ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಿನದ ಸೂಕ್ತಿ: ಚಾಡಿಕೋರ ಹಾವಿಗಿಂತಲೂ ಅಪಾಯ!

Published : 29 ಸೆಪ್ಟೆಂಬರ್ 2020, 0:55 IST
ಫಾಲೋ ಮಾಡಿ
Comments

ಪಾದಾಹತೋsಪಿ ದೃಢದಂಢಸಮಾಹತೋsಪಿ

ಯಂ ದಂಷ್ಟ್ರಯಾ ಸ್ಪೃಶತಿ ತಂ ಕಿಲ ಹಂತಿ ಸರ್ಪಃ ।

ಕೋಪ್ಯೇಷ ಏವ ಪಿಶುನೋಗ್ರಮನುಷ್ಯಧರ್ಮಃ

ಕರ್ಣೇ ಪರಂ ಸ್ಪೃಶತಿ ಹಂತಿ ಪರಂ ಸಮೂಲಮ್‌ ।।

ಇದರ ತಾತ್ಪರ್ಯ ಹೀಗೆ:

‘ಕಾಲಿನಿಂದ ಒದ್ದರೂ ಬಲವಾದ ಕೋಲಿನಿಂದ ಹೊಡೆದರೂ ಹಾವು ಏನು ಮಾಡುತ್ತದೆ? ಯಾರನ್ನು ಅದು ಕಚ್ಚುತ್ತದೆಯೋ ಅವನನ್ನೇ ಕೊಲ್ಲುತ್ತದೆ. ಆದರೆ ಚಾಡಿ ಹೇಳುವ ಕೆಟ್ಟ ಮನುಷ್ಯನ ಧರ್ಮ ಮಾತ್ರ ವಿಚಿತ್ರವಾಗಿದೆ! ಒಬ್ಬನನ್ನು ಅವನು ಕಿವಿಯಲ್ಲಿ ಕಚ್ಚುತ್ತಾನೆ, ಮತ್ತೊಬ್ಬನ್ನು ಬುಡಸಹಿತ ನಾಶಪಡಿಸುತ್ತಾನೆ.’

ಮನುಷ್ಯನಿಗೆ ಮಾತ್ರವೇ ಇರುವ ದುಷ್ಟತನಗಳಲ್ಲಿ ಒಂದು ಚಾಡಿಕೋರತನ. ಹಾವಿನ ವಿಷಕ್ಕಿಂತಲೂ ಅತ್ಯಂತ ಅಪಾಯಕಾರಿ ಎಂದರೆ ಚಾಡಿಕೋರ ಎನ್ನುತ್ತಿದೆ ಸುಭಾಷಿತ.

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಬಗ್ಗೆ, ಅವನ ಅನುಪಸ್ಥಿತಿಯಲ್ಲಿ, ಮಾತನಾಡುವ ಮಾತುಗಳೇ ಚಾಡಿಯ ಮಾತುಗಳು ಎಂದೆನಿಸಿಕೊಳ್ಳುತ್ತದೆ. ಈ ಮಾತುಗಳಲ್ಲಿ ಸುಳ್ಳಿನ ಅಂಶವೇ ಹೆಚ್ಚಾಗಿರುತ್ತದೆ.

ಹಾವೊಂದನ್ನು ಯಾರಾದರೂ ಕಾಲಿನಿಂದ ಒದ್ದರು, ಕೋಲಿನಿಂದ ಹೊಡೆದರು ಎಂದಿಟ್ಟುಕೊಳ್ಳಿ. ಆಗ ಅದು ತನ್ನ ಮೇಲೆ ದಾಳಿ ಮಾಡಿದವರನ್ನು ಕಚ್ಚುತ್ತದೆ ಎಂದೂ ಊಹಿಸೋಣ. ಅದು ಯಾರನ್ನು ಕಚ್ಚುತ್ತದೆಯೋ, ಅವರನ್ನೇ ಕೊಲ್ಲುತ್ತದೆ; ಎಂದರೆ ಅದರಿಂದ ಕಚ್ಚಿಸಿಕೊಂಡವನೇ ಅದರ ವಿಷದಿಂದ ಸಾಯುತ್ತಾನಲ್ಲವೆ?

ಆದರೆ ಚಾಡಿಕೋರ ಮಾಡುವ ಅಪಾಯ ಇದಕ್ಕಿಂತಲೂ ಅಪಾಯ. ಚಾಡಿ ಹೇಳುವುದನ್ನು ’ಕಿವಿ ಕಚ್ಚುವುದು‘ ಎಂದೂ ಹೇಳುವ ರೂಢಿ ಉಂಟು. ಈ ಚಾಡಿಕೋರ ಏನು ಮಾಡುತ್ತಾನೆ? ಅವನು ನಮ್ಮ ಸಮ್ಮುಖದಲ್ಲಿ ಇಲ್ಲದ ವ್ಯಕ್ತಿಯ ಬಗ್ಗೆ ನಮ್ಮ ಕಿವಿಯನ್ನು ಕಚ್ಚುತ್ತಾನೆ; ಎಂದರೆ ಅವನ ಬಗ್ಗೆ ನಮ್ಮ ಕಿವಿಯಲ್ಲಿ ಚಾಡಿಯ ಮಾತುಗಳನ್ನು ಹೇಳುತ್ತಾನೆ. ಹೀಗೆ ಅವನ ಬಗ್ಗೆ ನಾವು ಕೆಟ್ಟ ಮಾತುಗಳನ್ನು ಕೇಳಿದ ಮೇಲೆ – ಆ ಮಾತುಗಳನ್ನು ನಾವು ನಂಬಿದರೆ – ಅವನ ಬಗ್ಗೆ ನಮ್ಮಲ್ಲಿ ಈ ಮೊದಲಿನ ಭಾವನೆ ಬದಲಾಗುತ್ತದೆ; ಅವನು ಈಗ ನಮ್ಮ ದೃಷ್ಟಿಯಲ್ಲಿ ’ಸತ್ತಿದ್ದಾನೆ‘. ಎಂದರೆ ಏನಾಯಿತು? ಅವನು ಕಚ್ಚಿದ್ದು ಒಬ್ಬರನ್ನು; ಯಾರನ್ನು? ನಮ್ಮನ್ನು. ಆದರೆ ಸತ್ತಿದ್ದು ಇನ್ನೊಬ್ಬ! ಯಾರು? ಯಾವ ವ್ಯಕ್ತಿ ಚಾಡಿಗೆ ವಸ್ತುವಾಗಿದ್ದಾನೋ ಅವನು! ಚಾಡಿಕೋರನ ಉದ್ದೇಶವಾದೂ ಇದೇ ಆಗಿರುತ್ತದೆ; ಆ ವ್ಯಕ್ತಿಗೆ ದ್ರೋಹ ಮಾಡುವುದು, ಅಪಾಯ ತಂದೊಡ್ಡುವುದು. ವಾಸ್ತವದಲ್ಲಿ ಅವನು ನಮಗೂ ದ್ರೋಹ ಮಾಡುತ್ತಿರುತ್ತಾನೆ.

ಹಾವು ಯಾರನ್ನು ಕಚ್ಚುತ್ತದೆಯೋ ಅವನೇ ಸಾಯುತ್ತಾನೆ; ಆದರೆ ಚಾಡಿಕೋರ ಕಚ್ಚುವುದು ಒಬ್ಬನನ್ನು, ಅದರ ಕಾರಣದಿಂದ ಸಾಯುವುದು ಮಾತ್ರ ಇನ್ನೊಬ್ಬ! ಎಂದರೆ ಹಾವಿಗಿಂತಲೂ ಚಾಡಿಕೋರ ತುಂಬ ಅಪಾಯಕಾರಿ ಎಂದಾಯಿತು.

ಇದರ ತಾತ್ಪರ್ಯ ಏನು?

ಚಾಡಿಕೋರರಿಂದ ಎಚ್ಚರವಾಗಿರೋಣ; ನಮ್ಮ ಕಿವಿಗಳನ್ನು ಅವರಿಗೆ ಸುಲಭವಾಗಿ ಒಪ್ಪಿಸದಿರೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT