ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ ಅಂಕಣ | ಎರ್ಡೊಗನ್: ಎರಡು ದಶಕ, ನಾಲ್ಕು ಮುಖ

ಭಾರತ– ಪಾಕ್‌ ವಿಷಯದಲ್ಲಿ ಟರ್ಕಿಯ ನಿಲುವು ಈಗಲಾದರೂ ಬದಲಾಗುವುದೇ?
Published 31 ಮೇ 2023, 19:54 IST
Last Updated 31 ಮೇ 2023, 19:54 IST
ಅಕ್ಷರ ಗಾತ್ರ

ಇಪ್ಪತ್ತು ವರ್ಷಗಳಿಂದ ಟರ್ಕಿಯ ಆಡಳಿತದ ಚುಕ್ಕಾಣಿ ಹಿಡಿದಿರುವ ಎರ್ಡೊಗನ್ ಅವರ ಕೈಗೆ ಅಲ್ಲಿನ ಜನ ಮತ್ತೊಮ್ಮೆ ದೇಶವನ್ನು ಒಪ್ಪಿಸಿದ್ದಾರೆ. ಇತ್ತೀಚೆಗಷ್ಟೇ ಟರ್ಕಿ ಭೂಕಂಪದಿಂದ ನಲುಗಿತ್ತು. ಜುಲೈನಲ್ಲಿ ನಿಗದಿಯಾಗಿದ್ದ ಚುನಾವಣೆಯನ್ನು ಈ ಕಾರಣದಿಂದ ಸರ್ಕಾರ ಮುಂದೂಡಬಹುದು ಎನ್ನಲಾಗಿತ್ತು. ಆದರೆ ನಿಗದಿತ ಅವಧಿಗೆ ಮುನ್ನವೇ ಚುನಾವಣೆ ನಡೆಸಲು ಎರ್ಡೊಗನ್ ಆಡಳಿತ ನಿರ್ಧರಿಸಿತು. ವಿರೋಧ ಪಕ್ಷಗಳು ಸಂಘಟಿತಗೊಳ್ಳಲು ಹೆಚ್ಚು ಸಮಯ ನೀಡಬಾರದು ಎಂಬುದು ಅದರ ಆಲೋಚನೆ ಇದ್ದಿರಬಹುದು.

ಮಾರ್ಚ್ ವೇಳೆಗೆ ಆರು ವಿರೋಧ ಪಕ್ಷಗಳು ಒಂದಾಗಿ ಸಹಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದವಾದರೂ ಎರ್ಡೊಗನ್ ಆಡಳಿತದ ವಿರುದ್ಧ ಜನಾಭಿಪ್ರಾಯ ರೂಪಿಸಲು ವೇಗದ ಹೆಜ್ಜೆ ಇಡಲಿಲ್ಲ. ಚುನಾವಣೆಯಲ್ಲಿ ಎರ್ಡೊಗನ್ ಗೆಲುವು ಸಾಧಿಸಿದರು.

ಹಾಗೆ ನೋಡಿದರೆ, ವಿದ್ಯಾರ್ಥಿ ಚಳವಳಿಯ ಮೂಲಕ ಎರ್ಡೊಗನ್ ಸಾರ್ವಜನಿಕ ಜೀವನಕ್ಕೆ ಬಂದವರು. ನಂತರ ಇಸ್ಲಾಮಿಕ್ ವೆಲ್‌ಫೇರ್ ಪಕ್ಷದ ಪರವಾಗಿ ಕೆಲಸ ಮಾಡಿದರು. 1994ರಲ್ಲಿ ಅದೇ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಇಸ್ತಾನ್‌ಬುಲ್ ನಗರದ ಮೇಯರ್ ಆದರು. 1997ರಲ್ಲಿ ನಡೆದ ಮಿಲಿಟರಿ ದಂಗೆ ಅಂದಿನ ಪ್ರಧಾನಿ ಎರ್ಬಾಕನ್ ಅವರ ನೇತೃತ್ವದ ಸರ್ಕಾರವನ್ನು ಪತನಗೊಳಿಸಿತ್ತು.
ಆಗ ಸಾರ್ವಜನಿಕ ಸಭೆಯೊಂದರಲ್ಲಿ ಟರ್ಕಿಯ ಸೇನೆಯ ವಿರುದ್ಧ ಮಾತನಾಡಿದ್ದ ಎರ್ಡೊಗನ್, ಜನರ ಮತೀಯ ಭಾವನೆಯನ್ನು ಉದ್ದೀಪಿಸುವ ಪದ್ಯವೊಂದನ್ನು ಓದಿದ್ದರು. ಆ ಕಾರಣಕ್ಕಾಗಿಯೇ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಿ, 10 ತಿಂಗಳ ಕಾಲ ಜೈಲಿನಲ್ಲಿಡಲಾಯಿತು.

ಬರೀ ಮತೀಯವಾದಕ್ಕೆ ಅಂಟಿಕೊಂಡರೆ ತಮಗೆ ರಾಜಕೀಯವಾಗಿ ಉಳಿಗಾಲವಿಲ್ಲ ಎನ್ನುವುದನ್ನು ಎರ್ಡೊಗನ್ ಅರಿತುಕೊಂಡರು. ಜೈಲಿನಿಂದ ಹೊರಬಂದವರೇ ನೂತನ ಪಕ್ಷವನ್ನು (‘ಎಕೆ’ ಪಕ್ಷ) ಕಟ್ಟಿದರು. ಅಭಿವೃದ್ಧಿಯ ಮಂತ್ರವನ್ನು ಉಚ್ಚರಿಸಿದರು. 2002ರ ಚುನಾವಣೆಯಲ್ಲಿ ಎರ್ಡೊಗನ್ ಅವರ ಪಕ್ಷಕ್ಕೆ ಜನಮತ ಸಿಕ್ಕಿತು. ಎರ್ಡೊಗನ್ ಅವರ ಮೇಲೆ ನಿರ್ಬಂಧವಿದ್ದ ಕಾರಣ ತಾತ್ಕಾಲಿಕವಾಗಿ ಅಬ್ದುಲ್ಲಾ ಗುಲ್ ಪ್ರಧಾನಿಯಾದರು. ಎರ್ಡೊಗನ್ ಅವರ ಮೇಲಿದ್ದ ನಿಷೇಧವನ್ನು ಗುಲ್ ತೆರವುಗೊಳಿಸಿದರು. 2003ರಲ್ಲಿ ಟರ್ಕಿಯ 25ನೇ ಪ್ರಧಾನಿಯಾಗಿ ಎರ್ಡೊಗನ್ ಅಧಿಕಾರ ವಹಿಸಿಕೊಂಡರು.

ಆದರೆ ಎರ್ಡೊಗನ್ ತಕ್ಷಣಕ್ಕೆ ಸೇನೆಯನ್ನು ಎದುರು ಹಾಕಿಕೊಳ್ಳಲಿಲ್ಲ. ಮತೀಯವಾದಕ್ಕೆ ಜಾಗ ಬಿಡಲಿಲ್ಲ. ಆರ್ಥಿಕ ಸುಧಾರಣೆ, ದಕ್ಷ ಆಡಳಿತ ಮತ್ತು ಅಭಿವೃದ್ಧಿಯತ್ತ ಗಮನ ನೆಟ್ಟರು. ಜನರ ವಿಶ್ವಾಸ ಗಳಿಸುವುದು ಅವರ ಆದ್ಯತೆಯಾಯಿತು. 2007ರ ಚುನಾವಣೆಯಲ್ಲಿ ಎರ್ಡೊಗನ್ ಅವರ ಪಕ್ಷ ಪ್ರಚಂಡ ಬಹುಮತ ಗಳಿಸಿತು. ಎರ್ಡೊಗನ್ ಅವರ ತಲೆಯಲ್ಲಿ ಬೇರೆಯದೇ ಲೆಕ್ಕಾಚಾರ ನಡೆದಿತ್ತು. ಟರ್ಕಿಯ ಅಧ್ಯಕ್ಷರನ್ನು ಜನರೇ ನೇರವಾಗಿ ಆಯ್ಕೆ ಮಾಡುವ ವ್ಯವಸ್ಥೆಯನ್ನು ತಂದರು. 2016ರಲ್ಲಿ ಪ್ರಧಾನಿ ಎರ್ಡೊಗನ್ ಅವರನ್ನು ಪದಚ್ಯುತಿಗೊಳಿಸುವ ವಿಫಲ ಪ್ರಯತ್ನವೊಂದು ನಡೆಯಿತು. ಆ ಬಳಿಕ ಸಂವಿಧಾನಕ್ಕೆ ಮಾರ್ಪಾಡು ತಂದು ಟರ್ಕಿಯನ್ನು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಅಧ್ಯಕ್ಷೀಯ ಮಾದರಿಯ ಆಡಳಿತ ವ್ಯವಸ್ಥೆಯನ್ನಾಗಿ ಬದಲಿಸಲಾಯಿತು.

2018ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಎರ್ಡೊಗನ್ ಸ್ಪರ್ಧಿಸಿ ಗೆದ್ದರು. ಆ ಮೂಲಕ ಎರ್ಡೊಗನ್ ಟರ್ಕಿಯ ಏಕಮೇವ ನಾಯಕನಾಗಿ ಹೊರಹೊಮ್ಮಿದರು. ಜನರ ಬೆಂಬಲ ಖಾತರಿಯಾದೊಡನೆ, ಸೇನೆಗೆ ಮೂಗುದಾರ ತೊಡಿಸಿ ತಮ್ಮ ಸೊಂಟಕ್ಕೆ ಸುತ್ತಿಕೊಂಡರು. ನ್ಯಾಯಾಂಗದ ಮುಖ್ಯ ಹುದ್ದೆಗಳಲ್ಲಿ ತಮ್ಮ ಬೆಂಬಲಿಗರೇ ಇರುವಂತೆ ನೋಡಿಕೊಂಡರು. ಮಾಧ್ಯಮಗಳ ಒಡೆತನ ಎರ್ಡೊಗನ್ ನಿಕಟವರ್ತಿಗಳ ಕೈಗೆ ಬಂತು.

ಅಧಿಕಾರದ ಬಲ ಹೆಚ್ಚಿದಂತೆ, ಎರ್ಡೊಗನ್ ನಿರಂಕುಶವಾದಿಯಾಗಿ ಬದಲಾದರು. ತಮ್ಮ ವಿರೋಧಿಗಳನ್ನು, ಟೀಕಾಕಾರರನ್ನು ಮಟ್ಟಹಾಕುವ ಕೆಲಸಕ್ಕೆ ಮುಂದಾದರು. ವಿರೋಧ ಪಕ್ಷದ ನಾಯಕರು ಮತ್ತು ಪತ್ರಕರ್ತರ ಮೇಲೆ ಮೊಕದ್ದಮೆಗಳು ದಾಖಲಾದವು. ಎರ್ಡೊಗನ್ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡುವ ಸಾಮರ್ಥ್ಯವಿದ್ದ ಎಕ್ರಾಂ ಇಮಾಮೋಗ್ಲೂ ಅವರು ಜೈಲುವಾಸ ಅನುಭವಿಸಬೇಕಾಯಿತು.

ಎರ್ಡೊಗನ್ ಅವರು ಜಾಗತಿಕ ವೇದಿಕೆಯಲ್ಲಿ ಮಿಂಚುವ ಕನಸು ಕಂಡರು. ಟರ್ಕಿ ಆಯಕಟ್ಟಿನ ಪ್ರದೇಶದಲ್ಲಿ ಇರುವುದರಿಂದ ಅಮೆರಿಕ ಮತ್ತು ರಷ್ಯಾ ಎರಡಕ್ಕೂ ಟರ್ಕಿ ಬೇಕು ಎಂಬುದು ಜಾಹೀರಾಗಿತ್ತು. ಅಮೆರಿಕ ಮತ್ತು ರಷ್ಯಾವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಎರ್ಡೊಗನ್ ಆರಂಭಿಸಿದರು. ರಾಷ್ಟ್ರ ಮೊದಲು ಎಂಬ ಉದ್ಘೋಷ ಟರ್ಕಿಯಲ್ಲೂ ಮೊಳಗಿತು.

ಅಮೆರಿಕದ ವಿರೋಧದ ನಡುವೆಯೂ ರಷ್ಯಾದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಟರ್ಕಿಗೆ ತಂದರು. ನ್ಯಾಟೊ ರಾಷ್ಟ್ರಗಳು ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೂ, ಟರ್ಕಿ ಮಾತ್ರ ಅದರಿಂದ ಹೊರಗುಳಿಯಿತು. ರಷ್ಯಾದಿಂದ ಅಗ್ಗದ ಬೆಲೆಗೆ ಇಂಧನ ಖರೀದಿಸಿತು. ಉಕ್ರೇನ್‌ಗೆ ಡ್ರೋಣ್‌ಗಳನ್ನು ಮಾರುವ ಕೆಲಸ ಮುಂದುವರಿಸಿತು.

ಉಕ್ರೇನ್ ಮತ್ತು ರಷ್ಯಾವನ್ನು ಮಾತುಕತೆಯ ಮೇಜಿಗೆಳೆಯುವ ಪ್ರಯತ್ನವನ್ನು ಎರ್ಡೊಗನ್ ಮಾಡಿದರು. ರಷ್ಯಾ ಆಕ್ರಮಿತ ಉಕ್ರೇನಿನ ಉಗ್ರಾಣದಲ್ಲಿದ್ದ ಗೋಧಿಯನ್ನು ಜಾಗತಿಕ ಪೂರೈಕೆ ಜಾಲಕ್ಕೆ ತರಲು ಎರ್ಡೊಗನ್ ಪ್ರಯತ್ನಿಸಿದರು. ಜಗತ್ತು ಶ್ಲಾಘಿಸಿತು. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕೈದಿಗಳ ಹಸ್ತಾಂತರಕ್ಕೂ ಎರ್ಡೊಗನ್ ಸೇತುವೆಯಾದರು. ಚುನಾವಣೆ ನಡೆದ ಈ ಸಂದರ್ಭದಲ್ಲಿ ಟರ್ಕಿ ಆರ್ಥಿಕ ಹಿಂಜರಿತ, ಹಣದುಬ್ಬರ, ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಟರ್ಕಿಯ ಜನ ಎರ್ಡೊಗನ್ ಅವರನ್ನೇ ಆರಿಸಿದ್ದಾರೆ ಎಂದರೆ, ಪ್ರಾಯಶಃ ಎರ್ಡೊಗನ್ ಅವರ ಚತುರ ವಿದೇಶಾಂಗ ನೀತಿಯನ್ನು ಮೆಚ್ಚಿ, ಸದ್ಯದ ಮಟ್ಟಿಗೆ ಟರ್ಕಿಗೆ ಎರ್ಡೊಗನ್ ಅನಿವಾರ್ಯ ಎಂದು ಅವರು ಭಾವಿಸಿರಬಹುದು.

ಭಾರತ ಮತ್ತು ಟರ್ಕಿಯ ವಿಷಯ ನೋಡುವುದಾದರೆ, ಎರಡು ದೇಶಗಳ ನಡುವಿನ ವಾಣಿಜ್ಯಿಕ ವ್ಯವಹಾರ ಸರಾಗ ಎನಿಸಿದರೂ, ಪಾಕಿಸ್ತಾನದ ವಿಷಯ ಬಂದಾಗ ಟರ್ಕಿ ಭಾರತದ ವಿರುದ್ಧ ನಿಂತದ್ದೇ ಹೆಚ್ಚು. ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯನ್ನು ಭಾರತ ತೆರವುಗೊಳಿಸಿದಾಗ ಮುಸ್ಲಿಂ ಜಗತ್ತಿನ ಪ್ರಮುಖ ರಾಷ್ಟ್ರಗಳು, ಇದು ಭಾರತದ ಆಂತರಿಕ ವಿಷಯ ಎಂದು ಪ್ರತಿಕ್ರಿಯಿಸಿದರೆ, ಟರ್ಕಿಯ ಎರ್ಡೊಗನ್ ಭಾರತದ ನಿಲುವನ್ನು ಖಂಡಿಸಿದ್ದರು. ಆಗ ಭಾರತವು ಎರ್ಡೊಗನ್ ಹೇಳಿಕೆಯ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಲು ಟರ್ಕಿಯ ರಾಜತಾಂತ್ರಿಕ ಅಧಿಕಾರಿಗೆ ಸೂಚಿಸಿತ್ತು.

ಆದರೆ ಕೊರೊನಾದ ಹೊಡೆತ ಟರ್ಕಿಯನ್ನು ಕೊಂಚ ಮೆತ್ತಗೆ ಮಾಡಿತು. ಹಿಂದಿನ ವರ್ಷ ಉಜ್ಬೇಕಿಸ್ತಾನದಲ್ಲಿ ನಡೆದ ಶಾಂಗೈ ಸಹಕಾರ ಒಕ್ಕೂಟದ ಶೃಂಗಸಭೆಯ ವೇಳೆ, ಎರ್ಡೊಗನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಮಾತುಕತೆ ನಿಗದಿಯಾಗಿರಲಿಲ್ಲ. ಆದರೆ ಎರ್ಡೊಗನ್ ಅವರು ಮಾತುಕತೆ ಬಯಸಿದಾಗ ಮೋದಿ ಅವರು ಆಹ್ವಾನ ಒಪ್ಪಿಕೊಂಡು ಮಾತುಕತೆಗೆ ಕುಳಿತರು. ಟರ್ಕಿಯ ವಿದೇಶಾಂಗ ನೀತಿ ಇಸ್ಲಾಂಕೇಂದ್ರಿತವಾಗಿದೆ ಮತ್ತು ಆ ಕಾರಣದಿಂದಲೇ ಅದು ಪಾಕಿಸ್ತಾನದ ಪರ ನಿಲ್ಲಲಿದೆ ಎಂಬುದು ಗೊತ್ತಿದ್ದರೂ, ಟರ್ಕಿಯ ಸಂಕಷ್ಟದ ಸಮಯದಲ್ಲಿ ಆ ದೇಶಕ್ಕೆ ಸಹಾಯಹಸ್ತ ಚಾಚಲು ಭಾರತ ಮುಂದಾಯಿತು.

ಈ ನಡೆಯ ಹಿಂದೆ ನಮ್ಮ ಹಿತಾಸಕ್ತಿ ಇರಲಿಲ್ಲ ಎಂದಲ್ಲ, ಟರ್ಕಿಯಲ್ಲಿ ವ್ಯಾಪಾರ ಮತ್ತು ಉದ್ಯೋಗದ ಕಾರಣದಿಂದ ನೆಲೆ ನಿಂತ ಭಾರತೀಯರು ಇದ್ದಾರೆ. ಭಾರತದಿಂದ ಅಕ್ಕಿ ಮತ್ತು ಗೋಧಿಯನ್ನು ಟರ್ಕಿ ಆಮದು ಮಾಡಿಕೊಳ್ಳುತ್ತದೆ. ಯುರೋಪ್‌ನಲ್ಲಿ ನಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಟರ್ಕಿ ಮೆಟ್ಟಿಲಾಗಬಹುದು, ಮುಂದಾದರೂ ಪಾಕಿಸ್ತಾನ ಕುರಿತ ಮೋಹವನ್ನು ಅದು ಬಿಡಬಹುದು ಎಂಬ ಲೆಕ್ಕಾಚಾರ ಟರ್ಕಿಯ ವಿಷಯದಲ್ಲಿ ಭಾರತದ ನಡೆಯನ್ನು ನಿರ್ದೇಶಿಸಿದವು.

ಅದೇನೇ ಇರಲಿ, ಎರ್ಡೊಗನ್ ಇನ್ನೊಂದು ಅವಧಿಗೆ ಟರ್ಕಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಟರ್ಕಿಯ ಆಂತರಿಕ ಸಮಸ್ಯೆಗಳನ್ನು ಅವರು ಹೇಗೆ ನಿರ್ವಹಿಸುತ್ತಾರೆ, ಜಾಗತಿಕ ವೇದಿಕೆಯಲ್ಲಿ ಯಾವ ಪಾತ್ರ ನಿರ್ವಹಿಸುತ್ತಾರೆ, ಭಾರತ ಮತ್ತು ಪಾಕಿಸ್ತಾನದ ವಿಷಯ ಬಂದಾಗ ಅವರ ನಿಲುವು ಬದಲಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT