ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ರಾಜನಂತೆ ಪ್ರಜೆಗಳು

Last Updated 8 ಜುಲೈ 2021, 4:34 IST
ಅಕ್ಷರ ಗಾತ್ರ

ಯಥಾ ಭೂಮಿಸ್ತಥಾ ತೋಯಂ ಯಥಾ ಬೀಜಂ ತಥಾಂಕುರಃ ।

ಯಥಾ ದೇಶಸ್ತಥಾ ಭಾಷಾ ಯಥಾ ರಾಜಾ ತಥಾ ಪ್ರಜಾಃ ।।

ಇದರ ತಾತ್ಪರ್ಯ ಹೀಗೆ:

‘ಭೂಮಿಯ ಗುಣದಂತೆ ನೀರಿನ ಗುಣವೂ ಇರುತ್ತದೆ; ಬೀಜದ ಗುಣದಂತೆ ಮೊಳಕೆಯೂ ಇರುತ್ತದೆ. ದೇಶಕ್ಕೆ ತಕ್ಕಂತೆ ಭಾಷೆಯೂ ಇರುತ್ತದೆ; ಹೀಗೆಯೇ ರಾಜನಿಗೆ ತಕ್ಕಂತೆ ಪ್ರಜೆಗಳೂ ಇರುತ್ತಾರೆ.’

ಪರಿಸರದ ಪ್ರಭಾವಕ್ಕೆ ಎಲ್ಲ ವಿವರಗಳೂ ಒಳಪಟ್ಟಿರುತ್ತವೆ. ನಮ್ಮ ಆಹಾರ, ವಿಹಾರ, ಭಾಷೆ, ಬಾಂಧವ್ಯ – ಹೀಗೆ ಎಲ್ಲವೂ ಪರಿಸರ// ಪ್ರಭಾವಕ್ಕೆ ಒಳಗಾಗಿರುತ್ತವೆ. ಮನೆಯಲ್ಲಿ ತಂದೆತಾಯಿಗಳನ್ನು ನೋಡುತ್ತಲೇ ಮಕ್ಕಳು ಬೆಳೆಯುತ್ತಾರೆ. ಹೀಗಾಗಿ ಹೆತ್ತವರು ವಹಿಸಬೇಕಾದ ಎಚ್ಚರ ಹೆಚ್ಚು. ಸುಭಾಷಿತ ಇಂಥ ಕೆಲವು ಪ್ರಭಾವಗಳನ್ನು ಇಲ್ಲಿ ಗುರುತಿಸಿದೆ.

ಭೂಮಿಗೆ ಅನುಗುಣವಾಗಿ ಅಲ್ಲಿ ಸಿಗುವ ನೀರಿಗೂ ಗುಣ ಇರುತ್ತದೆಯಂತೆ; ಎಂದರೆ ಅದು ಸಿಹಿನೀರೋ ಉಪ್ಪುನೀರೋ ಎಂಬುದನ್ನು ಭೂಮಿ ನಿರ್ಧರಿಸುತ್ತದೆ. ಬೀಜದ ಶಕ್ತಿ–ಗುಣಗಳಿಗೆ ತಕ್ಕಂತೆ ಮೊಳಕೆ ಒಡೆಯುತ್ತದೆ. ಬೀಜಕ್ಕೆ ಶಕ್ತಿ ಇದ್ದರೆ ಮೊಳಕೆಯೂ ಚೆನ್ನಾಗಿಯೇ ಬರುತ್ತದೆ; ಬೀಜ ಜೊಳ್ಳಾದರೆ ಅದರಿಂದ ಮೊಳಕೆಯೇ ಹುಟ್ಟುವುದಿಲ್ಲ. ನಾವಾಡುವ ಭಾಷೆ ನಾವು ಯಾವ ಪ್ರದೇಶದಲ್ಲಿ ಇದ್ದೇವೆ ಎಂಬುದನ್ನು ಅವಲಂಬಿಸಿರುತ್ತದೆ. ಉತ್ತರ ಕರ್ನಾಟಕದ ಜನರು ಮಾತನಾಡುವ ಕನ್ನಡಕ್ಕೂ ಮಂಗಳೂರಿನವರು ಮಾತನಾಡುವ ಕನ್ನಡಕ್ಕೂ ಬೆಂಗಳೂರಿನವರು ಮಾತನಾಡುವ ಕನ್ನಡಕ್ಕೂ ವ್ಯತ್ಯಾಸಗಳಿವೆ, ಅಲ್ಲವೆ? ಈ ವ್ಯತ್ಯಾಸ ಆಯಾ ಪ್ರಾಂತಗಳನ್ನು ಅವಲಂಬಿಸಿ ಬರುವಂಥದು.

ಸುಭಾಷಿತ ಇಷ್ಟೆಲ್ಲ ಹೇಳುತ್ತಿರುವುದು ನಮ್ಮ ಗಮನವನನ್ನು ಕೊನೆಯ ಮಾತಿನ ಕಡೆಗೆ ಸೆಳೆಯಲು: ‘ರಾಜನಂತೆ ಪ್ರಜೆಗಳೂ ಇರುತ್ತಾರೆ.’

ರಾಜನಂತೆ ಪ್ರಜೆಗಳು ಇರುತ್ತಾರೆ ಎಂಬುದು ಪ್ರಜೆಗಳಂತೆ ರಾಜರು ಇರುತ್ತಾರೆ ಎಂದೂ ಆಗುತ್ತದೆ.

ನಾವು ನಮ್ಮ ವ್ಯವಸ್ಥೆಯನ್ನು ಟೀಕಿಸುತ್ತಲೇ ಇರುತ್ತೇವೆ. ಇದಕ್ಕೆ ಸಕಾರಣಗಳೂ ಇರುತ್ತವೆಯೆನ್ನಿ! ಆದರೆ ಈ ಭ್ರಷ್ಟಾಚಾರಗಳಿಗೂ ಅನಾಚಾರ–ಅತ್ಯಾಚಾರಗಳಿಗೂ ಕಾರಣ ಎಲ್ಲಿದೆ? ನಾವಿಂದು ಆಲೋಚಿಸಬೇಕಾದ ವಿಷಯ ಇದು. ನಮ್ಮಂತೆಯೇ ಸಮಾಜ ಇರುತ್ತದೆ; ಸಮಾಜದಂತೆ ನಾವು ಇರುತ್ತೇವೆ, ಅಲ್ಲವೆ? ನಮ್ಮ ಗುಣಕ್ಕೆ ತಕ್ಕಂಥ ರಾಜನನ್ನೇ ನಾವು ಆರಿಸಿಕೊಳ್ಳುವುದು. ಹೀಗೆಯೇ ರಾಜನಿಗೂ ಅವನ ಯೋಗ್ಯತೆಗೆ ತಕ್ಕಂಥ ಪ್ರಜೆಗಳೇ ಅವನಿಗೆ ಸಿಕ್ಕುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT