ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ ಅಂಕಣ: ಅಧ್ಯಕ್ಷ ಬೈಡನ್ ಪುನರಾಯ್ಕೆ ಸುಲಭವೇ?

Published 2 ಏಪ್ರಿಲ್ 2024, 0:08 IST
Last Updated 2 ಏಪ್ರಿಲ್ 2024, 0:08 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ನವೆಂಬರ್ 5ರಂದು ನಡೆಯಲಿರುವ ಚುನಾವಣೆಯಲ್ಲಿ ಮತ್ತೊಮ್ಮೆ ಜೋ ಬೈಡನ್ ಮತ್ತು ಡೊನಾಲ್ಡ್ ಟ್ರಂಪ್ ಮುಖಾಮುಖಿಯಾಗಲಿದ್ದಾರೆ.ಹಾಲಿ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ ಸ್ಪರ್ಧಿಸುತ್ತಿರುವ ಚುನಾವಣೆ ಇದು ಎನ್ನುವುದು ವಿಶೇಷ.

ಅಮೆರಿಕದ ಇತಿಹಾಸದಲ್ಲಿ ಇಂತಹ ಸಂದರ್ಭಗಳು ಅಪರೂಪ. 1956ರಲ್ಲಿ ಅಂದಿನ ಅಧ್ಯಕ್ಷ ಐಸೆನ್ ಹೋವರ್ ಎರಡನೆಯ ಬಾರಿ ಸ್ಟೀವನ್ಸನ್ ಅವರಿಗೆ ಚುನಾವಣೆಯಲ್ಲಿ ಮುಖಾಮುಖಿಯಾಗಿದ್ದರು. 1892ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗ್ರೋವರ್ ಕ್ಲೀವ್‌ಲ್ಯಾಂಡ್‌ ಮತ್ತು ಬೆಂಜಮಿನ್ ಹ್ಯಾರಿಸನ್ ಚುನಾವಣೆಯಲ್ಲಿ ಸೆಣಸಿದಾಗ, ಈ ಇಬ್ಬರೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರೇ ಆಗಿದ್ದರು.

ಈ ಬಾರಿ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಹಂತದ ಚುನಾವಣೆ ಪೈಪೋಟಿಯಿಂದ ಕೂಡಿರಲಿಲ್ಲ. ಅಧ್ಯಕ್ಷ ಬೈಡನ್ ಎರಡನೆಯ ಅವಧಿಗೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದರು. ಆದರೆ ಅವರ ವಯಸ್ಸು, ಆರೋಗ್ಯ ಮತ್ತು ಕುಸಿದ ಜನಪ್ರಿಯತೆಯ ಕಾರಣದಿಂದ ಅವರು ಕಣದಿಂದ ಹಿಂದೆ ಸರಿಯಬಹುದೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಆದರೆ ಬೈಡನ್ ಅಭ್ಯರ್ಥಿಯಾಗುವುದಾಗಿ ಘೋಷಿಸಿದರು. ಪಕ್ಷ ಅವರನ್ನು ಬೆಂಬಲಿಸಿತು.

ರಿಪಬ್ಲಿಕನ್ ಪಕ್ಷದಲ್ಲಿ ಪ್ರಾಥಮಿಕ ಹಂತದ ಚುನಾವಣೆಗೂ ಮೊದಲು ನಾಲ್ಕಾರು ಹೆಸರುಗಳು ಸದ್ದು ಮಾಡಿದ್ದವು. ವಿಶ್ವಸಂಸ್ಥೆಯ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ, ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ, ಅಮೆರಿಕದ ವಿವಿಧ ರಾಜ್ಯಗಳಲ್ಲಿ ಕಾರ್ಯಕರ್ತರ ಹಲವು ಸಭೆಗಳನ್ನು ನಡೆಸಿ ಉತ್ಸಾಹ ತೋರಿದ್ದರು. ಆದರೆ ಜನವರಿಯಲ್ಲಿ ಐಯೋವಾ ರಾಜ್ಯದಲ್ಲಿ ಮೊದಲ ಪ್ರಾಥಮಿಕ ಹಂತದ ಚುನಾವಣೆ ನಡೆಯುವ ಹೊತ್ತಿಗೆ ಡೊನಾಲ್ಡ್ ಟ್ರಂಪ್ ಹೆಚ್ಚು ಜನಪ್ರಿಯ ಅಭ್ಯರ್ಥಿಯಾಗಿ ಹೊರಹೊಮ್ಮಿದರು. ಟ್ರಂಪ್ ಅವರನ್ನು ಅನುಮೋದಿಸಿ ವಿವೇಕ್ ಕಣದಿಂದ ಹಿಂದೆ ಸರಿದರು. ಮಾರ್ಚ್ 6ರ ಚುನಾವಣೆಯ ಬಳಿಕ ನಿಕ್ಕಿ ಹ್ಯಾಲೆ ಕಣದಿಂದ ಹೊರಗುಳಿದರು.

ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆರ್ಥಿಕತೆ, ವಲಸೆ ನೀತಿ, ನಿರುದ್ಯೋಗ ಹಾಗೂ ಜನಕಲ್ಯಾಣ ಯೋಜನೆಗಳ ವಿಷಯದಲ್ಲಿ ಯಾವ ಅಭ್ಯರ್ಥಿಯ ನಿಲುವು ಏನಿದೆ ಎಂಬುದನ್ನು ಜನ ಗಮನಿಸುತ್ತಾರೆ. ಸಂಭಾವ್ಯ ಆರ್ಥಿಕ ಹಿಂಜರಿತದ ಅಪಾಯದಿಂದ ಸದ್ಯದ ಮಟ್ಟಿಗೆ ಅಮೆರಿಕ ತಪ್ಪಿಸಿಕೊಂಡಿದೆಯಾದರೂ, ಹಣದುಬ್ಬರ ಜನರನ್ನು ಕಂಗಾಲಾಗಿಸಿದೆ. ನಿರುದ್ಯೋಗ ಪ್ರಮಾಣದಲ್ಲಿ ಏರಿಕೆಯಾಗಿದೆ.

ಬೈಡನ್ ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನೋಡುವುದಾದರೆ, ಬೈಡನ್ ಓರ್ವ ಅನುಭವಿ. 1972ರಲ್ಲಿ ಪ್ರಥಮ ಬಾರಿಗೆ ಸೆನೆಟರ್ ಆದವರು. ಆ ಸ್ಥಾನವನ್ನು ಸತತವಾಗಿ ಕಾಯ್ದುಕೊಂಡವರು. 2008ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬರಾಕ್ ಒಬಾಮ ಅವರಿಗೆ ‘ರನ್ನಿಂಗ್ ಮೇಟ್’ ಆಗಿ ಎರಡು ಅವಧಿಗೆ ಉಪಾಧ್ಯಕ್ಷರಾಗಿಕಾರ್ಯನಿರ್ವಹಿಸಿದರು. ಬೈಡನ್ ಅವರ ಬೆನ್ನಿಗಿದ್ದ ಈ ಆಡಳಿತಾತ್ಮಕ ಅನುಭವವು 2020ರ ಚುನಾವಣೆಯಲ್ಲಿ ಅವರತ್ತ ಮತದಾರರನ್ನು ಆಕರ್ಷಿಸಿತ್ತು.

ಟ್ರಂಪ್ ಅವರಿಗಿಂತ ನಾಲ್ಕು ವರ್ಷ ಹಿರಿಯರಾಗಿರುವ ಬೈಡನ್ ಒಂದೊಮ್ಮೆ ಈ ಚುನಾವಣೆಯಲ್ಲಿ ಗೆದ್ದರೆ, 81ರ ವಯೋಮಾನದಲ್ಲಿ ಅಧ್ಯಕ್ಷರಾದಂತೆ ಆಗುತ್ತದೆ ಮತ್ತು ಈ ವಿಷಯದಲ್ಲಿ ಬೈಡನ್ ತಮ್ಮದೇ ದಾಖಲೆಯನ್ನು ಮುರಿದು, ಅಮೆರಿಕದ ಇತಿಹಾಸದಲ್ಲೇ ಹೆಚ್ಚು ವಯಸ್ಸಾದ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ! ಇತ್ತೀಚೆಗೆ ಪ್ರಕಟವಾಗಿರುವ ಕೆಲವು ಸಮೀಕ್ಷೆಗಳಲ್ಲೂ ಜನ ಈ ಅಂಶವನ್ನು ಗುರುತಿಸಿ, ಬೈಡನ್ ಎರಡನೇ ಅವಧಿಯಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುವುದು ಸಾಧ್ಯವೇ ಎಂಬ ಪ್ರಶ್ನೆ ಎತ್ತಿದ್ದಾರೆ.

ಆರ್ಥಿಕತೆ ಮತ್ತು ವಲಸೆ ನೀತಿಯನ್ನು ಬೈಡನ್ ಅವರು ನಿರ್ವಹಿಸಿದ ಕುರಿತು ಜನರಲ್ಲಿ ಅಸಮಾಧಾನವಿದ್ದಂತೆ ಕಾಣುತ್ತಿದೆ. ಬೈಡನ್ ತಮ್ಮ ಅವಧಿಯಲ್ಲಿ ಅಮೆರಿಕದ ಆರ್ಥಿಕತೆಗೆ ಶಕ್ತಿ ತುಂಬಲು, ಉದ್ಯೋಗ ಸೃಷ್ಟಿಸಲು ವಿಶೇಷ ಯೋಜನೆಗಳನ್ನು ಘೋಷಿಸಿದರು. ಆದರೆ ಕೊರೊನಾದ ಹೊಡೆತದಿಂದ ಕುಗ್ಗಿದ ಅಮೆರಿಕದ ಆರ್ಥಿಕತೆ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆ ಅಸಮಾಧಾನ ಜನರಲ್ಲಿ ಇದ್ದಂತೆ ಕಾಣುತ್ತಿದೆ.

ಉಕ್ರೇನ್ ಯುದ್ಧದ ವಿಷಯದಲ್ಲಿ ಅಮೆರಿಕ ಹೆಚ್ಚೇನೂ ಮಾಡಲು ಸಾಧ್ಯವಾಗಲಿಲ್ಲ ಮತ್ತು ಇಸ್ರೇಲ್– ಹಮಾಸ್ ಕದನದ ವಿಷಯವಾಗಿ ಅಮೆರಿಕ ದೃಢ ನಿಲುವು ಪ್ರಕಟಿಸಲಿಲ್ಲ ಎಂಬ ಸಂಗತಿಗಳು ಬೈಡನ್ ಅವರ ನಾಯಕತ್ವ ಗುಣವನ್ನು ಪ್ರಶ್ನಿಸುತ್ತಿವೆ.

ಇತ್ತ ಟ್ರಂಪ್ ಅವರ ಹಾದಿಯಲ್ಲಿ ಹಲವು ಬುಗುಟೆಗಳಿವೆ. ಡೊನಾಲ್ಡ್ ಟ್ರಂಪ್ ಅಮೆರಿಕ ಕಂಡ ಓರ್ವ ವಿವಾದಿತ ಅಧ್ಯಕ್ಷ. ಅವರ ಅಧಿಕಾರಾವಧಿಯಲ್ಲಿ ಸಂಸತ್ತಿನಲ್ಲಿ ಅವರನ್ನು ಎರಡು ಬಾರಿ ದೋಷಾರೋಪಣೆಗೆ ಗುರಿಪಡಿಸಲಾಗಿತ್ತು. 2020ರ ಚುನಾವಣೆಯಲ್ಲಿ ಅವರಿಗೆ ಬೈಡನ್ ಅವರ ಎದುರು ಸೋಲಾಯಿತು. ನಂತರ ಹಲವು ಅಹಿತಕಾರಿ ಬೆಳವಣಿಗೆಗಳು ನಡೆದವು.

ಈ ಬಾರಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಟ್ರಂಪ್, ಬೈಡನ್ ಅವರ ದೌರ್ಬಲ್ಯಗಳ ವಿರುದ್ಧ ಮಾತನಾಡುತ್ತಿದ್ದಾರೆ. ಈ ಬಾರಿ ಅವರು ಚುನಾವಣೆ ಗೆಲ್ಲುವುದಕ್ಕೂ ಮೊದಲು ಕಾನೂನು ಸಮರವನ್ನು ಗೆಲ್ಲಬೇಕಿದೆ.

ಟ್ರಂಪ್ ನಾಲ್ಕು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 2020ರ ಚುನಾವಣೆಯ ಫಲಿತಾಂಶವನ್ನು ಬುಡಮೇಲು ಮಾಡಲು ನಡೆಸಿದ ಪ್ರಯತ್ನ, ಚುನಾವಣೆಯ ಬಳಿಕ ನಡೆದ ಸಂಸತ್ ಮೇಲಿನ ದಾಳಿಗೆ ಪ್ರಚೋದನೆ, ವರ್ಗೀಕೃತ ರಾಷ್ಟ್ರೀಯ ಭದ್ರತಾ ದಾಖಲೆಗಳನ್ನು ಕಾನೂನುಬಾಹಿರವಾಗಿ ಇರಿಸಿಕೊಂಡಿರುವುದು ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೆರಿಗೆ ಕದಿಯಲು ತಿರುಚಿರುವ ಆರೋಪಗಳು ಟ್ರಂಪ್ ಅವರ ಮೇಲಿವೆ.

ಈ ವ್ಯಾಜ್ಯಗಳನ್ನೇ ಮುಂದಿಟ್ಟುಕೊಂಡು ಅವರನ್ನು ಚುನಾವಣೆಯಿಂದ ಹೊರಗಿಡುವ ಪ್ರಯತ್ನವೂ ನಡೆದಿತ್ತು. ಆದರೆ ಅಮೆರಿಕದ ಸರ್ವೋಚ್ಚ ನ್ಯಾಯಾಲಯವು ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂಬ ತೀರ್ಪು ನೀಡಿತು.

ಸದ್ಯದ ಮಟ್ಟಿಗೆ ಚುನಾವಣೆ ಮತ್ತು ಕಾನೂನು ಸಮರವನ್ನು ಒಟ್ಟಿಗೇ ಗೆಲ್ಲುವ ಉತ್ಸಾಹದಲ್ಲಿ ಟ್ರಂಪ್ ಇರುವಂತೆ ಕಾಣುತ್ತಿದೆ. ಕಠಿಣ ವಲಸೆ ನೀತಿ, ಪೌರತ್ವ ಕಾಯ್ದೆಗೆ ತಿದ್ದುಪಡಿ ಹಿಂದಿನ ಚುನಾವಣೆಯಲ್ಲೂ ಟ್ರಂಪ್ ಅವರ ಪ್ರಣಾಳಿಕೆಯ ಪ್ರಧಾನ ಅಂಶಗಳಾಗಿದ್ದವು. ಈ ಬಾರಿಯೂ ಆ ಅಂಶಗಳಿವೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಅದರದ್ದೇ ಆದ ಮಹತ್ವವಿದೆ. ಜಾಗತಿಕ ರಾಜಕೀಯ ಸಮೀಕರಣ ಹೇಗಿರಲಿದೆ, ಅಮೆರಿಕದ ಒಳಗೆ ವಲಸಿಗರು ಎಷ್ಟು ಸುರಕ್ಷಿತ, ಕೆಲಸದ ಅವಕಾಶಗಳು ಮುಕ್ತವಾಗಿ ಇರಲಿವೆಯೇ ಎಂಬ ಸಂಗತಿಗಳು ಅಧ್ಯಕ್ಷರು ಯಾರಾಗಲಿದ್ದಾರೆ ಎಂಬುದರ ಮೇಲೆ ಅವಲಂಬಿಸಿರುತ್ತವೆ. ಅಮೆರಿಕದ ಅಧ್ಯಕ್ಷರಾದವರು ವಿಶ್ವದ ಬಲಿಷ್ಠ ಸೇನೆಯೊಂದರ ‘ಕಮಾಂಡರ್ ಇನ್ ಚೀಫ್’ ಎನಿಸಿಕೊಳ್ಳುತ್ತಾರೆ. ವಿಶ್ವದ ಅತಿದೊಡ್ಡ ಅಣು ಶಸ್ತ್ರಾಗಾರದ ಕೀಲಿಕೈ ಅಧ್ಯಕ್ಷರ ಬಳಿ ಇರುತ್ತದೆ.

ಜಾಗತಿಕ ಆರ್ಥಿಕತೆಯು ಅಮೆರಿಕದ ಆರ್ಥಿಕತೆಯ ಏಳುಬೀಳಿನ ತಾಳಕ್ಕೆ ಹೆಜ್ಜೆ ಹಾಕುತ್ತದೆ. ಹಾಗಾಗಿ, ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಅಧ್ಯಕ್ಷೀಯ ಚುನಾವಣೆಯನ್ನು ಜಗತ್ತು ಕುತೂಹಲದಿಂದ ಗಮನಿಸುತ್ತದೆ.

ಪ್ರಸ್ತುತ ಅಧ್ಯಕ್ಷ ಬೈಡನ್ ಅವರು ಉಕ್ರೇನ್ ಬೆನ್ನಿಗೆ ಬಲವಾಗಿ ನಿಂತಿದ್ದಾರೆ. ‘ನಾನು ಅಧ್ಯಕ್ಷನಾದರೆ ಒಂದು ದಿನದಲ್ಲಿ ಉಕ್ರೇನ್ ಯುದ್ಧಕ್ಕೆ ಕೊನೆ ಹಾಡುತ್ತೇನೆ’ ಎಂದು ಟ್ರಂಪ್ ಅವರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ, ಯುದ್ಧದ ಮುಂದಿನ ಸ್ವರೂಪ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಬಳಿಕ ತೀರ್ಮಾನವಾಗಬಹುದು. ಅದಲ್ಲದೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ, ಚೀನಾ- ತೈವಾನ್ ವಿಷಯ, ಅಮೆರಿಕದ ಮುಂದಿನ ಅಧ್ಯಕ್ಷರು ಯಾರಾಗಬಹುದು ಎಂಬುದರ ಮೇಲೆ ಹೊಸ ತಿರುವನ್ನು ಪಡೆದುಕೊಳ್ಳಬಹುದು. ಭಾರತ ಮತ್ತು ಅಮೆರಿಕದ ಸಂಬಂಧವನ್ನು ನೋಡುವುದಾದರೆ, ಜಾಗತಿಕ ಸನ್ನಿವೇಶವು ಎರಡೂ ದೇಶಗಳನ್ನು ಬೆಸೆದಿದೆ. ಹಾಗಾಗಿ, ಭಾರತ ಮತ್ತು ಅಮೆರಿಕದಲ್ಲಿ ಯಾರು ಅಧಿಕಾರದಲ್ಲಿ ಇರುತ್ತಾರೆ ಎನ್ನುವುದು ಗೌಣವಾಗುತ್ತದೆ.

ಒಟ್ಟಿನಲ್ಲಿ, ಬೈಡನ್ ಮತ್ತು ಟ್ರಂಪ್ ಅವರ ನಡುವೆ ಎರಡನೆಯ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿರುವುದರಿಂದ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಈ ಬಾರಿ ಹೆಚ್ಚು ರೋಚಕವಾಗಿರುತ್ತದೆ ಎಂಬುದಂತೂ ಖರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT