ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ದುಷ್ಟನ ಮನಸ್ಸು

Last Updated 11 ಅಕ್ಟೋಬರ್ 2020, 1:05 IST
ಅಕ್ಷರ ಗಾತ್ರ

ಪೋತೋ ದುಸ್ತರವಾರಿರಾಶಿತರಣೇ ದೀಪೋಂsಧಕಾರಾಗಮೇ

ನಿರ್ವಾತೇ ವ್ಯಜನಂ ಮದಾಂಧಕರಿಣೋ ದರ್ಪೋಪಶಾಂತ್ಯೈ ಸೃಣಿಃ ।

ಇತ್ಥಂ ತದ್ಭುವಿ ನಾಸ್ತಿ ಯಸ್ಯ ವಿಧಿನಾ ನೋಪಾಯಚಿಂತಾ ಕೃತಾ

ಮನ್ಯೇ ದುರ್ಜನಚಿತ್ತವೃತ್ತಿಹರಣೇ ಧಾತಾಪಿ ಭಗ್ನೋದ್ಯಮಃ ।।

ಇದರ ತಾತ್ಪರ್ಯ ಹೀಗೆ:

‘ದಾಟಲು ಅಸಾಧ್ಯವಾದ ಸಮುದ್ರವನ್ನು ದಾಟಲು ನಾವೆಯುಂಟು; ಕತ್ತಲೆ ಬಂದಾಗ ದೀಪ ಇದೆ; ಗಾಳಿ ಇಲ್ಲದಿದ್ದಾಗ ಬೀಸಣಿಗೆ ಉಂಟು; ಮದ್ದಾನೆಯ ದರ್ಪವನ್ನು ಅಡಗಿಸುವುದಕ್ಕೆ ಅಂಕುಶವೂ ಇದೆ; ಲೋಕದಲ್ಲಿ ಎಲ್ಲದಕ್ಕೂ ಬ್ರಹ್ಮನು ಪರಿಹಾರವನ್ನು ಒದಗಿಸಿದ್ದಾನೆ. ಆದರೆ ದುಷ್ಟನ ಚಿತ್ತವೃತ್ತಿಯನ್ನು ಕಳೆಯವುದರಲ್ಲಿ ಹೀಗೆ ಯಾವ ಉಪಾಯದ ಯೋಚನೆಯನ್ನೂ ಮಾಡಿರುವುದಿಲ್ಲ. ಈ ಪ್ರಯತ್ನದಲ್ಲಿ ಬ್ರಹ್ಮನೂ ಸೋತಿರಬೇಕು.’

ಸೃಷ್ಟಿಯನ್ನೆಲ್ಲ ಮಾಡಿರುವವನು ಬ್ರಹ್ಮ. ಒಳ್ಳೆಯದು, ಕೆಟ್ಟದ್ದು, ಗಂಡು, ಹೆಣ್ಣು, ಹುಲಿ, ಕುರಿ, ಕಪ್ಪು, ಬಿಳಪು, ಹಾವು, ಮುಂಗಸಿ – ಹೀಗೆ ಎಲ್ಲವೂ ಅವನ ಸೃಷ್ಟಿಯೇ. ನಮಗೆ ಈ ಸೃಷ್ಟಿಯಲ್ಲಿರುವ ಕೆಲವೊಂದು ವಸ್ತುಗಳ ಬಗ್ಗೆ ಪ್ರೀತಿ ಇರುತ್ತದೆ, ಮತ್ತೆ ಕೆಲವೊಂದು ವಸ್ತುಗಳ ಬಗ್ಗೆ ದ್ವೇಷ ಇರುತ್ತದೆ. ಆದರೆ ಸೃಷ್ಟಿಕರ್ತನ ದೃಷ್ಟಿಯಲ್ಲಿ ಇಂಥ ಯಾವುದೇ ತಾರತಮ್ಯಗಳು ಇರುವುದಿಲ್ಲ; ಅವನಿಗೆ ಎಲ್ಲವೂ ಒಂದೇ; ಎಲ್ಲವೂ ಅವನಿಗೇ ಸೇರಿದ್ದು.

ಈ ಸೃಷ್ಟಿಯಲ್ಲಿ ಹಲವು ಸ್ವಾರಸ್ಯಗಳಿವೆ. ಅವುಗಳಲ್ಲಿ ಒಂದು: ಇಲ್ಲಿಯ ಎಲ್ಲ ವಸ್ತುಗಳಿಗೂ ಪ್ರತಿರೂಪವಾಗಿ ಇನ್ನೊಂದು ವಸ್ತು ಇದೆ. ಉದಾಹರಣಗೆ, ಹಗಲಿಗೆ ಇರುಳು, ಕಪ್ಪಿಗೆ ಬಿಳಿ. ಹೀಗೆ ಸೃಷ್ಟಿಯಲ್ಲಿರುವ ಎಲ್ಲ ವಸ್ತು–ವಿಷಯಗಳಿಗೂ ಅವುಗಳ ಶಕ್ತಿಯನ್ನು ಭಂಜಿಸಬಲ್ಲ ಇನ್ನೊಂದು ವಸ್ತು–ವಿಷಯ ಇದ್ದೇ ಇದೆ. ಇಂಥ ಹಲವು ಇಜ್ಜೋಡುಗಳನ್ನು ಸುಭಾಷಿತ ಇಲ್ಲಿ ಹೇಳಿದೆ.

ಸಮುದ್ರ ತುಂಬ ವಿಶಾಲವಾಗಿದೆ; ಭೂಮಿಯಲ್ಲಿ ಹೆಚ್ಚಿನ ಭಾಗ ಇರುವುದೇ ಸಮುದ್ರ. ಆದರೆ ಈ ಸಮುದ್ರವನ್ನು ದಾಟಲು ಸೃಷ್ಟಿಯಲ್ಲಿ ಇನ್ನೊಂದು ವಸ್ತುವೂ ಇದೆ; ಅದೇ ಹಡಗು, ದೋಣಿ. ಕತ್ತಲೆ ತುಂಬಾ ಭಯಂಕರವಾದುದು; ಆದರೆ ಅದನ್ನು ಎದುರಿಸಲು ನಮಗೆ ದೀಪ ಇದೆ. ಗಾಳಿ ಇಲ್ಲದಿದ್ದಾಗ ಸೆಕೆಯ ಸಂಕಟ ಶುರುವಾಗುತ್ತದೆ; ಸೆಕೆಯನ್ನು ಗೆಲ್ಲಲೂ ಒಂದು ಸಾಧನ ಇದೆ; ಅದೇ ಬೀಸಣಿಗೆ. ಇನ್ನು ಆನೆ, ಅಷ್ಟು ದೊಡ್ಡ ಪ್ರಾಣಿಯ ಶಕ್ತಿಗೆ ಸರಿಸಾಟಿಯಾದ ಇನ್ನೊಂದು ಪ್ರಾಣಿ ಉಂಟೇ? ಆದರೆ ಅದರ ಬಲವನ್ನು ನಿಗ್ರಹಿಸಲು ನಮಗೆ ಅಂಕುಶ ಎಂಬ ಆಯುಧ ಒದಗಿದೆ.

ಹೀಗೆ ಲೋಕದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರದ ದಾರಿಯನ್ನು ಬ್ರಹ್ಮ ಕಾಣಿಸಿದ್ದಾನೆ. ಆದರೆ ದುಷ್ಟರ ಮಾನಸಿಕತೆಯನ್ನು ಹೋಗಲಾಡಿಸಬಲ್ಲ ಸಲಕರಣೆಯನ್ನು ಸೃಷ್ಟಿಸಲು ಅವನಿಂದಲೂ ಆಗಲಿಲ್ಲವಂತೆ. ಸೃಷ್ಟಿಯಲ್ಲಿ ಎಂತೆಂಥ ವೈಚಿತ್ರ್ಯಗಳನ್ನು ಸೃಷ್ಟಿಸಿದ ಬ್ರಹ್ಮನಿಗೂ ದುಷ್ಟರ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಉಪಾಯ ಯಾವುದೂ ಹೊಳೆಯಲಲ್ಲಿ! ಎಂದರೆ ದುಷ್ಟರ ಮನಸ್ಸು ಎಂಥ ಅಗಮ್ಯ, ಅವರ ಧೂರ್ತತನ ಎಷ್ಟು ವ್ಯಾಪಕ, ವಿಧ್ವಂಸಕ, ಶಾಶ್ವತ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT