ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆ ಗ್ರಹಿಸೀತೇ ಚೀನಾ?

ಚೀನಾದ ರಾಜತಾಂತ್ರಿಕತೆಯ ಕುಟಿಲ ಪ್ರಯೋಗದ ಫಲವೇ ಲಡಾಖ್‌ ಘರ್ಷಣೆ
Last Updated 2 ಜೂನ್ 2020, 2:59 IST
ಅಕ್ಷರ ಗಾತ್ರ
ADVERTISEMENT
""

ಒಂದು ಸಣ್ಣ ವಿಷಯಕ್ಕೆ 1965ರಲ್ಲಿ ಭಾರತ ದೊಂದಿಗೆಚೀನಾ ಕ್ಯಾತೆ ತೆಗೆದಿತ್ತು. ‘ಚೀನಾ ವ್ಯಾಪ್ತಿಯಲ್ಲಿದ್ದ ದನಗಾಹಿಗಳ 59 ಚಮರೀ ಮೃಗಗಳನ್ನು, 800 ಕುರಿಗಳನ್ನು ಭಾರತೀಯ ಸೇನೆ ಅಪಹರಿಸಿದೆ. ಆ ಪ್ರಾಣಿಗಳನ್ನು ವಾಪಸ್‌ ನೀಡದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿತ್ತು. ಆಗ ಸಂಸತ್ ಸದಸ್ಯರಾಗಿದ್ದ 43 ವರ್ಷ ವಯಸ್ಸಿನ ವಾಜಪೇಯಿ, ಕುರಿಗಳ ಹಿಂಡೊಂದನ್ನು ದೆಹಲಿಯ ಶಾಂತಿಪಥದಲ್ಲಿರುವ ಚೀನಾದ ರಾಯಭಾರಿ ಕಚೇರಿ ಆವರಣಕ್ಕೆ ಹೊಡೆದುಕೊಂಡು ಹೋಗಿ ಪ್ರತಿಭಟಿಸಿದ್ದರು. ಪ್ರತಿಭಟನಕಾರರ ಕೈಯಲ್ಲಿ ‘Eat me but save the World’ ಎಂಬ ಘೋಷಣಾ ಫಲಕಗಳಿದ್ದವು. ಜಗತ್ತಿನೆದುರು ಅಪಹಾಸ್ಯಕ್ಕೆ ಗುರಿಯಾದ ಚೀನಾ, ‘ಇದನ್ನು ನಾವು ಸಹಿಸುವುದಿಲ್ಲ’ ಎಂದು ಮತ್ತೊಂದು ಎಚ್ಚರಿಕೆಯ ಪತ್ರ ರವಾನಿಸಿತ್ತು. ಈ ಘಟನೆ, ಚೀನಾ ಯಾವೆಲ್ಲಾ ವಿಷಯಗಳನ್ನು ಹಿಡಿದುಕೊಂಡು ಜಗಳಕ್ಕೆ ಬರಬಲ್ಲದು ಎಂಬುದಕ್ಕೆ ಉದಾಹರಣೆ.

ಭಾರತ ಮತ್ತು ಚೀನಾ ನಡುವೆ ರಾಜತಾಂತ್ರಿಕ ಸಂಬಂಧ ಏರ್ಪಟ್ಟು ಇದೀಗ 70 ವರ್ಷಗಳು ಕಳೆದಿವೆ. ಆದರೂ ಅಪನಂಬಿಕೆಯ ಕಂದಕ ಹಾಗೇ ಇದೆ. ಒಂದು ನೇರ ಯುದ್ಧ, ನಾಲ್ಕು ಪ್ರಮುಖ ಗಡಿ ಸಂಘರ್ಷಗಳು ನಡೆದಿವೆ. ‘ಹಿಂದೀ ಚೀನಿ ಭಾಯಿ ಭಾಯಿ’ ಎಂದು ಭಾರತ ಕೈ ಚಾಚಿದರೂ ‘ಪಂಚಶೀಲ’ದ ಹೆಸರಿನಲ್ಲಿ ಕೂಡಿ ಬಾಳೋಣ ಎಂದು ಕರೆದರೂ ಚೀನಾ ಮಾತ್ರ ಪುರಾತನ ನಕ್ಷೆ ಹಿಡಿದು, ಗಡಿ ವಿಸ್ತರಣೆಗೆ ಗಮನಕೊಟ್ಟು ಆಗಾಗ ಸಂಘರ್ಷಕ್ಕೆ ಇಳಿದಿದೆ. ಹಾಗಾಗಿ ಲಡಾಖ್ ಭಾಗದಲ್ಲಿ ಉಂಟಾಗಿರುವ ಘರ್ಷಣೆಯನ್ನು ಚೀನಾ ಅನುಸರಿಸುತ್ತಿರುವ ರಾಜತಾಂತ್ರಿಕತೆಯ ಕುಟಿಲ ಪ್ರಯೋಗ ಎಂದು ಕರೆಯಬಹುದು.

ಈ 70 ವರ್ಷಗಳಲ್ಲಿ ಚೀನಾದ ಆಕ್ರಮಣಕಾರಿ ವರ್ತನೆಗೆ ಭಾರತ ಪ್ರತಿಕ್ರಿಯಿಸಿದ ರೀತಿಯನ್ನು ಅಂಜಿಕೆ, ಎಚ್ಚರಿಕೆ ಹಾಗೂ ಆತ್ಮವಿಶ್ವಾಸದ ಪ್ರತಿಕ್ರಿಯೆ ಎಂದು ಮೂರು ಬಗೆಯಾಗಿ ವಿಂಗಡಿಸಿ ನೋಡಬಹುದು. ಮೊದಲ ಕಾಲಘಟ್ಟದಲ್ಲಿ, ಭಾರತ ಆಗಷ್ಟೇ ಸ್ವಾತಂತ್ರ್ಯ ಗಳಿಸಿತ್ತು. ಭಾರತ ಮತ್ತು ಚೀನಾ ಒಂದಾದರೆ ಏಷ್ಯಾದ ಪುನರುತ್ಥಾನ ಸಾಧ್ಯ ಎಂದು ಪ್ರಧಾನಿ ನೆಹರೂ ನಂಬಿದ್ದರು. ಆದರೆ ಚೀನಾ ತನ್ನನ್ನು ಹಣಿಯಲು ನೋಡುತ್ತಿರುವ ಆಂಗ್ಲೋ ಅಮೆರಿಕನ್ ನೀತಿಯ ದಾಳವಾಗಿ ಭಾರತವನ್ನು ಕಂಡಿತು. ಭಾರತ ತೆಗೆದುಕೊಳ್ಳುತ್ತಿದ್ದ ಪ್ರತೀ ನಿರ್ಧಾರದ ಹಿಂದೆ ‘ಚೀನಾ ಸಿಟ್ಟಾದರೆ?’ ಎಂಬ ಅಂಜಿಕೆ ಕೆಲಸ ಮಾಡುತ್ತಿತ್ತು.

ಭಾರತದ ಗಡಿ ಪ್ರದೇಶಗಳನ್ನು ಚೀನಾ ಆಕ್ರಮಿಸಿಕೊಳ್ಳುತ್ತಿದೆ ಎಂಬ ವಿಷಯ ಸರ್ಕಾರಕ್ಕೆ ತಿಳಿಯದ್ದೇನೂ ಆಗಿರಲಿಲ್ಲ. 1951ರ ನವೆಂಬರ್ 3ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಭಾರತದ ಭೂ ಭಾಗವನ್ನು ಚೀನಾ ತನ್ನ ನಕ್ಷೆಯಲ್ಲಿ ಸೇರಿಸಿಕೊಂಡಿರುವ ಬಗ್ಗೆ ಪ್ರಶ್ನಿಸ ಲಾಗಿತ್ತು. ಅದಕ್ಕೆ ನೆಹರೂ ‘ಚೀನಾದಲ್ಲಿ ಬಳಕೆಯಲ್ಲಿರುವ ನಕ್ಷೆಗಳೆಲ್ಲವೂ ತುಂಬಾ ಹಳೆಯ ನಕ್ಷೆಗಳು. ಆದ್ಯತೆಯ ಇತರೆ ಕೆಲಸಗಳಲ್ಲಿ ಚೀನಾ ತೊಡಗಿರುವುದರಿಂದ ಹೊಸ ನಕ್ಷೆಗಳನ್ನು ಮುದ್ರಿಸಲು ಸಾಧ್ಯವಾಗಿಲ್ಲ’ ಎಂಬುದಾಗಿ ಉತ್ತರಿಸಿದ್ದರು. 1958ರ ಸೆಪ್ಟೆಂಬರ್ 4ರಂದು ಸಂಸತ್ತಿನಲ್ಲಿ ಹೇಮ್ ಬರೂಹ ‘ಅಸ್ಸಾಂ ರಾಜ್ಯವನ್ನು ಚೀನಾ ಈಗಲೂ ತನ್ನ ಭೂಭಾಗ ಎಂದು ನಕ್ಷೆಯಲ್ಲಿ ಮುದ್ರಿಸಿದೆ’ ಎಂಬುದನ್ನು ಪ್ರಸ್ತಾಪಿಸಿದ್ದರು. ಆಗ ನೆಹರೂ ‘ಚೀನಾ ಹಳೆಯ ನಕ್ಷೆಯನ್ನೇ ಬಳಸುತ್ತಿದೆ. ಹೊಸ ನಕ್ಷೆಯನ್ನು ಮುದ್ರಿಸಲು ಚೀನಾದ ಬಳಿ ಸಮಯವಿಲ್ಲ’ ಎಂಬ ಉತ್ತರ ನೀಡಿದ್ದರು. ಏಳು ವರ್ಷಗಳ ಬಳಿಕ ಅದೇ ಪ್ರಶ್ನೆ, ಅದೇ ಉತ್ತರ!

ಸುಧೀಂದ್ರ ಬುಧ್ಯ

ಭಾರತದ ಗಡಿ ಪ್ರದೇಶದಲ್ಲಿ ಚೀನಾ ಸೇನೆ ಒತ್ತರಿಸಿಕೊಂಡು ಬಂದಾಗಲೆಲ್ಲಾ, ಭಾರತದ ರಾಯಭಾರಿ ‘ಆಕ್ಷೇಪ ಪತ್ರ’ ಒಯ್ದು ಚೀನಾ ಸರ್ಕಾರಕ್ಕೆ ಕೊಡುತ್ತಿದ್ದರು. ಈ ಬಗ್ಗೆಯೂ ಸಂಸತ್ತು ಚರ್ಚಿಸಿತ್ತು. ‘ನಮ್ಮ ಆಕ್ಷೇಪವನ್ನು ಚೀನಾ ಉಪೇಕ್ಷಿಸಿದರೆ ನಾವೇನು ಮಾಡಬೇಕು?’ ಎಂದು ಡಿ.ಪಿ.ಸಿಂಗ್ ಪ್ರಶ್ನಿಸಿದಾಗ ನೆಹರೂ ‘ಆಕ್ಷೇಪದ ಕುರಿತು ನೆನಪಿನೋಲೆ ಕಳುಹಿಸಬೇಕು’ ಎಂದಿದ್ದರು. ಮತ್ತೊಬ್ಬ ಸದಸ್ಯ ‘ಅದಕ್ಕೂ ಉತ್ತರ ಬಾರದಿದ್ದರೆ?’ ಎಂದಾಗ ಪ್ರಧಾನಿ ‘ನಮ್ಮ ಆಕ್ಷೇಪವನ್ನು ಪುನಃ ನೆನಪಿಸುವ ಕೆಲಸವನ್ನಷ್ಟೇ ನಾವು ಮಾಡಬಹುದು’ ಎಂದಿದ್ದರು. 1951ರಲ್ಲಿ ಆರಂಭಿಸಿ 1957ರ ಸೆಪ್ಟೆಂಬರ್ ವೇಳೆಗೆ ಚೀನಾ ‘ಅಕ್ಸೈಚಿನ್’ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಮುಗಿಸಿ ಆ ಭಾಗವನ್ನು ಕಬಳಿಸಿತು. ಭಾರತ ಸರ್ಕಾರ 1958ರ ಆಗಸ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ಈ ವಿಷಯ ಸದನದಲ್ಲಿ ಚರ್ಚೆಯಾಗಿದ್ದು 1959ರ ಆಗಸ್ಟ್‌ನಲ್ಲಿ. ಆಗಲೂ ಚೀನಾದ ಉತ್ತರಕ್ಕೆ ಭಾರತ ಕಾಯುತ್ತಿತ್ತು!

1962ರ ಯುದ್ಧದ ಬಳಿಕ 17 ವರ್ಷಗಳ ಕಾಲ ಎರಡು ದೇಶಗಳೂ ಮುಖ ಸಡಿಲಿಸಲಿಲ್ಲ. 1979ರಲ್ಲಿ ಮೊರಾರ್ಜಿ ನೇತೃತ್ವದ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯಾಗಿದ್ದ ವಾಜಪೇಯಿ, ಚೀನಾ ಅಧ್ಯಕ್ಷ ಡೆಂಗ್ ಷಿಯೋಪಿಂಗ್ ಅವರನ್ನು ಭೇಟಿಯಾಗಿದ್ದರು. ಭಾರತ– ಚೀನಾ ಸಂಬಂಧದ ಎರಡನೇ ಅಧ್ಯಾಯ ಆರಂಭವಾಯಿತು. ಚೀನಾದ ನಿಜಬಣ್ಣ ಅರಿತಿದ್ದ ವಾಜಪೇಯಿ ಜಾಗರೂಕತೆಯ ಹೆಜ್ಜೆ ಇಟ್ಟರು. ನಂತರ ಬಂದ ಎಲ್ಲ ಪ್ರಧಾನಿಗಳೂ ಚೀನಾಕ್ಕೆ ಭೇಟಿ ಕೊಟ್ಟರು. ಭಾರತವು ಜಾಗತಿಕ ಶಕ್ತಿಯಾಗಿ ಬೆಳೆಯಬೇಕಾದರೆ ಚೀನಾದೊಂದಿಗೆ ಸೌಹಾರ್ದ ಉಳಿಸಿಕೊಂಡು, ಆದರೆ ಎಚ್ಚರಿಕೆಯ ಕಣ್ಣಿಟ್ಟು, ಸಂಪನ್ಮೂಲಗಳನ್ನು ಅಭಿವೃದ್ಧಿ ಮತ್ತು ರಕ್ಷಣೆಯ ಅಗತ್ಯಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು ಎಂಬ ನಿಲುವಿಗೆ ಭಾರತದ ನಾಯಕರು ಬಂದರು.

ಹೀಗೆ ಬಗ್ಗಿ ನಡೆದ ಕಾಲಘಟ್ಟದಲ್ಲಿ ಕಾಶ್ಮೀರದ ಬಗ್ಗೆ ಚೀನಾ ಮಾತನಾಡಿದರೂ ಭಾರತವು ಟಿಬೆಟ್ ಕುರಿತಾಗಲೀ ಚೀನಾದ ಇತರ ದಮನಕಾರಿ ನೀತಿಗಳ ವಿರುದ್ಧವಾಗಲೀ ಮಾತನಾಡಲಿಲ್ಲ. 2008ರ ಬೀಜಿಂಗ್ ಒಲಿಂಪಿಕ್ಸ್ ವೇಳೆ ಟಿಬೆಟಿಯನ್ನರು ಚೀನಾ ವಿರುದ್ಧ
ಪ್ರತಿಭಟಿಸುತ್ತಾರೆಂದು, ಭಾರತದಲ್ಲಿ ಒಲಿಂಪಿಕ್ಸ್ ಜ್ಯೋತಿ ಸಂಚರಿಸಿದ ಎರಡು ಕಿ.ಮೀ. ಮಾರ್ಗದಲ್ಲಿ ಇಪ್ಪತ್ತು ಸಾವಿರ ಪೊಲೀಸರನ್ನು ಸರ್ಕಾರ ನಿಯೋಜಿಸಿತ್ತು!

ನಂತರದ್ದು ಮೂರನೆಯ ಕಾಲಘಟ್ಟ. ಈ ಅವಧಿಯಲ್ಲಿ ಭಾರತವು ಚೀನಾಕ್ಕೆ ನೇರವಾಗಿ ಪ್ರತಿಕ್ರಿಯಿಸುವ ಮಾರ್ಗ ಅನುಸರಿಸಿತು. ಅಮೆರಿಕದೊಂದಿಗೆ ಸಂಬಂಧ ಬಲಪಡಿಸಿಕೊಂಡಿತು, 2017ರಲ್ಲಿ ದೋಕಲಾದಲ್ಲಿ ಭೂತಾನ್ ಪರ 72 ದಿನ ಕಾಲೂರಿ ನಿಂತಿತು, ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿತು, ಚೀನಾದ ಆಕ್ರಮಣಕಾರಿ ನಿಲುವಿಗೆ ಮಣಿಯುವುದಿಲ್ಲ, ಇದು 1962ರ ಭಾರತವಲ್ಲ ಎಂಬ ಸಂದೇಶ ರವಾನಿಸಿತು.

ಇದೀಗ ಲಡಾಖ್‌ನಲ್ಲಿ ಉಂಟಾಗಿರುವ ಸಂಘರ್ಷಕ್ಕೆ ಹಲವು ಕಾರಣಗಳಿರಬಹುದು. ಕೋವಿಡ್-19 ಮೂಲ ಕುರಿತ ತನಿಖೆಗೆ ಭಾರತ ಧ್ವನಿಗೂಡಿಸಿದ್ದು, ಚೀನಾವನ್ನು ತೊರೆಯುತ್ತಿರುವ ಉದ್ಯಮ ಸಂಸ್ಥೆಗಳನ್ನು ಸ್ವಾಗತಿಸಿದ್ದು, ವಿದೇಶಿ ನೇರ ಬಂಡವಾಳ ಹೂಡಿಕೆಗೆ ನಿರ್ಬಂಧ ವಿಧಿಸಿದ್ದು ಚೀನಾವನ್ನು ಕೆರಳಿಸಿರಬಹುದು. ಕಾಶ್ಮೀರದ ವಿಷಯದಲ್ಲಿ ತೆಗೆದುಕೊಂಡ ರಾಜಕೀಯ ನಿರ್ಣಯ, ಗಿಲ್ಗಿಟ್– ಬಾಲ್ಟಿಸ್ತಾನ್ ವಿಷಯವಾಗಿ ಭಾರತ ತೋರುತ್ತಿರುವ ಧೋರಣೆಯನ್ನು ಗಮನಿಸಿ, ಇತಿಹಾಸದ ತಪ್ಪುಗಳನ್ನು ಸರಿಪಡಿಸುತ್ತಿರುವ ಭಾರತ, ಮುಂದೊಂದು ದಿನ ಅಕ್ಸೈಚಿನ್ ಪ್ರದೇಶವನ್ನು ಹಿಂಪಡೆಯಲು ಯತ್ನಿಸಬಹುದು ಎಂಬ ಆತಂಕದಿಂದಲೂ ರಸ್ತೆ ಕಾಮಗಾರಿಗೆ ಚೀನಾ ಅಡ್ಡಿ ಮಾಡಿರಲಿಕ್ಕೆ ಸಾಕು. ಆದರೆ ಜಾಗತಿಕ ಸಿಟ್ಟು ಮತ್ತು ಆಂತರಿಕ ತಲ್ಲಣ ಎದುರಿಸುತ್ತಿರುವ ಚೀನಾವು ಭಾರತದೊಂದಿಗೆ ನೇರ ಯುದ್ಧಕ್ಕೆ ಇಳಿಯಲಾರದು. ‘ಪೂರ್ವದಲ್ಲಿ ಬೊಬ್ಬೆಯಿಟ್ಟು, ಪಶ್ಚಿಮ ದಲ್ಲಿ ಬಡಿಯುವುದು’ ಮಾವೊ ತಂತ್ರ. ಅದನ್ನು ಚೀನಾ ಅನುಸರಿಸಿದರೆ ಗಡಿಯ ಇನ್ನೊಂದು ಭಾಗದಲ್ಲಿ ಚಕಮಕಿ ಆರಂಭವಾಗಬಹುದು. ‘ಯುದ್ಧವನ್ನು ತಪ್ಪಿಸಲು ಇರುವ ಅತ್ಯಂತ ಪರಿಣಾಮಕಾರಿ ತಂತ್ರವೆಂದರೆ ಅದಕ್ಕೆ ಸಿದ್ಧತೆ ಮಾಡಿಕೊಳ್ಳುವುದು’ ಎನ್ನುವುದು ಕೆ.ಪಿ.ಎಸ್.ಗಿಲ್ ಮಾತು. ಆ ಮಾತು ನಮಗೆ ನೆನಪಿದ್ದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT