ನನಗೀಗ ಸಿಸೇರಿಯನ್ ಹೆರಿಗೆಯಾಗಿದ್ದು 4ನೇ ತಿಂಗಳು ನಡೆಯುತ್ತಿದೆ. ನನಗೆ ಈಗ ಎದೆಹಾಲಿನ ಪ್ರಮಾಣ ಕಡಿಮೆಯಾಗಿದ್ದು ಸ್ತನ್ಯಪಾನ ನಿಲ್ಲಿಸಬೇಕೆಂದಿದ್ದೆ. ಹೆರಿಗೆಯಾದಾಗಲೇ ನನಗೆ 3ದಿನ ಹಾಲು ಬರಲಿಲ್ಲ ಎಂದು ಕೃತಕ ಹಾಲಿನ ಡಬ್ಬ ಬರೆದುಕೊಟ್ಟಿದ್ದರು. ಈಗಲೂ ಅದನ್ನೇ ಹಾಕುತ್ತಿದ್ದೇನೆ.ನನಗೆ ತಪ್ಪಿತಸ್ಥ ಭಾವನೆ ಉಂಟಾಗುತ್ತಿದೆ. ನಾನು ಪೌಡರ್‌ಹಾಲು ನಿಲ್ಲಿಸಲೇ? ಮತ್ತೆ ನಾನು ಮಗುವಿಗೆ ಕೇವಲ ಎದೆಹಾಲುಕುಡಿಸಲು ಸಾಧ್ಯವೇ?
-ಆಯೇಷಾ, ಊರು ತಿಳಿಸಿಲ್ಲ.
ತಪ್ಪಿನ ಅರಿವಾಗಿರುವುದಕ್ಕೆ ಅಭಿನಂದನೆಗಳು. ಸಿಸೇರಿಯನ್ ಹೆರಿಗೆಯಾದರೆ ಕೃತಕ ಹಾಲುಣಿಸಬೇಕೆಂಬುದೇನೂ ಇರಲಿಲ್ಲ. ಮೊದಲೆರಡು ದಿನ ಸಹಜ ಹೆರಿಗೆಯಾಗಿರಲಿ, ಸಿಸೇರಿಯನ್ ಹೆರಿಗೆಯಾಗಿರಲಿ ಹೆಚ್ಚಿನ ಮಹಿಳೆಯರಿಗೆ ಎದೆಹಾಲೇನು ಚಿಮ್ಮಿಹರಿಯುವುದಿಲ್ಲ. ಆದರೆ ಶಿಶುವಿಗೆ ಬೇಕಾದ ಹಾಲು ಎದೆಯಲ್ಲಿ ಉತ್ಪಾದನೆ ಆಗಿರುತ್ತದೆ. ಮಗು ಎದೆಚೀಪಿದಾಗ ಮಗುವಿಗೆ ಸಾಕಾಗುವಷ್ಟು ಹಾಲು ಬರುತ್ತದೆ. ಮತ್ತು ತಾಯಗರ್ಭದಿಂದ ಬಂದಿರುವ ಪೋಷಕಾಂಶಗಳೇ ಮಗುವಿಗೆ ಒಂದೆರಡು ದಿನ ಸಾಕಾಗುತ್ತದೆ ಮತ್ತು ಹುಟ್ಟಿದಾಕ್ಷಣ 1ಗಂಟೆಯೊಳಗೆ ಮಗುವಿಗೆ ಎದೆ ಚೀಪಿಸಬೇಕು. ನಂತರವೂ ಒಂದೆರಡು ಗಂಟೆಗೊಮ್ಮೆ ಅಥವಾ ಮಗು ಅತ್ತಾಗಲೆಲ್ಲ ಮಗುವಿಗೆ ಎದೆಹಾಲುಣಿಸಲು ಪ್ರಯತ್ನಿಸುತ್ತಿದ್ದರೆ 2-3 ದಿನದೊಳಗೆ ಹಾಲು ಜಿನುಗಲು ಆರಂಭವಾಗುತ್ತದೆ. ಆರಂಭದಲ್ಲಿ ಬರುವ ಗೀಬು ಹಾಲಂತೂ ಬಹಳಷ್ಟು ಪೋಷಕಾಂಶಗಳನ್ನ ಹಾಗೂ ರೋಗನಿರೋಧಕ ಶಕ್ತಿಕೊಡುವ ಇಮ್ಯೂನೋಗ್ಲೋಬಿನ್‌ಗಳನ್ನು ಹೊಂದಿದ್ದು ತಾಯಿ ತನ್ನ ಮಗುವಿಗೆ ಕೊಡಬಹುದಾದ ಮೊದಲ ಚುಚ್ಚುಮದ್ದು ಅಥವಾ ಚಿನ್ನದ ದ್ರವ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಮೊದಲು ಸಕ್ಕರೆ ನೀರು ಅಥವಾ ಜೇನುತುಪ್ಪ ಇನ್ನಿತರ ಆರಂಭಿಕ ಆಹಾರಗಳನ್ನು ಶುರುಮಾಡಿದರೆ ಆನಂತರ ಮಗು ತಾಯಿಯ ಎದೆಚೀಪಿಸಲು ಆಸಕ್ತಿತೋರದೆ ಇದೇ ಮುಂದೆ ಸುರಕ್ಷಿತ ಸ್ತನ್ಯಪಾನಕ್ಕೆ ಅಡ್ಡಿಯಾಗಬಹುದು. ನಿಮ್ಮ ವಿಷಯದಲ್ಲಿ ಹಾಗೇ ಆಗಿರಬಹುದು ಕೃತಕ ಹಾಲು ಮಗು ಕಷ್ಟಪಡದೇ ಆರಾಮಾಗಿ ಸಿಗುವುದರಿಂದ ಮಗು ಎದೆಹಾಲು ನಿರಾಕರಿಸಬಹುದು. ಇದರಿಂದ ಎದೆಹಾಲು ಉತ್ಪಾದನೆ ಕಡಿಮೆ ಆಗುತ್ತದೆ. ಯಾವುದೇ ಮಾತ್ರೆ, ಔಷಧಿ ಪ್ರತ್ಯೋಪಚಾರಗಳಿಗಿಂತ ಮಗು ತಾಯಿ ಎದೆಚೀಪುವುದೇ ಅತ್ಯುತ್ತಮ ಎದೆಹಾಲು ಉತ್ಪಾದನೆಯ ಪ್ರಚೋದಕ. ಹಾಗಾಗಿ ನೀವು ಕೃತಕ ಹಾಲು ನಿಲ್ಲಿಸಿ ಪದೇ ಪದೇ ಮಗುವಿಗೆ ನಿಮ್ಮ ಎದೆಯನ್ನು ಚೀಪಿಸುತ್ತಿರಿ. ಸಬ್ಬಸ್ಸಿಗೆ ಸೊಪ್ಪು, ಮೆಂತ್ಯೆಗಂಜಿ, ದನಿಯಾಗಂಜಿ, ಬೆಳ್ಳುಳ್ಳಿ ಜೀರಿಗೆ, ಶತಾವರಿ, ಲಡ್ಡು, ಚೂರ್ಣ ಇತ್ಯಾದಿಗಳನ್ನು ಹಲವು ಹಿರಿಯರು, ಅನುಭಸ್ತರು ಉಪಯೋಗಿಸಲು ಸಲಹೆ ನೀಡಬಹುದು. ಅವೆಲ್ಲಾ ನೇರವಾಗಿ ಸಹಾಯವಾಗದಿದ್ದರೂ ಉತ್ತಮ ಪೋಷಕಾಂಶಗಳನ್ನು ನೀಡಲು ಸಹಾಯಕ. ನೀವು ಮಗುವಿಗೆ ಕೇವಲ ಎದೆಹಾಲನ್ನು ಕನಿಷ್ಠ 6ತಿಂಗಳು, ಹಾಗೂ ನಂತರದ 2ವರ್ಷದವರೆಗೆ ಪೂರಕ ಆಹಾರದ ಜೊತೆಗೆ ಎದೆಹಾಲನ್ನು ಮುಂದುವರೆಸುವುದು ಅತ್ಯುತ್ತಮ. ಹೀಗೆ ಮಾಡಿದಾಗ ನಿಮಗೂ ನಿಮ್ಮ ಮಗುವಿಗೂ ಅತ್ಯಂತ ಶ್ರೇಷ್ಠಕರ. ನಿಮ್ಮಿಬ್ಬರ ನಡುವೆ ಉತ್ತಮಭಾಂದವ್ಯ ಉಂಟಾಗುತ್ತದೆ. ನಿಮ್ಮಲ್ಲಿ ಅನಗತ್ಯ ಕೊಬ್ಬಶೇಖರಣೆಯಾಗಿದ್ದರೆ ಅದು ಕರಗುತ್ತದೆ. ಸ್ತನದ ಕ್ಯಾನ್ಸರ್, ಅಂಡಾಶಯ ಹಾಗೂ ಗರ್ಭಾಶಯದ ಕ್ಯಾನ್ಸರ್, ರಕ್ತಹೀನತೆ, ಮೂಳೆಸವೆತ ಇವೆಲ್ಲದರ ಸಂಭವ ಕಡಿಮೆ ಆಗುತ್ತದೆ. ಮಗುವಿಗೂ ನಿಮ್ಮ ಎದೆಹಾಲು ಅತ್ಯಂತ ಪರಿಪೂರ್ಣ, ನೈರ್ಸಗಿಕ, ರುಚಿಯಾದ ಅತ್ಯಂತ ಪೌಷ್ಠಿಕವಾದ, ಸದಾ ಸಿದ್ದವಾಗಿರುವ ಆಹಾರ. ಮಗುವಿಗೆ ಶ್ವಾಸಕೋಶ, ಜೀರ್ಣಾಂಗವ್ಯೂಹ, ಚರ್ಮ ಹಾಗೂ ರಕ್ತಕ್ಯಾನ್ಸರ್‌ನಿಂದ ಹಿಡಿದು ಹಲವು ಕ್ಯಾನ್ಸರ್‌ಗಳ ವಿರುದ್ದ ರಕ್ಷಣೆಕೊಟ್ಟು ಮಗುವಿನ ಬುದ್ದಿಮತ್ತೆಯನ್ನು ಹೆಚ್ಚಿಸುವ ಸಂಜೀವಿನಿ. ನೀವು ಮಗುವಿಗೆ ಸ್ತನ್ಯಪಾನ ಮಾಡಿಸಿದರೆ ನಿಮಗೆ ಆರ್ಥಿಕಹೊರೆಯು ಕಡಿಮೆಯಾಗುತ್ತದೆ. ಕೃತಕಹಾಲಿನ ಕಾರಣದಿಂದಾಗುವ ಪರಿಸರನಷ್ಟವೂ ಕಡಿಮೆಯಾಗಿ ಪರಿಸರ ಪೋಷಣೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.