ಉದ್ವೇತಿ ಪ್ರಸವೀತಾ ಜನಾನಾಂ

ಮಹಾನ್ಕೇತುರರ್ಣವಃ ಸೂರ್ಯಸ್ಯ ।

ಸಮಾನಂ ಚಕ್ರಂ ಪರ್ಯಾವಿವೃತ್ಸನ್

ಯದೇತಶೋ ವಹತಿ ಧೂರ್ಷುಃ ಯುಕ್ತಃ ।।

ಈ ಮಂತ್ರದ ತಾತ್ಪರ್ಯ ಹೀಗೆ:

‘ಎಲ್ಲ ಜನರನ್ನೂ ಅವರವರ ಕರ್ತವ್ಯಗಳಲ್ಲಿ ಪ್ರೇರಿಸುತ್ತ ಪೂಜ್ಯನೂ ಸರ್ವವನ್ನೂ ತೋರಿಸಿಕೊಡುವವನೂ ಉದಕಪ್ರದನೂ ಆದ ಸೂರ್ಯದೇವನು ಹಸಿರುಬಣ್ಣದ ಕುದುರೆಯನ್ನು ಹೂಡಿರುವಂಥದೂ ಒಂದೇ ಚಕ್ರವನ್ನು ಹೊಂದಿರುವಂಥದೂ ಆದ ತನ್ನ ರಥವನ್ನು ತಿರುಗಿಸಿಕೊಳ್ಳಲು ಬಯಸಿ ಉದಯಿಸುತ್ತಿದ್ದಾನೆ.’

ಇದು ಸೂರ್ಯನನ್ನು ಕುರಿತಾದ ವೇದಮಂತ್ರ.

ನಮಗೆಲ್ಲರಿಗೂ ಕ್ರಾಂತಿ ಮಾಡಬೇಕೆಂಬ ಉಮೇದು ಇರುವುದು ಸಹಜ. ಆದರೆ ಒಳ್ಳೆಯ ಕ್ರಾಂತಿಯನ್ನೇ ಮಾಡಬೇಕು ಎಂಬ ಸಂಕಲ್ಪ ಮಾಡುವವರು ನಮ್ಮಲ್ಲಿ ಎಷ್ಟು ಮಂದಿ ಇದ್ದಾರು? ಕಾಂತಿಯುತವಾದ ಕ್ರಾಂತಿ, ಶಾಂತಿಯುತವಾದ ಕ್ರಾಂತಿ, ಚೆನ್ನಾದ ಕ್ರಾಂತಿ ನಡೆದರೆ ಬೇಡ ಎನ್ನುವವರು ಯಾರಿದ್ದಾರು? ಆದರೆ ಕ್ರಾಂತಿ ಎಂದಾಗ ಮನದಲ್ಲಿ ಭೀತಿ ಮೂಡುವುದು ಸಹಜ. ಏಕೆಂದರೆ ಕ್ರಾಂತಿಯ ಬೀಜ ಇರುವುದೇ ಪರಿವರ್ತನೆ ಬೇಕೆಂಬ ಒತ್ತಡದಲ್ಲಿ. ಬದಲಾವಣೆ ಎಂಬುದು ಸುಲಭದ ಪ್ರಕ್ರಿಯೆಯಲ್ಲ; ಹಿಂಸೆ, ನಿರಾಕರಣೆಗಳಿಲ್ಲದೆ ಪರಿವರ್ತನೆ ಸಾಧ್ಯವಿಲ್ಲ. ಶಾಂತಿಗಾಗಿಯೇ ಕ್ರಾಂತಿ ಎಂದರೂ, ಕ್ರಾಂತಿ ಮಾತ್ರ ಶಾಂತಿಯಿಂದಲೇ ನಡೆಯದು.

ಆದರೆ ಪ್ರಕೃತಿಯಲ್ಲಿ ಮಾತ್ರ ಕ್ರಾಂತಿ ಎಂಬುದು ಶಾಂತಿಯಿಂದ, ಸದ್ದಿಲ್ಲದೆ ನಡೆಯುತ್ತಲೇ ಇರುತ್ತದೆ. ಇಂಥದೊಂದು ಚೆನ್ನಾದ ಕ್ರಾಂತಿಯೇ ನಾವಿಂದು ಆಚರಿಸುತ್ತಿರುವ ಸಂಕ್ರಾಂತಿಪರ್ವ.

ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದನ್ನೇ ಸಂಕ್ರಾಂತಿ ಎಂದು ಕರೆಯುವುದು. ಈ ಎಣಿಕೆಯಂತೆ ಹನ್ನೆರಡು ಸಂಕ್ರಾಂತಿಗಳು ಒಂದು ವರ್ಷದಲ್ಲಿ ಉಂಟಾಗುತ್ತವೆ. ಆದರೆ ಮಕರಸಂಕ್ರಾಂತಿಯನ್ನೇ ವಿಶೇಷವಾಗಿ ಆಚರಿಸಲು ಕಾರಣ ಎಂದರೆ ಸೂರ್ಯನು ತನ್ನ ಸಂಚಾರವನ್ನು ದಕ್ಷಿಣದಿಕ್ಕಿನಿಂದ ಉತ್ತರದ ಕಡೆಗೆ ತಿರುಗಿಸಿಕೊಳ್ಳುತ್ತಾನೆ ಎನ್ನುವುದು. ಇಷ್ಟಕ್ಕೂ ಸೂರ್ಯನ ಸಂಚಾರಕ್ಕೆ ಏಕಿಷ್ಟು ಪ್ರಾಮುಖ್ಯ?

ನಮಗೆಲ್ಲ ಅರಿವಿದೆ, ಸೂರ್ಯನ ಮೇಲೆ ನಮ್ಮೆಲ್ಲರ ಜೀವನ ಎಷ್ಟೊಂದು ರೀತಿಯಲ್ಲಿ ಆಶ್ರಯಿಸಿಕೊಂಡಿದೆ ಎಂದು. ಲೌಕಿಕವಾಗಿ ಮಾತ್ರವಲ್ಲದೆ, ಆಧ್ಯಾತ್ಮಿಕವಾಗಿಯೂ ನಾವು ಸೂರ್ಯನನ್ನು ಆಶ್ರಯಿಸಿದ್ದೇವೆ. ಸೂರ್ಯನನ್ನು ಜಗತ್ತಿನ ಕಣ್ಣು ಎಂದು ನಮ್ಮ ಪರಂಪರೆ ಹಾಡಿದೆ. ಜೀವನವನ್ನು ನೋಡಲುಕಣ್ಣು ಬೇಕು; ಇದು ಕೇವಲ ಹೊರಗಿನ ಕಣ್ಣನ್ನು ಮಾತ್ರವೇ ಅಲ್ಲ, ಒಳಗಿನ ಕಣ್ಣನ್ನೂ ಸಂಕೇತಿಸುತ್ತದೆ. ಕೇವಲ ಕಣ್ಣಿದ್ದರಷ್ಟೆ ನಮಗೆ ನೋಟ ಒದಗುತ್ತದೆ ಎನ್ನುವಂತಿಲ್ಲ; ಬೆಳಕು ಕೂಡ ಮುಖ್ಯವಾಗುತ್ತದೆ. ನೋಡುವ ವ್ಯಕ್ತಿ (ಆತ್ಮ), ನೋಡುವ ಸಾಧನ (ಕಣ್ಣು) ಮತ್ತು ನೋಡುವ ದೃಶ್ಯ (ಬೆಳಕು) – ಇವು ಮೂರನ್ನೂ ಸೂರ್ಯನ ಸಂಕೇತ ಪ್ರತಿನಿಧಿಸುತ್ತದೆ. ನಿರಂತರ ಪರಿವರ್ತನಶೀಲತೆಯಲ್ಲಿಯೇ ನಾವು ಜೀವನದ ಸತ್ಯ–ಶಿವ–ಸುಂದರಗಳನ್ನು ಸಾಕ್ಷಾತ್ಕರಿಸಿಕೊಳ್ಳಬೇಕಿದೆ. ಈ ನಿಲುವನ್ನು ಸೂರ್ಯನ ಸಂಚಾರ ಎತ್ತಿಹಿಡಿಯುತ್ತದೆ. ಇದರ ಅನುಸಂಧಾನವೇ ಸಂಕ್ರಾಂತಿಹಬ್ಬದ ಉದ್ದೇಶ.

ಸಂಕ್ರಾಂತಿಯನ್ನು ಸುಗ್ಗಿಯ ಹಬ್ಬವನ್ನಾಗಿ ನಾಡಿನ ಹಲವು ಭಾಗಗಳಲ್ಲಿ ಆಚರಿಸುತ್ತಾರೆ. ಬಂಧು–ಮಿತ್ರರೊಂದಿಗೆ ಎಳ್ಳು–ಬೆಲ್ಲಗಳ ವಿನಿಮಯವೂ ನಡೆಯುತ್ತದೆ. ಗೋವುಗಳಿಗೆ ಅಲಂಕರಣ, ಪೂಜೆಗಳೂ ನಡೆಯುತ್ತವೆ. ಮಕ್ಕಳಿಗೆ ಆರತಿಯನ್ನು ಮಾಡಿ, ಸಂಭ್ರಮಿಸುತ್ತಾರೆ. ಪಿತೃಗಳಿಗೆ ತರ್ಪಣವನ್ನೂ ನೀಡುತ್ತಾರೆ. ಹೀಗೆ ಸಂಕ್ರಾಂತಿಯಂದು ನಡೆಸುವ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಲಾಪಗಳೆಲ್ಲವೂ ಜೀವನಪ್ರೀತಿ, ಜೀವನಶ್ರದ್ಧೆ, ಜೀವನಸೌಂದರ್ಯಗಳನ್ನೇ ಸಾರುವಂತಿವೆ.

ದೇವತೆಗಳು ಅವರ ಕರ್ಮಗಳ ದೃಷ್ಟಿಯಿಂದ ಹಲವರಿದ್ದರೂ ದಿಟವಾದ ದೇವತೆ ಎಂದರೆ ಅದು ಸೂರ್ಯನೇ ಎಂಬ ಒಕ್ಕಣೆ ವೇದವಾಙ್ಮಯದಲ್ಲಿದೆ. ಸೂರ್ಯ ನಮ್ಮನ್ನೆಲ್ಲ ಕರ್ತವ್ಯಗಳಲ್ಲಿ ತೊಡಗಿಸುವವನು, ಸೃಷ್ಟಿಯ ವಿವರಗಳೆಲ್ಲವನ್ನೂ ನಮಗಾಗಿ ತೋರಿಸಿಕೊಡುವ ಕಣ್ಣು ಅವನು, ಜೀವನಪಥಕ್ಕೆ ಬೇಕಾದ ಬೆಳಕು ಕೂಡ ಅವನೇ. ಹೀಗಾಗಿ ಅವನ ಗತಿ, ಅದು ನಮ್ಮ ಜೀವನದ ಗತಿಯನ್ನೂ ನಿರ್ಧರಿಸುವಂಥದ್ದು. ಆದುದರಿಂದಲೇ ಅವನ ಹೆಜ್ಜೆ, ಅದು ನಮ್ಮ ಜೀವನದ ದಿಕ್ಕನ್ನೂ ಬದಲಾಯಿಸಲಿ; ಅದು ಒಳಿತಿನ ಕಡೆಗೆ ನಡೆಸುವ ಹೆಜ್ಜೆಯಾಗಲಿ ಎಂಬ ಆಶಯವೇ ಸಂಕ್ರಾಂತಿಹಬ್ಬದ ಹಿನ್ನೆಲೆಯಲ್ಲಿರುವ ಸಂದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.