ಊರು ಬೇಡ

l ಪ್ರಶ್ನೆ: ನಾನು ವ್ಯವಸಾಯಗಾರ ಮತ್ತು ಸಣ್ಣ ವ್ಯಾಪಾರಿ. ನನ್ನ ಪತ್ನಿ ಗೃಹಿಣಿ. ನಮ್ಮ ಮಗಳು ಮತ್ತು ಅಳಿಯ ವಿದೇಶದಲ್ಲಿ ಇದ್ದಾರೆ. ನಮ್ಮ ಭವಿಷ್ಯಕ್ಕೆ ಅನುಕೂಲವಾಗಲೆಂದು ಶಿವಮೊಗ್ಗದಲ್ಲಿ ₹ 58 ಲಕ್ಷದ ಒಂದು ಮನೆಯನ್ನು ನನ್ನ ಪತ್ನಿಯ ಹೆಸರಲ್ಲಿ ಖರೀದಿಸಿದ್ದಾರೆ. ಇದಕ್ಕೆ ಬೇಕಾದ ಹಣ ಸುಮಾರು ₹ 65 ಲಕ್ಷವನ್ನು ನಮ್ಮ ಅಳಿಯನ ಎನ್‌ಆರ್‌ಐ ಖಾತೆಯಿಂದ ನನ್ನ ಪತ್ನಿಯ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಈ ಹಣದಿಂದ ಮನೆ ಖರೀದಿಸಿದ್ದೇವೆ. ಕಾನೂನು ರೀತಿಯಲ್ಲಿ ನೋಂದಣಿ ಆಗಿದೆ. ಟಿಡಿಎಸ್ ಕಟ್ಟಲಾಗಿದೆ. ಈ ರೀತಿ ಖರೀದಿಸಲಾದ ಮನೆ ಮತ್ತು ಪಡೆದ ಹಣಕ್ಕೆ ತೆರಿಗೆ ಇದೆಯೇ?

ಉತ್ತರ: ಆದಾಯ ತೆರಿಗೆಯ ಸಾಮಾನ್ಯ ನಿಯಮದಂತೆ ಯಾವುದೇ ವ್ಯಕ್ತಿ ಒಂದು ವರ್ಷದಲ್ಲಿ ಒಟ್ಟಾರೆ ₹ 50,000ಕ್ಕಿಂತ ಅಧಿಕ ಮೊತ್ತವನ್ನು ಯಾರಿಂದ ಉಡುಗೊರೆಯಾಗಿ ಪಡೆದರೂ ತೆರಿಗೆ ಇರುತ್ತದೆ. ಹೀಗಾಗಿ ಆ ಮೊತ್ತ ಸ್ವೀಕರಿಸಿದ ವ್ಯಕ್ತಿ ತೆರಿಗೆ ಕಟ್ಟಬೇಕಾಗುತ್ತದೆ. ಆದರೆ, ಆದಾಯ ತೆರಿಗೆಯ ಸೆಕ್ಷನ್ 56(2)ರ ಪ್ರಕಾರ ಯಾವುದೇ ಸಂಬಂಧಿಕರು ನೀಡುವ ಉಡುಗೊರೆಗೆ ತೆರಿಗೆ ವಿನಾಯಿತಿ ಇದೆ.

ನಿಮ್ಮ ಮಗಳ ಗಂಡ ನಿಮ್ಮ ಪತ್ನಿಯ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಆ ಮೊತ್ತದಿಂದ ನೀವು ಮನೆ ಖರೀದಿಸಿದ್ದೀರಿ. ಅಳಿಯನಿಂದ ಸ್ವೀಕರಿಸಿದ ಉಡುಗೊರೆ ಸಂಬಂಧಿಕರ ವರ್ಗದಲ್ಲಿ ಬರುತ್ತದೆ. ಹೀಗಾಗಿ ನಿಯಮ ಪ್ರಕಾರ ಯಾವುದೇ ತೆರಿಗೆ ಇಲ್ಲ. ಆದರೂ ಪೂರಕ ದಾಖಲೆಯಾಗಿ ‘ಗಿಫ್ಟ್‌ ಡೀಡ್’ ದಾಖಲಿಸಿಡುವುದು ಉತ್ತಮ. ಇದು ಆದಾಯ ತೆರಿಗೆಯ ಮುಂದಿನ ಯಾವುದೇ ಅಹವಾಲುಗಳನ್ನು ಉತ್ತರಿಸುವಲ್ಲಿ ನೆರವಾಗುತ್ತದೆ.

ನೀವು ಖರೀದಿಸಿರುವ ಮನೆ ನಿಮ್ಮ ಪತ್ನಿಯ ಹೆಸರಲ್ಲಿದೆಯೇ ಅಥವಾ ನಿಮ್ಮ ಹೆಸರಲ್ಲಿದೆಯೇ ಎಂಬುದನ್ನು ತಿಳಿಸಿಲ್ಲ. ಒಂದು ವೇಳೆ ನಿಮ್ಮ ಹೆಸರಲ್ಲಿದ್ದರೆ ಅದಕ್ಕೂ ನಿಮ್ಮ ಪತ್ನಿಯಿಂದ ನಿಮಗೆ ಉಡುಗೊರೆಯಾಗಿ ನಿಮ್ಮ ಹೆಸರಲ್ಲಿ ಮನೆ ದಾಖಲಿಸಲು ಹಣ ಬಂದಿರುತ್ತದೆ. ಹೀಗಾಗಿ ಎರಡನೆಯ ಹಂತದಲ್ಲಿ ಅಗತ್ಯವಿರುವ ಪೂರಕ ದಾಖಲೆಯಾಗಿ ನಿಮ್ಮಿಬ್ಬರ ಮಧ್ಯೆ ‘ಗಿಫ್ಟ್‌ ಡೀಡ್’ ದಾಖಲಿಸಿಡುವುದು ಸೂಕ್ತ. ಮುಂದಿನ ದಿನಗಳಲ್ಲಿ ಯಾವುದೇ ಸಂದರ್ಭದಲ್ಲಿ ಮನೆಯನ್ನು ಬಾಡಿಗೆಗೆ ನೀಡಿದರೆ, ಮನೆ ಮಾರಾಟ ಮಾಡಿದರೆ ಯಾರು ಮಾಲೀಕತ್ವ ಹೊಂದಿರುತ್ತಾರೋ ಅವರು ತೆರಿಗೆ ಕೊಡಬೇಕಾಗುತ್ತದೆ ಎನ್ನುವುದು ತಿಳಿದಿರಲಿ.

ಸಹನಾ ಮತ್ತು ಶ್ರದ್ಧಾ,ಅರಕೆರೆ, ಬೆಂಗಳೂರು

l ಪ್ರಶ್ನೆ: ನಾವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ಇತ್ತೀಚೆಗೆ ನಮ್ಮ ಬ್ರೋಕರ್ ಹೊಸ ‘ಎನ್ಎಫ್‌ಒ’ದಲ್ಲಿ ಹೂಡಿಕೆ ಮಾಡುವಂತೆ ಸಲಹೆ ಕೊಟ್ಟಿದ್ದರು. ನಾವು ಸುಮಾರು ₹ 50,000 ಹೂಡಿಕೆ ಮಾಡಿದೆವು. ಆದರೆ ಅದು ಈಗ ಶೇಕಡ 5.5ರಷ್ಟು ಕಡಿಮೆಯಾಗಿದೆ. ಏನು ಮಾಡಲಿ? ಎನ್ಎಫ್‌ಒ ಹೂಡಿಕೆ ಅಪಾಯಕಾರಿಯೇ?

ಉತ್ತರ: ಎಲ್ಲ ಎನ್‌ಎಫ್‌ಒಗಳು ನಿರ್ದಿಷ್ಟ ಹೂಡಿಕೆ ಉದ್ದೇಶದೊಂದಿಗೆ ಬರುತ್ತವೆ. ಅವನ್ನು ಬೆಳವಣಿಗೆ, ಮೌಲ್ಯ ಹೂಡಿಕೆ ಅಥವಾ ಬಂಡವಾಳ ರಕ್ಷಣೆ, ಬ್ಯಾಂಕಿಂಗ್ ಅಥವಾ ಇನ್ಯಾವುದೇ ಉದ್ದೇಶದಿಂದ ಹೊರತಂದಿರಬಹುದು. ಹೀಗಾಗಿ ನಿಮ್ಮ ಹಣಕಾಸಿನ ಗುರಿ ಮತ್ತು ಅಪಾಯ ತಾಳಿಕೊಳ್ಳುವ ಮಟ್ಟಕ್ಕೆ ಅನುಗುಣವಾಗಿ ನಿಮಗೆ ಸರಿಹೊಂದುವ ಹೂಡಿಕೆ ಉದ್ದೇಶವನ್ನು ಎನ್‌ಎಫ್‌ಒ ಪೂರೈಸುತ್ತದೆಯೇ ಎಂದು ಪರಿಶೀಲಿಸಿ. ಹೊಸದಾಗಿ ಬರುವ ಎನ್ಎಫ್‌ಒ ಪರಿಶೀಲಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಒಂದಿಷ್ಟು ಅಧ್ಯಯನ ಬೇಕಾಗುತ್ತದೆ. ಈ ಕೆಳಗಿನ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಿ.

1.→ಎನ್‌ಎಫ್‌ಒ ಮುಖಬೆಲೆ ಸಾಮಾನ್ಯವಾಗಿ ₹ 10 ಆಗಿರುತ್ತದೆ. ಹೊರನೋಟಕ್ಕೆ ಇದು ತುಂಬಾ ಕಡಿಮೆ ಎಂದು ಕಂಡರೂ ಇದು ಆರಂಭದ ಬೆಲೆಯಷ್ಟೇ. ಫಂಡ್ ಹೌಸ್‌ಗಳು ನಿಮ್ಮ ಹಣ ಎಲ್ಲಿ ತೊಡಗಿಸುತ್ತವೆ ಎಂಬುದನ್ನು ಅರಿತುಕೊಳ್ಳಿ. ಆ ಹೂಡಿಕೆ ಕ್ಷೇತ್ರ ಸರಿಯಾದದ್ದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

2.→ಯಾವುದೇ ಹೊಸ ಫಂಡ್ ಹೌಸ್ ಮೊದಲ ಬಾರಿಗೆ ಮ್ಯೂಚುವಲ್ ಫಂಡ್ ಬಿಡುಗಡೆ ಮಾಡುತ್ತಿದ್ದರೆ ಮುಗಿಬಿದ್ದು ಹೂಡಿಕೆ ಮಾಡುವುದು ಬೇಡ. ಈಗಾಗಲೇ ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರುವಾಸಿಯಾದ ಹಾಗೂ ಕೆಲವು ವರ್ಷಗಳಿಂದ ಉತ್ತಮ ಆದಾಯ ನೀಡುತ್ತಿರುವ ಥೀಮ್‌ಗಳಲ್ಲಷ್ಟೇ ಹೂಡಿಕೆ ಮಾಡಿ. ಅದನ್ನು ಅನ್ವೇಷಿಸಿ.

3.→ಸಣ್ಣ ಮೊತ್ತದ ಹೊಸ ಫಂಡ್‌ಗಳ ನಿರ್ವಹಣಾ ಶುಲ್ಕ ಗರಿಷ್ಠ ಮಿತಿಯಾದ ಶೇ 2.50ರಷ್ಟನ್ನು ಹೂಡಿಕೆದಾರರಿಂದ ಪಡೆಯುತ್ತವೆ. ಫಂಡ್ ಮೊತ್ತ ಒಟ್ಟು ಬೆಳೆಯುತ್ತ ಹೋದಂತೆ ಶುಲ್ಕದ ಪ್ರಮಾಣ ನಿಧಾನವಾಗಿ ಇಳಿಕೆಯಾಗುತ್ತಾ ಹೋಗುತ್ತದೆ.

Caption
Caption

4.→ಎನ್ಎಫ್‌ಒ, ಓಪನ್ ಎಂಡೆಡ್ ಅಥವಾ ಕ್ಲೋಸ್ಡ್ ಎಂಡೆಡ್ ಆಗಿರಬಹುದು. ಓಪನ್ ಎಂಡೆಡ್ ಫಂಡ್ ಹೂಡಿಕೆದಾರರಿಗೆ ಚಂದಾ ಅವಧಿ ಮುಗಿದೊಡನೆ ಮುಕ್ತ ಮಾರಾಟ ಅಥವಾ ಖರೀದಿಗೆ ಅವಕಾಶ ನೀಡುತ್ತದೆ. ಹೀಗಾಗಿ ಮಾರುಕಟ್ಟೆ ಸನ್ನಿವೇಶ ನೋಡಿಕೊಂಡು ಯಾವುದೇ ಹೂಡಿಕೆದಾರ ತನ್ನಲ್ಲಿನ ಯೂನಿಟ್‌ಗಳನ್ನು ಮಾರಾಟ ಮಾಡುವ ಅಥವಾ ಇರಿಸಿಕೊಳ್ಳುವ ನಿರ್ಧಾರ ಕೈಗೊಳ್ಳಬಹುದು. ಕ್ಲೋಸ್ಡ್ ಎಂಡೆಡ್ ಫಂಡ್ ಮೂರು ವರ್ಷದೊಳಗಿನ ಅವಧಿಯಲ್ಲಿ ಮಾರಾಟಕ್ಕೆ ಲಭ್ಯವಿರುವುದಿಲ್ಲ. ಆದರೆ, ಈ ಅವಧಿಯಲ್ಲಿ ಮಾರಾಟ ಮಾಡುವ ಉದ್ದೇಶವಿದ್ದರೆ ಷೇರು ಮಾರುಕಟ್ಟೆಯಂತಹ ಎರಡನೆಯ ಹಂತದ ಮಾರುಕಟ್ಟೆಯಲ್ಲಿ ಮ್ಯೂಚುವಲ್ ಫಂಡ್ ಯೂನಿಟ್‌ಗಳ ಮಾರಾಟಕ್ಕೆ ಅವಕಾಶವಿದೆ.

ನಿಮ್ಮ ಹೂಡಿಕೆ ಈಕ್ವಿಟಿ ವಿಭಾಗದಲ್ಲಿ ಇರಬಹುದು. ಹೀಗಾಗಿ ಏರಿಳಿತ ಇರುತ್ತದೆ. ನೀವು ಹೂಡಿಕೆ ಮಾಡಿದ ಫಂಡ್ ಯಾವ ಕ್ಷೇತ್ರದಲ್ಲಿದೆ ಹಾಗೂ ಫಂಡ್ ಹೌಸ್‌ನ ಆರ್ಥಿಕ ರ್‍ಯಾಂಕಿಂಗ್ ಏನಿದೆ ಎನ್ನುವುದನ್ನು ಅರಿಯಿರಿ. ನೀವು ಆರ್ಥಿಕವಾಗಿ ತೊಂದರೆಯಲ್ಲಿದ್ದರೆ, ಫಂಡ್ ಹೌಸ್ ಹೂಡಿಕೆಯ ಆಧಾರದ ಮೇಲೆ ಮುಂದೆ ಉತ್ತಮ ಲಾಭ ಕಷ್ಟವಾಗಿದ್ದರೆ ನಷ್ಟದೊಡನೆ ಹೊರಬನ್ನಿ. ನೀವು ದೀರ್ಘಾವಧಿ ಹೂಡಿಕೆದಾರರಾಗಿದ್ದರೆ, ಇರುವ ಹೂಡಿಕೆ ಮುಂದುವರಿಸಿ ಹಾಗೂ ಪ್ರತಿನಿತ್ಯದ ಏರಿಳಿತ ನೋಡುವುದುದನ್ನು ನಿಲ್ಲಿಸಿ.

***

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ,
ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌:businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT