ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ಈ ನೀಚರಿಗೆ ಸ್ವರ್ಗವೇ?

ಅಕ್ಷರ ಗಾತ್ರ

ವೃಕ್ಷಾಂಶ್ಚಿತ್ವಾ ಪಶೂನ್‌ ಹತ್ವಾ ಕೃತ್ವಾ ರುಧಿರಕರ್ದಮಮ್‌ ।

ಯದ್ಯೇವ ಗಮ್ಯತೇ ಸ್ವರ್ಗೇ ನರಕಃ ಕೇನ ಗಮ್ಯತೇ ।।

ಇದರ ತಾತ್ಪರ್ಯ ಹೀಗೆ:

‘ಮರಗಳನ್ನು ಕಡಿದು, ಪ್ರಾಣಿಗಳನ್ನು ಕೊಂದು, ರಕ್ತದ ಕೆಸರು ಮಾಡಿ, ಸ್ವರ್ಗವನ್ನು ಪಡೆಯುವೆ ಎಂದರೆ, ನರಕಕ್ಕೆ ಹೋಗುವವರು ಯಾರು?’

ಇದೊಂದು ಮಾರ್ಮಿಕವಾದ ಸುಭಾಷಿತ. ನಮ್ಮ ಸದ್ಯದ ಪರಿಸ್ಥಿತಿಯ ಬಗ್ಗೆ ಸೂಚನೆಯನ್ನು ಕೊಡುವಂತಿದೆ.

ಪರಿಸರ ನಾಶದ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ. ಆದರೆ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಸಂಸ್ಕೃತಿಯಲ್ಲಿದ್ದ ಪರಿಸರಕಾಳಜಿಯ ಬಗ್ಗೆ ನಾವು ಹೆಮ್ಮೆ ಪಡುವಂತಿದೆ. ಈ ಶ್ಲೋಕ ಪಂಚತಂತ್ರದ್ದು. ಹಲವು ಶತಮಾನಗಳ ಹಿಂದೆ ರಚಿತವಾದ ಕೃತಿ ಇದು. ಆಗ ಖಂಡಿತವಾಗಿಯೂ ಪರಿಸರದ ಸ್ಥಿತಿ ಈಗಿನಂತೆ ಇರಲಿಲ್ಲ; ಅರಣ್ಯಪ್ರದೇಶ ವಿಸ್ತಾರವಾಗಿತ್ತು; ಪರಿಸರಮಾಲಿನ್ಯವೂ ಇಂದಿನಂತೆ ಇದ್ದಿರಲಾರದು. ಹೀಗಿದ್ದರೂ ಅಂದಿನವರು ಪರಿಸರದ ಬಗ್ಗೆ ಎಷ್ಟು ಎಚ್ಚರವನ್ನು ವಹಿಸುತ್ತಿದ್ದರು ಎಂಬದನ್ನು ಈ ಶ್ಲೋಕ ಸೂಚಿಸುತ್ತದೆ.

ನಾವಿಂದು ಮರಗಳನ್ನು ಕತ್ತರಿಸುತ್ತಿದ್ದೇವೆ. ಎಂದರೆ ಅರಣ್ಯಗಳನ್ನು ನಾಶ ಮಾಡುತ್ತಿದ್ದೇವೆ. ಅರಣ್ಯನಾಶ ಎಂದರೆ ಅರಣ್ಯದಲ್ಲಿರುವ ಮರಗಳು ಮಾತ್ರವೇ ಅಲ್ಲ, ಅಲ್ಲಿರುವ ಪಶು–ಪಕ್ಷಿಗಳನ್ನೂ ನಾಶ ಮಾಡುತ್ತಬಂದಿದ್ದೇವೆ.

ನಮಗೆ ಭೂಮಿಯ ಮೇಲೆ ಹೇಗೆ ಬದುಕುವುದಕ್ಕೆ ಹಕ್ಕಿದೆಯೋ ಅಂತೆಯೇ ಇಲ್ಲಿರುವ ಪ್ರತಿಯೊಂದು ಮರ, ಗಿಡ, ಪಶು, ಪಕ್ಷಿ, ಕೀಟ – ಸೃಷ್ಟಿಯ ಎಲ್ಲ ಜೀವಿಗಳಿಗೂ ಇದೆ. ಆದರೆ ನಾವು ನಮ್ಮ ಸ್ವಾರ್ಥದಿಂದ ಅವುಗಳನ್ನು ಕೊಲ್ಲುತ್ತಿದ್ದೇವೆ. ಇದರಿಂದ ನಮ್ಮ ಬದುಕು ಕೂಡ ವಿನಾಶದತ್ತ ಹೆಜ್ಜೆ ಇಡುವಂತಾಗಿದೆ.

ಸುಭಾಷಿತ ಇಲ್ಲಿ ವ್ಯಂಗ್ಯದಲ್ಲಿ ನಮ್ಮನ್ನು ತಿವಿಯುತ್ತಿದೆ. ಮರಗಳನ್ನು ಕಡಿಯುವುದು, ಪ್ರಾಣಿಗಳನ್ನು ಕೊಲ್ಲುವುದು – ಇಂಥವನ್ನು ನಾವು ಪುಣ್ಯಸಂಪಾದನೆ ಎಂದು ಮಾಡುತ್ತಿದ್ದೇವೆ. ಪುಣ್ಯಸಂಪಾದನೆ ಎಂದರೆ ಏನು? ಸ್ವರ್ಗಪ್ರಾಪ್ತಿಯೇ ಅಲ್ಲವೆ? ಸುಭಾಷಿತ ಕೇಳುತ್ತಿದೆ, ಇಂಥ ನೀಚಕಾರ್ಯವನ್ನು ಮಾಡಿದವರೇ ಸ್ವರ್ಗಕ್ಕೆ ಹೋಗುವಂತಾದರೆ, ಇನ್ನು ನರಕಕ್ಕೆ ಹೋಗುವವರು ಯಾರು?


ಪರೋಪಕಾರಾಯ ಫಲಂತಿ ವೃಕ್ಷಾಃ
ಪರೋಪಕಾರಾಯ ವಹಂತಿ ನದ್ಯಃ ।
ಪರೋಪಕಾರಾಯ ದುಹಂತಿ ಗಾವಃ
ಪರೋಪಕಾರಾರ್ಥಮಿದಂ ಶರೀರಮ್‌ ।।

ಪರೋಪಕಾರಕ್ಕಾಗಿ ಮರಗಳು ಹಣ್ಣನ್ನು ಕೊಡುತ್ತವೆ; ನದಿಗಳು ಹರಿಯುವುದು ಕೂಡ ಪರೋಪಕಾರಕ್ಕಾಗಿಯೇ; ಹಸುಗಳು ಹಾಲನ್ನು ನೀಡುವುದು ಸಹ ಪರೋಪಕಾರವೇ. ಅಂತೆಯೇ ನಾವು ಮನುಷ್ಯರು ಕೂಡ ನಮ್ಮ ಶರೀರವನ್ನು ಪರೋಪಕಾರಕ್ಕೆ ಮೀಸಲಾಗಿಡಬೇಕು. ಅದೇ ನ್ಯಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT