ಶನಿವಾರ, ಜೂನ್ 25, 2022
21 °C

ದಿನದ ಸೂಕ್ತಿ: ಹಸಿದವನಿಗೇ ಅನ್ನ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ದರಿದ್ರಾನ್‌ ಭರ ಕೌಂತೇಯ ನ ಸಮೃದ್ಧಾನ್‌ ಕದಾಚನ ।
ವ್ಯಾಧಿತಸ್ಯೌಷಧಂ ಪಥ್ಯಂ ನೀರೋಗಸ್ಯ ಕಿಮೌಷಧೈಃ ।।

ಇದರ ತಾತ್ಪರ್ಯ ಹೀಗೆ:

‘ಯಾವಾಗಲೂ ಬಡವರಿಗೆ ಆಧಾರವಾಗಿರಬೇಕೇ ವಿನಾ ಶ್ರೀಮಂತರಿಗಲ್ಲ; ರೋಗಿಗೆ ಔಷಧ ಬೇಕೆ ಹೊರತು ಆರೋಗ್ಯವಂತನಿಗೆ ಔಷಧದಿಂದ ಆಗಬೇಕಾಗುದೇನು?’

ಯಾರಿಗೆ ಸಹಾಯದ ಆವಶ್ಯಕತೆ ಇದೆಯೋ ಅವರಿಗೆ ಮಾಡಬೇಕಾಗಿದೆಯೆ ಹೊರತು ಬಲವಂತರಿಗೆ ಅಲ್ಲ ಎಂಬುದನ್ನು ಮಹಾಭಾರತದ ಈ ಶ್ಲೋಕ ಹೇಳುತ್ತಿದೆ.

ಸಹಾಯ ಎಂಬುದು ಅಬಲರಿಗೆ ಸಿಗಬೇಕಾಗಿರುವ ನೆರವು. ಇದು ಹಣ, ವಿದ್ಯೆ, ಅನ್ನ – ಎಲ್ಲ ರೀತಿಯ ಸಹಾಯಗಳಿಗೂ ಅನ್ವಯಿಸುತ್ತದೆ. ಹಣದ ಆವಶ್ಯಕತೆ ಬಡವನಿಗೆ ಇರುತ್ತೆಯೆ ವಿನಾ ಶ್ರೀಮಂತನಿಗೆ ಅಲ್ಲ; ಅಕ್ಷರಗಳ ಪರಿಚಯವನ್ನು ಮಾಡಿಸಬೇಕಾದದ್ದು ಅವಿದ್ಯಾವಂತನಿಗೆ ವಿನಾ ವಿದ್ಯಾವಂತನಿಗೆ ಅಲ್ಲ; ಹಸಿದಿರುವವನಿಗೆ ಆಹಾರದ ಆವಶ್ಯಕತೆಯಿರುತ್ತದೆಯೇ ವಿನಾ ಹೊಟ್ಟೆ ತುಂಬಿರುವವನಿಗೆ ಅಲ್ಲ.

ಈ ಶ್ಲೋಕಕ್ಕೆ ಪೂರಕವಾಗಿ ಇನ್ನೊಂದು ಸುಭಾಷಿತವನ್ನೂ ನೋಡಬಹುದು:

 ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಮ್‌ ।

ವೃಥಾ ದಾನಂ ಸಮರ್ಥೇಭ್ಯೋ ವೃಥಾ ದೀಪೋ ದಿವಾಪಿ ಚ ।।

‘ಸಮುದ್ರದಲ್ಲಿ ಮಳೆಯೂ, ಹೊಟ್ಟೆ ತುಂಬಿದವನಿಗೆ ಊಟವೂ ವ್ಯರ್ಥ; ಸಮರ್ಥರಿಗೆ ದಾನಮಾಡುವುದು ವ್ಯರ್ಥ; ಹಗಲು ಹೊತ್ತಿನಲ್ಲಿ ದೀಪ ವ್ಯರ್ಥ’ – ಎಂಬುದು ಈ ಸುಭಾಷಿತದ ತಾತ್ಪರ್ಯ.

ಒಬ್ಬ ತಾಯಿಗೆ ನಾಲ್ವರು ಮಕ್ಕಳಿದ್ದಾರೆಂದುಕೊಳ್ಳಿ. ಅದರಲ್ಲಿ ಒಬ್ಬ ಮಗನೋ ಅಥವಾ ಮಗಳೋ ಸ್ವಲ್ಪ ದಡ್ಡನೋ ಅಥವಾ ದುರ್ಬಲನೋ ಆಗಿದ್ದಾನೆ ಎಂದಿಟ್ಟುಕೊಳ್ಳಿ. ಆ ತಾಯಿ ಎಲ್ಲ ಮಕ್ಕಳಿಗಿಂತಲೂ ಈ ಅಶಕ್ತ ಮಗುವಿಗೆ ಹೆಚ್ಚಿನ ಗಮನವನ್ನು ಕೊಡುತ್ತಾಳೆ. ಹೀಗೆಂದು ಅವಳು ಮಕ್ಕಳಲ್ಲಿ ತಾರತಮ್ಯ ಮಾಡುತ್ತಾಳೆ ಎಂದಲ್ಲ; ಯಾರಿಗೆ ಎಷ್ಟು ಪ್ರೀತಿ–ಕಾಳಜಿಗಳು ಅವಳಿಂದ ಬೇಕೋ ಅದಕ್ಕೆ ತಕ್ಕ ಪ್ರಮಾಣದಲ್ಲಿ ಅವಳು ಒದಗಿಸುತ್ತಾಳೆ. ಇದು ನಿಜವಾದ ಮಾತೃವಾತ್ಸಲ್ಯ.

ಆದರೆ ನಾವು ಹೆಚ್ಚಿನ ಸಂದರ್ಭದಲ್ಲಿ ಹೊಟ್ಟೆ ತುಂಬಿದವರಿಗೇ ಅನ್ನವನ್ನು ನೀಡುತ್ತಿರುತ್ತೇವೆ; ಹಸಿದವರ ಕಡೆಗೆ ನಮ್ಮ ಗಮನ ಹೋಗುವುದಿಲ್ಲ. ಸುಭಾಷಿತ ಇಂಥ ಮನೋಧರ್ಮವನ್ನೇ ಪ್ರಶ್ನಿಸುತ್ತಿರುವುದು. ಔಷಧ ಬೇಕಾಗಿರುವುದು ಅನಾರೋಗ್ಯದಲ್ಲಿರುವವನಿಗೆ; ಅದನ್ನು ಬಿಟ್ಟು ಆರೋಗ್ಯವಾಗಿರುವವನಿಗೆ ಔಷಧವನ್ನು ಕುಡಿಸಿದರೆ ಏನು ಪ್ರಯೋಜನ? ಅದರಿಂದ ಅವನಿಗೆ ಪ್ರಯೋಜನಕ್ಕಿಂತಲೂ ತೊಂದರೆಯೇ ಆಗಬಹುದಷ್ಟೆ!

ನಾವು ಸಹಾಯ ಮಾಡುವುದೇ ದೊಡ್ಡದಲ್ಲ, ಅದನ್ನು ಅರ್ಹರಿಗೆ ಮಾಡುವುದರಲ್ಲಿಯೇ ಅದರ ನಿಜವಾದ ಸಾರ್ಥಕತೆ ಇರುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು