ಶನಿವಾರ, ಡಿಸೆಂಬರ್ 7, 2019
21 °C
ಉದ್ರಿಕ್ತರನ್ನು ಮುನ್ನಡೆಸಿದ ರಾಜಕೀಯ ನಾಯಕರು ಕಟಕಟೆಯಲ್ಲಿ ನಿಲ್ಲಬೇಕು

1984: ಅಷ್ಟಿಷ್ಟು ನ್ಯಾಯ ಅಂತೂ ಸಿಕ್ಕಿತು

ಎ. ಸೂರ್ಯ ಪ್ರಕಾಶ್
Published:
Updated:

ಕಾಂಗ್ರೆಸ್ ಪಕ್ಷ ನಡೆಸಿದ 1984ರ ಸಿಖ್ ವಿರೋಧಿ ಹತ್ಯಾಕಾಂಡದ ವೇಳೆ ಇಬ್ಬರು ಸಿಖ್ಖರನ್ನು ಬರ್ಬರವಾಗಿ ಹತ್ಯೆ ಮಾಡಿದ ಒಬ್ಬ ವ್ಯಕ್ತಿಗೆ ದೆಹಲಿಯ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿರುವುದು, ಇನ್ನೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಸೇರಿದಂತೆ ನ್ಯಾಯಾಂಗದಿಂದ ಹೊರಬಂದ ಎರಡು ಆದೇಶಗಳು ದೇಶದ ಅಲ್ಪಸಂಖ್ಯಾತ ಸಮುದಾಯವೊಂದನ್ನು ಗುರಿಯಾಗಿಸಿಕೊಂಡ ಹಿಂಸಾಚಾರ ನಡೆದು 34 ವರ್ಷಗಳು ಕಳೆದಿದ್ದರೂ, ಅದರಲ್ಲಿ ಭಾಗಿಯಾಗಿದ್ದ ಕೆಲವರಿಗಾದರೂ ಶಿಕ್ಷೆ ಆಗುತ್ತದೆ ಎಂಬುದರ ಮೊದಲ ಸೂಚನೆ.

ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ನಡೆದ ಈ ಹತ್ಯಾಕಾಂಡಕ್ಕೆ ಕಾರಣರಾದವರನ್ನು ಕಾನೂನು ಕ್ರಮಕ್ಕೆ ಗುರಿಪಡಿಸುವ ವಿಚಾರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೋರಿಸಿದ ಬದ್ಧತೆ, ಈ ಉದ್ದೇಶಕ್ಕಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವ ತೀರ್ಮಾನ ಮಾಡಿದ್ದು ಹಾಗೂ ಅಂದು ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದರ ಬಗ್ಗೆ ಸುಪ್ರೀಂ ಕೋರ್ಟ್‌ ನಿರಂತರವಾಗಿ ಗಮನ ನೀಡಿದ್ದು ಫಲ ಕೊಡಲು ಆರಂಭಿಸಿವೆ.

ಮೊದಲ ಪ್ರಕರಣದಲ್ಲಿ, ಕಾಂಗ್ರೆಸ್ ನಾಯಕನೊಬ್ಬನ ನೇತೃತ್ವದಲ್ಲಿ ಕೊಲೆಗಡುಕರ ಗುಂಪೊಂದು ನವದೆಹಲಿಯ ಮಹಿಪಾಲಪುರ ಪ್ರದೇಶದಲ್ಲಿ ಸಿಖ್ಖರ ಮಾಲೀಕತ್ವದ ಅಂಗಡಿಗಳಿಗೆ ಬೆಂಕಿ ಇಟ್ಟಿತು, ಹರದೇವ್ ಸಿಂಗ್ ಮತ್ತು ಅವತಾರ್ ಸಿಂಗ್ ಎನ್ನುವವರನ್ನು ಹತ್ಯೆ ಮಾಡಿತು. ಅದೇ ದಿನ ಕಾಂಗ್ರೆಸ್ಸಿನ ನಾಯಕನ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್‌) ದಾಖಲಾಯಿತು. ಆದರೆ ಸೆಷನ್ಸ್‌ ನ್ಯಾಯಾಲಯ ಎರಡು ವರ್ಷಗಳ ನಂತರ ಆ ನಾಯಕನನ್ನು ದೋಷಮುಕ್ತಗೊಳಿಸಿತು. 1993ರಲ್ಲಿ ಎರಡನೆಯ ಎಫ್‌ಐಆರ್‌ ದಾಖಲಿಸಲಾಯಿತು. ಆದರೆ, ಆರೋಪಿಗಳು ಪತ್ತೆಯಾಗುತ್ತಿಲ್ಲ ಎಂದು ದೆಹಲಿ ಪೊಲೀಸರು ಒಂದೇ ವರ್ಷದೊಳಗೆ ಪರಿಸಮಾಪ್ತಿ ವರದಿ ಸಲ್ಲಿಸಿದರು. ಇಂತಹ ಪ್ರಕರಣಗಳ ಮರುತನಿಖೆಗಾಗಿ ಎಸ್ಐಟಿ ರಚಿಸಲು 2015ರ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ತೀರ್ಮಾನದಿಂದಾಗಿ ಈ ಪ್ರಕರಣದಲ್ಲಿ ಯಶಸ್ಸು ಕಾಣಲು ಸಾಧ್ಯವಾಯಿತು.

ಎರಡನೆಯ ಪ್ರಕರಣದಲ್ಲಿ, ತ್ರಿಲೋಕಪುರಿ ಪ್ರದೇಶದಲ್ಲಿ 95 ಸಿಖ್ಖರನ್ನು ಹೊಡೆದು ಸಾಯಿಸಿದ ಗುಂಪಿನ 70 ಮಂದಿಗೆ ನೀಡಿದ್ದ ಶಿಕ್ಷೆಯನ್ನು ದೆಹಲಿ ಹೈಕೋರ್ಟ್‌ ಎತ್ತಿಹಿಡಿಯಿತು. ಅಲ್ಲಿ ನಡೆದಿದ್ದ ಹಲ್ಲೆ ಅದೆಷ್ಟು ಕ್ರೂರವಾಗಿತ್ತೆಂದರೆ, ಮೃತ ದೇಹಗಳ ಪೈಕಿ 22 ದೇಹಗಳ ಗುರುತೇ ಸಿಗಲಿಲ್ಲ. ಆಘಾತದ ವಿಷಯವೆಂದರೆ, ಈ ಸಾಮೂಹಿಕ ಹತ್ಯೆಯ ಎಲ್ಲ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಕೇವಲ ಐದು ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಿತ್ತು. ಅವರಲ್ಲಿ ಹಲವರು ಜಾಮೀನು ಪಡೆದಿದ್ದರು. ವಿಚಾರಣಾ ನ್ಯಾಯಾಲಯ 1996ರ ಆಗಸ್ಟ್‌ನಲ್ಲಿ ಆದೇಶನೀಡಿತ್ತು. ಈ ವ್ಯಕ್ತಿಗಳು ಎಸಗಿದ ಕ್ರೌರ್ಯವನ್ನು ಕಂಡಿದ್ದರೂ ಶಿಕ್ಷೆಯನ್ನು ಹೆಚ್ಚಿಸಬೇಕು ಎಂದು ಸರ್ಕಾರ ಮೇಲ್ಮನವಿ ಸಲ್ಲಿಸಲಿಲ್ಲ. ಶಿಕ್ಷೆಗೆ ಗುರಿಯಾದವರು ತಮಗೆ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿದ ಕಾರಣ ಪ್ರಕರಣ ಹೈಕೋರ್ಟ್‌ ಮುಂದೆ ಬಂತು. ಮೇಲ್ಮನವಿ ತಿರಸ್ಕರಿಸುವ ಸಂದರ್ಭದಲ್ಲಿ ಪ್ರಾಸಿಕ್ಯೂಷನ್‌ ಬಗ್ಗೆ ಹೈಕೋರ್ಟ್‌ ಕೆಲವು ಕಟು ಮಾತುಗಳನ್ನು ಆಡಿದೆ. ‘ಪರಿಸ್ಥಿತಿ ಕೈಮೀರದಂತೆ ತಡೆಯಲು ಪೊಲೀಸರು ಮತ್ತು ಆಡಳಿತ ವ್ಯವಸ್ಥೆ ಸೂಕ್ತ ಅಥವಾ ಸಕಾಲಿಕ ಕ್ರಮ ಕೈಗೊಳ್ಳಲಿಲ್ಲ’ ಎಂದು ಕೋರ್ಟ್‌ ಹೇಳಿದೆ.

ಹತ್ಯಾಕಾಂಡದ ಕುರಿತು ತನಿಖೆ ನಡೆಸಿದ ನ್ಯಾಯಮೂರ್ತಿ ನಾನಾವತಿ ವಿಚಾರಣಾ ಆಯೋಗವು ಹಿಂದಿನ ಹಲವು ಆಯೋಗಗಳಿಗಿಂತ ಹೆಚ್ಚಿನ ಕೆಲಸ ಮಾಡಿತ್ತು. ಒಟ್ಟು 2732 ಸಿಖ್ಖರು ಆ ಹತ್ಯಾಕಾಂಡದಲ್ಲಿ ಹತರಾದರು ಎಂಬುದನ್ನು ನಾನಾವತಿ ಆಯೋಗ ಸಾಬೀತು ಮಾಡಿತು. ಇದಲ್ಲದೆ, ಸಿಖ್ಖರು ಹಿಂದೆಂದೂ ಕಾಣದ ಪ್ರಮಾಣದಲ್ಲಿ ಆಸ್ತಿ–ಮನೆ ಕಳೆದುಕೊಂಡರು.

ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕಾಂಗ್ರೆಸ್ಸಿನ ನಾಯಕರು ಮತ್ತು ಕಾರ್ಯಕರ್ತರು ನೇರವಾಗಿ ಪಾಲ್ಗೊಂಡಿದ್ದರು, ಕಾನೂನು ಜಾರಿ ಮಾಡಬೇಕಿದ್ದ ಸಂಸ್ಥೆಗಳೇ ಇದರಲ್ಲಿ ಕೈಜೋಡಿಸಿದ್ದವು ಎಂಬುದಕ್ಕೆ ಈ ಆಯೋಗ ಗಮನಾರ್ಹ ಸಾಕ್ಷ್ಯಗಳನ್ನು ಪತ್ತೆಮಾಡಿತು. ಪೊಲೀಸರ ವೈಫಲ್ಯವನ್ನು ದಾಖಲಿಸಿದ ಆಯೋಗವು ಪೊಲೀಸರು 587 ಪ್ರಥಮ ವರ್ತಮಾನ ವರದಿಗಳನ್ನು (ಎಫ್‌ಐಆರ್‌) ಮಾತ್ರ ದಾಖಲಿಸಿದ್ದರು; ಇವುಗಳ ಪೈಕಿ 241 ಎಫ್‌ಐಆರ್‌ಗಳಲ್ಲಿ ಆರೋಪಿಗಳು ಪತ್ತೆಯಾಗಲಿಲ್ಲ; 253 ಪ್ರಕರಣಗಳಲ್ಲಿ ಆರೋಪಿಗಳು ದೋಷಮುಕ್ತರಾದರು; 11 ಎಫ್‌ಐಆರ್‌ಗಳು ರದ್ದುಗೊಂಡವು; ಇನ್ನೂ 11 ಎಫ್‌ಐಆರ್‌ಗಳಲ್ಲಿ ಆರೋಪಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡರು ಎಂದು ಹೇಳಿತು.

ಹತ್ಯಾಕಾಂಡದ ಭೀಕರತೆಯನ್ನು ವಿವರಿಸಿದ ಆಯೋಗ, ಸಿಖ್ಖರ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಉದ್ರಿಕ್ತರನ್ನು ಪ್ರಚೋದಿಸಲಾಗುತ್ತಿತ್ತು, ಸಿಖ್ಖರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದ ಪ್ರದೇಶಗಳಿಗೆ ಉದ್ರಿಕ್ತರನ್ನು ಸರ್ಕಾರಿ ಸ್ವಾಮ್ಯದ ದೆಹಲಿ ಸಾರಿಗೆ ನಿಗಮದ ಬಸ್‌ಗಳಲ್ಲಿ ಸಾಗಿಸಲಾಯಿತು ಎಂದು ಹೇಳಿದೆ. ಉದ್ರಿಕ್ತರಿಗೆ ಶಸ್ತ್ರಗಳನ್ನು ಪೂರೈಸಲಾಯಿತು. ಅವರಿಗೆ ಸೀಮೆಎಣ್ಣೆ, ಪೆಟ್ರೋಲ್‌ ಕೊಡಲಾಯಿತು. ಇವನ್ನೆಲ್ಲ ಅವರು ಸಾರಿಗೆ ನಿಗಮದ ಬಸ್‌ ಮೂಲಕ ಸಾಗಿಸಿದರು. ನಂತರ ತೀವ್ರ ಹಲ್ಲೆಗಳು ಆರಂಭವಾದವು.

ಇಂದಿರಾ ಹತ್ಯೆಯ ನಂತರ ಪ್ರಧಾನಿಯಾದ ರಾಜೀವ್ ಗಾಂಧಿ, ‘ಸಿಖ್ಖರಿಗೆ ಪಾಠ ಕಲಿಸಬೇಕು’ ಎಂದು ಒಬ್ಬ ಅಧಿಕಾರಿಯ ಬಳಿ ಹೇಳಿದ್ದರು ಎಂಬುದನ್ನು ಸೂಚಿಸುವ ಮಾಹಿತಿ ಸಿಕ್ಕಿದೆ ಎಂದು ಆಯೋಗ ಹೇಳಿತು. ಆದರೆ, ಸಾಕ್ಷ್ಯಗಳ ಕೊರತೆಯಿಂದಾಗಿ ಈ ವಿಚಾರವಾಗಿ ಆಯೋಗ ಮುಂದಡಿ ಇಡಲಿಲ್ಲ.

ಈ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದಾಗ, ಮೋದಿ ನೇತೃತ್ವದ ಸರ್ಕಾರದ ಪ್ರಯತ್ನಗಳು  ಪ್ರಶಂಸಾರ್ಹ ಎಂಬುದು ಗೊತ್ತಾಗುತ್ತದೆ. 1984ರ ಹತ್ಯಾಕಾಂಡದಲ್ಲಿ ಕಹಿಯುಂಡವರಿಗೆ ನ್ಯಾಯ ಕೊಡಿಸಲು ಯಾವ ಕ್ರಮ ಕೈಗೊಳ್ಳಬಹುದು ಎಂಬುದನ್ನು ಶಿಫಾರಸು ಮಾಡಲು ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಜಿ.ಪಿ. ಮಾಥುರ್ ನೇತೃತ್ವದ ಸಮಿತಿಯನ್ನು 2014ರ ಡಿಸೆಂಬರ್‌ನಲ್ಲಿ ರಚಿಸಿತು. ಆ ಸಮಿತಿಯ ಶಿಫಾರಸು ಆಧರಿಸಿ ಸರ್ಕಾರವು 2015ರ ಫೆಬ್ರುವರಿಯಲ್ಲಿ ಎಸ್‌ಐಟಿ ರಚಿಸಿತು– ಮುಕ್ತಾಯಗೊಳಿಸಿದ ಪ್ರಕರಣಗಳ ಪುನರ್‌ ಪರಿಶೀಲನೆಗೆ ಸೂಚಿಸಿತು.

ಈ ನಡುವೆ ಸುಪ್ರೀಂ ಕೋರ್ಟ್‌ ಕೂಡ ಮಧ್ಯಪ್ರವೇಶ ಮಾಡಿ, ಹಲವು ಪ್ರಕರಣಗಳಲ್ಲಿನ ವಿಳಂಬದ ಬಗ್ಗೆ ವಿಚಾರಣೆ ನಡೆಸಿತು. ಎಸ್‌ಐಟಿಯ ಕೆಲಸವನ್ನು ಪರಾಮರ್ಶಿಸಲು ನ್ಯಾಯಮೂರ್ತಿಗಳ ತಂಡವೊಂದನ್ನು ರಚಿಸಿತು. ಅಲ್ಲದೆ, 186 ಪ್ರಕರಣಗಳ ಮರು ತನಿಖೆಗೆ ಮೂವರು ಸದಸ್ಯರ ಸಮಿತಿ ರಚಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿತು.

ಎರಡನೆಯ ವಿಶ್ವಯುದ್ಧ ಕೊನೆಗೊಂಡು 73 ವರ್ಷಗಳು ಕಳೆದಿದ್ದರೂ ಯಹೂದಿಗಳ ಸಾಮೂಹಿಕ ಹತ್ಯೆಯಲ್ಲಿ ಪಾಲ್ಗೊಂಡಿದ್ದ ನಾಜಿಗಳನ್ನು ಪತ್ತೆ ಮಾಡುವ ಯತ್ನ ಇಂದಿಗೂ ಜಾರಿಯಲ್ಲಿದೆ ಎಂಬ ವರದಿಗಳು ಜರ್ಮನಿಯಿಂದ ಬಂದಿವೆ. ಲಕ್ಷಾಂತರ ಜನರ ಹತ್ಯೆ ಮಾಡಿದ ನಾಜಿ ಸಂಚಾರ ದಳವೊಂದು ಇತ್ತು. ಈ ದಳದ ಮೂವರನ್ನು ಪತ್ತೆ ಮಾಡಲು ವಿಶೇಷ ಪ್ರಯತ್ನ ಅಲ್ಲಿ ನಡೆದಿದೆ. ಶಂಕಿತರು 90 ವರ್ಷಗಳಿಗಿಂತ ಹೆಚ್ಚು ವಯಸ್ಸಾದವರು!

ಸಿಖ್ಖರನ್ನು ಹತ್ಯೆ ಮಾಡಿದವರನ್ನು ಪತ್ತೆ ಮಾಡಿ, ಶಿಕ್ಷೆಗೆ ಗುರಿಪಡಿಸಲು ಜರ್ಮನಿಯ ಬಳಿ ಇರುವಂಥ ಪ್ರಾಮಾಣಿಕ ಉದ್ದೇಶ ಬೇಕು. ಕಾಂಗ್ರೆಸ್ಸಿನ ಒತ್ತಡಕ್ಕೆ ಮಣಿದು ಮುಕ್ತಾಯಗೊಳಿಸಲಾದ ಪ್ರತಿ ಪ್ರಕರಣವನ್ನೂ ಮತ್ತೆ ವಿಚಾರಣೆಗೆ ಒಳಪಡಿಸಬೇಕು. ಉದ್ರಿಕ್ತರನ್ನು ಮುನ್ನಡೆಸಿದ ರಾಜಕೀಯ ನಾಯಕರು ನ್ಯಾಯಾಂಗ ಕಟಕಟೆಯಲ್ಲಿ ನಿಲ್ಲಬೇಕು. ನೊಂದ ಸಮುದಾಯವೊಂದು ನಮ್ಮ ಸಂವಿಧಾನ ಮತ್ತು ಪ್ರಜಾತಾಂತ್ರಿಕ ಜೀವನಕ್ರಮದ ಮೇಲೆ ಪುನಃ ವಿಶ್ವಾಸ ಇರಿಸುವಂತೆ ಮಾಡಲು ಆಗ ಮಾತ್ರ ಸಾಧ್ಯ.

ಲೇಖಕ: ಪ್ರಸಾರ ಭಾರತಿ ಅಧ್ಯಕ್ಷ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು