ಮೈಸೂರು: ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಮಂಗಳವಾರ ನಡೆದ ಕುಶಾಲತೋಪಿನ ಅಂತಿಮ ತಾಲೀಮಿನಲ್ಲಿ ‘ಅಭಿಮನ್ಯು’ ನೇತೃತ್ವದ ಗಜಪಡೆ ಹಾಗೂ ಅಶ್ವದಳಗಳು ‘ಕುಶಾಲತೋಪು’ ಸಿಡಿಮದ್ದಿನ ಮೊರೆತಕ್ಕೆ ಅಂಜದೆ ಧೈರ್ಯ ಪ್ರದರ್ಶಿಸಿದವು. ‘ಜಂಬೂಸವಾರಿಗೆ ನಾವು ಸಿದ್ದ’ ಎಂದು ಸಾರಿದವು.
ಜಂಬೂಸವಾರಿಯ ದಿನವಾದ ವಿಜಯ ದಶಮಿಯಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ನಂತರ 21 ಸುತ್ತಿನ ಕುಶಾಲ ತೋಪು ಸಿಡಿಸುವಾಗ ಹೊಮ್ಮುವ ಕಿವಿಗಡಚಿಕ್ಕುವ ಶಬ್ದಕ್ಕೆ ಕುದುರೆ, ಆನೆಗಳು ಬೆಚ್ಚದಂತೆ ಮಾಡಲು, ಪೂರ್ವಾಭ್ಯಾಸ ನೀಡುವುದು ವಾಡಿಕೆ. ಅದರಂತೆ 3ನೇ ತಾಲೀಮು ಯಶಸ್ವಿಯಾಗಿ ನಡೆಯಿತು.
ಹಿರಿಯ ಆನೆ ‘ವರಲಕ್ಷ್ಮೀ’ ಹೊರತು ಪಡಿಸಿ ಉಳಿದ 13 ಆನೆ ಹಾಗೂ ಅಶ್ವಪಡೆಯ 38 ಕುದುರೆಗಳು ತಾಲೀಮಿನಲ್ಲಿ ಪಾಲ್ಗೊಂಡವು. ‘ಹಿರಣ್ಯ’ ಎರಡು ಹೆಜ್ಜೆ ಹಿಂದಡಿಯಿಟ್ಟರೆ, ಉಳಿದೆಲ್ಲವೂ ಕದಲದೇ ನಿಂತು ಗಟ್ಟಿತನವನ್ನು ಮೆರೆದವು. ಈ ಮೊದಲಿನ ತಾಲೀಮುಗಳಲ್ಲಿ ಸಾಲಿನಲ್ಲಿ ನಿಲ್ಲದೆ ಪರದಾಡಿದ್ದಳು ಈ ಬಾರಿಯೂ ಬೆದರಿದಳು. ಸಾಲಿನಿಂದ ಬೇರ್ಪಡಿಸಿ, ಹಿಂದೆ ನಿಲ್ಲಿಸಲಾಗಿತ್ತು. ಗಾಬರಿಯಾದಾಗ ಕಾವಾಡಿಗಳು ನೇವರಿಸಿದರು. ಉಳಿದೆರಡು ಸುತ್ತಿನ ಸಿಡಿಮದ್ದು ಸಿಡಿವಾಗ ಸುಧಾರಿಸಿಕೊಂಡಳು. ಮೂರನೇ ಸಿಡಿಮದ್ದು ಸಿಡಿಯುವಾಗ ಹಿರಣ್ಯ ಮೊದಲ ಸಾಲಿನಲ್ಲಿ ಸೇರಿಕೊಂಡಳು.
7 ಫಿರಂಗಿಗಳಲ್ಲಿ ಅಂತಿಮ ಸುತ್ತಿನ ಕುಶಾಲತೋಪು ಸಿಡಿಯುವಾಗ ಕ್ಯಾಪ್ಟನ್ ‘ಅಭಿಮನ್ಯು’ ಜೊತೆ ಎಲ್ಲ ಆನೆಗಳು ಫಿರಂಗಿಯತ್ತ ಮುನ್ನುಗ್ಗಿ ಗಟ್ಟಿತನ ಪ್ರದರ್ಶಿಸಿ ಸಿಡಿಮದ್ದಿನ ವಾಸನೆಯನ್ನು ಆಘ್ರಾಣಿಸಿ, ಸೊಂಡಿಲೆತ್ತಿ, ‘ನಾವು ಸಿದ್ಧ’ ಎಂದು ಒಗ್ಗಟ್ಟು ಪ್ರದರ್ಶಿಸಿದವು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ, ಹುಲಿ ಯೋಜನೆಯ ನಿರ್ದೇಶಕ ಪಿ.ರಮೇಶ್ ಕುಮಾರ್, ಡಿಸಿಎಫ್ ಐ.ಬಿ.ಪ್ರಭುಗೌಡ, ಡಿಸಿಪಿ ಎಂ.ಮುತ್ತುರಾಜ್, ಮೌಂಟೆಡ್ ಕಮಾಂಡೆಂಟ್ ವಿ.ಶೈಲೇಂದ್ರ, ಎಸಿಪಿಗಳಾದ ಶಾಂತಮಲ್ಲಪ್ಪ, ಸತೀಶ್, ಅರಮನೆ ಭದ್ರತಾ ವಿಭಾಗದ ಎಸಿಪಿ ಚಂದ್ರಶೇಖರ್, ಆರ್‌ಎಫ್‍ಓ ಸಂತೋಷ್ ಹೂಗಾರ್, ಪಶುವೈದ್ಯರಾದ ಡಾ.ಮುಜೀಬ್ ರೆಹಮಾನ್, ಡಾ.ಮಿರ್ಜಾ ವಾಸಿಂ, ಸಹಾಯಕರಾದ ರಂಗರಾಜು, ಅಕ್ರಂ ಪಾಲ್ಗೊಂಡಿದ್ದರು.
ಎರಡು ಹೆಜ್ಜೆ ಹಿಂದಡಿಯಿಟ್ಟ ಹಿರಣ್ಯ ಸಮಾಧಾನಪಡಿಸಿದ ಕಾವಾಡಿಗಳು ಮೂರನೇ ಸುತ್ತಿನಲ್ಲಿ ಧೈರ್ಯ ಪ್ರದರ್ಶನ
ಕುಶಾಲತೋಪಿನ ಅಂತಿಮ ತಾಲೀಮು ಯಶಸ್ವಿಯಾಗಿ ನಡೆದಿದೆ. ಆನೆ ಕುದುರೆಗಳ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಧೈರ್ಯ ತೋರಿವೆಸೀಮಾ ಲಾಟ್ಕರ್ ನಗರ ಪೊಲೀಸ್ ಆಯುಕ್ತೆ
‘ಮತ್ತೊಂದು ತಾಲೀಮಿನ ಸಾಧ್ಯತೆ’
‘ತಾಲೀಮಿನಲ್ಲಿ 13 ಆನೆಗಳು ಪಾಲ್ಗೊಂಡಿದ್ದವು. ಈಗಾಗಲೇ ಜಂಬೂಸವಾರಿಗೆ ಗಜಪಡೆ ಸಜ್ಜುಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ವಿವಿಧ ಹಂತದ ತಾಲೀಮು ನಡೆದಿದೆ. ಜಂಬೂಸವಾರಿಗೂ ಎರಡು ದಿನ ಮುನ್ನ ಮತ್ತೊಂದು ತಾಲೀಮು ನಡೆಸಲಾಗುವುದು. ನಿಶಾನೆ ಹಾಗೂ ನೌಪತ್ ಆನೆ ಯಾವುದೆಂದು ನಾಲ್ಕೈದು ದಿನದಲ್ಲಿ ಪ್ರಕಟಿಸಲಾಗುವುದು’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ ತಿಳಿಸಿದರು. ಐ.ಬಿ.ಪ್ರಭುಗೌಡ ‘ಮೂರನೇ ತಾಲೀಮಿನಲ್ಲಿ ಯಾವ ಆನೆ ಭಯಪಟ್ಟಿಲ್ಲ. ಏಕಾಏಕಿ ಶಬ್ದ ಬಂದರೆ ಜನರು ಬೆಚ್ಚುವಂತೆ ಆನೆಗಳು ಆರಂಭದಲ್ಲಿ ಬೆಚ್ಚಿದವು. ಸುಧಾರಿಸಿಕೊಂಡು ಸಿಡಿಮದ್ದು ಸಿಡಿಯುತ್ತಿದ್ದರೂ ಫಿರಂಗಿಯತ್ತ ಬಂದಿವೆ. ನಾವೇ ಆನೆಗಳನ್ನು ತಡೆದು ನಿಲ್ಲಿಸುವಂತಾಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.