ಬುಧವಾರ, ಸೆಪ್ಟೆಂಬರ್ 23, 2020
21 °C
ರಾಷ್ಟ್ರಗಳ ನಡುವಿನ ಭೌತಿಕ ಗೋಡೆಯನ್ನು ಒಡೆಯಬಹುದು, ಆದರೆ ದ್ವೇಷದ ಗೋಡೆಯನ್ನು?

ಎದ್ದ ಗೋಡೆ ಬಿದ್ದರಷ್ಟೇ ಸಮೃದ್ಧಿ

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ಕೆಲವು ಸಂಗತಿಗಳು ಕಾಕತಾಳೀಯವೆಂಬಂತೆ ಘಟಿಸುತ್ತವೆ. ಈ ತಿಂಗಳ 9ರ ಶನಿವಾರ ರಾಮಜನ್ಮಭೂಮಿ ವಿಷಯವಾಗಿ ಸುಪ್ರೀಂ ಕೋರ್ಟ್‌ ಏನು ತೀರ್ಮಾನಿಸಬಹುದು ಎಂದು ಭಾರತೀಯರು ಕಾತರದಿಂದ ನೋಡುತ್ತಿದ್ದಾಗ, ಜರ್ಮನಿಯಲ್ಲಿ ಬರ್ಲಿನ್ ಗೋಡೆ ಕೆಡವಿದ 30ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿತ್ತು. ಭಾರತದ ಮಟ್ಟಿಗೆ, 1992ರಲ್ಲಿ ಗುಮ್ಮಟ ಕೆಡವಿದಾಗ ಸಮುದಾಯಗಳ ಮಧ್ಯೆ ಎದ್ದ ದ್ವೇಷದ ಗೋಡೆಯನ್ನು ಕೆಡವುವ ಪ್ರಯತ್ನವನ್ನು ಸಹ ಸುಪ್ರೀಂ ಕೋರ್ಟ್ ಆ ದಿನವೇ ಮಾಡಿತು. ಎರಡೂ ಸಮುದಾಯಗಳು ಶಾಂತಿ ಮತ್ತು ಸಂಯಮದಿಂದ ನಡೆದುಕೊಂಡವು.

ಮೂವತ್ತು ವರ್ಷಗಳ ಹಿಂದೆ 1989, ನವೆಂಬರ್ 9ರ ಆ ಶನಿವಾರ ಬರ್ಲಿನ್ ಗೋಡೆ ಬಿದ್ದಾಗ ಯುರೋಪ್ ಮಟ್ಟಿಗೆ ಅದೊಂದು ಮೈಲಿಗಲ್ಲಾಯಿತು. ಬರ್ಲಿನ್ ಗೋಡೆ ಪತನ ಸೋವಿಯತ್ ಪತನದ ಮುನ್ಸೂಚನೆಯಂತೆಯೂ ಕಂಡಿತ್ತು. ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಸೀನಿಯರ್ ಅವರು ಬರ್ಲಿನ್ ಗೋಡೆ ಪತನವನ್ನು ‘ಹೊಸ ಜಗತ್ತಿನ ಉದಯ’ ಎಂದು ಕರೆದಿದ್ದರು.

ಅಸಲಿಗೆ ಬರ್ಲಿನ್ ನಗರದಲ್ಲಿ ತಲೆಯೆತ್ತಿದ್ದ ಗೋಡೆ ಒಂದೇ ದೇಶದ ನಿವಾಸಿಗಳನ್ನು ಅವರ ಇಚ್ಛೆಯನ್ನೇ ಪರಿಗಣಿಸದೆ ವಿಭಜಿಸಿದ ಗೋಡೆಯಾಗಿತ್ತು. ಎರಡನೇ ವಿಶ್ವಸಮರ ಅಂತ್ಯಗೊಂಡ ಬಳಿಕ ಜರ್ಮನಿಯನ್ನು ನಾಲ್ಕು ವಲಯಗಳನ್ನಾಗಿ ವಿಭಾಗಿಸಲಾಗಿತ್ತು. ಫ್ರಾನ್ಸ್, ಅಮೆರಿಕ, ಇಂಗ್ಲೆಂಡ್ ಮತ್ತು ಸೋವಿಯತ್ ರಷ್ಯಾ ಒಂದೊಂದು ವಲಯವನ್ನು ನಿರ್ವಹಿಸತೊಡಗಿದವು. ಜರ್ಮನಿಯ ರಾಜಧಾನಿ ಬರ್ಲಿನ್ ನಗರವನ್ನೂ ನಾಲ್ಕು ಹೋಳು ಮಾಡಲಾಯಿತು. 1949ರ ಮೇ 8ರಂದು, ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕದ ಮೇಲುಸ್ತುವಾರಿಯಲ್ಲಿದ್ದ ಭಾಗಗಳು ಒಂದಾಗಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ (FRG) ಹೊರಹೊಮ್ಮಿತು. ಬಂಡವಾಳಶಾಹಿ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿತು. ಸೋವಿಯತ್ ಉಸ್ತುವಾರಿಯಲ್ಲಿದ್ದ ಪೂರ್ವ ಜರ್ಮನಿ, ಅದೇ ವರ್ಷ ಅ. 7ರಂದು ಡೆಮಾಕ್ರಟಿಕ್ ರಿಪಬ್ಲಿಕ್ ಆಗಿ ಹೊರಹೊಮ್ಮಿತು.

ಅಂತೆಯೇ ಮಧ್ಯ ಮತ್ತು ಪೂರ್ವ ಐರೋಪ್ಯ ರಾಷ್ಟ್ರಗಳು, ಪೂರ್ವ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಕಮ್ಯುನಿಸ್ಟ್‌ ರಾಷ್ಟ್ರಗಳು ಒಂದಾಗಿ ‘ಸೋವಿಯತ್ ಬ್ಲಾಕ್’ ಅಥವಾ ‘ಸೋಷಿಯಲಿಸ್ಟ್ ಬ್ಲಾಕ್’ ಆಗಿ ತಮ್ಮದೇ ಪ್ರಪಂಚ ನಿರ್ಮಿಸಿಕೊಂಡವು. ಇದಕ್ಕೆ ರಷ್ಯಾ ನಾಯಕನಂತಿತ್ತು. ತನ್ನ ಮಿತ್ರ ರಾಷ್ಟ್ರಗಳು ಪಶ್ಚಿಮ ದೇಶಗಳೊಂದಿಗೆ ಒಡನಾಟ ಇಟ್ಟುಕೊಳ್ಳುವುದನ್ನು ರಷ್ಯಾ ತಡೆದಿತ್ತು. ರಷ್ಯಾದ ಈ ಉಕ್ಕಿನ ಪರದೆಯನ್ನು ಸರಿಸುವುದು ಸುಲಭವಾಗಿರಲಿಲ್ಲ.

ಜರ್ಮನಿ ಎರಡಾಗಿ ಆಡಳಿತ ವ್ಯವಸ್ಥೆ ಔಪಚಾರಿಕವಾಗಿ ಅಸ್ತಿತ್ವಕ್ಕೆ ಬಂದ ಮೇಲೆ ಅಸಂಖ್ಯ ಜರ್ಮನ್ ಪ್ರಜೆಗಳು ಪೂರ್ವ ಬರ್ಲಿನ್‌ನಿಂದ ಪಶ್ಚಿಮ ಬರ್ಲಿನ್ ಕಡೆಗೆ ಬರತೊಡಗಿದರು. ಅಲ್ಲಿಂದ ಸುರಕ್ಷಿತ ಎನಿಸಿದ ಪಶ್ಚಿಮ ದೇಶಗಳಿಗೆ ವಲಸೆ ಹೋಗಿ ನೆಲೆಸುತ್ತಿದ್ದರು. ಈ ಪ್ರಕ್ರಿಯೆಯನ್ನು ತಡೆಯುವುದು ಪೂರ್ವ ಜರ್ಮನಿಯ ಆಡಳಿತಕ್ಕೆ ಅನಿವಾರ್ಯವಾಯಿತು. ಜನರ ಇಚ್ಛೆಗೆ ಅನುಗುಣವಾಗಿ ಸಮಾಜವಾದದ ತಳಹದಿಯ ಮೇಲೆ ರೂಪುಗೊಳ್ಳುತ್ತಿರುವ ಆಡಳಿತ ವ್ಯವಸ್ಥೆಗೆ ಧಕ್ಕೆ ತರಲು ಪಶ್ಚಿಮ ಜರ್ಮನಿಯ ಫ್ಯಾಸಿಸ್ಟ್ ಶಕ್ತಿಗಳು ಸಂಚು ರೂಪಿಸಿವೆ, ಅದರಿಂದ ರಕ್ಷಿಸಿಕೊಳ್ಳಲು ಗೋಡೆ ನಿರ್ಮಿಸುತ್ತಿರುವುದಾಗಿ ಪೂರ್ವ ಜರ್ಮನಿ ಹೇಳಿತು. 1961ರ ಆ. 13ರಂದು ಗೋಡೆಯೊಂದು ಬರ್ಲಿನ್‌ ನಗರದಲ್ಲಿ ಎದ್ದು ನಿಂತಿತು.

ಇತ್ತ ಪಶ್ಚಿಮ ಜರ್ಮನಿಯು ಅಮೆರಿಕ, ಫ್ರಾನ್ಸ್ ಮತ್ತು ಇಸ್ರೇಲ್ ಜೊತೆ ಅನೇಕ ಒಡಂಬಡಿಕೆಗಳನ್ನು ಮಾಡಿಕೊಂಡು, ನ್ಯಾಟೊ ಮತ್ತು ಯುರೋಪಿಯನ್ ಎಕನಾಮಿಕ್ ಕಮ್ಯುನಿಟಿಯ ಭಾಗವಾಗಿ ಆರ್ಥಿಕವಾಗಿ ಬೆಳೆಯತೊಡಗಿತು. ಆದರೆ ಸೋಷಿಯಲಿಸ್ಟ್ ಬ್ಲಾಕ್ ರಾಷ್ಟ್ರಗಳಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಯಿತು. ಕೊನೆಕೊನೆಗೆ, ನಾಯಕನಂತಿದ್ದ ಸೋವಿಯತ್ ಯೂನಿಯನ್ ಕೂಡ ಆರ್ಥಿಕ ಸಂಕಷ್ಟಕ್ಕೆ ಒಳಪಟ್ಟಿತು. ಆಹಾರದ ಅಭಾವ ಎಲ್ಲೆಡೆಯೂ ಹೆಚ್ಚಿತು. ಗೋಡೆ ನಿರ್ಮಾಣಗೊಂಡಿದ್ದರೂ ಪೂರ್ವ ಜರ್ಮನಿಯ ಜನ ಪಶ್ಚಿಮದತ್ತ ಬರಲು ಹಾತೊರೆಯುತ್ತಿದ್ದರು. ಕೆಲವೊಮ್ಮೆ ವ್ಯರ್ಥ ಪ್ರಯತ್ನಗಳಿಗೂ ಕೈ ಹಾಕುತ್ತಿದ್ದರು. ಈ ಪ್ರಯತ್ನದ ಕಾರಣದಿಂದಾಗಿಯೇ ನೂರಾರು ಜನ ಮೃತಪಟ್ಟಿದ್ದರು.

1985ರಲ್ಲಿ ಮಿಖಾಯಿಲ್ ಗೋರ್ಬಚೆವ್, ಸೋವಿಯತ್ ನಾಯಕನಾಗಿ ಹೊರಹೊಮ್ಮಿದ ಮೇಲೆ ಸೋವಿಯತ್ ನೀತಿಯನ್ನು ಮುಕ್ತತೆ ಮತ್ತು ಪುನರ್‌ನಿರ್ಮಾಣ ಎಂಬ ಎರಡು ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮರುವ್ಯಾಖ್ಯಾನಿಸತೊಡಗಿದರು. ವಿಸ್ತರಣೆಯ ಬಳಲಿಕೆ, ಜಗತ್ತಿನ ಉಸಾಬರಿ ಸಾಕು ಎನ್ನುವ ನಿಲುವು ಇದಾಗಿತ್ತು. ಗೋರ್ಬಚೆವ್ ಅಮೆರಿಕದೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವತ್ತ ಮೊದಲ ಹೆಜ್ಜೆ ಇಟ್ಟರು. 1987ರ ಜೂನ್ 12ರಂದು ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ಅವರು ಪಶ್ಚಿಮ ಬರ್ಲಿನ್‌ನಲ್ಲಿ ನಿಂತು ಗೋರ್ಬಚೆವ್ ಅವರನ್ನು ಉದ್ದೇಶಿಸಿ ‘ನೀವು ಶಾಂತಿ ಬಯಸುವಿರಾದರೆ, ಪೂರ್ವ ಯುರೋಪ್‌ ಮತ್ತು ಸೋವಿಯತ್ ಯೂನಿಯನ್ ಸಮೃದ್ಧಿ ನಿಮ್ಮ ಗುರಿಯಾದರೆ, ಈ ದ್ವಾರದತ್ತ ಬನ್ನಿ, ಗೋಡೆಯನ್ನು ಕೆಡವಿ’ ಎಂದು ಸವಾಲೊಡ್ಡಿದರು. ರೇಗನ್ ಅವರ ಈ ಭಾಷಣ ಚಾರಿತ್ರಿಕ ಎನಿಸಿಕೊಂಡಿತು.

ಇದಕ್ಕೆ ಪೂರಕವಾಗಿ ಗೋರ್ಬಚೆವ್ ಮಹತ್ವದ ನಿಲುವು ಪ್ರಕಟಿಸಿದರು. ‘ಪೂರ್ವ ಮತ್ತು ಮಧ್ಯ ಯುರೋಪಿನ ಜನ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸ್ವತಂತ್ರರು. ಅವರ ಆಯ್ಕೆಯನ್ನು ನಿರ್ಬಂಧಿಸಲು ಸೋವಿಯತ್ ತನ್ನ ಸೇನೆಯನ್ನು (ರೆಡ್ ಆರ್ಮಿ) ಬಳಸುವುದಿಲ್ಲ’ ಎಂದು ಹೇಳಿದರು. ಇದು, ಸೋವಿಯತ್ ಬಿಗಿಮುಷ್ಟಿಯಲ್ಲಿ ಉಸಿರುಗಟ್ಟಿದ್ದ ಐರೋಪ್ಯ ದೇಶಗಳಿಗೆ ಪ್ರಾಣವಾಯುವಾಗಿ ಪರಿಣಮಿಸಿತು. ಸೋಷಿಯಲಿಸ್ಟ್ ಬ್ಲಾಕ್ ರಾಷ್ಟ್ರಗಳಲ್ಲಿ ಸರಣಿ ಕ್ರಾಂತಿಗಳು ನಡೆದವು. ಪ್ರತೀ ದೇಶವೂ ಕಮ್ಯುನಿಸಂನ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ತಹತಹಿಸಿತು.

ಆಸ್ಟ್ರಿಯಾದೊಂದಿಗಿನ ತನ್ನ ಗಡಿಯನ್ನು ಹಂಗೇರಿ ಮುಕ್ತವಾಗಿರಿಸಿತು. ಇದರಿಂದ ಪೂರ್ವ ಜರ್ಮನಿಯ ಜನ, ಹಂಗೇರಿ ಮೂಲಕ ಪಶ್ಚಿಮ ಜರ್ಮನಿಗೆ ತಲುಪುವುದು ಸಾಧ್ಯವಾಯಿತು.

ಸೋವಿಯತ್ ಇಳಿಬಿಟ್ಟಿದ್ದ ಲೋಹದ ಪರದೆಯಲ್ಲಿ ರಂಧ್ರಗಳು ಕಾಣಿಸಿಕೊಂಡವು. ಈಸ್ಟೋನಿಯ, ಲ್ಯಾಟ್ವಿಯಾ, ಲಿಥುವೇನಿಯಾದಲ್ಲೂ ಆಂದೋಲನಗಳು ಶುರುವಾದವು. ರೊಮೇನಿಯಾದಲ್ಲಿ ಆಂದೋಲನ ಹಿಂಸಾಚಾರಕ್ಕೆ ತಿರುಗಿತು. ಪೂರ್ವ ಜರ್ಮನಿ ಸ್ಥಾಪನೆಯ
40ನೇ ವರ್ಷಾಚರಣೆ ವೇಳೆ ‘ಕಮ್ಯುನಿಸಂ ಸಾಕು, ಪ್ರಜಾಪ್ರಭುತ್ವ ಬೇಕು’ ಎನ್ನುತ್ತಾ ಸಾವಿರಾರು ಜನ ಬೀದಿಗಿಳಿದರು. ಈ ಚಳವಳಿಯ ತೀವ್ರತೆ ಎಷ್ಟಿತ್ತೆಂದರೆ, ಪೂರ್ವ ಜರ್ಮನಿಯ ಕಮ್ಯುನಿಸ್ಟ್‌ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಇತ್ತರು. ಕೊನೆಗೆ ಪೂರ್ವ ಬರ್ಲಿನ್ ಆಡಳಿತ ತನ್ನ ನಾಗರಿಕರು ಪಶ್ಚಿಮ ಬರ್ಲಿನ್ ಜೊತೆ ಸಂಪರ್ಕ ಇಟ್ಟುಕೊಳ್ಳಬಹುದೆಂದು ಘೋಷಿಸಿತು. ಸಂತಸಗೊಂಡ ಎರಡೂ ಬದಿಯ ಜನ, ಗೋಡೆಯ ಬಳಿ ಜಮಾಯಿಸಿ ಸಂಭ್ರಮಿಸಿದರು. ಗೋಡೆ ಏರಿ ಆಚೀಚೆ ಬಂದರು.

ವಾರದ ತರುವಾಯ ಗೋಡೆಯ ಮಧ್ಯೆ ಒಂದು ದ್ವಾರವನ್ನು ಇಡಲಾಯಿತು. ಕೊನೆಗೆ 1991ರ ನವೆಂಬರ್‌ನಲ್ಲಿ ಗೋಡೆಯನ್ನು ಧ್ವಂಸಗೊಳಿಸಲಾಯಿತು. ಪೂರ್ವ ಮತ್ತು ಪಶ್ಚಿಮ ಬರ್ಲಿನ್ ಒಂದಾದವು. ಇದರಿಂದ ಐರೋಪ್ಯ ರಾಷ್ಟ್ರಗಳ ಪೈಕಿ ಪ್ರಬಲ ಆರ್ಥಿಕ ಮತ್ತು ರಾಜಕೀಯ ಶಕ್ತಿಯಾಗಿ ಜರ್ಮನಿ ಹೊರಹೊಮ್ಮಿತು.

ಇಂದು ಐರೋಪ್ಯ ರಾಷ್ಟ್ರಗಳನ್ನು ಪ್ರತ್ಯೇಕಿಸುವ ರೀತಿಯಲ್ಲಿ ಕಣ್ಣಿಗೆ ಕಾಣುವ ಯಾವ ಗೋಡೆಯೂ ಇಲ್ಲದಿದ್ದರೂ, ಜಾಗತಿಕ ಪೈಪೋಟಿ, ಅರ್ಥವ್ಯವಸ್ಥೆಯ ಸಂಚಲನವು ಬ್ರೆಕ್ಸಿಟ್‌ನಂತಹ ಅಗೋಚರ ಗೋಡೆಯನ್ನು ಐರೋಪ್ಯ ರಾಷ್ಟ್ರಗಳ ನಡುವೆ ನಿರ್ಮಿಸಿದೆ. ಮೂವತ್ತು ವರ್ಷಗಳ ಹಿಂದೆ ಬಿದ್ದ ಬರ್ಲಿನ್ ಗೋಡೆ, ಎದ್ದ ಗೋಡೆಗಳು ಬಿದ್ದರಷ್ಟೇ ಸಮೃದ್ಧಿ ಎಂದು ಐರೋಪ್ಯ ರಾಷ್ಟ್ರಗಳಿಗೆ ನೆನಪಿಸುತ್ತಿದೆ. ದೇಶ, ಸಮುದಾಯ, ಪಂಥ, ಮನುಷ್ಯ- ಮನುಷ್ಯರ ನಡುವೆ ಎದ್ದ ದ್ವೇಷದ ಗೋಡೆಗಳು ಬಿದ್ದರಷ್ಟೇ ಸಾಮರಸ್ಯ, ಶಾಂತಿ ಎಂದು ಬರ್ಲಿನ್ ಗೋಡೆಯ ಸಂದೇಶವನ್ನು ನಾವು ವಿಸ್ತರಿಸಿಕೊಳ್ಳಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು