ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ: ‘ಪ್ರಭುತ್ವ–ಸಂವಿಧಾನದ ಆಶಯ’ ಸಮ್ಮೇಳನ ಅಕ್ಟೋಬರ್ 5ರಿಂದ

Published : 30 ಸೆಪ್ಟೆಂಬರ್ 2024, 11:28 IST
Last Updated : 30 ಸೆಪ್ಟೆಂಬರ್ 2024, 11:28 IST
ಫಾಲೋ ಮಾಡಿ
Comments

ಮೈಸೂರು: ದಸರಾ ಅಂಗವಾಗಿ ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್‌ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದಿಂದ ‘ಸಂವಿಧಾನ ಅಂಗೀಕಾರದ ಅಮೃತ ಮಹೋತ್ಸವ’ದ ಪ್ರಯುಕ್ತ ‘ಪ್ರಭುತ್ವ ಮತ್ತು ಸಂವಿಧಾನದ ಆಶಯ’ ಎಂಬ ವಿಷಯದ ಕುರಿತು ಅ.5 ಹಾಗೂ 6ರಂದು ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.

‘ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶ ನಮ್ಮದು. ಮಾನಸಗಂಗೋತ್ರಿಯ ಸೆನೆಟ್‌ ಭವನದಲ್ಲಿ ನಡೆಯಲಿದ್ದು, ಅ.5ರಂದು ಬೆಳಿಗ್ಗೆ 10.30ಕ್ಕೆ ನವದೆಹಲಿಯ ಪತ್ರಕರ್ತ ಮನೋಜ್‌ ಮಿತ್ತ ಉದ್ಘಾಟಿಸುವರು. ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ ಅಧ್ಯಕ್ಷತೆ ವಹಿಸುವರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

‘ಮಧ್ಯಾಹ್ನ 12.30ಕ್ಕೆ ಸಮಗ್ರ ಗೋಷ್ಠಿಯಲ್ಲಿ ‘ಪ್ರಭುತ್ವ ಮತ್ತ ಸಂವಿಧಾನದ ಆಶಯಗಳು’ ಕುರಿತು ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಸಂಜಯ್‌ ಹೆಗ್ಡೆ ಮಾತನಾಡುವರು. ಕೇಂದ್ರ ಸರ್ಕಾರದ ಸಂಪುಟ ಸಚಿವಾಲಯದ ವಿಶ್ರಾಂತ ಜಂಟಿ ಕಾರ್ಯದರ್ಶಿ ರವಿ ಜೋಶಿ ಅಧ್ಯಕ್ಷತೆ ವಹಿಸುವರು. ನಂತರದ ಗೋಷ್ಠಿಯಲ್ಲಿ ‘ಸಂವಿಧಾನದ ಸಾಂಸ್ಕೃತಿಕ ಮೌಲ್ಯಗಳು’ ಕುರಿತು ಪ್ರೊ.ರಹಮತ್ ತರೀಕೆರೆ, ‘ನಾಗರಿಕ ಸಮಾಜ ಮತ್ತು ಪ್ರಜಾಪ್ರಭುತ್ವ’ ಬಗ್ಗೆ ಪ್ರೊ.ಎ.ರಾಮಯ್ಯ ವಿಷಯ ಮಂಡಿಸುವರು. ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ ಅಧ್ಯಕ್ಷತೆ ವಹಿಸುವರು’ ಎಂದರು.

‘ಸಂಜೆ 4.15ರ ಗೋಷ್ಠಿಯಲ್ಲಿ ‘ಹಿಂದುಳಿದ ವರ್ಗಗಳು ಮತ್ತು ಸಂವಿಧಾನ’ ಕುರಿತ ಗೋಷ್ಠಿಯಲ್ಲಿ ಪ್ರೊ. ಪೃಥ್ವಿದತ್ತ ಚಂದ್ರಶೋಭಿ, ‘ಅಲ್ಪಸಂಖ್ಯಾತ ಸಮುದಾಯಗಳು ಹಾಗೂ ಸಂವಿಧಾನ’ದ ಬಗ್ಗೆ ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡುವರು’ ಎಂದು ಮಾಹಿತಿ ನೀಡಿದರು.

2ನೇ ದಿನ: ‘ಅ.6ರಂದು ಬೆಳಿಗ್ಗೆ 10.30ಕ್ಕೆ ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಪ್ರೊ.ಸುಧೀರ್ ಕೃಷ್ಣಸ್ವಾಮಿ ಅಧ್ಯಕ್ಷತೆಯಲ್ಲಿ ‘ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ’ ಕುರಿತು ವಕೀಲ ರವಿವರ್ಮಕುಮಾರ್, ಮಧ್ಯಾಹ್ನ 12ಕ್ಕೆಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಡಿ.ಆನಂದ್ ಅಧ್ಯಕ್ಷತೆಯಲ್ಲಿ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗಳು ಮತ್ತು ಸಂವಿಧಾನ’ದ ಬಗ್ಗೆ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಎನ್. ಸುಕುಮಾರ್ ಮಾತನಾಡುವರು. ಹೋರಾಟಗಾರ್ತಿ ದು.ಸರಸ್ವತಿ ‘ಮಹಿಳೆ ಮತ್ತು ಸಂವಿಧಾನ’ ಕುರಿತು ವಿಷಯ ಮಂಡಿಸುವರು’ ಎಂದರು.

‘4ನೇ ಗೋಷ್ಠಿಯಲ್ಲಿ ಅಭಿವೃದ್ಧಿ ಅಧ್ಯಯನ ಸಂಸ್ಥೆ ವಿಶ್ರಾಂತ ನಿರ್ದೇಶಕ ಪ್ರೊ.ವಿ.ಕೆ.ನಟರಾಜು ಅಧ್ಯಕ್ಷತೆಯಲ್ಲಿ ‘ಸಂವಿಧಾನದ ಆಶಯ ಮತ್ತು ಆರ್ಥಿಕತೆ’ ಕುರಿತು ಬೆಂಗಳೂರಿನ ನೀತಿ ಅಧ್ಯಯನ ಮತ್ತು ಬಜೆಟ್‌ ಕೇಂದ್ರದ ಪ್ರೊ.ವಿನೋದ್ ವ್ಯಾಸುಲು, ಆರ್ಥಿಕ ತಜ್ಞ ಪ್ರೊ.ಟಿ.ಆರ್.ಚಂದ್ರಶೇಖರ್ ಕರ್ನಾಟಕದ ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಕುರಿತು ಮಾತನಾಡಲಿದ್ದಾರೆ’ ಎಂದು ವಿವರಿಸಿದರು.

ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಜೆ.ಸೋಮಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT