ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Mysore Dasara 2024: ಅ.4ರಿಂದ ದಸರಾ ಚಲನಚಿತ್ರೋತ್ಸವ

117 ಚಿತ್ರಗಳ ಪ್ರದರ್ಶನ: ಕಿರುಚಿತ್ರ ಸ್ಪರ್ಧೆ ಆಯೋಜನೆ
Published : 24 ಸೆಪ್ಟೆಂಬರ್ 2024, 13:56 IST
Last Updated : 24 ಸೆಪ್ಟೆಂಬರ್ 2024, 13:56 IST
ಫಾಲೋ ಮಾಡಿ
Comments

ಮೈಸೂರು: ‘ದಸರಾ ಚಲನಚಿತ್ರೋತ್ಸವದಲ್ಲಿ 117 ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ವೈವಿಧ್ಯಮಯವಾಗಿವೆ’ ಎಂದು ದಸರಾ ಚಲನಚಿತ್ರೋತ್ಸವ ಸಮಿತಿ ಉಪ ವಿಶೇಷಾಧಿಕಾರಿಯೂ ಆದ ಡಿಸಿಎಫ್‌ ಕೆ.ಎನ್‌.ಬಸವರಾಜು ತಿಳಿಸಿದರು.

ಅಶೋಕ‍ಪುರಂನ ಅರಣ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅ.3ರಂದು ಉತ್ಸವಕ್ಕೆ ಚಾಲನೆ ಸಿಗಲಿದ್ದು, 4ರಿಂದ 10ರವರೆಗೆ ‘ಡಿಆರ್‌ಸಿ’, ‘ಐನಾಕ್ಸ್’ ಮಲ್ಟಿಪ್ಲೆಕ್ಸ್‌ಗಳಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಚಿತ್ರಗಳು ಪ್ರದರ್ಶನಗೊಳ್ಳಲಿವೆ’ ಎಂದರು.

‘ಪ್ರತಿಷ್ಠಿತ ‘ಕಾನ್’ ಚಲನಚಿತ್ರೋತ್ಸವದ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮೈಸೂರಿನ ಚಿದಾನಂದ್‌ ಎಸ್‌.ನಾಯಕ್‌ ಅವರ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಚಿತ್ರವೂ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ’ ಎಂದು ತಿಳಿಸಿದರು.

‘ಮಾಲ್‌ ಆಫ್‌ ಮೈಸೂರಿನಲ್ಲಿ ಸಿನಿಮಾ ಛಾಯಾಚಿತ್ರಗಳ ಪ್ರದರ್ಶನವಿರಲಿದ್ದು, ನಿರ್ದೇಶಕಿ ಸುಮನಾ ಕಿತ್ತೂರು ಪಾಲ್ಗೊಳ್ಳುವರು. ಐನಾಕ್ಸ್‌ನಲ್ಲಿ ಕಿರುಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, 10 ಚಿತ್ರಗಳಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಅ.8ರಂದು ನಟ ಮಂಡ್ಯ ರಮೇಶ್‌ ಬಹುಮಾನ ವಿತರಣೆ ಮಾಡುವರು’ ಎಂದು ಮಾಹಿತಿ ನೀಡಿದರು.

‘ಓಲ್ಡ್‌ ಈಸ್‌ ಗೋಲ್ಡ್‌ ಶೀರ್ಷಿಕೆಯಡಿ ರಾಜ್‌ಕುಮಾರ್‌, ವಿಷ್ಣುವರ್ಧನ್, ಅಂಬರೀಷ್, ಈಚೆಗೆ ಮೃತಪಟ್ಟ ನಟಿ ಅಪರ್ಣಾ ಅವರ ಚಿತ್ರಗಳೂ ಪ್ರದರ್ಶನಗೊಳ್ಳುತ್ತಿವೆ. ಕನ್ನಡ, ಭಾರತೀಯ, ವಿಶ್ವ ಸಿನಿಮಾಗಳಿವೆ. ಅದಲ್ಲದೆ ಮಹಿಳಾ ನಿರ್ದೇಶನದ ಚಿತ್ರಗಳು ಹಾಗೂ ಮಕ್ಕಳ ಚಿತ್ರಗಳು ಪ್ರದರ್ಶನ ಪಟ್ಟಿಯಲ್ಲಿ ಸ್ಥಾನ ಪಡೆದಿವೆ’ ಎಂದರು.

‘ಭಾರತೀಯ ಸಿನಿಮಾಗಳಲ್ಲಿ ಪ್ರಾದೇಶಿಕ ಭಾಷೆ ಚಿತ್ರಗಳ ಜೊತೆ ಬುಡಕಟ್ಟು ಭಾಷೆಗಳಾದ ಬೊಡೊ, ಜಾನ್ಸಿಯಾ, ಕೊಡವ ಹಾಗೂ ಅರೆಭಾಷೆ ಚಿತ್ರಗಳೂ ಬಿತ್ತರಗೊಳ್ಳುತ್ತಿವೆ’ ಎಂದು ತಿಳಿಸಿದರು.

‘ದಸರಾ ಗಜಪಡೆಯ ಮಾವುತ– ಕಾವಾಡಿಗರಿಗೆ ವಿಶೇಷ ಚಲನಚಿತ್ರ ಪ್ರದರ್ಶನ ಇರಲಿದೆ. ಅಂಗವಿಕಲರಿಗೆ ವಿಶೇಷ ಚಿತ್ರ ಪ್ರ‌ದರ್ಶನ ಏರ್ಪಡಿಸಲಾಗಿದೆ’ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ರಂಗೇಗೌಡ, ಕಾರ್ಯದರ್ಶಿ ಟಿ.ಕೆ.ಹರೀಶ್‌ ಪಾಲ್ಗೊಂಡಿದ್ದರು.

ಆನ್‌ಲೈನ್‌ನಲ್ಲಿ ಪಾಸ್‌

‘ಚಲನಚಿತ್ರೋತ್ಸವದ ಪ್ರವೇಶ ಪಾಸ್‌ ಅನ್ನು ಆನ್‌ಲೈನ್‌ ಮೂಲಕ ಸೆ.26ರಿಂದ ಅ.10ರವರೆಗೆ ಪಡೆಯಬಹುದು. ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರಿಗೆ ₹300 ಹಾಗೂ ಇತರರಿಗೆ ₹500 ನಿಗದಿ ಮಾಡಲಾಗಿದೆ’ ಎಂದು ಬಸವರಾಜ ತಿಳಿಸಿದರು. ‘ವಾರ್ತಾ ಭವನದಲ್ಲಿಯೂ ಸೆ.26ರಿಂದ ಪಾಸ್ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನ ‘MyDFF 2024’ ಮೂಲಕ ಫಾಲೋ ಮಾಡಬಹುದು. ಮೊ.ಸಂ. 78925 43852 ಸಂಪರ್ಕಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT