ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ತುಂಬಿದ ಕೊಡ ತುಳುಕದು

Last Updated 29 ಜುಲೈ 2020, 1:05 IST
ಅಕ್ಷರ ಗಾತ್ರ

ಗುರೋರ್ಗಿರಃ ಪಂಚ ದಿನಾನ್ಯಧೀತ್ಯ ವೇದಾಂತಶಾಸ್ತ್ರಾಣಿ ದಿನದ್ವಯಂ ಚ ।

ತತಃ ಸಮಾಘ್ರಾಯ ಚ ತರ್ಕವಾದಾನ್‌ ಸಮಾಗತಾಃ ಕುಕ್ಕುಟಮಿಶ್ರಪಾದಾಃ ।।

ಇದರ ತಾತ್ಪರ್ಯ ಹೀಗೆ:

‘ಐದು ದಿನಗಳಲ್ಲಿ ಗುರುವಿನ ಪಾಠವನ್ನು ಓದಿ, ವೇದಾಂತಪಾಠಗಳನ್ನು ಎರಡು ದಿನಗಳಲ್ಲಿ ಓದಿ, ತರ್ಕವಾದಗಳನ್ನು ಕೇವಲ ಮೂಸಿ ನೋಡಿ, ಈ ಕುಕ್ಕಟಮಿಶ್ರಪಾದರು ದಯಮಾಡಿಸಿದ್ದಾರೆ!‘

ದಿಟ, ಇಷ್ಟನ್ನು ಮಾತ್ರ ಹೇಳಿದರೆ ಅರ್ಥ ಸ್ಪಷ್ಟವಾಗಲಾರದು; ಆದರೆ ಇಂದಿನ ವಿದ್ಯಮಾನದ ಹಿನ್ನೆಲೆಯಲ್ಲೂ ಇದರ ಅರ್ಥವನ್ನು ಕಂಡುಕೊಳ್ಳಬಹುದು.

ಸಾಮಾಜಿಕ ಜಾಲತಾಣಗಳಂಥ ಸಾರ್ವಜನಿಕ ವೇದಿಕೆಗಳಲ್ಲಿ ಬಹುಪಾಲು ಸಂದರ್ಭಗಳಲ್ಲಿ ನಡೆಯುವ ’ವಾದ–ವಿವಾದ‘ಗಳ ಹಿನ್ನೆಲೆಯನ್ನು ಈ ಪದ್ಯ ಚೆನ್ನಾಗಿ ವರ್ಣಿಸಿದೆ. ಕೆಲವರು ಎಲ್ಲ ವಿಷಯಗಳ ಬಗ್ಗೆಯೂ ಅಧಿಕಾರವಾಣಿಯಿಂದ ಬರೆಯುತ್ತಲೇ ಇರುತ್ತಾರೆ, ಮಾತನಾಡುತ್ತಲೇ ಇರುತ್ತಾರೆ. ಆದರೆ ಅವರ ವಿಷಯತಜ್ಞತೆ ಮಾತ್ರ ಶೂನ್ಯ; ಎಲ್ಲ ವಿಷಯಗಳ ಬಗ್ಗೆಯೂ ತೀರ್ಪನ್ನು ಕೊಡುವಂತೆ ಪ್ರತಿಪಾದಿಸುತ್ತಿರುತ್ತಾರೆ – ಯಾವ ವಿಷಯದ ಬಗ್ಗೆಯೂ ಸ್ವಲ್ಪವೂ ತಿಳಿವಳಿಕೆ ಇಲ್ಲದೆಯೇ! ಇಂಥವರು ಕೇವಲ ನಮ್ಮ ಕಾಲದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವವರಲ್ಲ, ಎಲ್ಲ ಕಾಲದಲ್ಲೂ ಇದ್ದರು – ಎನ್ನುವುದನ್ನು ಪದ್ಯ ಎತ್ತಿತೋರಿಸುತ್ತಿದೆ.

ಹಿಂದಿನ ಕಾಲದಲ್ಲಿ ವಿದ್ವಾಂಸರನ್ನು, ಜ್ಞಾನಿಗಳನ್ನು ’ಪಾದ‘ ಎಂಬ ಪದದ ಸಂಬೋಧಿಸಿ ಗೌರವಿಸುತ್ತಿದ್ದರು. ಉದಾಹರಣೆಗೆ, ಅಭಿನವಗುಪ್ತರನ್ನು ’ಅಭಿನವಗುಪ್ತಪಾದ‘ ಎಂದೇ ಗೌರವದಿಂದ ಪರಂಪರೆಯಲ್ಲಿ ಕಾಣಲಾಗಿದೆ. ಅಭಿನವಗುಪ್ತಪಾದರು ನಮ್ಮ ದೇಶ ಕಂಡಿರುವ ಮಹಾಪ್ರತಿಭಾಶಾಲಿಗಳು; ಹಲವು ಶಾಸ್ತ್ರಗಳಲ್ಲಿ ಅವರದ್ದೇ ಕೊನೆ ಮಾತು ಎನ್ನುವಂಥ ಧೀಮಂತಿಕೆ ಅವರದ್ದು.

ನಮ್ಮ ಕಾಲದ 'ಸೋಶಿಯಲ್‌ ಮೀಡಿಯಾ ಯೂನಿವರ್ಸಿಟಿ'ಯ ‍ಪ್ರೊಫೆಸರ್‌ಗಳಂತೆ ಆ ಕಾಲದಲ್ಲೂ ಒಬ್ಬ ಇದ್ದನಂತೆ. ಅವನು ತನ್ನನ್ನು ತಾನೇ ಸರ್ವಜ್ಞ – ಎಂದು ಘೋಷಿಸಿಕೊಂಡಿದ್ದವನು; ಎಲ್ಲ ವಿಷಯಗಳನ್ನೂ ಅರೆದು ಕುಡಿದವನಂತೆ ಎತ್ತರದ ಗಂಟಲಿನಲ್ಲಿ ಮಾತನಾಡುತ್ತಿದ್ದನಂತೆ. ಅಂಥ ಒಬ್ಬನನ್ನು ಈ ಪದ್ಯ ಇಲ್ಲಿ ವಿಡಂಬಿಸಿದೆ; ಅವನನ್ನು ’ಕುಕ್ಕುಟ‘ ಎಂದರೆ ಕೋಳಿ ಎಂದು ಹಾಡಿಹೊಗಳಿದೆ; ಮಾತ್ರವಲ್ಲ, ಅವನನ್ನು ’ಕುಕ್ಕುಟಮಿಶ್ರಪಾದರು‘ ಎಂದು ಕರೆದು ಮತ್ತಷ್ಟು ಹಾಸ್ಯಮಾಡುತ್ತಿದೆ! ಈ ಕುಕ್ಕುಟಮಿಶ್ರಪಾದ‘ಐದು ದಿನಗಳಲ್ಲಿ ಗುರುವಿನ ಪಾಠವನ್ನು ಓದಿ, ವೇದಾಂತಪಾಠಗಳನ್ನು ಎರಡು ದಿನಗಳಲ್ಲಿ ಓದಿ, ತರ್ಕವಾದಗಳನ್ನು ಕೇವಲ ಮೂಸಿ ನೋಡಿ‘ಯೇ ಮಹಾಜ್ಞಾನಿಯಾಗಿದ್ದಾನಂತೆ!

ಒಂದೊಂದು ಶಾಸ್ತ್ರವನ್ನು ಓದುವುದಕ್ಕಾಗಿಯೇ ಹತ್ತಾರು ವರ್ಷಗಳ ಪರಿಶ್ರಮ ಬೇಕು; ಆದರೆ ಈ ’ಬೃಹಸ್ಪತಿ‘ ಮಾತ್ರ ಕೆಲವೇ ದಿನಗಳಲ್ಲಿ, ಅಷ್ಟೇಕೆ ಪುಸ್ತಕಗಳನ್ನು ಮೂಸಿ ನೋಡಿಯೇ ಮಹಾಜ್ಞಾನಿಯಾಗಿಬಿಟ್ಟಿದ್ದಾನೆ ಎಂದು ವಿಡಂಬಿಸುತ್ತಿದೆ.

ನಮ್ಮಲ್ಲಿ ಪ್ರಾಚೀನ ಕಾಲದಲ್ಲಿ ಒಂದು ಮಾತು ಇತ್ತು: ’ಏಕಸ್ಮಿನ್‌ ಜನ್ಮನ್ಯೇಕಮೇವ ಶಾಸ್ತ್ರಮ್‘ – ಎಂದರೆ ಒಂದು ಜನ್ಮದಲ್ಲಿ ಒಂದು ಶಾಸ್ತ್ರ. ಇದು ಏಕೆಂದರೆ ಆ ಶಾಸ್ತ್ರಗಳಿಗೆ ಇರುವಂಥ ಅಗಾಧತೆ; ಒಂದೊಂದು ಶಾಸ್ತ್ರವೂ ಹತ್ತಾರು ವರ್ಷಗಳ ಅಧ್ಯಯನವನ್ನು ಅಪೇಕ್ಷಿಸುತ್ತದೆ. ಹೀಗಿರುವಾಗ ಎಲ್ಲ ಶಾಸ್ತ್ರಗಳನ್ನೂ ಕಲಿಯುತ್ತೇನೆಂದು ಹೊರಟರೆ ಯಾವುದರಲ್ಲೂ ತಜ್ಞತೆಯನ್ನು ಸಂಪಾದಿಸಲು ಆಗದು ಎಂಬುದು ಇದರ ಧ್ವನಿ.

ನಮ್ಮ ಕಾಲದ ’ಬೃಹಸ್ಪತಿ‘ಯರು ’ನನಗೆ ಇತಿಹಾಸ, ವಿಜ್ಞಾನ, ಸಾಹಿತ್ಯ, ವೈದ್ಯಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಎಲ್ಲವೂ ಗೊತ್ತಿದೆ‘ ಎಂದು ನಡೆದುಕೊಳ್ಳುವಂತೆಆ ಕಾಲದ ’ಬೃಹಸ್ಪತಿ‘ಯೂ ನಡೆದುಕೊಂಡಿರಬಹುದು; ಹೀಗಾಗಿಯೇ ಅವನನ್ನು ’ಕುಕ್ಕುಟಮಿಶ್ರ‍ಪಾದ‘ ಎಂದು ಕೀಟಲೆಮಾಡಿರುವುದು. ಗೌರವಪದವನ್ನು ಬಳಸಿಯೇ ಅವನನ್ನು ಮೂದಲಿಸುತ್ತಿರುವುದು.

ಒಬ್ಬರು ಹಲವು ವಿಷಯಗಳಲ್ಲಿ ವಿದ್ವಾಂಸರಾಗಿರಬಾರದು ಎಂದೇನಿಲ್ಲ. ಶಂಕರಾಚಾರ್ಯರನ್ನು ಕುರಿತಂತೆ ಒಂದು ಶ್ಲೋಕ ಪ್ರಸಿದ್ಧವಾಗಿದೆ:

ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರವಿತ್‌ ।

ಷೋಡಶೇ ಕೃತವಾನ್‌ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್‌ ।।

’ಎಂಟು ವರ್ಷಗಳಲ್ಲಿ ಚತುರ್ವೇದಗಳನ್ನೂ, ಹನ್ನೆರಡು ವರ್ಷಗಳಿಗೆ ಎಲ್ಲ ಶಾಸ್ತ್ರಗಳನ್ನೂ ತಿಳಿದುಕೊಂಡು, ಹದಿನಾರು ವರ್ಷಕ್ಕೆ ಭಾಷ್ಯವನ್ನು ಬರೆದು, ಮೂವತ್ತೆರಡು ವರ್ಷಕ್ಕೆ ಮುಕ್ತಿಯನ್ನು ಹೊಂದಿದರು.‘

ಇದು ಕೇವಲ ಪ್ರಶಂಸೆ, ಹೊಗಳಿಕೆಯಾಗಿ ಉಳಿದಿಲ್ಲ; ಆಚಾರ್ಯ ಶಂಕರರ ಕೃತಿಗಳನ್ನು ನೋಡಿದರೆ ಈ ಮಾತು ಸತ್ಯ ಎಂದು ಸ್ಪಷ್ಟವಾಗುತ್ತದೆ. ಹೀಗೆಯೇ ನಮ್ಮ ಮಾತು ಅಥವಾ ಬರಹಗಳು ನಮ್ಮ ವಿದ್ವತ್ತಿನ ಮಾನದಂಡಗಳು; ಅವು ನಮ್ಮ ವಿದ್ವತ್ತನ್ನು ಎತ್ತಿಹಿಡಿಯುವಂತಿರಬೇಕು. ನಾವು ದಡ್ಡತನದಿಂದ ನಮ್ಮ ಸಾಮರ್ಥ್ಯದ ಬಗ್ಗೆ ಎಷ್ಟು ಬೇಕಾದರೂ ಕೊಚ್ಚಿಕೊಳ್ಳಬಹುದು; ಆದರೆ ಜಗತ್ತು ನಮ್ಮನ್ನು ಸದಾ ನೋಡುತ್ತಿರುತ್ತದೆ, ನಮ್ಮ ಶಕ್ತಿಯನ್ನು ಪರೀಕ್ಷಿಸುತ್ತಲೇ ಇರುತ್ತದೆ ಎನ್ನುವುದನ್ನು ಮರೆಯಬಾರದು.

ಜಗತ್ತು ನಮ್ಮನ್ನು ’ಅಲ್ಪವಿದ್ಯೋ ಮಹಾಗರ್ವೀ‘ ಎಂದೋ ’ಕುಕ್ಕುಟಮಿಶ್ರಪಾದ‘ ಎಂದೋ ವಿಡಂಬಿಸುವ ಮೊದಲು ನಾವು ಎಚ್ಚರರಾಗಬೇಕು; ವಿವೇಕಿಗಳಾಗಿ ನಮ್ಮ ನಡೆ–ನುಡಿ–ಬರಹಗಳಲ್ಲಿ ಸಂಯಮವನ್ನು ಕಾಪಾಡಿಕೊಳ್ಳತಕ್ಕದ್ದು. ತುಂಬಿದ ಕೊಡ ತುಳುಕದು, ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT