ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬಿತಾ ಬನ್ನಾಡಿ ಅಂಕಣ| ಇಂದಿನ ಗೋಜಲಲ್ಲಿ ನಾಳೆಯನ್ನು ಕಾಣದವರು

ಕೊಲೆಗಾರರೇ ದಾರಿಯಾಗುವುದಾದರೆ ಆ ದಾರಿಯಲ್ಲಿ ಜೀವ ಹುಟ್ಟುವುದೆಂತು?
Last Updated 19 ಜೂನ್ 2022, 19:30 IST
ಅಕ್ಷರ ಗಾತ್ರ

ಹತ್ಯೆಯ ಪಾಠವು ಆತ್ಮಹತ್ಯೆಯ ದಾರಿಯನ್ನಲ್ಲದೆ ಬೇರೆ ದಾರಿ ತೋರೀತೇ? ಹತ್ಯೆ ಎನ್ನುವುದನ್ನು ನಾನಿಲ್ಲಿ ಕೇವಲ ದೇಹದ ಹತನವೆಂದಷ್ಟೇ ಹೇಳುತ್ತಿಲ್ಲ. ಎಷ್ಟೋ ಬಾರಿ ನಾವು ನಮ್ಮ ಸುತ್ತಲಿನವರ ಬದುಕನ್ನು ಕಟ್ಟುಪಾಡುಗಳ ಹೆಸರಿನಲ್ಲಿ ಉಸಿರುಕಟ್ಟಿಸಿ ಕೊಂದು, ನಮ್ಮ ಬದುಕನ್ನೂ ಕೊಂದುಕೊಳ್ಳುತ್ತಾ ಅದರ ಅರಿವಿಲ್ಲದ ಮೂರ್ಖರಂತೆ ಮೆರೆಯಲು ಪ್ರಯತ್ನಿಸುತ್ತಿರುತ್ತೇವಲ್ಲವೇ?

ಸಬಿತಾ ಬನ್ನಾಡಿ
ಸಬಿತಾ ಬನ್ನಾಡಿ

ರವೀಂದ್ರನಾಥ ಟ್ಯಾಗೋರ್ 1903ರಲ್ಲಿ ಬರೆದ ಕಾದಂಬರಿ ‘ಚೊಕೇರ್ ಬಾಲಿ’. ಮಹೇಂದ್ರ ಎಂಬ ಡಾಕ್ಟರ್ ತಾನು ನೋಡದೇ ತಿರಸ್ಕರಿಸಿದ ಕುಮುದಿನಿ ಯನ್ನು, ತಾನು ಅತ್ಯಂತ ಮೆಚ್ಚಿಕೊಂಡು ಮದುವೆಯಾದ ಹೆಂಡತಿ ಆಶಾಲತಾಳೊಂದಿಗೆ ಪ್ರೇಮದ ತೀವ್ರತೆಯಲ್ಲಿರುವಾಗ ಆಕಸ್ಮಿಕವಾಗಿ ನೋಡುತ್ತಾನೆ. ಬೇರೊಬ್ಬನನ್ನು ಮದುವೆಯಾಗಿ ಆರು ತಿಂಗಳಿಗೇ ವಿಧವೆಯಾಗಿರುವ ಅವಳ ರೂಪು, ಚುರುಕುಮತಿ, ಪ್ರತಿಭೆ ನೋಡ ನೋಡುತ್ತಾ ಹೆಂಡತಿಯನ್ನು ನಿರ್ಲಕ್ಷಿಸಿ ಅವಳೆಡೆಗೆ ಸೆಳೆತಕ್ಕೆ ಒಳಗಾಗುತ್ತಾನೆ. ಅವಳೋ, ಮಹೇಂದ್ರನ ಗೆಳೆಯ ಡಾ. ಬೆಹಾರಿಯನ್ನು ಇಷ್ಟಪಟ್ಟಿರುತ್ತಾಳೆ. ಬೆಹಾರಿ ಮದುವೆಗೆ ಸಿದ್ಧನಾಗುತ್ತಾನೆ. ಆದರೆ ವಿಧವೆಯಾದ ತಾನು ಅವನಿಗೆ ಸೂಕ್ತಳಲ್ಲ ಎಂಬ ಭಾವನೆಯಿಂದ ಕೊನೆಯ ಕ್ಷಣದಲ್ಲಿ ತನ್ನಾಸೆಯನ್ನು ಕೈಚೆಲ್ಲಿ ವಿಧವಾಶ್ರಮ ಸೇರಿಕೊಳ್ಳುವ ನಿರ್ಧಾರಕ್ಕೆ ಬರುತ್ತಾಳೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಮಹೇಂದ್ರನ ನಡವಳಿಕೆ. ತನಗೆ ಬೇಡವಾದಾಗ ತಿರಸ್ಕರಿಸುವ, ಬೇಕಾ ದಾಗ ತನ್ನ ಹೆಂಡತಿಯನ್ನೇ ತಿರಸ್ಕರಿಸುವ, ಬೇಕೆನಿಸಿದಾಗ ಕುಮುದಿನಿಯ ಬೆನ್ನು ಬೀಳುವ ಈತ, ಕುಮುದಿನಿ ತನ್ನ ಗೆಳೆಯನಿಗಾಗಿ ತನ್ನನ್ನು ಬಳಸಿಕೊಳ್ಳುತ್ತಿದ್ದಾಳೆ ಎಂದು ತಿಳಿಯುತ್ತಲೇ, ಅವಳನ್ನೇ ದೂಷಿಸುತ್ತಾನೆ. ತಾನು ತನಗಾಗಿ ಎಲ್ಲರನ್ನೂ ಬಳಸಿ ಎಸೆಯುತ್ತಿದ್ದೇನೆ ಎಂದು ಆತನಿಗೆ ಎಂದಿಗೂ ಅನ್ನಿಸುವುದೇ ಇಲ್ಲ. ಕಿರು ಹರೆಯದ ವಿಧವೆಗೆ ಬದುಕಿನ ಎಲ್ಲ ಸವಿಗಳ ನಿರಾಕರಣೆಯೆನ್ನುವುದು, ಅವನನ್ನೂ ಸೇರಿಸಿ, ಸ್ವತಃ ವಿಧವೆಯರಾದ ಹಿರಿಯ ಹೆಂಗಸರಿಗೂ ಕ್ರೌರ್ಯವೆಂದೆನಿಸುವುದಿಲ್ಲ. ಅಷ್ಟರಮಟ್ಟಿಗೆ ಅದನ್ನು ಒಪ್ಪಿಸಲಾಗಿದೆ.

ಅವಳ ಬದುಕಿನ ಹತ್ಯೆಯಷ್ಟೇ ಅಲ್ಲ, ಅವನ ಹೆಂಡತಿಯ ಬದುಕಿನದೂ ಹತ್ಯೆಯೇ ಆದರೂ ಅದು ಯಾರಿಗೂ ಹಾಗೆ ಅನ್ನಿಸುವುದೇ ಇಲ್ಲ. ಅವನದಾದರೂ ಆತ್ಮಹತ್ಯೆಯ ನಡೆ. ಆದರೆ ಆತ ಅಂದುಕೊಂಡಿದ್ದು ಅದು ಅವನ ಅಧಿಕಾರ. ಅವನಿಗೆ ಈ ಹಕ್ಕು ಎಲ್ಲಿಂದ ಹೇಗೆ ಬಂತು? ಈ ಶಸ್ತ್ರವನ್ನು ಅವನಿಗೆ ನೀಡಿದವರಾರು? ಇಲ್ಲಿ ಅವನೊಂದು ನೆಪ. ತನ್ನಿಚ್ಛೆ ಬಂದಂತೆ ವರ್ತಿಸುವ ಅವನು ಈ ವ್ಯವಸ್ಥೆಯ ಅಧಿಕಾರಸ್ಥರ ಪ್ರತಿನಿಧಿ. ಕುಮುದಿನಿ, ಆಶಾಲತಾ ಈ ಅಧಿಕಾರಸ್ಥರು ಆಳುವ ಪ್ರಜೆಗಳು. ಅವರು ಹೇಳಿದ್ದೇ ಶಾಸನ. ಪ್ರಜೆಗಳು ಪ್ರಶ್ನೆ ಎತ್ತಿದರೆ ಅದು ಯಾರೋ ಅವರ ತಲೆಗೆ ತುಂಬಿದ ಅಪಚಾರ. ಹಿರಿಯ ಹೆಂಗಸರು ಒಪ್ಪಿತ ಬದುಕನ್ನು ‘ಸುಖವಾಗಿ’ ಕಳೆಯು ತ್ತಿಲ್ಲವೇ? ನಿಮ್ಮದೇನು ನಡುವೆ ತಕರಾರು? ಎಂದು ಝಂಕಿಸುವ ವಕ್ತಾರರು ಮತ್ತೆ ಬಂಡಿ ಹಿಂದೆಳೆಯಲು, ಸೇವಕರನ್ನು ಹುಟ್ಟುಹಾಕಿಕೊಳ್ಳಲು ಎಲ್ಲ ನ್ಯಾಯಬದ್ಧ ಚಿಂತನೆಗಳ ಮೇಲೆ ದಾಳಿ ಮಾಡುತ್ತಾ, ದಾಳಿಕೋರರನ್ನು ವಿಜೃಂಭಿಸುತ್ತಾರೆ.

ಎಲ್ಲ ಅಡಚಣೆಗಳಾಚೆಗೆ ಇಂದು ಹೆಣ್ಣುಮಕ್ಕಳು, ಎಲ್ಲ ಜಾತಿಯ ದಮನಿತರು ತಮ್ಮನ್ನು ತಾವು ನಿರೂಪಿಸಿ
ಕೊಂಡಿದ್ದಾರೆ. ಆದರೆ ತಾವೂ ಅಧಿಕಾರಸ್ಥರಾಗುತ್ತಿ ದ್ದಂತೆಯೇ ಹತ್ತಿದ ಏಣಿಯನ್ನು ಮರೆಯುತ್ತಿದ್ದಾರೆ. ಅಥವಾ ಕೆಡವಿದ ಬಲೆಗೆ ಬೀಳುತ್ತಿದ್ದಾರೆ. ದ್ವೇಷವನ್ನು ರಕ್ತಗತಗೊಳಿಸಿಕೊಳ್ಳುವಲ್ಲಿ ಮುಳುಗಿದ್ದಾರೆ. ಯಾರು ಗಾಂಧಿಯನ್ನು ದ್ವೇಷಿಸುತ್ತಿದ್ದಾರೋ ಅವರೇ ಅಂಬೇಡ್ಕರ್ ಮತ್ತು ಕುವೆಂಪು ಅವರನ್ನೂ ದ್ವೇಷಿಸುವುದು ಗುಟ್ಟಾಗಿತ್ತು. ಈಗ ರಟ್ಟಾಗತೊಡಗಿದೆ. ಅಂಬೇಡ್ಕರ್, ಕುವೆಂಪು ಅವರು ಅಂದು ಎತ್ತಿದ ಪ್ರಶ್ನೆಗಳ ಫಲವಾಗಿ ಇಂದು ಬದುಕಿನ ಸ್ವಾತಂತ್ರ್ಯ ಅನುಭವಿಸುತ್ತಿರು ವವರೂ ಮೂಲದಲ್ಲಿ ಅವರ್‍ಯಾರನ್ನೂ ಸಮಗ್ರವಾಗಿ ಓದದೆ, ಯಾರೋ ಉಲ್ಲೇಖಿಸಿದ ಅರೆಬರೆ ಹೇಳಿಕೆಗಳನ್ನೇ ನಂಬಿ ಈ ಎಡಬಿಡಂಗಿತನದ ಬೆನ್ನು ಬಿದ್ದಿದ್ದಾರೆ. ತಮ್ಮ ಅಸ್ಮಿತೆಯು ಆಳವಾಗಿ ಈ ನೆಲದಲ್ಲಿ ಬೇರೂರಿದಾಗಲೇ ದೇಶವೆಂಬ ಹೆಮ್ಮರ ದೃಢವಾಗಿ ಬೆಳೆಯುವುದು ಎಂದು ಅರಿಯದೇ ತಮ್ಮ ಅಸ್ಮಿತೆಯ ಮೇಲೇ ಯಾಕೆ ದಾಳಿಯಾಗುತ್ತಿದೆ ಎಂದು ಕೇಳಲಾರದವರಾಗಿದ್ದಾರೆ.

ಗೋಜಲುಗಳ ಸಂತೆ ಸೃಷ್ಟಿಸಿ, ಎಳೆಯರಿಗೆ ‘ಒಡೆಯುವುದು’, ‘ಬಡಿಯುವುದು’, ‘ಕೊಲ್ಲುವುದು’, ‘ಆಕ್ರಮಿಸುವುದು’ ಮೊದಲಾದವುಗಳನ್ನೇ ದೃಶ್ಯ ಮಾಧ್ಯಮಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ವೈಭವೀ
ಕರಿಸುತ್ತಾ, ಅಂತಹ ವಿಡಿಯೊಗಳನ್ನು ಅಲ್ಲಲ್ಲಿ ಕೆಲವು ಕಲಿಕಾ ಕೇಂದ್ರಗಳಲ್ಲಿ ತೋರಿಸುತ್ತಾ, ಶಸ್ತ್ರ ತರಬೇತಿ ನೀಡುತ್ತಾ, ವಿಜಯೋನ್ಮಾದದಲ್ಲಿ ಹ್ಞೂಂಕರಿಸುತ್ತಾ, ಕೊಲೆಗಾರರನ್ನೇ ನಾಯಕರನ್ನಾಗಿಸುತ್ತಾ ಪುಳಕಿತ
ರಾಗುತ್ತಿದ್ದೇವೆ. ಈಚೆಗೆ ದಕ್ಷಿಣ ಕನ್ನಡದ ರಸ್ತೆಯೊಂದಕ್ಕೆ ಗೋಡ್ಸೆ ಹೆಸರನ್ನು ನಾಮಕರಣ ಮಾಡಿದ ಫಲಕ ಹಾಕುವ ಮತ್ತು ತೆಗೆಯುವ ಪ್ರಹಸನ ನಡೆಯಿತು. ಆದರೆ ಇದು ನಿರ್ಲಕ್ಷಿಸುವ ಸಂಗತಿ ಖಂಡಿತಾ ಅಲ್ಲ. ಗೋಡ್ಸೆಯನ್ನು ಸಮರ್ಥಿಸುವವರಿಗೆ ಸಾವಿರ ಕಾರಣ ಗಳಿರಬಹುದು. ಆದರೆ ಆತ ಒಬ್ಬ ಮರೆಮೋಸದ ಕೊಲೆಗಾರ ಎಂಬುದು ವಾಸ್ತವ. ಗಾಂಧಿಯನ್ನು ವಿರೋಧಿಸುವವರಿಗೂ ಸಾವಿರ ಕಾರಣಗಳಿರಬಹುದು. ಆದರೆ ಅವರು ತಮ್ಮ ಜೀವನವನ್ನು ಭಾರತದ ಸ್ವಾತಂತ್ರ್ಯ ಕ್ಕಾಗಿಯೇ ಮುಡಿಪಿಟ್ಟರು ಎಂಬುದೂ ವಾಸ್ತವವೇ. ಅವರನ್ನೂ ಸೇರಿಸಿಕೊಂಡು ಲಕ್ಷಾಂತರ ಜನರ ಸಂಘಟಿತ ಪ್ರಯತ್ನದಿಂದ ಸಿಕ್ಕಿದ ಸ್ವಾತಂತ್ರ್ಯದ ಫಲಾನುಭವಿಗಳು ಅವರನ್ನು ಕೊಂದಾತನನ್ನು ಆರಾಧಿಸು ವುದೆಂದರೆ, ಕೊಲೆಗಾರನನ್ನು ಆರಾಧಿಸುವುದಲ್ಲದೆ ಇನ್ನೇನೂ ಅಲ್ಲ.

ವಿರೋಧಿಯನ್ನು ಕೊಲ್ಲುವುದನ್ನು ಆದರ್ಶವಾಗಿಸಿ ಮಕ್ಕಳಿಗೆ ಕಲಿಸುವುದಾದರೆ, ಅವರು ಮುಂದೆ ನಡೆಸುವ ಯಾವ ಹತ್ಯೆಯನ್ನೂ ನಾವು ಖಂಡಿಸುವುದು ಸಾಧ್ಯವಿಲ್ಲ. ಮುಂದೇನು ಇಂದೇ ಮಕ್ಕಳು ಹತ್ಯೆಗೆ ತೊಡಗಿರುವುದು ಕೇವಲ ದೂರದ ಅಮೆರಿಕದಿಂದಷ್ಟೇ ಸುದ್ದಿಯಾಗಿ ಬರುತ್ತಿಲ್ಲ. ನಮ್ಮ ನಡುವೆಯೇ ಬರತೊಡಗಿದೆ. ಪಬ್ಜಿ ಆಡಲು ಬಿಡದ ಅಮ್ಮನನ್ನು ಮಗ ಕೊಂದ ಸುದ್ದಿ ಆಟದ ವ್ಯಸನದ್ದು ಮಾತ್ರವೇ? ಅಥವಾ ಕೊಲೆಪಾತಕತನವನ್ನು ಸಾಮಾನ್ಯವಾಗಿಸಿದ್ದು ಮನೆ ಮನೆ ತಲುಪಿದ್ದರ ಪರಿಣಾಮವೇ? ಅಮೆರಿಕದಂತಹ ದೇಶದಲ್ಲಿ ಶಾಲಾ ವಿದ್ಯಾರ್ಥಿಗಳನ್ನೂ ಸೇರಿಸಿಕೊಂಡು ಹಲವರು, ಹತ್ತಾರು ವರ್ಷಗಳಲ್ಲಿ ಸಾವಿರಾರು ಜನರನ್ನು ಕಾರಣವೇ ಇಲ್ಲದೆ ಸಾಮೂಹಿಕ ಹತ್ಯೆ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಹಾಗೆಯೇ ಅಮೆರಿಕದಲ್ಲಿ ರಾತ್ರಿ ಮಲಗುವ ಮುಂಚೆ ಕ್ರೈಮ್‍ಸ್ಟೋರಿಗಳನ್ನು ನೋಡಿ ಕೊಂಡು ಮಲಗುವ ಅಭ್ಯಾಸವೂ ಸಾಮಾನ್ಯ ಸಂಗತಿಯೇ ಆಗಿದೆ.

ಬಂದೂಕು ತಯಾರಕರು, ಮಾರಾಟಗಾರರ ಲಾಬಿಯು ಸರ್ಕಾರಗಳನ್ನೇ ನಿಯಂತ್ರಿಸುವುದರಿಂದ, ಸಲೀಸಾಗಿ ನಡೆಯುವ ಮಾರಾಟ ನಿಷೇಧಿಸಲು ಸಾಧ್ಯವಾಗಿಲ್ಲ. ಬಂಡವಾಳಶಾಹಿಯು ಸರ್ಕಾರದ ಜುಟ್ಟು ಹಿಡಿಯುವುದು, ಸರ್ಕಾರ, ಪಕ್ಷಗಳು, ವ್ಯಕ್ತಿಗಳು ತಮಗೆ ಅನುಕೂಲ ಮಾಡಿಕೊಡುವ ಬಂಡವಾಳಶಾಹಿಗೆ ನೆರವಾಗುವುದು, ಅದನ್ನೆಲ್ಲ ಮರೆಮಾಚಲು ಹೊಸ ಹೊಸ ಸಾಮಾಜಿಕ, ಭಾವುಕ ಸಮಸ್ಯೆಗಳನ್ನು ಮುನ್ನೆಲೆಗೆ ತರುತ್ತಾ ಪ್ರಜೆಗಳ ಗಮನವನ್ನು ತಮಗೆ ಬೇಕಾದಲ್ಲಿಗೆ ತಿರುಗಿಸುವುದು ನಡೆಯುತ್ತಲೇ ಇರುತ್ತದೆ. ಇದಕ್ಕಾಗಿ ಅಧಿಕಾರಸ್ಥರನ್ನು ಬೆಂಬಲಿಸಿ ಲಾಭ ಮಾಡಿಕೊಳ್ಳುವ ಬುದ್ಧಿಜೀವಿ ಪಡೆಯೊಂದು ಸದಾ ಅವರ ಸುತ್ತ ಠಳಾಯಿಸಿ, ಕಾಲಿಗೆ ಬೀಳುವಂತೆ ನಟಿಸಿ ಎದೆಗೆ ಗುಂಡು ಹೊಡೆಯುವ ಕೆಲಸ ಮಾಡುತ್ತಲೇ ಇರುತ್ತದೆ. ಇದೆಲ್ಲವೂ ಕೊನೆಯಿಲ್ಲದ ಆತ್ಮಹತ್ಯೆಯ ದಾರಿ.

‘ಚೊಕೇರ್ ಬಾಲಿ’ ಎಂದರೆ ಕಣ್ಣೊಳಗಿನ ಮರಳು. ಕುಮುದಿನಿಗೂ ಬಾಳಸಂಗಾತಿಯ ಆಯ್ಕೆಯ ಅವಕಾಶ ಇದ್ದು, ಮಹೇಂದ್ರನು ತನ್ನೊಬ್ಬನ ಸುಖಕ್ಕಾಗಿ ತಾನು ಯಾರ ಬದುಕಿನೊಂದಿಗೆ ಬೇಕಾದರೂ ಆಟ ಆಡುವುದು ತನಗೆ ದತ್ತವಾದ ಅಧಿಕಾರವಲ್ಲ ಎಂಬ ಸಾಮಾಜಿಕ ವ್ಯವಸ್ಥೆಯೊಂದು ನಿರ್ಮಾಣವಾಗಿ, ತಮ್ಮ ಬದುಕು
ಗಳೆಲ್ಲವೂ ಪರರ ಅಭಿಪ್ರಾಯದಿಂದ ರೂಪಿತವಾಗಿದ್ದು, ಇದು ಸರಿಯಲ್ಲ ಎಂಬ ಪ್ರಜ್ಞೆಯು ಎಲ್ಲರೊಳಗೊಂದು ಎಚ್ಚರ ತರುವುದರೊಂದಿಗೆ, ತಾವು ಕೂಡಾ ಹಾಗೆ ನಡೆದುಕೊಳ್ಳಬಾರದು ಎಂಬ ನೈತಿಕತೆಯನ್ನು ಹುಟ್ಟು ಹಾಕಿದಲ್ಲಿ, ಅಲ್ಲಿ ಯಾವುದೇ ರೂಪದ ಹತ್ಯೆ ಮುನ್ನೆಲೆಗೆ ಬರುವುದಿಲ್ಲ. ಕೋಟಿ ದುಡಿದೂ ಒಂಟಿತನ ಕಾಡಿ ಜೀವ ಕಳೆಯುವ/ ಕಳೆದುಕೊಳ್ಳುವ ವಿನಾಶದ ದಾರಿಯ ಖಿನ್ನತೆಯ ಗೆದ್ದಲು ಲೋಕಕ್ಕೆ ಹತ್ತುವುದಿಲ್ಲ. ಈ ನಿರಾಳದ ಜೀವನ್ಮುಖತೆಯೆಡೆಗೆ ನಡೆಯುವುದೆಂದು?

ಲೇಖಕಿ: ಪ್ರಾಧ್ಯಾಪಕಿ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT