ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೀಮೋಲ್ಲಂಘನ | ಉಗ್ರರ ಹತ್ಯೆ, ಉತ್ತರ ಸುಲಭವಿಲ್ಲ

Published 4 ಡಿಸೆಂಬರ್ 2023, 23:31 IST
Last Updated 4 ಡಿಸೆಂಬರ್ 2023, 23:31 IST
ಅಕ್ಷರ ಗಾತ್ರ

ಕೆನಡಾದ ಬಳಿಕ ಇದೀಗ ಅಮೆರಿಕ ಅಂತಹದೇ ಪ್ರಶ್ನೆ ಯನ್ನು ಭಾರತದ ಮುಂದಿರಿಸಿದೆ. ಖಾಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆಗೆ ರೂಪಿಸಲಾಗಿದ್ದ ಸಂಚಿನಲ್ಲಿ ಭಾರತ ಮೂಲದ ನಿಖಿಲ್ ಗುಪ್ತಾ ಎಂಬ ವ್ಯಕ್ತಿಯ ಜೊತೆಗೆ ಭಾರತ ಸರ್ಕಾರದ ಅಧಿಕಾರಿಯಬ್ಬರು ಭಾಗಿಯಾಗಿದ್ದಾರೆ ಎಂದು ಅಮೆರಿಕದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ಈ ವಿಷಯವನ್ನು ಪ್ರಸ್ತಾಪಿಸಿರುವ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಅಮೆರಿಕಕ್ಕೆ ಸ್ಪಷ್ಟನೆ ನೀಡಿರುವ ಭಾರತ, ‘ಇದು ಸರ್ಕಾರದ ನೀತಿಗೆ ವಿರುದ್ಧವಾಗಿದೆ’ ಎಂದಿದೆ.

ಕೆಲವು ವಾರಗಳ ಹಿಂದೆ ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು, ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತದ ವಿರುದ್ಧ ಇಂತಹದೇ ಆರೋಪ ಮಾಡಿದ್ದರು. ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿ ಸಿತ್ತು. ಇದೀಗ ಅಮೆರಿಕದ ಕಳವಳಕ್ಕೆ ಭಾರತದ ಪ್ರತಿಕ್ರಿಯೆ ಬೇರೆಯದೇ ರೀತಿ ಇದೆ. ಉನ್ನತ ಮಟ್ಟದ ತನಿಖಾ ಆಯೋಗ ರಚಿಸುವುದಾಗಿ ಭಾರತ ಹೇಳಿದೆ. ಹಾಗಾದರೆ ಕೆನಡಾದ ಪ್ರಧಾನಿಯ ಆರೋಪಕ್ಕೆ ಭಾರತ ಬರೀ ನಿರಾಕರಣೆಯ ಗುರಾಣಿ ಹಿಡಿದದ್ದು ಏಕೆ?

ವಿಷಯ ಒಂದೇ ಬಗೆಯದ್ದಾದರೂ, ಅಮೆರಿಕ ಮತ್ತು ಕೆನಡಾ ಈ ವಿಷಯವಾಗಿ ನಡೆದುಕೊಂಡ ರೀತಿಯಲ್ಲಿ ವ್ಯತ್ಯಾಸವಿದೆ. ಪನ್ನೂ ಹತ್ಯೆಯ ಸಂಚಿನ ಕುರಿತ ತನಿಖಾ ವರದಿಯನ್ನು ಅಮೆರಿಕ ಮುಕ್ತವಾಗಿ ಇರಿಸಿದೆ. ಭಾರತದ ಅಧಿಕಾರಿಯ ಹೆಸರನ್ನು ನೇರವಾಗಿ ಹೇಳದೆ CC-1 ಎಂದು ಕರೆದಿದೆ. ಸಂಚಿನ ಕೇಂದ್ರಬಿಂದುವಾಗಿರುವ ನಿಖಿಲ್ ಗುಪ್ತಾ ಹೆಸರನ್ನು ಬಹಿರಂಗವಾಗಿ ಹೇಳಿದೆ.

ಆದರೆ ಕೆನಡಾ ತನ್ನ ತನಿಖೆಯ ಕುರಿತು ಅಥವಾ ಹೊಂದಿರುವ ಸಾಕ್ಷ್ಯದ ಕುರಿತು ಪಾರದರ್ಶಕತೆ
ಪ್ರದರ್ಶಿಸಲಿಲ್ಲ. ಮಿಗಿಲಾಗಿ, ಕೆನಡಾದಲ್ಲಿ ಖಾಲಿಸ್ತಾನಿ ಉಗ್ರರ ಚಟುವಟಿಕೆಯನ್ನು ನಿಗ್ರಹಿಸಿ ಎಂದು ಭಾರತ ಈ ಹಿಂದೆ ಹಲವು ಬಾರಿ ಕೆನಡಾ ಸರ್ಕಾರವನ್ನು ಆಗ್ರಹಿಸಿತ್ತು. ಆದರೆ ಕೆನಡಾದ ಆಡಳಿತ ಅಲ್ಲಿನ ಸಿಖ್ ಸಮುದಾಯವನ್ನು ಮತಬ್ಯಾಂಕ್ ದೃಷ್ಟಿಯಿಂದ ನೋಡಿ, ಭಾರತದ ಆಗ್ರಹವನ್ನು ಉಪೇಕ್ಷಿಸಿತು. ಹಾಗಾಗಿ, ಕೆನಡಾದ ಆರೋಪಕ್ಕೆ ಭಾರತದ ಪ್ರತಿಕ್ರಿಯೆ ಭಿನ್ನವಾಗಿತ್ತು.

ಅದೇನೇ ಇದ್ದರೂ, ಈ ಎರಡೂ ಪ್ರಕರಣಗಳ ಆಚೆಗೆ ಮುಖ್ಯವಾದ ಪ್ರಶ್ನೆ ಬೇರೆಯದೇ ಇದೆ. ಕೆನಡಾದಲ್ಲಿ ನಡೆದ ನಿಜ್ಜರ್ ಹತ್ಯೆ ಹೆಚ್ಚು ಚರ್ಚೆಗೆ ಒಳಪಟ್ಟಿದೆ ನಿಜ, ಆದರೆ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದ, ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಹತ್ತಕ್ಕೂ ಹೆಚ್ಚು ಭಯೋತ್ಪಾದಕರು ಹಿಂದಿನ ಎರಡು ವರ್ಷಗಳಲ್ಲಿ ಪಾಕಿಸ್ತಾನದ ವಿವಿಧ ನಗರಗಳಲ್ಲಿ ನಿಗೂಢ ರೀತಿಯಲ್ಲಿ ಹತರಾಗಿದ್ದಾರೆ! ಹಾಗಾದರೆ ಭಾರತದ ಭದ್ರತಾ ನೀತಿಯಲ್ಲಿ ‘ಗುರಿಯಾಗಿಸಿಕೊಂಡು ನಡೆಸುವ ಹತ್ಯೆ’ ಪ್ರಾಮುಖ್ಯ ಪಡೆದುಕೊಂಡಿದೆಯೇ ಅಥವಾ ಈ ಹತ್ಯೆಗಳು ಆಕಸ್ಮಿಕವೇ?

ಇತ್ತೀಚಿನ ಕೆಲವು ಸುದ್ದಿಗಳನ್ನೇ ಗಮನಿಸಿ. ನವೆಂಬರ್ 5ರಂದು ಖ್ವಾಜಾ ಶಾಹಿದ್‌ನನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿರೇಖೆಯ ಬಳಿ ಕೊಲ್ಲಲಾಗಿದೆ ಎಂಬ ಸುದ್ದಿ ಬಂತು. ಈತ 2018ರಲ್ಲಿ ಭಾರತೀಯ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸೂತ್ರಧಾರ
ನಾಗಿದ್ದ. ನವೆಂಬರ್ 9ರಂದು, ಎಲ್ಇಟಿ ಭಯೋತ್ಪಾದಕ ಸಂಘಟನೆಯ ನೇಮಕಾತಿ ವಿಭಾಗದ ಮುಖ್ಯಸ್ಥ
ನಾಗಿದ್ದ ಅಕ್ರಮ್ ಘಾಜಿ ಹತನಾದ ಸುದ್ದಿ ವರದಿಯಾಯಿತು. ನವೆಂಬರ್ 13ರಂದು, ಜೆಇಎಂ ನಾಯಕ ಮತ್ತು ಘೋಷಿತ ಉಗ್ರ ಮೌಲಾನಾ ಮಸೂದ್ ಅಜರ್ ನಿಕಟವರ್ತಿಯಾಗಿದ್ದ ಮೌಲಾನಾ ರಹೀಂಉಲ್ಲಾ ತಾರಿಕ್ ಕರಾಚಿಯಲ್ಲಿ ಗುಂಡಿನ ದಾಳಿಯಿಂದ ಮೃತಪಟ್ಟ.

2016ರ ಪಠಾನ್‌ಕೋಟ್ ಭಯೋತ್ಪಾದಕ ದಾಳಿಯ ಹಿಂದಿದ್ದ ಜೆಇಎಂ ಸಂಘಟನೆಯ ಶಹೀದ್ ಲತೀಫ್‌ನನ್ನು ಅಕ್ಟೋಬರ್‌ನಲ್ಲಿ ಅಪರಿಚಿತ ಹಂತಕರು ಗುಂಡಿಕ್ಕಿ ಕೊಂದಿದ್ದರು. ಆ ಮೊದಲು ಅಬು ಖಾಸಿಮ್, ಮೌಲಾನ ಜಿಯಾವುರ್ ರೆಹಮಾನ್, ಮುಫ್ತಿ ಖೈಸರ್ ಫಾರೂಕಿ, ಮುಲ್ಲಾ ಸರ್ದಾರ್ ಹುಸೇನ್, ಇಮ್ತಿಯಾಜ್ ಆಲಂ, ಸೈಯದ್ ನೂರ್ ರಜಾ, ಮಿಸ್ತ್ರಿ ಜಹೂರ್ ಇಬ್ರಾಹಿಂ ಹತ್ಯೆಯಾಗಿದ್ದು ವರದಿಯಾಗಿತ್ತು. ಹೀಗೆ ನಿಗೂಢವಾಗಿ ಹತರಾದವರೆಲ್ಲರೂ ಒಂದಿಲ್ಲೊಂದು ಕುಖ್ಯಾತ ಉಗ್ರಗಾಮಿ ಸಂಘಟನೆಯೊಂದಿಗೆ ಗುರುತಿಸಿಕೊಂಡವರು. ಭಾರತದ ಮೇಲೆ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದವರು!

ಆದರೆ ಈ ಯಾವ ಹತ್ಯೆಯ ಕುರಿತೂ ಪಾಕಿಸ್ತಾನದ ಸರ್ಕಾರ ಮಾತನಾಡಲಿಲ್ಲ. ಅದಕ್ಕೆ ಕಾರಣ ಇರಬಹುದು. ಪಾಕಿಸ್ತಾನವು ಉಗ್ರರ ಆಶ್ರಯ ತಾಣ ಎಂಬುದು ಜಗತ್ತಿಗೆ ತಿಳಿದಿರುವ ಸಂಗತಿಯೇ. ಎರಡು ವರ್ಷಗಳ ಹಿಂದೆ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯ ಅಂಚಿಗೆ ಬಂದಾಗ, ಅದಕ್ಕೆ ಹಣಕಾಸಿನ ನೆರವು ನೀಡುವುದಕ್ಕೆ ಷರತ್ತು ವಿಧಿಸಿದ್ದ ಅಂತರರಾಷ್ಟ್ರೀಯ ವಿತ್ತೀಯ ಕಾರ್ಯಪಡೆ (ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್‌ಫೋರ್ಸ್), ಭಯೋತ್ಪಾದನಾ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು, ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವುದರ ಕುರಿತು ಕ್ರಮ ಕೈಗೊಳ್ಳಬೇಕು ಎಂಬ ಸ್ಪಷ್ಟ ಕರಾರು ವಿಧಿಸಿತ್ತು.

ಒಂದೊಮ್ಮೆ ಹತರಾದವರನ್ನು ಗುರುತಿಸಿದರೆ ಅವರ ಹಿನ್ನೆಲೆ ಬೆಳಕಿಗೆ ಬರುತ್ತದೆ, ಪಾಕಿಸ್ತಾನ ಉಗ್ರರಿಗೆ ಆಶ್ರಯ ತಾಣ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಆಗುತ್ತದೆ ಎಂಬ ತಳಮಳ ಪಾಕಿಸ್ತಾನ
ವನ್ನು ಕಾಡಿರಬಹುದು. 2008ರ ಮುಂಬೈ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರಧಾರ
ನಾಗಿದ್ದ ಖಲೀದ್ ಬಷೀರ್ 2013ರ ಮೇ 19ರಂದು ಹತ್ಯೆಗೀಡಾಗಿದ್ದ. ಬಷೀರ್ ಹತ್ಯೆಯ ಕುರಿತು ಪಾಕಿಸ್ತಾನ ತನಿಖೆ ನಡೆಸಿತ್ತು. ಆಗ ಅದು ಭಾರತದ ಕೈವಾಡದ ಬಗ್ಗೆ ಮಾತನಾಡಿತ್ತಾದರೂ, ಆ ಆರೋಪಕ್ಕೆ ಪೂರಕವಾಗಿ ಯಾವುದೇ ಪುರಾವೆ ಒದಗಿಸುವುದು ಸಾಧ್ಯವಾಗಿರಲಿಲ್ಲ.

ಹಾಗೆ ನೋಡಿದರೆ, ಯಾವುದೇ ದೇಶ ನಡೆಸುವ ರಹಸ್ಯ ಕಾರ್ಯಾಚರಣೆ ಕುರಿತ ಮಾಹಿತಿ ಸುಲಭಕ್ಕೆ
ಬಹಿರಂಗಗೊಳ್ಳುವುದಿಲ್ಲ. ಒಂದು ದೇಶ ಮತ್ತೊಂದು ದೇಶದ ಮೇಲೆ ಆರೋಪ ಮಾಡಿದರೂ ಅದನ್ನು ಸಾಬೀತು ಮಾಡುವುದು ಕಷ್ಟ.

ನಿಜ, ಅಂತರರಾಷ್ಟ್ರೀಯ ಸಹಕಾರ ಮತ್ತು ಹಸ್ತಾಂತರ ಸೇರಿದಂತೆ ಕಾನೂನಿನ ಚೌಕಟ್ಟಿನೊಳಗೆ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ವಿಶ್ವಸಂಸ್ಥೆಯ ಮೂಲಕ ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡಿರುವ ನಿಯಮ. ಆದರೆ ಅದು ದೀರ್ಘಾವಧಿಯ ಪ್ರಕ್ರಿಯೆ ಮತ್ತು ಫಲ ನೀಡಿದ ಉದಾಹರಣೆ ವಿರಳ.

ಕೆಲವೊಮ್ಮೆ ಗುರಿಯಾಗಿಸಿಕೊಂಡು ನಡೆಸುವ ಹತ್ಯೆಗಳು ದೇಶದ ಭದ್ರತೆಯ ದೃಷ್ಟಿಯಿಂದ ಅನಿವಾರ್ಯ ಎನಿಸುವ ಸಂದರ್ಭಗಳೂ ಇರುತ್ತವೆ. ದೊಡ್ಡ ಪ್ರಮಾಣದ ಅವಘಡವನ್ನು ತಪ್ಪಿಸಲು ಸಹಾಯಕವಾಗುತ್ತವೆ. ಆದರೆ ಅಡ್ಡಪರಿಣಾಮವನ್ನೂ ಉಂಟು ಮಾಡುತ್ತವೆ. ಯಾವುದೇ ದೇಶದಲ್ಲಿ, ಗುರಿಯಾಗಿಸಿಕೊಂಡು ನಡೆಸಿದ ಹತ್ಯೆಯಲ್ಲಿ ಮತ್ತೊಂದು ದೇಶ ಭಾಗಿಯಾಗಿರುವುದು ಪುರಾವೆಗಳಿಂದ ಸಾಬೀತಾದರೆ, ಅದು ಹತ್ಯೆ ಜರುಗಿದ ದೇಶದ ಸಾರ್ವಭೌಮತೆಯ ಉಲ್ಲಂಘನೆ ಎನಿಸಿಕೊಳ್ಳುತ್ತದೆ. ಅಂತಹ ಆರೋಪಗಳಿಗೆ ನಿರಾಕರಣೆಯ ವಿನಾ ಉತ್ತರ ಸುಲಭವಿಲ್ಲ. ಕೃತ್ಯ ಎಸಗಿದ ದೇಶದ ವಿಶ್ವಾಸಾರ್ಹತೆಗೆ ಗಾಸಿಯಾಗುತ್ತದೆ.

ಹಾಗಾದರೆ ಮುಂದೇನು? ಈ ಹತ್ಯೆಗಳ ಹಿಂದೆ ತನ್ನ ಪಾತ್ರ ಇಲ್ಲ ಎಂದು ಭಾರತ ಹೇಳಿದೆ. ಸದ್ಯದ ಮಟ್ಟಿಗೆ ಚೀನಾದ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ಭಾರತದ ಸಖ್ಯವನ್ನು ಅಮೆರಿಕ ಬಯಸುತ್ತಿದೆ. ಜಾಗತಿಕ ಸನ್ನಿವೇಶವೂ ಭಾರತದ ಪರವಾಗಿ ಇರುವುದರಿಂದ, ನಡೆಯಬಹುದಾದ ಯಾವುದೇ ತನಿಖೆ ಭಾರತವನ್ನು ಕಟಕಟೆಯಲ್ಲಿ ನಿಲ್ಲಿಸುವ, ದಿಗ್ಬಂಧನದಂತಹ ಕ್ರಮಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಕಡಿಮೆ.

ಅದೇನೇ ಇರಲಿ, ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಕಾಲಘಟ್ಟ ಇದು. ನಮ್ಮ ಮೇಲಿನ ದಾಳಿಗಳನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಿ, ಕ್ರಮಕ್ಕೆ ಅಲವತ್ತುಕೊಳ್ಳುತ್ತಿದ್ದ ಕಾಲವನ್ನು ನಾವು ಮೀರಿದಂತೆ ಕಾಣುತ್ತಿದೆ. ಅಮೆರಿಕ, ರಷ್ಯಾ ಹಾಗೂ ಇಸ್ರೇಲಿನಂತೆ, ಭಾರತದ ಮೇಲೆ ದಾಳಿ ಎಸಗಿದವರು, ದೇಶದ ವಿರುದ್ಧ ಸಂಚು ರೂಪಿಸುತ್ತಿರುವವರು ಎಲ್ಲೇ ಇದ್ದರೂ ಬೆನ್ನುಹತ್ತಬಲ್ಲೆವು ಎಂಬ ಸಂದೇಶವನ್ನು ಮೇಲ್ನೋಟಕ್ಕೆ ಈ ಪ್ರಕರಣಗಳು ರವಾನಿಸುತ್ತಿರಬಹುದು. ಆದರೆ ಈ ಕೃತ್ಯಗಳ ಹಿಂದೆ ಭಾರತದ ನೇರ ಪಾತ್ರವಿದೆಯೇ ಎನ್ನುವ ಪ್ರಶ್ನೆಗೆ ನಿಖರ ಉತ್ತರ ಸಿಗುವುದು ಕಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT