ರಷ್ಯಾದ ‘ತುಂಗುಸ್ಕಾ’ ಸ್ಫೋಟ ನೆನಪಿದೆಯೆ? ಬಾಹ್ಯಲೋಕದಿಂದ ಬಂದ ಉಲ್ಕಾ ಬಂಡೆಯೊಂದು 1908ರಲ್ಲಿ ಸೈಬೀರಿಯಾದ ತುಂಗುಸ್ಕಾ ನದಿಯ ಬಳಿ ಸ್ಫೋಟಗೊಂಡಿತು. ನೆಲದಿಂದ ಏಳೆಂಟು ಕಿ.ಮೀ. ಎತ್ತರದಲ್ಲಿದ್ದಾಗಲೇ ಸಿಡಿದಿದ್ದರಿಂದ ನೆಲಕ್ಕೆ ಗಾಯವೇನೂ ಆಗಲಿಲ್ಲ. ಆದರೆ, ಎರಡು ಸಾವಿರ ಚ.ಕಿ.ಮೀ ವಿಸ್ತೀರ್ಣದ ಎಂಟು ಕೋಟಿ ಮರಗಳು ದೂಳೀಪಟ ಆದವು. ಆ ಆಘಾತ ಹಿರೊಶಿಮಾ ಬಾಂಬ್ನ ಕನಿಷ್ಠ 500 ಪಟ್ಟು ಹೆಚ್ಚಿತ್ತು. ನಿರ್ಜನ ಪ್ರದೇಶವಾಗಿದ್ದರಿಂದ ನೂರಾರು ಕಿ.ಮೀ ಆಚೆ ಇದ್ದವರು ಪಲ್ಟಿ ಹೊಡೆದು ಬಿದ್ದರೇ ವಿನಾ ಮನುಷ್ಯರ ಸಾವು–ನೋವಿನ ವರದಿ ಆಗಲಿಲ್ಲ.

ಭೂಮಿಯ ಸುದೀರ್ಘ ಚರಿತ್ರೆಯಲ್ಲಿ ಇಂಥ ಲೆಕ್ಕವಿಲ್ಲದಷ್ಟು ಆಘಾತಗಳು ಆಗಿಹೋಗಿವೆ. ದೈತ್ಯ ಡೈನೊಸಾರ್ ಸಂತತಿಯೇ ಹೀಗೆ ನಿರ್ನಾಮ ಆಗಿದ್ದು ನಮಗೆ ಗೊತ್ತಿದೆ. ತುಂಗುಸ್ಕಾ ಮಾದರಿಯ ಸಾಮಾನ್ಯ ಸ್ಫೋಟ ಈಗೇನಾದರೂ ಸಂಭವಿಸಿದರೆ ಏನಾದೀತು ಗೊತ್ತೆ? ವೈರಿದೇಶದ ಪರಮಾಣು ಬಾಂಬ್ ಬಿತ್ತೆಂದು ಭ್ರಮಿಸಿ ಆ ಕ್ಷಣವೇ ಅವೆಷ್ಟೊ ಖಂಡಾಂತರ ಕ್ಷಿಪಣಿಗಳು ಮೇಲಕ್ಕೆ ಚಿಮ್ಮಿ ‘ಮರುದಾಳಿ’ ನಡೆಯಬಹುದು. ಆ ಮರುದಾಳಿಗೆ ಪ್ರತಿದಾಳಿ ನಡೆದೀತು. ನೆಲದಲ್ಲಿ ನಾವು ಬಚ್ಚಿಟ್ಟಿರುವ ಪರಮಾಣು ಬಾಂಬ್ಗಳೇ ಉಲ್ಕೆಗಳಾಗಿ ಭೂಮಿಯ ಪಾಲಿಗೆ ನಾವೇ ಭಸ್ಮಾಸುರ ಆಗಬಹುದು.

ಬಾನಲ್ಲಿ ಇಂಥ ಭಾನಗಡಿ ಆಗಬಾರದಲ್ಲ? ಅದಕ್ಕೇ ಬಾಹ್ಯಾಕಾಶದಿಂದ ಯಾವುದೇ ಬಂಡೆ, ಕ್ಷುದ್ರಗ್ರಹ ಅಥವಾ ಧೂಮಕೇತು ನಮ್ಮ ಕಡೆ ಬರುತ್ತಿದ್ದರೆ ಸಾಕಷ್ಟು ಮುಂಚಿತವೇ ಗೊತ್ತಾಗಲೆಂದು ಅಮೆರಿಕದ ‘ನಾಸಾ’ ಸಂಸ್ಥೆ ಭೂಮಿಯ ನಾಲ್ಕು ಖಂಡಗಳಲ್ಲಿ ‘ಅಟ್ಲಾಸ್’ ಹೆಸರಿನ ವೀಕ್ಷಣಾ ಕೇಂದ್ರಗಳನ್ನು ಹೂಡಿಟ್ಟಿದೆ. ದಕ್ಷಿಣ ಅಮೆರಿಕದ ಚಿಲಿಯಲ್ಲಿರುವ ಅಂಥ ವೇಧಶಾಲೆಗೆ ಜುಲೈ 1ರಂದು ಧನು ರಾಶಿಯ ಕಡೆಯಿಂದ ಒಂದು ಚುಕ್ಕಿ ಹೊರಟಿದ್ದು ಗೋಚರಿಸಿತು. ಮಾಮೂಲು ಧೂಮಕೇತು ಎಂದರೆ ಕ್ರಿಕೆಟ್ ಆಟದ ಮಧ್ಯೆ ಯಾವನೋ ಪಿರ್ಕಿಯೊಬ್ಬ ಪೆವಿಲಿಯನ್ ಕಡೆಯಿಂದ ಪಿಚ್ ಕಡೆ ನುಗ್ಗಿ ಬಂದು ರೌಂಡ್ ಹಾಕಿ ಬೈಸಿಕೊಂಡು ಸ್ವಸ್ಥಾನಕ್ಕೆ ಹೋಗುವ ಹಾಗಿರುತ್ತದೆ. ಅಂಥದೇ ಒಂದು ಕಾಯ ಹೊರಟಿದೆ ಎಂದು ‘ಅಟ್ಲಾಸ್’ ವಿಜ್ಞಾನಿಗಳು ಮೊದಲು ಅದನ್ನು ದಾಖಲಿಸಿದ್ದರು. ಆದರೆ, ಈ ಕಾಯ ತುಸು ದೊಡ್ಡದಾಗುತ್ತ ಬಂದಂತೆ ಅದರ ಲಕ್ಷಣಗಳು ಧೂಮಕೇತುವಿನ ಥರಾ ಇಲ್ಲ; ಅದು ಹಿಂದಿರುಗಿ ತಾನು ಹೊರಟಲ್ಲಿಗೇ ಹೋಗಲು ಬಂದಿಲ್ಲ ಎಂಬುದೂ ಗೊತ್ತಾಯಿತು. ಸುದ್ದಿ ಎಲ್ಲೆಡೆ ಹಬ್ಬಿತು. ಜಗತ್ತಿನಾದ್ಯಂತ ಖಗೋಲ ವೀಕ್ಷಕರು ಧಿಗ್ಗನೆದ್ದರು. ತಮ್ಮ ದುರ್ಬೀನ್ಗಳನ್ನು ಅತ್ತ ತಿರುಗಿಸಿದರು.

ಆಗಸ್ಟ್ ಕಳೆದು ಸೆಪ್ಟಂಬರ್ ಹೊತ್ತಿಗೆ ಈ ಪಿರ್ಕಿ ಬಂಡೆಯ ಇನ್ನಷ್ಟು ವಿಲಕ್ಷಣ ಚಹರೆಗಳು ಬೆಳಕಿಗೆ ಬಂದವು. ಸಾಮಾನ್ಯ ಧೂಮಕೇತು ಸೂರ್ಯನ ಸಮೀಪ ಬಂದ ಹಾಗೆ ಅದರ ಹಿಂದೆ ಬೆಳಕಿನ ಬಾಲ ಬೆಳೆಯುತ್ತದೆ. ಏಕೆಂದರೆ ಅದರ ತಲೆಯಲ್ಲಿನ ಹೊಟ್ಟು ಸೂರ್ಯನ ಬೆಳಕಿನಲ್ಲಿ ಆವಿಯಾಗಿ ಜಡೆಯಂತೆ ಹಿಂದಕ್ಕೆ ಸಾಗುತ್ತದೆ. ಆದರೆ ಇದಕ್ಕೆ ತಲೆಯ ಮೇಲೆ ಜುಟ್ಟಿನಂತೆ ಮುಂಬಾಲ ಬೆಳೆಯತೊಡಗಿತ್ತು. ಅದರ ಆಕಾರವೂ ಬಂಡೆಯಂತಿರದೆ, ಶಿಲ್ಪಿಯೊಬ್ಬ ಕಟೆದಂತಿತ್ತು. ಮೂಲೆಗಳಲ್ಲಿ ಮಿಂಚು ಮಿನುಗಿತೆಂದೂ ವರದಿಗಳು ಬರತೊಡಗಿದವು. ಅದರ ಕೆಮಿಕಲ್ ಚಹರೆ ಮತ್ತು ಪಥಸೂಚಿಯನ್ನೆ ನೋಡಿದ ನಾಸಾ ತಜ್ಞರು ಇದು ದೂರದ ತಾರಾಲೋಕದಿಂದ ಬಂತೆಂದು ಹೇಳಿದ್ದೇ ತಡ, ಧೂಮಕತೆಗೆ ಕಾಲು ಬಾಲ ಬೆಳೆದವು. ಈ ಕಾಯಕ್ಕೆ ‘ಥ್ರೀ ಐ ಅಟ್ಲಾಸ್’ ಎಂದು ಹೆಸರಿಟ್ಟಿದ್ದೂ ಆಯಿತು.

ನಭೋಚರಿತ್ರೆಯಲ್ಲಿ ಹೀಗೆ ನಕ್ಷತ್ರ ಲೋಕದಿಂದ ಬಂದ 3ನೆಯ ತಾರಾಮೂಲದ (ಇಂಟರ್ಸ್ಟೆಲ್ಲರ್) ಬಂಡೆ ಇದು. ಹಿಂದೆ 2017ರಲ್ಲಿ ಕಂಡ ಮೊದಲನೆಯ ಇಂಥ ತಾರಾಮೂಲದ ಬಂಡೆಗೆ ‘1 ಐ ರಾಮ’ ಎಂದು ಹೆಸರಿಡಲಾಗಿತ್ತು. ಮುಂದೆ ಹವಾಯಿ ಭಾಷೆಯನ್ನೇ ಬಳಸಿ ಅದರ ಹೆಸರನ್ನು ‘1ಐ ‘ಔಮುವಾಮುವಾ’ ಎಂದು ಬದಲಿಸಲಾಗಿತ್ತು. 2019ರಲ್ಲಿ ಬಂದ ಎರಡನೆ ಬಂಡೆಗೆ ‘2 ಐ ಬೊರಿಸೊವ್’ ಎಂದು ಹೆಸರು ಬಿತ್ತು. ಈಗ ಮೂರನೆಯದು ಅಟ್ಲಾಸ್ ವ್ಯವಸ್ಥೆಗೆ ಮೊದಲು ಕಂಡಿದ್ದರಿಂದ ಅದು ‘3 ಐ ಅಟ್ಲಾಸ್’ ಎನಿಸಿತು.

ಸೌರಮಂಡಲದ ಕ್ರೀಡಾಂಗಣಕ್ಕೆ ಇದು ಹೀಗೆ ಹಠಾತ್ ನುಗ್ಗಿಬಂದಿದ್ದು ಕೆಲವರ ಪಾಲಿಗೆ ಅಪ್ಸರೆಯಾಗಿ, ಮತ್ತೆ ಕೆಲವರಿಗೆ ತೋಳವಾಗಿ, ಇನ್ನೂ ಕೆಲವರಿಗೆ ನಿಗೂಢ ಶೋಧಯಂತ್ರವಾಗಿ ಊಹಾಪೋಹಗಳ ಕಣ್ಮಣಿ ಎನಿಸಿತು. ಕ್ರೀಡಾಂಗಣದ ಎಲ್ಲ ಕ್ಯಾಮೆರಾಗಳೂ ಅತ್ತ ಫೋಕಸ್ ಆದವು. ಕೈಯಲ್ಲಿ ದುರ್ಬೀನ್ ಇಲ್ಲದವರು ಕ್ರೀಡಾ ವರದಿಗಾರರ ಥರಾ ಕಂಡ ಕಂಡ ‘ತಜ್ಞ’ರ ಮುಖಕ್ಕೆ ಮೈಕ್ ಒತ್ತಿದರು. ಇನ್ನು ಕೆಲವರು ಮನೆಯಲ್ಲೇ ಕೂತು ಎಐ ನೆರವಿನಿಂದ ಫೇಕ್ ವಿಡಿಯೊಗಳನ್ನು ಸೃಷ್ಟಿಸಿ ವೈರಲ್ ಮಾಡತೊಡಗಿದರು. ಈ ಮಧ್ಯೆ ಸಾಚಾ ಖಗೋಲ ವಿಜ್ಞಾನಿಗಳಿಗೂ ತಾರಾಲೋಕದಿಂದ ಏನೇನು ಕೆಮಿಕಲ್ಗಳು ಬಂದಿವೆ ಎಂಬ ಕುತೂಹಲ ಮೂಡಿತ್ತು. ವಾಸ್ತವ ಏನೆಂದು ತಿಳಿಯಲು ಒಂದಲ್ಲ, ಎರಡಲ್ಲ, ಬಾಹ್ಯಾಕಾಶದಲ್ಲಿರುವ ಹನ್ನೊಂದು ಶೋಧನೌಕೆಗಳ ಕ್ಯಾಮೆರಾಗಳನ್ನು, ಜೊತೆಗೆ ಹಬ್ಲ್ ದೂರದರ್ಶಕವನ್ನು ನಾಸಾ ಸಂಸ್ಥೆ ಅದರತ್ತ ಫೋಕಸ್ ಮಾಡಿತು. ಮಂಗಳನ ಕಕ್ಷೆಯಲ್ಲಿ ಸುತ್ತುತ್ತಿದ್ದ ಮೇವೆನ್ ನೌಕೆಗೆ, ಅಷ್ಟೇ ಅಲ್ಲ, ಅಲ್ಲೇ ಕೆಳಕ್ಕೆ ಮಂಗಳನ ಅಂಗಳದಲ್ಲಿ ಓಡಾಡುತ್ತಿದ್ದ ‘ಪರ್ಸಿವೆರೆನ್ಸ್’ ಬಂಡಿಗೂ ಅತ್ತ ನೋಡಲು ನಿರ್ದೇಶನ ಸಿಕ್ಕಿತು. ಅನ್ಯಲೋಕದ ಜೀವಿಗಳ ಅನ್ವೇಷಣೆಗೆಂದೇ ಸ್ಯಾನ್ಫ್ರಾನ್ಸಿಸ್ಕೊದಲ್ಲಿ ಹೂಡಲಾಗಿರುವ 42 ಅಂಟೆನಾಗಳ ರೇಡಿಯೊ ಟೆಲಿಸ್ಕೋಪ್ ಕೂಡ ಈ ಧೂಮಕೇತುವಿನಿಂದ ‘ಸುಸಂಬದ್ಧ’ ಸಿಗ್ನಲ್ ಏನಾದರೂ ಹೊಮ್ಮುತ್ತಿವೆಯೇ ಎಂಬ ಪರೀಕ್ಷೆ ನಡೆಯಿತು. ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ನೌಕೆಯೊಂದು ಗುರುಗ್ರಹದ ಹಿಮಚಂದ್ರಗಳ ಅನ್ವೇಷಣೆಗೆ ಹೊರಟಿದ್ದು, ಅದನ್ನೂ ‘ಥ್ರೀಐ ಅಟ್ಲಾಸ್’ ಕಡೆಗೆ ತಿರುಗಿಸಲಾಯಿತು. ಹೀಗೆ ಹಿಂದೆಂದೂ ಕಂಡಿರದಷ್ಟು ವ್ಯಾಪಕ ಪರಿಮಾಣದಲ್ಲಿ ಇಪ್ಪತ್ತು ಕೋನಗಳಿಂದ ಧೂಮಕೇತುವಿನ ಪರಿವೀಕ್ಷಣೆ ನಡೆಯಿತು. ಭೌತವಿಜ್ಞಾನ, ಗಣಿತ, ಖಗೋಲ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ ಹೀಗೆ ಎಷ್ಟೊಂದು ವಿಷಯಗಳ ತಜ್ಞರು ಧೂಮಕೇತುವಿನ ವಿಶ್ಲೇಷಣೆಯಲ್ಲಿ ತೊಡಗಿದರು. ಅದು ಭೂಮಿಯತ್ತ ಬರುತ್ತಿಲ್ಲ, ಮೇಲಾಗಿ ಅದರಲ್ಲಿ ತೀರ ವಿಶೇಷದ್ದೇನೂ ಇಲ್ಲವೆಂದು ಹೇಳುತ್ತಿದ್ದಾಗಲೇ ಇನ್ನೊಂದು ಸಂಗತಿ ಮುನ್ನೆಲೆಗೆ ಬಂತು: ಅಟ್ಲಾಸ್ ತಲೆಯಿಂದ ಹೊಮ್ಮುವ ಅನಿಲದಲ್ಲಿ ಮೀಥೇನ್ ಇದೆ, ಸೈನೈಡ್ ಇದೆ ಎಂಬ ವರದಿಗಳು ಬಂದವು.

ಈಗಂತೂ ಕಥನಕೋರರಿಗೆ ರೆಕ್ಕೆಪುಕ್ಕ ಬಂದವು. ಮೀಥೇನ್ ಎಂದರೆ ಜೀವ ಬೀಜ ಬಿತ್ತನೆಗೆ ಬೇಕಾದ ಸಾವಯವ ಕೆಮಿಕಲ್ ಇದೆ; ಸೈನೈಡ್ ಎಂದರೆ ಈಗಿರುವ ಜೀವಿಗಳ ನಿರ್ನಾಮಕ್ಕೆ ಬೇಕಾದ ವಿಷಮಯ ಅಸ್ತ್ರವಿದೆ ಎಂದೆಲ್ಲ ಗುಲ್ಲೆದ್ದಿತು. ಕೆಲವು ವಿಷಯತಜ್ಞರ ನಿಲುವುಗಳೂ ಅಲ್ಲಾಡಿದವು. ‘ಇದು ಇಲ್ಲಿಗೆ ಹೊಸ ಜೀವ ಬಿತ್ತನೆಗೆಂದು ಅನ್ಯಲೋಕದಿಂದ ಬಂದ ನೌಕೆಯೇ ಇರಬಹುದು’ ಎಂದು ಹಾರ್ವರ್ಡ್ನ ಖಭೌತವಿಜ್ಞಾನಿ ಎವಿ ಲೊಯೆಬ್ ಹೇಳಿದ್ದು ಇನ್ನಷ್ಟು ರೋಚಕ ಚರ್ಚೆಗಳಿಗೆ ಕಾರಣವಾದವು. ಆರ್ಥರ್ ಕ್ಲಾರ್ಕ್ ಪ್ರಶಸ್ತಿ ಪಡೆದ ವಿಜ್ಞಾನ ಸಂವಹನಕಾರ ಡಾ. ಮಿಚಿವೊ ಕಾಕು ಕೂಡ ದಾರಿ ತಪ್ಪಿದರು. ಅಟ್ಲಾಸ್ನ ಕೆಲವು ಭಾಗ ಕಳಚಿ ಬೇರ್ಪಟ್ಟಿದ್ದು ಗೊತ್ತಾಗಿ ‘ಇದು ಅನ್ಯಲೋಕದ ಬುದ್ಧಿಜೀವಿಗಳ ನೌಕೆಯೇ ಹೌದು’ ಎಂದರು.

ಅಪ್ಪಟ ವಿಜ್ಞಾನದೊಂದಿಗೆ ಊಹಾಪೋಹದ ರಂಜಕತೆ, ಥ್ರಿಲ್ಲರ್ ಕಥನ, ಬುರುಡೆ ಭಯ ಎಲ್ಲವೂ ಸೇರಿಕೊಂಡು ಗೊಂದಲದ ಗೊಂಬೆಯಾಗಿ ಅಟ್ಲಾಸ್ ಧೂಮಕೇತು ನಾಲ್ಕು ತಿಂಗಳು ಕಾಲ ವಿಜೃಂಭಿಸಿತು. ಯೂಟ್ಯೂಬ್ನಲ್ಲಿ ಲೈಕ್ಗಳ ಮೆರವಣಿಗೆ ನಡೆಯಿತು. ವಾಸ್ತವ ಏನೆಂದು ಮತ್ತೊಮ್ಮೆ ತಿಳಿಸಲು ನವೆಂಬರ್ನಲ್ಲಿ ನಾಸಾ ಸಂಸ್ಥೆ ವಿಶೇಷ ಚರ್ಚಾಮೇಳ ನಡೆಸಬೇಕಾಗಿ ಬಂತು. ಅದು ಅನ್ಯಲೋಕದ ಬುದ್ಧಿಜೀವಿಗಳ ನೌಕೆ ಅಲ್ಲವೆಂದು ವಿವರಿಸಿತು.

ಪುರಾತನ ಕಾಲದಿಂದಲೂ ಧೂಮಕೇತು ಎಂದರೆ ನಾನಾ ಬಗೆಯ ಮೂಢನಂಬಿಕೆಗಳ ಮೂಟೆಯಾಗಿ ಸುತ್ತುತ್ತಿವೆ. ವೈರಸ್ ದಾಳಿ, ಕ್ಷಾಮಡಾಮರ, ಯುದ್ಧಭೀತಿಯೇ ಮುಂತಾದ ಪ್ರಕೋಪಗಳಿಗೆಲ್ಲ ದೇವರ ಕೋಪವೇ ಕಾರಣವೆಂದು ರಾಜರುಗಳಿಂದ ಪರಿಹಾರ ಯಜ್ಞಗಳನ್ನು ಪೀಕಿಸುವ ಪಂಡಿತರ ಚರಿತ್ರೆ ಆಗಿನಿಂದಲೂ ದಾಖಲಾಗುತ್ತ ಬಂದಿದೆ. ಖಗೋಲದ ವಿದ್ಯಮಾನಗಳಿಗೆ ವೈಜ್ಞಾನಿಕ ಕಾರಣಗಳು ಬೆಳಕಿಗೆ ಬಂದಂತೆಲ್ಲ ದೇವರ ಪಾತ್ರ ನಗಣ್ಯವಾಗುತ್ತ ಹೋಗಿದೆಯಾದರೂ ಇನ್ನೊಂದು ಬಗೆಯ ಭ್ರಮೆ ಬೇರೂರುತ್ತಿದೆ. ಅನ್ಯಲೋಕದ ಜೀವಿಗಳು ನಮ್ಮಲ್ಲಿಗೆ ಬರುತ್ತಿವೆ ಎಂಬ ರೋಚಕತೆ ಯನ್ನು ಹಬ್ಬಿಸಿ ಲೈಕ್ ಪಡೆಯುವ ತವಕ ಅದು.

ದೇವರ ಅಸ್ತಿತ್ವವನ್ನೇ ನಿರಾಕರಿಸುತ್ತ, ‘ಆತ ಇದ್ದಿದ್ದರೆ ಒಳ್ಳೆಯದಾಗುತ್ತಿತ್ತೇನೊ’ ಎಂದು ನಮ್ಮ ಎ.ಎನ್. ಮೂರ್ತಿರಾಯರು ‘ದೇವರು’ ಹೆಸರಿನ ತಮ್ಮ ಪುಸ್ತಕದಲ್ಲಿ ಆಶಿಸಿದ್ದರು. ಹಾಗೆಯೇ ನಾವಿಂದು ಅನ್ಯಲೋಕದ ಜೀವಿಗಳು ಬಂದಿದ್ದರೆ ಒಳ್ಳೆಯದಿತ್ತೇನೊ ಎನ್ನಬೇಕಾಗಿದೆ. ಅಕಸ್ಮಾತ್ ಅವು ಬಂದಿದ್ದೇ ಆದರೆ ಸಹಜವಾಗಿ ನಮಗಿಂತ ಅದೆಷ್ಟೊ ಪಟ್ಟು ಬುದ್ಧಿವಂತ ಆಗಿರಲೇಬೇಕು. ಮನುಷ್ಯರು ಹೊಸ ಭೂಖಂಡಕ್ಕೆ ಹೋಗುವಾಗಲೆಲ್ಲ ಯುದ್ಧ ಸಿದ್ಧತೆಯಲ್ಲೇ ಹೋಗಿದ್ದರೇ ವಿನಾ ಮೈತ್ರಿಯ ಆಶಯ ಇರಲೇ ಇಲ್ಲ. ಅನ್ಯಜೀವಿಗಳು ಆ ದೃಷ್ಟಿಯಲ್ಲಿ ವಿವೇಕಿಗಳೇ ಆಗಿದ್ದರೆ ಕಕ್ಷೆಯಲ್ಲಿ ನಿಂತು ನಮ್ಮೆಲ್ಲ ಅಪಸವ್ಯಗಳನ್ನು ನೋಡಿ ಹೇಸಿಗೆಪಟ್ಟು, ಇವರ ಸಹವಾಸವೇ ಬೇಡವೆಂದು ಹಿಂದಿರುಗಿ ಹೋಗುತ್ತವೇನೊ.

ಸೂರ್ಯನ ಹಿಂದೆ ಮರೆಯಾಗಿದ್ದ ‘ಥ್ರೀ ಐ ಅಟ್ಲಾಸ್’ ಸುತ್ತ ವಿವಾದಗಳೆಲ್ಲ ತಣ್ಣಗಾಗುತ್ತಿವೆ. ಈಗ ಅದಕ್ಕೆ ‘ಸಿ/2025 ಎನ್1’ ಎಂದು ಮರುನಾಮಕರಣ ಮಾಡಲಾಗಿದೆ. ಡಿಸೆಂಬರ್ 19ರಂದು ಭೂಮಿಗೆ 17 ಕೋಟಿ ಕಿ.ಮೀ. ದೂರದಲ್ಲಿ ಹಾದು ಅದು ಸೌರಲೋಕವನ್ನು ದಾಟಿ ಹೋಗಲಿದೆ. ಹಾಗೆ ತನ್ನ ಪಾಡಿಗೆ ತಾನು ಹೋಗುತ್ತಿರುವುದು ಒಂದರ್ಥದಲ್ಲಿ ನಿರಾಶಾಜನಕ ಎಂತಲೇ ಹೇಳಬೇಕು. ಅದೇನಾದರೂ ಭೂಮಿಗೆ ತುಸು ಸಮೀಪ ಬಂದಂತೆ ನಟಿಸಿ ಹೋಗಿದ್ದರೆ ನಮಗೆ ಏನೆಲ್ಲ ಲಾಭ ಇತ್ತು. ಆಗಲಾದರೂ ನಾವು ನಮ್ಮ ಈ ಏಕೈಕ ಜೀವಂತ ಗ್ರಹದ ರಕ್ಷಣೆಯ ಹೆಸರಲ್ಲಿ ಒಟ್ಟಾಗುತ್ತಿದ್ದೆವೇನೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.