ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಎಲ್ಲವೂ ಚೆನ್ನಾಗಿರಲಿ

Last Updated 11 ನವೆಂಬರ್ 2020, 19:12 IST
ಅಕ್ಷರ ಗಾತ್ರ

ಸುಜೀರ್ಣಮನ್ನಂ ಸುವಿಚಕ್ಷಣಃ ಸುತಃ

ಸುಶಾಸಿತಾ ಸ್ತ್ರೀ ನೃಪತಿಃ ಸುಸೇವಿತಃ ।

ಸುಚಿಂತ್ಯ ಚೋಕ್ತಂ ಸುವಿಚಾರ್ಯ ಯತ್ಕೃತಂ

ಸುದೀರ್ಘಕಾಲೇ ನ ಹಿ ಯಾತಿ ವಿಕ್ರಿಯಾಮ್‌ ।।

ಇದರ ತಾತ್ಪರ್ಯ ಹೀಗೆ:

‘ಚೆನ್ನಾಗಿ ಜೀರ್ಣವಾದ ಅನ್ನ, ಒಳ್ಳೆಯ ಸಾಮರ್ಥ್ಯವುಳ್ಳ ಮಗ, ಶಿಸ್ತುಬದ್ಧವಾಗಿ ನಡೆಯಬಲ್ಲ ಹೆಂಗಸು, ಚೆನ್ನಾಗಿ ಸೇವಿಸಲ್ಪಟ್ಟ ರಾಜ, ಚೆನ್ನಾಗಿ ಯೋಚಿಸಲ್ಪಟ್ಟ ಮಾತು, ಚೆನ್ನಾಗಿ ವಿಚಾರಮಾಡಿ ಮಾಡಿದ ಕೆಲಸ – ಇವು ಬಹಳ ಕಾಲವಾದ ಮೇಲೂ ಬದಲಾವಣೆ ಹೊಂದುವುದಿಲ್ಲ.’

ಪ್ರತಿಯೊಂದು ವಸ್ತುವೂ ವ್ಯಕ್ತಿಯೂ ಸಂಸ್ಕೃತಗೊಳ್ಳಬೇಕು; ಎಂದರೆ ಚೆನ್ನಾಗಿ ಆಗಬೇಕು. ಆಗಲೇ ಅವುಗಳಿಂದಲೂ ಅಂಥವರಿಂದಲೂ ಪ್ರಯೋಜನ ದೊರೆಯವುದು. ಸುಭಾಷಿತ ಅಂಥ ಕೆಲವು ಉದಾಹರಣೆಗಳನ್ನು ಇಲ್ಲಿ ನೀಡಿದೆ.

ಊಟ ಮಾಡುತ್ತೇವೆ. ತಿಂದ ಅನ್ನ ನಮ್ಮ ಹೊಟ್ಟೆಯಲ್ಲಿ ಹಾಗೆಯೇ ಉಳಿದರೆ ಏನಾಗುತ್ತದೆ? ರೋಗ ಬರುತ್ತದೆ! ಹೀಗಾಗಿ ತಿಂದ ಅನ್ನ ಚೆನ್ನಾಗಿ ಜೀರ್ಣ ಆಗಬೇಕು. ಮಕ್ಕಳು ಬೇಕು, ಸರಿ. ಆದರೆ ಎಂಥ ಮಕ್ಕಳು ಬೇಕು? ನಿಷ್ಪ್ರಯೋಜಕ ಮಕ್ಕಳಿಂದ ಯಾರಿಗೆ ತಾನೆ ಪ್ರಯೋಜನ? ಹೀಗಾಗಿ ಸಾಮರ್ಥ್ಯವಂತರಾದ ಮಕ್ಕಳು ಬೇಕು. ಅದನ್ನೇ ಸುಭಾಷಿತ ಹೇಳುತ್ತಿರುವುದು. ಸಂಸಾರ ಚೆನ್ನಾಗಿ ನಡೆಯಬೇಕಾದರೆ ಗಂಡ ಮತ್ತು ಹೆಂಡತಿ – ಇಬ್ಬರೂ ಶಿಸ್ತಿನಿಂದ, ಎಂದರೆ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು. ಅದನ್ನೇ ಸುಭಾಷಿತ ಶಿಸ್ತಿನಿಂದ ವಶಳಾದ ಹೆಣ್ಣು ಎಂದಿರುವುದು. ಈ ಮಾತು ಗಂಡಿಗೂ ಅನ್ವಯವಾಗುತ್ತದೆಯೆನ್ನಿ!

ಪ್ರಜೆಗಳಿಂದ ರಾಜ ಚೆನ್ನಾಗಿ ಸೇವಿಸಲ್ಪಡಬೇಕು ಎಂದು ಸುಭಾಷಿತ ಆಶಿಸಿದೆ. ಎಂದರೆ ರಾಜ್ಯದ ನೀತಿ–ನಿಯಮಗಳನ್ನು ಚೆನ್ನಾಗಿ ಅನುಸರಿಸುವುದೇ ರಾಜನನ್ನು ಚೆನ್ನಾಗಿ ಸೇವಿಸಬೇಕೆಂಬುದರ ತಾತ್ಪರ್ಯ. ಎಂದರೆ ಒಳ್ಳೆಯ ಪ್ರಜೆಗಳಾಗಿ ನಡೆದುಕೊಳ್ಳುವುದು.

ನಮಗೆ ಏನೇನು ತೋಚುತ್ತದೆಯೋ ಅವೆಲ್ಲವನ್ನೂ ಮಾತನಾಡಿಬಿಡುತ್ತೇವೆ. ಆದರೆ ಅದರಿಂದ ಅನುಕೂಲಕ್ಕಿಂತಲೂ ತೊಂದರೆಗಳೇ ಹೆಚ್ಚು ಎದುರಾಗುತ್ತವೆ. ಹೀಗಾಗಿ ಒಂದೊಂದು ಮಾತನ್ನೂ ಚೆನ್ನಾಗಿ ಯೋಚಿಸಿ ಮಾತನಾಡಬೇಕು. ಹೀಗೆಯೇ ನಾವು ಮಾಡುವ ಒಂದೊಂದು ಕೆಲಸವನ್ನೂ ಚೆನ್ನಾಗಿ ವಿಚಾರಮಾಡಿಯೇ ಮಾಡಬೇಕು. ಹೀಗಲ್ಲದೆ ಹಿಂದುಮುಂದೆ ಯೋಚಿಸಿದೆ ಕೆಲಸದಲ್ಲಿ ತೊಡಗಿದರೆ ಅಪಾಯಗಳು ಎದುರಾಗುವ ಸಾಧ್ಯತೆಗಳೇ ಹೆಚ್ಚು.

ನಮ್ಮ ವ್ಯಕ್ತಿತ್ವದ ಎಲ್ಲ ಆಯಾಮಗಳೂ ಚೆನ್ನಾದ ರೀತಿಯಲ್ಲಿ ಕ್ರಿಯಾಶೀಲವಾಗಿರಬೇಕು. ಚೆನ್ನಾಗಿ ಎಂದರೆ ಅದರ ನಿಜವಾದ ಫಲವಂತಿಕೆ ಸಿಗುವಂಥ ರೀತಿಯಲ್ಲಿ ನಡೆದುಕೊಳ್ಳುವುದು. ಹೀಗೆ ಚೆನ್ನಾಗಿ ಅಭಿವ್ಯಕ್ತಗೊಂಡ ಗುಣಗಳೂ ವಸ್ತುಗಳೂ ನಮ್ಮನ್ನು ದೀರ್ಘಕಾಲ ಕಾಪಾಡಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT