ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪಂದನ | ಅಕಾಲಿಕ ಹೆರಿಗೆಗೆ ಕಾರಣವೇನು?

Published : 24 ಆಗಸ್ಟ್ 2024, 0:10 IST
Last Updated : 24 ಆಗಸ್ಟ್ 2024, 0:10 IST
ಫಾಲೋ ಮಾಡಿ
Comments

ಅಕಾಲಿಕ ಹೆರಿಗೆಗೆ ಕಾರಣವೇನು?

ಪ್ರ

ಚೊಚ್ಚಲ ಹೆರಿಗೆ ಏಳು ತಿಂಗಳಿಗೆ ಆಗಿ, ಆರು ತಾಸು ಮಗು ಜೀವವಿದ್ದು, ನಂತರ ತೀರಿಹೋಯಿತು. ಎರಡನೇ ಬಾರಿಗೆ ಎಂಟನೇ ತಿಂಗಳಿಗೆ ಹೆರಿಗೆಯಾಗಿ, ಎನ್‌ಐಸಿಯುನಲ್ಲಿ ಇಟ್ಟು ಬೆಳೆಸಿ, ಈಗ ಮಗುವಿಗೆ ಮೂರು ವರ್ಷವಾಗಿದೆ. ಇನ್ನೊಂದು ಮಗುವಾದರೂ ಹೀಗೆ ಆಗುವುದೇ. ನನ್ನ ತಂಗಿಯೂ ನಾಲ್ಕು ತಿಂಗಳ ಗರ್ಭಿಣಿ. ಅವಳಿಗೂ ಹೀಗೆ ಆಗಬಹುದೇ. ಆಂತಕವಿದೆ. ಸಲಹೆ ನೀಡಿ. 

ಮೊದಲಿಗೆ ಆತಂಕದಿಂದ ಹೊರಬನ್ನಿ. ಒತ್ತಡವೇ  ಅಕಾಲಿಕ ಹೆರಿಗೆ ಮರುಕಳಿಸಲು ಕಾರಣವಾಗಬಹುದು. ಅವಧಿಪೂರ್ವ ಹೆರಿಗೆಯಾದಾಗ ಮಗುವಿನ ಉಸಿರಾಟ ವ್ಯವಸ್ಥೆ, ಜೀರ್ಣಾಂಗ ವ್ಯವಸ್ಥೆ ಹಾಗೂ ಮಿದುಳಿನ ಕಾರ್ಯ ಎಲ್ಲವೂ ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸದೇ, ಮಗುವಿಗೆ ತೀವ್ರನಿಗಾಘಟಕದ ಅವಶ್ಯಕತೆ ಹೆಚ್ಚಿರುತ್ತದೆ. ಒಂದು ಬಾರಿ ಅಕಾಲಿಕ ಹೆರಿಗೆಯಾದರೆ, ಮತ್ತೆ ಹೀಗಾಗುವ ಸಂಭಾವ್ಯತೆ ಹೆಚ್ಚಿರುತ್ತದೆ. ಇದಕ್ಕೆ ನಿರ್ದಿಷ್ಟ ಕಾರಣವೆಂಬುದಿಲ್ಲ. ಆದರೂ ಕೆಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಈ ಮೊದಲು ಅವಧಿಪೂರ್ವ ಹೆರಿಗೆ ಆಗಿದ್ದರೆ, ಅವಳಿ ಗರ್ಭ ಇದ್ದರೆ, ನೆತ್ತಿ ನೀರು ಹೆಚ್ಚಿದ್ದರೆ, ಅಕಾಲಿಕವಾಗಿ ನೆತ್ತಿನೀರು ಹೋಗಲು ಆರಂಭಿಸಿದರೆ ಗರ್ಭಕೊರಳಿನ ಅಸಾಮರ್ಥ್ಯತೆ ಇದ್ದರೆ, ಮೂತ್ರಾಂಗವ್ಯೂಹ, ಯೋನಿ ಅಥವಾ ನೆತ್ತಿನೀರಿನ ಸೋಂಕುಗಳಿದ್ದಾಗಲೂ, ಅಕಾಲಿಕ ಪ್ರಸವ ಆಗಬಹುದು. ಇಷ್ಟಲ್ಲದೇ ದೀರ್ಘಾವಧಿ ಕಾಯಿಲೆಗಳಾದ ಮಧುಮೇಹ, ಏರುರಕ್ತದೊತ್ತಡ, ಮೂತ್ರಪಿಂಡ ಕಾಯಿಲೆ, ಬೊಜ್ಜು ಇತ್ಯಾದಿಗಳಿದ್ದಾಲೂ ಹಾರ್ಮೋನು ಅಸಮತೋಲನ ಇದ್ದಾಗಲೂ, ಗರ್ಭಕೋಶದ ಆಕಾರದಲ್ಲಿ ಯಾವುದೇ ತರಹದ ವ್ಯತ್ಯಾಸಗಳಿದ್ದಾಗಲೂ, ಕಸಕೆಳಗಿದ್ದಾಗ, ಅಥವಾ ಅವಧಿಗೆ ಮುನ್ನವೇ ಕಸಬಿಟ್ಟುಕೊಂಡು ರಕ್ತಸ್ರಾವವಾದಾಗ, ಗರ್ಭಿಣಿಯರ ವಯಸ್ಸು ಅತಿ ಕಡಿಮೆ ಅಥವಾ ಜಾಸ್ತಿ ಇದ್ದಾಗ (18 ವರ್ಷಕ್ಕೂ ಕಡಿಮೆ ಹಾಗೂ 35 ವರ್ಷಕ್ಕಿಂತ ಹೆಚ್ಚಿದ್ದಾಗ) ಹೀಗಾಗುವ ಸಾಧ್ಯತೆ ಹೆಚ್ಚು. 

ಕೃತಕ ಗರ್ಭಧಾರಣೆಯಿಂದ ಗರ್ಭಧರಿಸಿದ್ದರೆ, ಜೆನಿಟಿಕ್ ಅಧ್ಯಯನಕ್ಕಾಗಿ ಆಮ್ನಿಯೋಸೆಂಟೆಸಿಸ್ ಅಥವಾ ಕೋರಿಯಾನಿಕ್ ಬಯಾಪ್ಸಿ ಇತ್ಯಾದಿ ಮಾಡಿದಾಗಲೂ, ಇನ್ನೂ ಕೆಲವೊಮ್ಮೆ ಆನುವಂಶೀಯ ಕಾರಣದಿಂದ ಅಕಾಲಿಕೆ ಹೆರಿಗೆ ಸಂಭವಿಸುತ್ತದೆ. 


ಇದನ್ನು ತಡೆಗಟ್ಟಲು ತಜ್ಞವೈದ್ಯರ ಮೇಲ್ವಿಚಾರಣೆಯಲ್ಲಿ ಸೂಕ್ತ ಪ್ರಸವಪೂರ್ವ ತಪಾಸಣೆ, ಅವಶ್ಯ ಬಂದಲ್ಲಿ ಗರ್ಭಕೊರಳಿಗೆ ಹೊಲಿಗೆ ಹಾಕುವುದು, ಪ್ರೊಜೆಸ್ಟರಾನ್ ಹಾರ್ಮೋನು ಇಂಜೆಕ್ಷನ್‌ಗಳಿಂದ ಚಿಕಿತ್ಸೆ ಕೊಡುವುದು, ಸೋಂಕುಗಳಿದ್ದರೆ ಸೂಕ್ತ ಆಂಟಿಬಯಾಟಿಕ್ಸ್ ಮೂಲಕ ಚಿಕಿತ್ಸೆ ಕೊಡುವುದು, ಗರ್ಭಧಾರಣೆಯಲ್ಲಿ ಮಧುಮೇಹ, ಏರುರಕ್ತದೊತ್ತಡ ಇತ್ಯಾದಿಗಳಿದ್ದಾಗ ಅವುಗಳನ್ನು ನಿಯಂತ್ರಣದಲ್ಲಿಡಬೇಕು. ಸಾಕಷ್ಟು ವಿಶ್ರಾಂತಿ, ಹೆರಿಗೆ ಮುಂದೂಡುವ ಔಷಧಗಳ ಬಳಕೆ, ಶ್ವಾಸಕೋಶದ ಬೆಳವಣಿಗೆಗೆ ಸೂಕ್ತ ಸ್ಟೀರಾಯಿಡ್ ಬಳಕೆ ಇತ್ಯಾದಿಗಳಿಂದ ತಜ್ಞವೈದ್ಯರು ಅಕಾಲಿಕ ಹೆರಿಗೆ ತಡೆಗಟ್ಟಲು ಪ್ರಯತ್ನಿಸುತ್ತಾರೆ.


‌ಮುಂಜಾಗ್ರತೆ ವಹಿಸಿ ಇನ್ನೊಂದು ಮಗು ಪಡೆಯಲು ಪ್ರಯತ್ನಿಸಿ. ನಿಮಗೆ ಆದ ಹಾಗೇ ನಿಮ್ಮ ತಂಗಿಗೂ ಆಗಬೇಕೆಂದಿಲ್ಲ. ಹೆದರಬೇಡಿ. ಕಾಳಜಿ ಇರಲಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT