2025ರ ಜನವರಿ 13ರಿಂದ ಆರಂಭವಾಗಲಿರುವ ಮಹಾಕುಂಭ ಮೇಳದ ವೈಭವದ ಕುರಿತು ಭಾರತದುದ್ದಕ್ಕೂ ಅಷ್ಟೇ ಅಲ್ಲ ನೇಪಾಳ, ಥಾಯ್ಲೆಂಡ್ಗಳಲ್ಲೂ ನಮ್ಮ ರೋಡ್ಶೋ ನಡೆಯಲಿದೆ. ರೋಡ್ಶೋ ಎಂದರೆ ಚಲಿಸುವ ಟ್ಯಾಬ್ಲೊ ಜಾಹೀರಾತಷ್ಟೇ ಅಲ್ಲ; ಮಿನಿ ಪ್ರದರ್ಶನ, ಸ್ಮರಣಿಕೆ ವಿತರಣೆ, ಜನರೊಂದಿಗೆ ಸಂವಾದ, ಆಸಕ್ತರಿಗೆ ವಿಶೇಷ ಆಮಿಷ ಎಲ್ಲ ಇರುತ್ತವೆ. ಪ್ರವಾಸೋದ್ಯಮದ ಬೆಳವಣಿಗೆಗೆ ಇವೆಲ್ಲ ಬೇಕೇಬೇಕು, ಸರಿ. ಇದೇ ವೇಳೆಗೆ, ಇದೇ ಮಾದರಿಯಲ್ಲಿ, ಭಾರತ ಸರ್ಕಾರ ಬ್ರಿಟನ್, ನೆದರ್ಲೆಂಡ್ಸ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಬೇರೊಂದು ಬಗೆಯ ರೋಡ್ಶೋವನ್ನು ಹಮ್ಮಿಕೊಳ್ಳಲಿದೆ. ‘ಇಂಡಿಯಾದ ಸಮುದ್ರತಳದಲ್ಲಿ ಇರುವ ಅಮೋಘ ಖನಿಜ ಖಜಾನೆಯನ್ನು ಮೇಲಕ್ಕೆತ್ತಲು ಹೊರಟಿದ್ದೇವೆ; ಬಂಡವಾಳ ಹೂಡಬನ್ನಿ’ ಎಂಬ ಸಂದೇಶ ಅದರಲ್ಲಿ ಇರಲಿದೆ.

ಐದು ಕಿಲೊಮೀಟರ್ ಆಳದ ಸಮುದ್ರತಳಕ್ಕೆ ಯಂತ್ರಗಳನ್ನು ಇಳಿಸಿ ಗಣಿಗಾರಿಕೆ ಮಾಡುವುದೆಂದರೆ ಅದು ಚಂದ್ರಯಾನಕ್ಕಿಂತ ಕ್ಲಿಷ್ಟದ ಸಾಹಸ. ಆದರೆ ನಾವು ಚಂದ್ರಯಾನ ಕೈಗೊಂಡಾಗಲೂ ವಿದೇಶಗಳಲ್ಲಿ ಹೀಗೆಲ್ಲ ಟಾಂ ಟಾಂ ಮಾಡಿರಲಿಲ್ಲ. ಈಗ ಇಂಥ ರೋಡ್ಶೋ ಮಾಡಲು ಕಾರಣವೇನು? ‘ಇದರಲ್ಲಿ ಹಣವನ್ನು ಹೂಡಿದರೆ ಎಲ್ಲರ ಭವಿಷ್ಯ ಉಜ್ವಲ ಆಗಲಿದೆ. ಹೂಡಿಕೆದಾರರಿಗೆ ಹೇರಳ ಲಾಭವೂ ಇದೆ. ನಮ್ಮ ಬಳಿ ಸುಧಾರಿತ ತಾಂತ್ರಿಕ ಸಾಧನಗಳಿಲ್ಲ; ಆದರೆ ನಿಮ್ಮ ದೇಶಗಳಲ್ಲಿ ಇವೆ. ನಿಮ್ಮ ಗಣಿ ಕಂಪನಿಗಳಲ್ಲಿ ನೀವು ಹಣ ಹೂಡಿದರೆ ಹೊಸ ರತ್ನಗರ್ಭದ ಬಾಗಿಲು ತೆರೆಯಲಿದೆ’- ಇದು ರೋಡ್ಶೋ ಉದ್ದೇಶ.

ಅಂಡಮಾನ್, ನಿಕೊಬಾರ್ ದ್ವೀಪಮಾಲೆಯ ಬಳಿ ಸಮುದ್ರದ ತಳದಲ್ಲಿ ಮ್ಯಾಂಗನೀಸ್ ಉಂಡೆಗಳು ಇವೆ. ನೆಲ್ಲಿಕಾಯಿ- ತೆಂಗಿನಕಾಯಿಯಷ್ಟು; ಆದರೆ ಹೆಚ್ಚಿನವೆಲ್ಲ ಆಲೂಗಡ್ಡೆ ಗಾತ್ರದವು. ಇವಕ್ಕೆ ‘ಪಾಲಿಮೆಟಾಲಿಕ್ ನೊಡ್ಯೂಲ್ಸ್’ (ಬಹುಧಾತ್ವಿಕ ಉಂಡೆಗಳು) ಎನ್ನುತ್ತಾರೆ. ಅವನ್ನು ಮೇಲೆತ್ತಿ, ಕುಟ್ಟಿ ಕರಗಿಸಿದರೆ ಮ್ಯಾಂಗನೀಸ್ ಮತ್ತು ಕಬ್ಬಿಣದ ಜೊತೆ ನಿಕ್ಕೆಲ್, ಕ್ಯಾಡ್ಮಿಯಂ ಮತ್ತು ತಾಮ್ರದ ಲೋಹಗಳು ಸಿಗುತ್ತವೆ. ಈ ಮೂರೂ ಲೋಹಗಳನ್ನು ‘ನಾಳಿನ ಸಂಪತ್ತು’ ಎನ್ನುತ್ತಾರೆ- ಏಕೆಂದರೆ ಗಾಳಿಯಂತ್ರ, ಸೌರಫಲಕದಂಥ ಆಧುನಿಕ ಪರಿಸರಸ್ನೇಹಿ ಸಾಧನಗಳಿಂದ ಶಕ್ತಿಯನ್ನು ಸಂಗ್ರಹಿಸಲು ಮತ್ತು ವಿದ್ಯುತ್ಚಾಲಿತ ವಾಹನಗಳನ್ನು ಓಡಿಸಲು ಬ್ಯಾಟರಿ ಬೇಕೇ ಬೇಕು. ನಮ್ಮ ಮೊಬೈಲ್ನಿಂದ ಹಿಡಿದು, ರಡಾರ್ಗಳವರೆಗೆ ಬ್ಯಾಟರಿಗಳು ಬೇಕು. ಅದಕ್ಕೆ ಬೇಕಿದ್ದ ನಿಕ್ಕೆಲ್, ಕ್ಯಾಡ್ಮಿಯಂ ಧಾತುಗಳ ನೆಲದ ಮೇಲಿನ ನಿಕ್ಷೇಪಗಳೆಲ್ಲ ಖಾಲಿ ಆಗುತ್ತಿವೆ.

ಭಾರತ ಸರ್ಕಾರ ಇದೇ ಮೊದಲ ಬಾರಿಗೆ, ಅಂಡಮಾನ್ ಸಮುದ್ರದ ಮೂರು ಲಕ್ಷ ಚದರ ಕಿಲೊಮೀಟರ್ ವಿಸ್ತೀರ್ಣದ ತಳದಲ್ಲಿ ಹಾಸಿರುವ ಉಂಡೆಗಳನ್ನು ಮೇಲೆತ್ತಲು ಸಜ್ಜಾಗಿದೆ. ನಾಲ್ಕರಿಂದ ಆರು ಕಿಲೊಮೀಟರ್ ಆಳದ, ನಿಶ್ಚಲ ನೀರಿನಲ್ಲಿ ದಶಕೋಟಿ ವರ್ಷಗಳಿಂದ ಅತಿ ಮೆಲ್ಲಗೆ ಜಿನುಗಿ ಸಂಗ್ರಹವಾದ ಲೋಹಗಳು ಇವು. ಆ ಘೋರ ಕತ್ತಲಿನ, ಭಾರೀ ಒತ್ತಡದ, ಅತಿಶೀತಲ ಪರಿಸರದ, ಹೂಳಿನ ಪದರವನ್ನು ಚದುರಿಸಿ ಉಂಡೆಗಳನ್ನು ಬಾಚಬೇಕು. ಮನುಷ್ಯನಂತೂ ಅಲ್ಲಿಗೆ ಇಳಿಯಲಾರ. ಕೇವಲ 250 ಮೀಟರ್ ಆಳಕ್ಕಿಳಿದರೂ ಒತ್ತಡ ತಾಳಲಾರದೆ ಶ್ವಾಸಕೋಶದ ಅನಿಲ ಕಣಗಳೆಲ್ಲ ಚಿಂದಿಯಾಗಿ ರಕ್ತಕ್ಕೆ ಸೇರಿ ಸಾವು ಅಮುಕುತ್ತದೆ. ಐದು ಕಿ.ಮೀ. ಆಳಕ್ಕೆ ಇಳಿದರೆ ಆತನ ಮೇಲೆ ಸಿಮೆಂಟ್ ಚೀಲಗಳನ್ನು ಹೇರಿಕೊಂಡ 15 ಟ್ರಕ್ಗಳನ್ನು ನಿಲ್ಲಿಸಿದಷ್ಟು ಒತ್ತಡ ಬೀಳುತ್ತದೆ. ಚೆನ್ನೈನಲ್ಲಿರುವ ‘ಭಾರತೀಯ ಸಾಗರ ತಂತ್ರಜ್ಞಾನ ಸಂಸ್ಥೆ’ಯ ಸಾಹಸಿಗಳು ಎರಡು ತಿಂಗಳ ಹಿಂದೆ ‘ವರಾಹ-3’ ಹೆಸರಿನ ತೆವಳುಗಾಡಿಯನ್ನು ಅಂಡಮಾನ್ ಸಾಗರದಲ್ಲಿ ಇಳಿಸಿದರು. 1,193 ಮೀಟರ್ ಆಳದಲ್ಲಿ ಅದನ್ನು ಓಡಾಡಿಸಿ, ಒಂದಿಷ್ಟು ಉಂಡೆಗಳನ್ನು ಬಾಚಿ ಮೇಲೆತ್ತಿದ್ದಾರೆ. ಈಗ ದೊಡ್ಡ ಪ್ರಮಾಣದಲ್ಲಿ ಮೇಲೆತ್ತಲು ಗುರುತಿಸಿದ ತಾಣ ಇನ್ನೂ ದೂರದ, ಈಗಿಗಿಂತ ಐದು ಪಟ್ಟು ಆಳದ ಸಪಾಟು ಕಂದಕದಲ್ಲಿದೆ. ಅಲ್ಲಿಗೆ ವೀಕ್ಷಣಾ ಯಂತ್ರಗಳನ್ನು ಇಳಿಸುವುದೂ ಸದ್ಯಕ್ಕೆ ನಮ್ಮ ಎಂಜಿನಿಯರ್ಗಳಿಗೆ ಸವಾಲಿನ ಪ್ರಶ್ನೆಯಾಗಿದೆ.

ಜಗತ್ತಿನ ಎಲ್ಲ ಸಾಗರಗಳ ಎಲ್ಲ ತಳಗಳಲ್ಲೂ ಇದು ಹಾಸಿರುವುದಿಲ್ಲ. ಎಲ್ಲೆಲ್ಲಿ ಎಷ್ಟೆಷ್ಟು ನಿಕ್ಷೇಪಗಳಿವೆ ಎಂಬುದನ್ನು ‘ಅಂತಾರಾಷ್ಟ್ರೀಯ ತಳಸಾಗರ ಪ್ರಾಧಿಕಾರ’ (ಸೀಬೆಡ್ ಅಥಾರಿಟಿ- ಐಎಸ್ಎ) ಈಗಾಗಲೇ ಸಮೀಕ್ಷೆ ಮಾಡಿದೆ. ಯಾವ ದೇಶಕ್ಕೂ ಸೇರಿಲ್ಲದ ಜಲಧಿಯಲ್ಲೇ ಹೆಚ್ಚಿನ ನಿಕ್ಷೇಪಗಳಿದ್ದು, ಅವನ್ನು ಮೇಲಕ್ಕೆತ್ತಲು ಕಟ್ಟುನಿಟ್ಟಿನ ನಿಬಂಧನೆಗಳಿವೆ. ಅಲ್ಲಿರುವ ನಿಧಿಯು ಎಲ್ಲರ ಸೊತ್ತೂ ಆಗಿರುವುದರಿಂದ ಮತ್ತು ಅಲ್ಲಿನ ಪರಿಸರ ಅತ್ಯಂತ ಸೂಕ್ಷ್ಮ ಇರುವುದರಿಂದ ಅಂಥ ನಿಬಂಧನೆಗಳನ್ನು ಹಾಕಲಾಗಿದೆ. ಭಾರತ ತನ್ನದೇ ಸಮುದ್ರದ ಖಾಸಾ ಆರ್ಥಿಕ ವಲಯದಲ್ಲಿ ಗಣಿಗಾರಿಕೆ ಮಾಡುವುದಾದರೂ ಐಎಸ್ಎ ಅನುಮತಿ ಬೇಕೇಬೇಕು; ಪಡೆದಿದೆ.

ಆಳ ಸಾಗರಗಳ ತಳವೆಂದರೆ ಅಚ್ಚರಿಗಳ ಆಗರ. ಅಂಥ ದಟ್ಟ ಚಳಿಯಲ್ಲೂ ಬಿಸಿ ಕೊಳವೆಗಳಿವೆ. ಗಂಧಕದ ರಸದಲ್ಲೇ ಬದುಕುವ ಜೀವಿಗಳಿವೆ. ಘೋರ ಒತ್ತಡದಲ್ಲೂ ದೈತ್ಯಗಾತ್ರದ ಸ್ಕ್ವಿಡ್ಗಳಿವೆ. ಮಿನುಗುವ ಜೆಲ್ಲಿಮೀನುಗಳೂ ಪಾರಕ ಶರೀರದ ‘ಯೆತಿ’ ಏಡಿಗಳೂ ಇವೆ. ಅದು ಬೇರೆಯದೇ ಲೋಕ. ನಾವಿನ್ನೂ ನೋಡಿಲ್ಲದ ಅಲ್ಲಿನ ಆ ವಿಶಿಷ್ಟ ಜೀವಲೋಕದಲ್ಲಿ ಹಸ್ತಕ್ಷೇಪ ಬೇಡವೆಂದು ಒಕ್ಕೊರಲಿನ ಒತ್ತಡಗಳಿವೆ. ಗ್ರೀನ್ಪೀಸ್ ಯೋಧರಂತೂ ಶೋಧನೌಕೆಗಳ ಕೆಳಗೇ ನುಗ್ಗಿ ಅಹಿಂಸಾತ್ಮಕ ನೌಕಾರೋಕೊ ಮಾಡಿದ್ದರು. ಅಂಥ ಪ್ರತಿರೋಧಗಳ ನಡುವೆಯೇ 31 ತಾಣಗಳಲ್ಲಿ ಗಣಿಗಾರಿಕೆ ನಡೆಸಲು ಹನ್ನೊಂದು ದೇಶಗಳು (ಚೀನಾ, ಭಾರತ, ಪಾಪುವಾ ನ್ಯೂಗಿನಿ, ದ.ಕೊರಿಯಾ) ಗುತ್ತಿಗೆ ಪಡೆದಿವೆ. ಕೂಕ್ ಐಲ್ಯಾಂಡ್ಸ್ ಹೆಸರಿನ ಬರೀ 15 ಸಾವಿರ ಪ್ರಜೆಗಳ ದ್ವೀಪದೇಶದ ಸುತ್ತ ಭಾರೀ ದೊಡ್ಡ ನಿಕ್ಷೇಪವಿದ್ದು, ಅದಕ್ಕೂ (ಬೇನಾಮಿ) ಗುತ್ತಿಗೆ ಸಿಕ್ಕಿದೆ. ಆದರೆ ವಾಣಿಜ್ಯ ವಹಿವಾಟಿಗೆ ಬೇಕಷ್ಟು ಉಂಡೆಗಳನ್ನು ಯಾರೂ ಇನ್ನೂ ಎತ್ತಿಲ್ಲ.

ಮನುಷ್ಯರ ಗಾಳಿಯನ್ನೂ ತಟ್ಟಿಸಿಕೊಳ್ಳದ ಜೀವಲೋಕಕ್ಕೆ ಯಂತ್ರಗಳನ್ನು ಕಳಿಸಿ, ಸದ್ದು-ಬೆಳಕು, ಇಂಗಾಲದ ಬಗ್ಗಡಗಳ ಗದ್ದಲ ಎಬ್ಬಿಸಿದರೆ ಅದೆಷ್ಟು ವ್ಯಾಪಕ ಪರಿಣಾಮ ಆಗುತ್ತದೊ ಗೊತ್ತಿಲ್ಲ. ಅದನ್ನು ಊಹಿಸಿಯೇ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್, ಜರ್ಮನಿಯ ಬಿಎಮ್ಡಬ್ಲ್ಯೂ ಕಂಪನಿಗಳು ತಾವೆಂದೂ ಈ ಉಂಡೆಗಳಿಂದ ಲಭಿಸಿದ ಧಾತುಗಳನ್ನು ಬಳಸುವುದಿಲ್ಲವೆಂದು ಪ್ರತಿಜ್ಞೆ ಮಾಡಿವೆ. ಯಾರಿಗೆ ಗೊತ್ತು, ಭಾರತ ತನ್ನ ಸಾಗರತಳದ ಗಣಿಗಾರಿಕೆಯ ಸಾಹಸದ ಪ್ರಚಾರಕ್ಕೆಂದು ಯುರೋಪ್ನಲ್ಲಿ ರೋಡ್ಶೋ ಮಾಡುವಾಗ, ಪ್ರತಿಭಟನೆಯ ಶೋಗಳೂ ಮುಖಾಮುಖಿ ಆಗಬಹುದು.

ಹತ್ತು ವರ್ಷಗಳ ಹಿಂದೆ ಭಾರತದ ಆಳಸಮುದ್ರದ ಮತ್ಸ್ಯಸಂಪತ್ತನ್ನು ಬಾಚಿ ಸಾಗಿಸಲು ವಿದೇಶಿ ಕಂಪನಿಗಳಿಗೆ ಗುತ್ತಿಗೆ ನೀಡಿ ₹ 3000 ಕೋಟಿ ಗಳಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಿದ್ಧತೆ ನಡೆಸಿತ್ತು. ‘ಆಳ ಸಾಗರದಲ್ಲಿ ಆಧುನಿಕ ಬೀಸುಗತ್ತಿ’ ಹೆಸರಿನಲ್ಲಿ ಇದೇ ಅಂಕಣದಲ್ಲಿ (ವಿ.ವಿ., 12.2.2015) ಚರ್ಚಿಸಲಾಗಿತ್ತು. ಅಂದು ನಮ್ಮ ಎಲ್ಲ ಮೀನುಗಾರರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಆ ಸಂಪತ್ತೆಲ್ಲ ನಮ್ಮಲ್ಲೇ ಉಳಿಯುವಂತಾಯಿತು. ದೂರದ ಅಂಡಮಾನ್ ದ್ವೀಪಮಾಲಿಕೆಯಲ್ಲಿ ಈಗಿನ ಈ ಎರಡನೇ ಬೀಸುಗತ್ತಿಯ ಕುರಿತು ಪರವಿರೋಧಗಳ ಸೊಲ್ಲು ಇನ್ನೂ ಎದ್ದಂತಿಲ್ಲ. ನಾಳಿನ ಭವಿಷ್ಯವನ್ನು ಉಜ್ವಲಗೊಳಿಸಲು ನಾಡಿದ್ದಿನ ಭವಿಷ್ಯವನ್ನು ಬಲಿಕೊಡುವ ಬಗ್ಗೆ ಅಲ್ಲಿನವರು ಧ್ವನಿ ಎತ್ತಿದರೂ ಅದು ದಿಲ್ಲಿಗೆ ಕೇಳಿಸುವ ಸಾಧ್ಯತೆ ಇಲ್ಲ. ಗ್ರೇಟ್ ನಿಕೊಬಾರ್ ದ್ವೀಪದಲ್ಲಿ ಈಗಾಗಲೇ ಅಭಿವೃದ್ಧಿಯ ಮಹಾರಥ ಚಲಿಸತೊಡಗಿದೆ. ₹ 72 ಸಾವಿರ ಕೋಟಿ ವೆಚ್ಚದಲ್ಲಿ ಆಧುನಿಕ ಬಂದರು, ವಿಮಾನ ನಿಲ್ದಾಣ, ಎರಡು ನಗರಗಳು- ಹೀಗೆ ಅಲ್ಲಿ ನಮ್ಮದೇ ಸ್ವಂತದ ಹಾಂಗ್ಕಾಂಗ್ ಸೃಷ್ಟಿಯಾಗಲಿದೆ. ಅಲ್ಲಿನ ವಿಶಿಷ್ಟ ಹವಳದ ದಿಬ್ಬ, ಕಡಲಾಮೆ ಗುಂಪು, ಕಾಂಡ್ಲಕಾಡು, ಪಕ್ಷಿಸಮೂಹಕ್ಕೆಲ್ಲ ನಾಳೆಗಳೇ ಮಾಯವಾಗಲಿವೆ.

ಮಹಾಕುಂಭ ಎಂದರೆ ಹಿಮಾಲಯದಿಂದ ಹರಿದುಬರುವ ಪುಣ್ಯಧಾರೆಯಲ್ಲಿ ಮುಳುಗಿ ಪಾಪವನ್ನು ತೊಳೆದುಕೊಳ್ಳಲು ಬಯಸುವವರ ಮೇಳ. ಅತ್ತ, ನಿಕೊಬಾರ್ ಕಡೆ ಹರಿದುಬರುವ ಧನಧಾರೆಯಲ್ಲಿ ಯಂತ್ರಗಳ ಮೇಳ ಮೈದಳೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.