ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ| ಜಮೀನು ಮಾರಿದ ಹಣಕ್ಕೆ ತೆರಿಗೆ ಕೊಡಬೇಕಾ?

Last Updated 3 ನವೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ನಾಗರಾಜಪ್ಪ, ದಾವಣಗೆರೆ

l ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ಅನಿವಾರ್ಯ ಕಾರಣದಿಂದಾಗಿ 10 ಎಕರೆ ಜಮೀನು ಮಾರಾಟ ಮಾಡಲು ಬಯಸಿದ್ದೇನೆ. ಈ ಮಾರಾಟದಿಂದ ಅಂದಾಜು ₹ 1.50 ಕೋಟಿ ಸಿಗಬಹುದು. ಈ ಹಣಕ್ಕೆ ತೆರಿಗೆ ಕೊಡಬೇಕಾಗುತ್ತದೆಯೇ?

ಯು.ಪಿ. ಪುರಾಣಿಕ್

ಉತ್ತರ: ಗ್ರಾಮೀಣ ಪ್ರದೇಶದ, ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ವ್ಯವಸಾಯದ ಜಮೀನು ಮಾರಾಟ ಮಾಡುವಲ್ಲಿ ಮಾತ್ರ ಸೆಕ್ಷನ್‌ 48ರ ಆಧಾರದ ಮೇಲೆ ಬಂಡವಾಳ ವೃದ್ಧಿ ತೆರಿಗೆ ವಿನಾಯಿತಿ ಪಡೆಯಬಹುದು. ಜಮೀನು ದಾವಣಗೆರೆಗೆ ಸಮೀಪದಲ್ಲಿ ಇರುವುದಾದರೆ ನೀವು ವಿನಾಯಿತಿ ಪಡೆಯುವಂತಿಲ್ಲ. ಈ ಹಣದಿಂದ ನಿವೇಶನದಲ್ಲಿರುವ ಮನೆ ಕೊಳ್ಳಬಹುದು ಅಥವಾ ಮನೆ ಕಟ್ಟಿಸಬಹುದು.

ಸರ್ಕಾರಿ ಬಾಂಡ್‌ಗಳಲ್ಲಿ ಹೂಡಲು ಗರಿಷ್ಠ ಮಿತಿ ₹ 50 ಲಕ್ಷ ಮಾತ್ರ. ಇಂದಿನ ಬಂಡವಾಳವೃದ್ಧಿ ತೆರಿಗೆ ಶೇಕಡ 20ರಷ್ಟು ಇದ್ದು, ನೀವು ಬಹಳಷ್ಟು ಹಣ ತೆರಿಗೆಗೇ ಮುಡಿಪಾಗಿಡಬೇಕಾಗುತ್ತದೆ. ಸ್ಥಿರ ಆಸ್ತಿ ಯಾವಾಗಲೂ ಸ್ಥಿರವಾಗಿರುತ್ತದೆ. ಅತಿ ಅಗತ್ಯ ಕಂಡಲ್ಲಿ ಮಾತ್ರ ಮಾರಾಟ ಮಾಡಿ. ಇಂದು ನೀವು ಪಡೆಯುವ ಬೆಲೆ ಚೆನ್ನಾಗಿದೆ ಎಂದು ಕಂಡಲ್ಲಿ ಮಾತ್ರ ಮಾರಾಟ ಮಾಡಿ. ಮುಂದೆ ಪಶ್ಚಾತ್ತಾಪ ಪಡುವಂತಾಗಬಾರದು. ಇಂದಿನ ಅಸ್ಥಿರ ಆರ್ಥಿಕ ಪರಿಸ್ಥಿತಿಯಲ್ಲಿ ಜಮೀನು ಮಾತ್ರ ಜನರನ್ನು ಕಷ್ಟ ಕಾಲದಲ್ಲಿ ಕಾಪಾಡಬಲ್ಲದು. ಈ ವಿಚಾರದಲ್ಲಿ ದುಡುಕುವುದು ಸಮಂಜಸವಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ.

ಹೆಸರು ಬೇಡ, ಬಸವೇಶ್ವರನಗರ

l ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ಅಧಿಕಾರಿ. ಪ್ರತಿ ತಿಂಗಳು ₹ 950 ವರಮಾನ ತೆರಿಗೆ ಕಳೆದು ₹ 46 ಸಾವಿರ ಪಿಂಚಣಿ ಬರುತ್ತದೆ. ಮನೆ ತೆರಿಗೆ ವಾರ್ಷಿಕ ₹ 6,500 ಮತ್ತು ಆರೋಗ್ಯ ವಿಮೆ ವಾರ್ಷಿಕ ₹ 30 ಸಾವಿರ ಬರುತ್ತದೆ. ನನ್ನ ವೈಯಕ್ತಿಕ ಆರೋಗ್ಯ ಸುಧಾರಣೆಗೆ ಅಂದಾಜು ₹ 6 ಸಾವಿರ ತಿಂಗಳಿಗೆ ಖರ್ಚಾಗುತ್ತದೆ. ನಾನು ವರಮಾನ ತೆರಿಗೆ ಪಾವತಿಸಬೇಕೇ?

ಉತ್ತರ: ನಿಮ್ಮ ವಾರ್ಷಿಕ ಪಿಂಚಣಿ ಆದಾಯ ₹ 5,63,400. ಸೆಕ್ಷನ್‌ 16(1ಎ) ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹ 50 ಸಾವಿರ, ಸೆಕ್ಷನ್‌ 80ಡಿ ಆರೋಗ್ಯ ವಿಮೆ ₹ 30 ಸಾವಿರ... ಹೀಗೆ ₹ 80 ಸಾವಿರ ನಿಮ್ಮ ಆದಾಯದಿಂದ ವಿನಾಯಿತಿ ಪಡೆದಾಗ ನಿಮ್ಮ ತೆರಿಗೆ ಆದಾಯ ₹ 4,83,400 ಮಾತ್ರ. ₹ 5 ಲಕ್ಷದವರೆಗೆ ಎಲ್ಲಾ ವರ್ಗದ ಜನರಿಗೆ ಆದಾಯ ತೆರಿಗೆ ವಿನಾಯಿತಿ ಇರುವುದರಿಂದ ನಿಮಗೆ ಆದಾಯ ತೆರಿಗೆ ಬರುವುದಿಲ್ಲ. ಈಗಾಗಲೇ ಮುರಿದುಕೊಂಡಿರುವ ತೆರಿಗೆ ಮೊತ್ತವನ್ನು, ಐ.ಟಿ. ರಿಟರ್ನ್ಸ್‌ ತುಂಬಿ ವಾಪಸ್‌ ಪಡೆಯಿರಿ. ವಿನಾಯಿತಿ ಪಡೆದ ನಂತರ ಆದಾಯ ₹ 5 ಲಕ್ಷ ದಾಟಿದಲ್ಲಿ ಮಾತ್ರ ₹ 3.50 ಲಕ್ಷದಿಂದಲೇ ತೆರಿಗೆ ಕೊಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಸೆಕ್ಷನ್‌ 80ಸಿ ಆಧಾರದ ಮೇಲೆ 5 ವರ್ಷಗಳ ಅಂಚೆ ಕಚೇರಿ ಹಿರಿಯ ನಾಗರಿಕ ಠೇವಣಿ ಅಥವಾ ಬ್ಯಾಂಕ್‌ ಠೇವಣಿ ಮಾಡಿ, ತೆರಿಗೆ ಉಳಿಸಬಹುದು. ಔಷಧಿಯ ಖರ್ಚು, ಮನೆ ತೆರಿಗೆ, ಇವುಗಳಿಂದ ತೆರಿಗೆ ವಿನಾಯಿತಿ ಪಡೆಯುವಂತಿಲ್ಲ.

ಶಿವಲಿಂಗೇಗೌಡ, ಬೆಂಗಳೂರು

l ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ನನ್ನ ಪಿಂಚಣಿ ₹ 40 ಸಾವಿರ. ಸ್ವಂತ ಮನೆ ಇದೆ. ಬ್ಯಾಂಕ್‌ ಠೇವಣಿಯಿಂದ ವಾರ್ಷಿಕ ₹ 1.20 ಲಕ್ಷ ಬರುತ್ತದೆ. ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಯಾರಿಗೆಲ್ಲಾ ಲಭ್ಯವಿದೆ, ನನಗೂ ಇದೆಯೇ? ನೀವು 73 ವರ್ಷ ವಯಸ್ಸಿನ ಒಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, ಈ ವಯಸ್ಸಿಗೆ ಪಿಪಿಎಫ್‌ ಅನುಕೂಲವಲ್ಲ ಎಂದು ತಿಳಿಸಿದ್ದೀರಿ. ಇಲ್ಲಿ ಶೇಕಡ 7.9ರಷ್ಟು ಬಡ್ಡಿ ಬರುತ್ತದೆ. ಇದು ತೆರಿಗೆ ಉಳಿಸಲು ಕೂಡ ಅನುಕೂಲ ಎಂದು ಕೇಳಿದ್ದೇನೆ. ನನ್ನ ತೆರಿಗೆ–ಪಡೆಯಬಹುದಾದ ವಿನಾಯಿತಿ ತಿಳಿಸಿರಿ.

ಉತ್ತರ: ನಿಮ್ಮ ವಾರ್ಷಿಕ ಪಿಂಚಣಿ ಹಾಗೂ ಠೇವಣಿ ಮೇಲಿನ ಬಡ್ಡಿ ಆದಾಯ ಸೇರಿಸಿದಾಗ ₹ 6 ಲಕ್ಷವಾಗುತ್ತದೆ. ನೌಕರಿಯಲ್ಲಿ ಇರುವವರು ಹಾಗೂ ಪಿಂಚಣಿ ಪಡೆಯುವ ನಿವೃತ್ತ ನೌಕರರು ಸೆಕ್ಷನ್‌ 16(1ಎ) ಆಧಾರದ ಮೇಲೆ ವಾರ್ಷಿಕ ₹ 50 ಸಾವಿರ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಪಡೆಯಬಹುದು. ಇದೇ ವೇಳೆ ವಿಮಾ ಕಂಪನಿಗಳಿಂದ ಬರುವ ಪಿಂಚಣಿ ಯೋಜನೆ ಹಾಗೂ ಪಿ.ಎಫ್‌ನಿಂದ ಬರುವ ಪಿಂಚಣಿ ಯೋಜನೆಗಳಿಗೆ ಸೆಕ್ಷನ್‌ 16(1ಎ) ಅನ್ವಯಿಸುವುದಿಲ್ಲ. ಎಲ್ಲಾ ಹಿರಿಯ ನಾಗರಿಕರು ಬ್ಯಾಂಕ್‌ ಹಾಗೂ ಅಂಚೆ ಕಚೇರಿ ಠೇವಣಿಯ ಮೇಲೆ ಬರುವ ಬಡ್ಡಿಯಲ್ಲಿ ಸೆಕ್ಷನ್‌ 80ಟಿಟಿಬಿ ಆಧಾರದ ಮೇಲೆ ಗರಿಷ್ಠ ₹ 50 ಸಾವಿರ ವಾರ್ಷಿಕ ವಿನಾಯಿತಿ ಪಡೆಯಬಹುದು. ನೀವು ಸ್ಟ್ಯಾಂಡರ್ಡ್‌ ಡಿಡಕ್ಷನ್‌ನಿಂದ ₹ 50 ಸಾವಿರ ಹಾಗೂ ಠೇವಣಿಯಿಂದ ₹ 50 ಸಾವಿರ ಹೀಗೆ ಒಟ್ಟಿನಲ್ಲಿ ವಾರ್ಷಿಕ ₹ 1 ಲಕ್ಷ ವಿನಾಯಿತಿ ಪಡೆಯಬಹುದು. ಹೀಗೆ ಮಾಡಿದಲ್ಲಿ ನೀವು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಮುಂದಿನ ವರ್ಷದಿಂದ ಇನ್ನೂ ಹೆಚ್ಚಿನ ಆದಾಯ ಬಂದಲ್ಲಿ ಸೆಕ್ಷನ್‌ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಹೂಡಿ ತೆರಿಗೆ ವಿನಾಯಿತಿ ಪಡೆಯಬಹುದು. ಪಿಪಿಎಫ್‌ 15 ವರ್ಷಗಳ ಯೋಜನೆ. 73 ವರ್ಷದ ವ್ಯಕ್ತಿ 15 ವರ್ಷ ಕಾಯುವುದಕ್ಕಿಂತ ಅಂಚೆ ಕಚೇರಿ ಹಿರಿಯ ನಾಗರಿಕ ಠೇವಣಿ ಮಾಡುವುದು ಲೇಸು. ಪಿಪಿಎಫ್‌ ಇಂದಿನ ಬಡ್ಡಿದರ ಶೇ 7.1 (ಶೇ 7.9 ಈಗ ಇಲ್ಲ). ಇದೇ ವೇಳೆ ಹಿರಿಯ ನಾಗರಿಕ ಠೇವಣಿ ಬಡ್ಡಿದರ ಶೇ 7.4, ಅವಧಿ 5 ವರ್ಷ ಮಾತ್ರ. ನೀವು ಹಿರಿಯ ನಾಗರಿಕರಾಗಿದ್ದು, ನಿಮ್ಮ ಸ್ವಂತ ಮನೆ ವಿಚಾರದಲ್ಲಿ ವಿಲ್‌ ಬರೆಯಿರಿ. ಹೀಗೆ ಮಾಡದೇ ಇದ್ದರೆ ಮುಂದೆ ನಿಮ್ಮ ಮಕ್ಕಳು ವಾರಸುದಾರ ಸರ್ಟಿಫಿಕೇಟ್‌ ಪಡೆಯಲು ತುಂಬಾ ಖರ್ಚು ಮಾಡಬೇಕಾಗುತ್ತದೆ ಹಾಗೂ ಕೋರ್ಟ್‌ ಕಚೇರಿ ಅಲೆದಾಡಬೇಕಾಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT