ಗುರುವಾರ , ಆಗಸ್ಟ್ 11, 2022
27 °C

ದಿನದ ಸೂಕ್ತಿ: ಉಡಾಫೆ ಬೇಡ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ವ್ಯೋಮೈಕಾಂತವಿಹಾರಿಣೋsಪಿ ವಿಹಗಾಃ ಸಂಪ್ರಾಪ್ನುವಂತ್ಯಾಪದಂ

ಬಧ್ಯಂತೇ ನಿಪುಣೈರಗಾಧಸಲಿಲಾನ್ಮತ್ಸ್ಯಾಃ ಸಮುದ್ರಾದಪಿ ।

ದುರ್ನೀತಂ ಹಿ ಕಿಮಸ್ತಿ ಕಿಂ ಸುಚರಿತಂ ಕಃ ಸ್ಥಾನಲಾಭೇ ಗುಣಃ

ಕಾಲೋ ಹಿ ವ್ಯಸನಪ್ರಸಾರಿತಕರೋ ಗೃಹ್ಣಾತಿ ದೂರಾದಪಿ ।।

ಇದರ ತಾತ್ಪರ್ಯ ಹೀಗೆ:

‘ಆಕಾಶದಲ್ಲಿ ಏಕಾಂತವಾಗಿ ವಿಹರಿಸುವಂಥ ಹಕ್ಕಿಗಳೂ ಆಪತ್ತಿಗೆ ಒಳಗಾಗುತ್ತವೆ; ಸಮುದ್ರದ ಆಳವಾದ ನೀರಿನ ಮಧ್ಯೆ ಇರುವ ಮೀನುಗಳನ್ನೂ ನಿಪುಣರು ಬಲೆ ಹಾಕಿ ಹಿಡಿಯುತ್ತಾರೆ. ಇಲ್ಲಿ ಒಳ್ಳೆಯ ಚಾರಿತ್ರ್ಯ ಯಾವುದು? ಕೆಟ್ಟ ಚಾರಿತ್ರ್ಯ ಯಾವುದು? ಯಾವುದೇ ಸ್ಥಾನದಲ್ಲಿ ಇದ್ದರೂ ಏನು ಪ್ರಯೋಜನ ಬಂತು? ವಿಧಿಯು ದೂರದಿಂದಲೇ ಅದರ ಇಚ್ಛೆಯಂತೆ ಕೈ ನೀಡಿ ಎಲ್ಲವನ್ನೂ ಹಿಡಿದುಕೊಂಡಿರುತ್ತದೆ.’

ಮೇಲ್ನೋಟಕ್ಕೆ ಈ ಸುಭಾಷಿತ ವಿಧಿಯ ಪ್ರಶಂಸೆ ಮಾಡಿದಂತೆ ತೋರುತ್ತದೆ. ಆದರೆ ದಿಟವಾಗಿ ಯೋಚಿಸಿದರೆ ಇದು ಭಂಡಧೈರ್ಯ, ದುರಹಂಕಾರಗಳ ಬಗ್ಗೆ ಎಚ್ಚರಿಸುವಂತಿದೆ.

ಬದುಕಿನಲ್ಲಿ ನಾವು ಏನೇನೋ ಲೆಕ್ಕಾಚಾರಗಳನ್ನು ಹಾಕುತ್ತಿರುತ್ತೇವೆ. ಆದರೆ ಈ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾದಂತೆ ಏನೋನೋ ಘಟನೆಗಳು ನಡೆದುಬಿಡುತ್ತವೆ. ಇದಕ್ಕೆ ಯಾರನ್ನು ಹೊಣೆಯನ್ನಾಗಿಸುವುದು? ಯಾರನ್ನೋ ಒಬ್ಬರನ್ನು ಹೊಣೆಯನ್ನಾಗಿ ಮಾಡಲೇಬೇಕಲ್ಲವೆ? ಅದನ್ನೇ ಕೆಲವರು ವಿಧಿ ಎಂದು ಕರೆದರು.

ನೀವು ಯಾವ ಹೆಸರಿನಿಂದಲಾರೂ ಕರೆಯಿರಿ; ಜೀವನದಲ್ಲಿ ಹಲವು ಸಂಗತಿಗಳು ನಮ್ಮ ಕೈ ಮೀರಿ ನಡೆಯುತ್ತಲೇ ಇರುತ್ತವೆ. ನಾವು ಹತ್ತು ದಿಕ್ಕಿನಿಂದ ಯೋಚಿಸಿ ಹೆಜ್ಜೆ ಇಟ್ಟರೆ ಹನ್ನೊಂದನೆಯ ದಿಕ್ಕಿನಿಂದ ಅದಕ್ಕೆ ವ್ಯತಿರಿಕ್ತವಾದ ವಿದ್ಯಮಾನವೇ ನಡೆಯುತ್ತದೆ. ಇದು ಹೇಗೆ ನಡೆಯಿತು? ಯಾಕೆ ನಡೆಯಿತು? ಇಂಥ ಪ್ರಶ್ನೆಗಳಿಗೆ ಉತ್ತರ ಹೇಳುವುದು ಸುಲಭವಲ್ಲ. ನಾವು ಚಾಪೆ ಕೆಳಗೆ ತೂರುತ್ತಿದ್ದೇವೆ ಎಂದುಕೊಳ್ಳುತ್ತೇವೆ. ಆದರೆ ನಮಗೆ ಗೊತ್ತಾಗದ ವಿವರಗಳು ರಂಗೋಲಿಯ ಕೆಳಗೆ ತೂರುತ್ತಿರುತ್ತವೆ!

ಸುಭಾಷಿತ ಇಲ್ಲಿ ಬಳಸಿಕೊಂಡಿರುವ ಉದಾಹರಣೆಗಳೂ ಸ್ವಾರಸ್ಯಕರವಾಗಿವೆ. ರಸ್ತೆಯಲ್ಲಿ ಓಡಾಡಿದರೆ ಅಪಘಾತಗಳು ಆಗಬಹುದು; ಆಕಾಶದಲ್ಲಿ ಹಾರಾಡಿದರೆ ಅಂಥವು ನಡೆಯದು ಅಲ್ಲವೆ? ಆದರೆ ಆಗಸದಲ್ಲಿ ಹಾರಾಡುವ ಹಕ್ಕಿಗಳೂ ಪ್ರಾಣಾಪಾಯಕ್ಕೆ ತುತ್ತಾಗುತ್ತವೆ. ಸಮುದ್ರದ ನೀರಿನಲ್ಲಿ ಸ್ವತಂತ್ರವಾಗಿ ಈಜಾಡುತ್ತಿರುವವನ್ನು ಯಾರು ತಾನೆ ಬಂಧಿಸಬಲ್ಲರು? ಆದರೆ ಹೀಗೆ ಈಜಾಡುವ ಮೀನನ್ನು ಮೀನುಗಾರರು ಹಿಡಿಯುತ್ತಾರೆ. ನಮ್ಮ ಲೆಕ್ಕಾಚಾರಗಳೆಲ್ಲ ಹೀಗೆ ಕೈ ಕೊಡುತ್ತವೆ!

ಕೋವಿಡ್ ಕಡಿಮೆ ಆಗುತ್ತಿದೆ; ಲಸಿಕೆಯೂ ಬರುತ್ತಿದೆ; ರೋಗನಿರೋಧಕ ಶಕ್ತಿಯೂ ಬೆಳೆದಿದೆ – ಹೀಗೆಲ್ಲ ಯೋಚಿಸಿ ಅವಿವೇಕದಿಂದ ಎಚ್ಚರ ತಪ್ಪಬೇಡಿ; ಏಕೆಂದರೆ ಅಪಾಯ ಯಾವ ದಿಕ್ಕಿನಿಂದ ಬರುತ್ತದೆ ಎಂದು ಯಾರಿಂದಲೂ ಹೇಳಲು ಆಗದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು